ಹಿಮಾಚಲ ಪ್ರದೇಶದ ಧರ್ಮಶಾಲಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಘಟನೆಯು ಇಡೀ ರಾಜ್ಯವನ್ನೇ ಆಘಾತಕ್ಕೆ ದೂಡಿದೆ. 19 ವರ್ಷದ ಬಾಲಕಿಯ ಸಾವಿನ ಗಂಭೀರ ಪ್ರಕರಣಗಳಲ್ಲಿ ಕಾಲೇಜಿನ ಅಧ್ಯಾಪಕರು ಮತ್ತು ಮೂವರು ವಿದ್ಯಾರ್ಥಿನಿಯರ ಹೆಸರಿದೆ. ಈ ಪ್ರಕರಣಗಳಲ್ಲಿ ರ‍್ಯಾಗಿಂಗ್, ದೈಹಿಕ ಹಿಂಸೆ, ಬೆದರಿಕೆ ಮತ್ತು ಬಾಲಕಿಯ ಅಕಾಲಿಕ ಸಾವಿಗೆ ಕಾರಣವಾದ ಲೈಂಗಿಕ ಕಿರುಕುಳದ ಆರೋಪಗಳು ಸೇರಿವೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಧರ್ಮಶಾಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಕಾಯ್ದೆಯ ಸೆಕ್ಷನ್ 75, 115(2), ಮತ್ತು 3(5) ಅಡಿಯಲ್ಲಿ ಮತ್ತು ಹಿಮಾಚಲ ಪ್ರದೇಶ ಶಿಕ್ಷಣ ಸಂಸ್ಥೆಗಳು (ರ್ಯಾಗಿಂಗ್ ನಿಷೇಧ) ಕಾಯ್ದೆ, 2009 ರ ಸೆಕ್ಷನ್ 3 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಕಾಲೇಜು ಪ್ರಾಧ್ಯಾಪಕಿ ಮತ್ತು ಅದೇ ಕಾಲೇಜಿನ ಮೂವರು ಹುಡುಗಿಯರು ಸೇರಿದ್ದಾರೆ. ಈ ಘಟನೆ ಸೆಪ್ಟೆಂಬರ್ 2025 ರಲ್ಲಿ ನಡೆದಿತ್ತು.
ಧರ್ಮಶಾಲಾದ ಸಿಧ್ಬರಿ ನಿವಾಸಿಯಾಗಿರುವ ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಕಾಲೇಜಿನಲ್ಲಿ ಓದುತ್ತಿದ್ದ ತನ್ನ ಮಗಳನ್ನು ಮೂವರು ಕಾಲೇಜು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಥಳಿಸಿ ಬೆದರಿಕೆ ಹಾಕಿದ್ದಾರೆ. ಮಗಳ ಕುರಿತು ಪ್ರಾಧ್ಯಾಪಕರು ಅಶ್ಲೀಲ ಸನ್ನೆ ಮಾಡಿದ್ದಾರೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ.
ಮೃತ ಯುವತಿಯ ತಂದೆ ಮಾತನಾಡಿ, ಇದು ತನ್ನ ಮಗಳನ್ನು ತುಂಬಾ ಭಯಭೀತರನ್ನಾಗಿಸಿತ್ತು. ಆಕೆಯ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಆಕೆ ಹಿಮಾಚಲ ಪ್ರದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಡಿಸೆಂಬರ್ 26, 2025 ರಂದು ಚಿಕಿತ್ಸೆಯ ಸಮಯದಲ್ಲಿ ಲುಧಿಯಾನದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ, ಪೊಲೀಸರಿಗೆ ದೂರು ದಾಖಲಿಸಲು ವಿಳಂಬಕ್ಕೆ ತನ್ನ ಮಗಳ ಗಂಭೀರ ಅನಾರೋಗ್ಯ ಮತ್ತು ಆಕೆಯ ಸಾವಿನ ನಂತರ ಅವರ ಕುಟುಂಬ ಎದುರಿಸಿದ ಆಘಾತಕಾರಿ ಅನುಭವವೇ ಕಾರಣ ಎಂದು ದೂರುದಾರರು ಹೇಳಿದ್ದಾರೆ. ಪ್ರಕರಣದ ಪರಿಶೀಲನೆ ಮತ್ತು ಆರಂಭಿಕ ತನಿಖೆಯ ನಂತರ, ದೂರು ದಾಖಲಿಸಲಾಗಿದೆ. ಪ್ರಸ್ತುತ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ವರದಿ ಮಾಡಿದ್ದಾರೆ.


