ಪ್ರಾಧ್ಯಾಪಕನ ವಿರುದ್ದ ಲೈಂಗಿಕ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಒಡಿಶಾದ ಕಾಲೇಜು ವಿದ್ಯಾರ್ಥಿನಿಯ ಅಂತ್ಯ ಸಂಸ್ಕಾರ ಬಾಲಸೋರ್ ಜಿಲ್ಲೆಯ ಆಕೆಯ ಸ್ವಗ್ರಾಮದಲ್ಲಿ ಮಂಗಳವಾರ ನೆರವೇರಿದೆ.
ಕುಟುಂಬ ಸದಸ್ಯರು, ಗ್ರಾಮಸ್ಥರು, ಅಧಿಕಾರಿಗಳು, ಬಾಲಸೋರ್ ಸಂಸದ ಪ್ರತಾಪ್ ಸಾರಂಗಿ ಮತ್ತು ಸಾವಿರಾರು ಜನರು ವಿದ್ಯಾರ್ಥಿನಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಘಟನೆಯನ್ನು ಒಡಿಶಾದ ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ‘ಇದು ವ್ಯವಸ್ಥೆ ನಡೆಸಿದ ಕೊಲೆ’ ಎಂದು ಆರೋಪಿಸಿದ್ದಾರೆ.
ಬಾಲಸೋರ್‌ನ ಫಕೀರ್ ಮೋಹನ್ (ಸ್ವಾಯತ್ತ) ಕಾಲೇಜಿನ ಎರಡನೇ ವರ್ಷದ ಬಿ.ಎಡ್ ವಿದ್ಯಾರ್ಥಿನಿ 20 ವರ್ಷದ ಹೆಣ್ಣು ಮಗಳು, ತನ್ನ ವಿಭಾಗದ ಮುಖ್ಯಸ್ಥ ಸಮೀರ್ ಕುಮಾರ್ ಸಾಹು ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ಈ ಬಗ್ಗೆ ಕಾಲೇಜಿನ ಆಂತರಿಕ ದೂರು ಸಮಿತಿ (ಐಸಿಸಿ)ಗೆ ದೂರು ನೀಡಿದ್ದರು. ಆದರೆ, ಪ್ರಾಂಶುಪಾಲ ಆದಿಯಾಗಿ ಕಾಲೇಜಿನ ಅಧಿಕಾರಿಗಳು ಪ್ರಾಧ್ಯಾಪಕನ ವಿರುದ್ದ ಕ್ರಮ ಕೈಗೊಳ್ಳುವ ಬದಲು, ದೂರು ಹಿಂಪಡೆಯುವಂತೆ ವಿದ್ಯಾರ್ಥಿನಿಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ ಖಂಡಿಸಿ ಆಕೆಯ ಸಹಪಾಠಿಗಳು ಕಳೆದ ಶನಿವಾರ ಕಾಲೇಜಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಪ್ರಾಂಶುಪಾಲರ ಕಚೇರಿ ಮುಂದೆ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಶೇಕಡ 95ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದ ವಿದ್ಯಾರ್ಥಿನಿಯನ್ನು ಭುವನೇಶ್ವರದ ಏಮ್ಸ್‌ಗೆ ದಾಖಲಿಸಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಆಕೆ ಮೃತಪಟ್ಟಿದ್ದಾರೆ.
ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮಂಗಳವಾರ ವಿದ್ಯಾರ್ಥಿನಿಯ ಕುಟುಂಬಕ್ಕೆ 20 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಝಿ ನಿರ್ದೇಶನ ನೀಡಿದ್ದಾರೆ. ಎಲ್ಲಾ ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ ಎಂದು ಸಿಎಂ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿನಿಯ ಸಾವು ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಎಂಟು ವಿರೋಧ ಪಕ್ಷಗಳು ಜುಲೈ 17 ರಂದು ‘ಒಡಿಶಾ ಬಂದ್’ಗೆ ಕರೆ ಕೊಟ್ಟಿವೆ. ಎಡಪಕ್ಷಗಳು ಸೇರಿದಂತೆ ಎಂಟು ಪಕ್ಷಗಳು ಬಂದ್‌ಗೆ ಬೆಂಬಲ ನೀಡುತ್ತಿವೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ತಿಳಿಸಿದ್ದಾರೆ.
“ಬಾಲಸೋರ್‌ನ ಫಕೀರ್ ಮೋಹನ್ (ಸ್ವಾಯತ್ತ) ಕಾಲೇಜಿನಲ್ಲಿ ನಡೆದ ಘಟನೆಯು ರಾಜ್ಯ ಸರ್ಕಾರವು ಮಹಿಳೆಯರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂಬುದನ್ನು ತೋರಿಸಿದೆ” ಎಂದು ಭಕ್ತ ಚರಣ್ ದಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆತ್ಮಹತ್ಯೆ ಮಾಡಿಕೊಳ್ಳಲು ವಿದ್ಯಾರ್ಥಿನಿ ಪೆಟ್ರೋಲ್ ತಂದಿದ್ದರು. ಆದರೆ, ಎಲ್ಲರೂ ನಿಂತು ನೋಡಿದ್ದಾರೆ. ಯಾರೂ ಏನೂ ಮಾಡಿಲ್ಲ” ಎಂದು ಆಡಳಿತರೂಢ ಬಿಜೆಪಿ ವಿರುದ್ದ ಚರಣ್ ದಾಸ್ ವಾಗ್ವಾಳಿ ನಡೆಸಿದ್ದಾರೆ.
ವಿದ್ಯಾರ್ಥಿಯ ಸಾವು ‘ವ್ಯವಸ್ಥೆ ನಡೆಸಿದ ಸಂಘಟಿತ ಕೊಲೆ’ ಗಿಂತ ಕಡಿಮೆಯೇನಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
“ಒಡಿಶಾದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಹೆಣ್ಣು ಮಗಳ ಸಾವು ಬಿಜೆಪಿಯ ವ್ಯವಸ್ಥೆಯಿಂದ ನಡೆದ ಕೊಲೆಗಿಂತ ಕಡಿಮೆಯಿಲ್ಲ. ಆ ಧೈರ್ಯಶಾಲಿ ವಿದ್ಯಾರ್ಥಿನಿ ಲೈಂಗಿಕ ಕಿರುಕುಳದ ವಿರುದ್ಧ ಧ್ವನಿ ಎತ್ತಿದ್ದಳು. ಆದರೆ, ಆಕೆಗೆ ನ್ಯಾಯ ಒದಗಿಸುವ ಬದಲು, ಬೆದರಿಕೆ, ಹಿಂಸೆ ನೀಡಲಾಯಿತು. ಪದೇ ಪದೇ ಅವಮಾನಿಸಲಾಯಿತು” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
ओडिशा में इंसाफ़ के लिए लड़ती एक बेटी की मौत, सीधे-सीधे BJP के सिस्टम द्वारा की गई हत्या है।
उस बहादुर छात्रा ने यौन शोषण के ख़िलाफ़ आवाज़ उठाई – लेकिन न्याय देने के बजाय, उसे धमकाया गया, प्रताड़ित किया गया, बार-बार अपमानित किया गया।
जिन्हें उसकी रक्षा करनी थी, वही उसे तोड़ते…
— Rahul Gandhi (@RahulGandhi) July 15, 2025
“ಆಕೆಯನ್ನು ರಕ್ಷಿಸಬೇಕಾದವರೆ ಒಡೆದು ಹಾಕಿದರು. ಎಂದಿನಂತೆ ಬಿಜೆಪಿಯ ವ್ಯವಸ್ಥೆಯು ಇಲ್ಲಿ ಆರೋಪಿಗಳನ್ನು ರಕ್ಷಿಸಿದೆ. ಈ ಮೂಲಕ ಅಮಾಯಕ ಹೆಣ್ಣು ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೆಪಿಸಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ವಿದ್ಯಾರ್ಥಿನಿಯ ಸಾವು ಆತ್ಮಹತ್ಯೆಯಲ್ಲ, ಅದು ವ್ಯವಸ್ಥೆಯಿಂದ ನಡೆದ ಸಂಘಟಿತ ಕೊಲೆ. ಮೋದಿ ಜೀ, ಒಡಿಶಾದಲ್ಲಾಗಲಿ ಅಥವಾ ಮಣಿಪುರದಲ್ಲಾಗಲಿ – ದೇಶದ ಹೆಣ್ಣುಮಕ್ಕಳು ಸಾಯುತ್ತಿದ್ದಾರೆ. ನೀವು ಮೌನವಾಗಿರುತ್ತೀರಿ. ದೇಶಕ್ಕೆ ನಿಮ್ಮ ಮೌನ ಬೇಕಾಗಿಲ್ಲ; ಉತ್ತರಗಳು ಬೇಕು. ಭಾರತದ ಹೆಣ್ಣುಮಕ್ಕಳಿಗೆ ಸುರಕ್ಷತೆ ಮತ್ತು ನ್ಯಾಯ ಬೇಕು” ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
ವಿದ್ಯಾರ್ಥಿನಿಯ ಸಾವಿನ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿರೋಧ ಪಕ್ಷದ ನಾಯಕ ಮತ್ತು ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್, “ಇದು ಸಾಂಸ್ಥಿಕ ದ್ರೋಹ ಮತ್ತು ಯೋಜಿತ ಅನ್ಯಾಯಕ್ಕಿಂತ ಕಡಿಮೆಯಿಲ್ಲ” ಎಂದಿದ್ದಾರೆ.
ವಿದ್ಯಾರ್ಥಿನಿಯ ಸಾವಿನ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಪಟ್ನಾಯಕ್ “ವಿಫಲ ವ್ಯವಸ್ಥೆಯು ಒಬ್ಬರ ಜೀವವನ್ನು ಹೇಗೆ ತೆಗೆದುಕೊಳ್ಳಬಹುದು ಎಂಬುದನ್ನು ಯೋಚಿಸುವುದು ತುಂಬಾ ಕಳವಳಕಾರಿಯಾಗಿದೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ଏମ୍ସରେ ଚିକିତ୍ସିତ ହେଉଥିବା ବାଲେଶ୍ୱର ଏଫଏମ କଲେଜ ପୀଡ଼ିତା ଛାତ୍ରୀଙ୍କ ଦେହାନ୍ତ ବିଷୟରେ ଜାଣି ମୁଁ ଦୁଃଖିତ ଓ ମର୍ମାହତ। ଏପରି ସମୟକୁ ସାମ୍ନା କରିବା ପାଇଁ ମହାପ୍ରଭୁ ପରିବାର ଲୋକଙ୍କୁ ଅସୀମ ଧୈର୍ଯ୍ୟ ଦିଅନ୍ତୁ।
ମନକୁ ଏହା ଅଧିକ ବିଚଳିତ କରୁଛି ଯେ, କିପରି ଗୋଟେ ବିଫଳ ବ୍ୟବସ୍ଥା ଜଣଙ୍କ ଜୀବନ ନେଇଯାଇପାରେ। ସବୁଠୁ କଷ୍ଟଦାୟକ ହେଉଛି,…
— Naveen Patnaik (@Naveen_Odisha) July 15, 2025
“ಅತ್ಯಂತ ನೋವಿನ ಸಂಗತಿಯೆಂದರೆ ಇದು ಆಕಸ್ಮಿಕವಲ್ಲ, ಬದಲಾಗಿ ಸಹಾಯ ಮಾಡುವ ಬದಲು ಮೌನವಾಗಿದ್ದ ವ್ಯವಸ್ಥೆಯ ಪರಿಣಾಮವಾಗಿದೆ” ಎಂದು ಎಂದಿದ್ದಾರೆ.
ಪ್ರಾಧ್ಯಾಪಕನ ಲೈಂಗಿಕ ಕಿರುಕುಳ ತಡೆಯದ ಕಾಲೇಜು: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು


