Homeಅಂಕಣಗಳು`ರಾಜಾನ ಕಿವಿ ಕತ್ತಿ ಕಿವಿ': ಈ ಸಾರ್ವಕಾಲಿಕ ಕಥೆ ನಿಮಗೆ ಗೊತ್ತೆ?

`ರಾಜಾನ ಕಿವಿ ಕತ್ತಿ ಕಿವಿ’: ಈ ಸಾರ್ವಕಾಲಿಕ ಕಥೆ ನಿಮಗೆ ಗೊತ್ತೆ?

ಮಕ್ಕಳ ನೋಟವೇ ಅವರ ಒಳನೋಟ. ದೊಡ್ಡವರಿಗೆ ಅದು ಸಾಲದು. ವಿಶೇಷ ಪ್ರಯತ್ನ ಬೇಕು ಅಂತ ಹ್ಯಾನ್ಸ್ ಅವರು ಹೇಳತಾರ. ಸತ್ಯ ಕಪಟಿಗಳಿಗೆ ಕಾಣುವುದಿಲ್ಲ. ಮುಗ್ಧರಿಂದ ಅದನ್ನು ಮುಚ್ಚಿ ಇಡಲಿಕ್ಕೆ ಸಾಧ್ಯ ಇಲ್ಲ ಅನ್ನುವುದನ್ನು ಎಷ್ಟು ಸರಿ ಹೇಳಿದರು ಹಳಸಲ್ಲ.

- Advertisement -
- Advertisement -

ಒಂದು ಊರಾಗ ಒಬ್ಬ ಚಕ್ರವರ್ತಿ ಮಹಾರಾಜ ಇದ್ದ. ಅವನಿಗೆ ಟೀಕೆ ಅಂದ್ರ ಆಗತಿದ್ದಿಲ್ಲ. ಯಾರಾದರೂ ತನ್ನ ವಿರುದ್ಧ ಮಾತಾಡಿದರ ಅವರಿಗೆ ಶಿಕ್ಷೆ ಕೊಡತಿದ್ದ.

ಅವನಿಗೆ ದೇವರು ಶಿಕ್ಷೆ ಕೊಟ್ಟ. `ನೀನು ನಿನ್ನ ಟೀಕೆ ಮಾಡುವವರ ಮಾತು ಕೇಳದೆ ಹೋದಾಗಲೆಲ್ಲ ನಿನ್ನ ಕಿವಿ ದೊಡ್ಡದಾಗಿ ಬೆಳೆಯಲಿಕ್ಕೆ ಹತ್ತಿಬಿಡತಾವು,’ ಅಂತ.

ಇದನ್ನ ರಾಜಾ ಎಚ್ಚರಿಕೆ ಅಂತ ತಿಳಕೋಬೇಕಾಗಿತ್ತು. ಆದರ ಹಂಗ ತಿಳಕೋಳಿಲ್ಲ. ಅವ ತನ್ನ ಹಳೇ ಚಾಳಿ ಮುಂದುವರೆಸಿದ. ಅವನ ಕಿವಿ ದೊಡ್ಡದಾಗಿ ಬೆಳಕೋತನ ಹೋದವು.

ಆ ಊರಾಗ ಕಿಟ್ಟಪ್ಪ ಅಂತ ಒಬ್ಬವ ಕ್ಷೌರಿಕ ಇದ್ದ. ಅವ ಪ್ರತಿ ವಾರ ಅರಮನೆಗೆ ಹೋಗಿ ರಾಜನ ಕಟಿಂಗ್ ಮಾಡ್ತಿದ್ದ. ಅವರ ಅಪ್ಪ ರಾಜನ ಅಪ್ಪಗ ಮಾಡತಿದ್ದ, ಅವರ ಅಪ್ಪ ಅವರ ಅಪ್ಪಗ, ಅವರ ಅಪ್ಪ ಅವರ ಅಪ್ಪಗ ಹಿಂಗ ಒಂದು ಘನ ಪರಂಪರೆ ನಡಕೊತ ಬಂದಿತ್ತು.

ಹಿಂಗ ಒಂದು ದಿವಸ ಎನಾತಪ ಅಂದ್ರ ಕಿಟ್ಟಪ್ಪ ಅರಮನಿಗೆ ಹೋಗಿ ರಾಜಾನ್ನ ಕುರ್ಚಿ ಮ್ಯಾಲ ಕೂಡಿಸಿ, ಬಿಳಿ ಖಾದಿ ಅರಿಬಿ ಹೊದಿಸಿ, ರಾಜನ ಅಮಿತಾಬ್ ಬಚ್ಚನ್ ಕಟ್ ಕೂದಲ ಸರಿಸಿ ನೋಡತಾನ, ಅವನ ಕಿವಿ ದೊಡ್ಡವಾಗಿ ಬಿಟ್ಟಾವು.

ತಾನು ರಾತ್ರೆ ಕುಡದದ್ದು ಹೆಚ್ಚು ಆತೋ ಏನೋ ಅಂತ ಅವನಿಗೆ ಸಂಶಯ ಬಂತು. ಒಂದು ಈಟು ನಿದ್ದಿ ಬಂದಾವು ಧಣಿ ಅಂತ ಹೇಳಿ, ಸಿಂಕ ಕಡೆ ಹೋಗಿ ತನ್ನ ಮಾರಿ ತೊಳಕೊಂಡು, ಅರಿವಿಲೆ ವರಿಸಿಕೊಂಡು ಬಂದು ಇನ್ನೊಮ್ಮೆ ನೋಡಿದ. ರಾಜಾನ ಕಿವಿ ಬರೆ ದೊಡ್ಡವ ಅಷ್ಟ ಅಲ್ಲ, ಅವು ಕತ್ತಿ ಕಿವಿ ಆದ ಹಂಗ ಆಗಿಬಿಟ್ಟಾವು.

ಅವನಿಗೆ ಗಾಬರಿ ಆಗಿದ್ದು ರಾಜಾ ನೋಡಿದ. “ಲೇ ಮಗನ ಕಿಟ್ಯಾ. ಇಲ್ಲೇ ನೋಡಿದ್ದು ಇಲ್ಲೇ ಮರ್ತು ಬಿಡಬೇಕು. ಹೊರಗ ಹೋಗಿ ಯಾರರ ಹತ್ತರ ನನ್ನ ಕಿವಿ ಸುದ್ದಿ ಹೇಳಿದಿ ಅಂದ್ರ ನೋಡು ನಿನ್ನ ಜೀವಾ ತಗದಬಿಡ್ತೇನಿ” ಅಂತ ಹೆದರಿಸಿಬಿಟ್ಟ.

ಕಿಟ್ಟಪ್ಪ ಹೆದರಿ ಹೂಂ ಅಂದ. ಆದರ ಆವಗ ತಡಿಲಿಕ್ಕೆ ಆಗವಲ್ಲದು. ತನ್ನ ಕೆಲಸ ಮುಗದ ಮ್ಯಾಲೆ ಹೊರಗ ಹೋಗಿ ಓಡಲಿಕ್ಕೆ ಶುರು ಮಾಡಿದ. ಊರು ಹೊರಗ ಒಂದು ಅಡವಿಯೊಳಗ ಒಂದು ಕಡೆ ನಿಂತು ಒಂದು ಮರದ ಪೋಟರಿ ಒಳಗ ಜೋರಾಗಿ ಒದರಿ ಹೇಳಿದ- “ರಾಜನ ಕಿವಿ ಕತ್ತಿ ಕಿವಿ”, “ರಾಜನ ಕಿವಿ ಕತ್ತಿ ಕಿವಿ”. ಅವ ಹೇಳಿ ಹೇಳಿ ನಗೋದು ಅಲ್ಲೇ ಹತ್ತಿರದಲ್ಲೇ ಇದ್ದ ಒಬ್ಬ ಕುರಿಗಾಹಿಗೆ ಗೊತ್ತಾತು. ಕಿಟ್ಟಪ್ಪ ಏನು ಹೇಳಿದ್ದ ಅಂತ ಅವನಿಗೆ ಗೊತ್ತಾಗಲಿಲ್ಲ. ಆದರೆ ಅವ ಏನೋ ಹೇಳಿಕೊಂಡು ನಗಲಿಕ್ಕೆ ಹತ್ತಿದ್ದ ಅಂತ ಅವ ಹೋಗಿ ರಾಜಾನ ಸೈನಿಕರಿಗೆ ಹೇಳಿದ.

ರಾಜಾನಿಂದ ನೇಮಕಗೊಂಡಿದ್ದ ನ್ಯಾಯಾಧೀಶರು ಕಿಟ್ಟಪ್ಪನಿಗೆ ದೇಶದ ರಹಸ್ಯಗಳನ್ನು ಅರಣ್ಯದ ಬಯಲಿನೊಳಗ ಬಯಲು ಮಾಡಿದ್ದಕ್ಕ ರಾಜದ್ರೋಹದ ಆರೋಪ ಸಾಬೀತು ಮಾಡಿದರು. ರಾಜಾ ಅಂದ್ರ ದೇಶ ಆಗಿದ್ದರಿಂದ ಅವನ ಮೇಲೆ ದೇಶದ್ರೋಹದ ಆರೋಪನು ಆಟೋಮೇಟಿಕ ಆಗಿ ಸಾಬೀತು ಆಯಿತು.

ಅವನನ್ನ ಆನೆ ಕಾಲಿನಲ್ಲಿ ತುಳಿಸಿ, ಅದರ ನಂತರ ಎನಾರ ಉಳದರ ಅದನ್ನ ತೋಪು ಮುಂದೆ ಕಟ್ಟಿ ಮದ್ದು ಗುಂಡು ಹಾರಿಸಬೇಕು. ಅದಕ್ಕಿಂತ ಮೊದಲು ಅವನಿಗೆ ವಿಷ ಹಾಕಿದ ಊಟ ಮಾಡಿಸಬೇಕು, ಅಂತ ತೀರ್ಪು ಪ್ರಕಟಿಸಿದರು.

ಕಿಟ್ಟಪ್ಪ ಹೋದ. ಆ ನಂತರ ಒಂದೆರಡು ವರ್ಷಕ್ಕ ಆ ಊರಾಗ ಒಬ್ಬ ಹಲಿಗಿ ತಯಾರು ಮಾಡೋ ಕಲಾವಿದ ಇದ್ದ. ಆತ ಹಾಗೂ ಒಬ್ಬ ಬಡಿಗಿ ಕೂಡಿ ಆ ಅರಣ್ಯಕ್ಕ ಹೋದರು. ಯಾವ ಗಿಡದ ಪೊಟರಿ ಒಳಗ ಕಿಟ್ಟಪ್ಪ ರಹಸ್ಯ ಬಯಲು ಮಾಡಿದ್ದನೋ ಆ ನಶೀಬ ಇಲ್ಲದ ಗಿಡ ಕಡದರು. ಅದನ್ನ ತೊಗೊಂಡು ಹೋಗಿ ಆ ಕಲಾವಿದ ಹಲಿಗಿ ತಯಾರು ಮಾಡಿದ.

ಆ ನಂತರ ಅವ ಅದನ್ನ `ಧಕ್ಕನಕ, ನಕ್ಕನಕ’ ಅಂತ ಬಾರಸಲಿಕ್ಕೆ ಹೋದ. ಆದರ ಅವನಿಗೆ ಶಾಕ್ ಆತು. ಅದು ಧಕ್ಕನಕ ಅಂತ ಸಪ್ಪಳ ಮಾಡೋ ಬದಲಿ, “ರಾಜನ ಕಿವಿ ಕತ್ತಿ ಕಿವಿ” ಅಂತ ಮನಿಶಾರ ದನಿಯೊಳಗ ಮಾತು ಆಡಲಿಕ್ಕೆ ಹತ್ತಿಬಿಟ್ಟಿತು.

ಅವನ ಮಗ ಅದನ್ನ ತೊಗೊಂಡು ಊರಾಗ ಎಲ್ಲ ಅಡ್ಡಾಡಿಬಿಟ್ಟ. ಅದನ್ನ ಬಾರಸೋದು, ಅದು “ರಾಜನ ಕಿವಿ ಕತ್ತಿ ಕಿವಿ” ಅಂತ ಅನ್ನೋದು, ಅದರಿಂದ ಜನರಿಗೆ ಖುಶಿ ಆಗೋದು, ಅವರು ಇಷ್ಟು ದೊಡ್ಡ ರಾಷ್ಟ್ರೀಯ ರಹಸ್ಯ ಗೊತ್ತಾಗಿದ್ದು ನೋಡಿ ಇವನಿಗೆ ಬಾಂಬೆ ಮಿಠಾಯಿ ತೊಗೊಳೋ ಅಂತ ಒಂದು ಆಣೆ ಕೊಡೋದು, ಎಲ್ಲ ನಡಿತು.

ಇದು ರಾಜಾನ ಸೈನಿಕರಿಗೆ ತಿಳೀತು. ಅವರು ಬಂದು, ಕಲಾವಿದನ ಒದ್ದು, ಆ ಹಲಿಗಿ, ಅದಕ್ಕ ಉಪಯೋಗಿಸಿದ್ದ ಕಟ್ಟಿಗಿ, ಎಲ್ಲ ಜಪ್ತಿ ಮಾಡಿಕೊಂಡು ಹೋದರು. ಆ ಹಲಿಗಿ ಮುರದು, ಬೆಂಕಿ ಹಚ್ಚಿ ಸುಟ್ಟರು. ಆ ಬೂದಿ ತೊಗೊಂಡು ಹೋಗಿ ನೀರಿಗೆ ಹಾಕಿದರು. ಆದರ ದೊರೆಯ ರಹಸ್ಯ ಸೋರಿಕೆ ನಿಲ್ಲಲಿಲ್ಲ. ಆ ನದಿಯ ಮೀನು ಎಲ್ಲ ಮಾತು ಆಡಲಿಕ್ಕೆ ಹತ್ತಿದವು. “ರಾಜನ ಕಿವಿ ಕತ್ತಿ ಕಿವಿ”, “ರಾಜನ ಕಿವಿ ಕತ್ತಿ ಕಿವಿ” ಅಂತ ಮೀನು ಪೇಟೆ ತುಂಬ ಸುದ್ದಿ!. ಎಲ್ಲರೂ ಕೇಳೋದು, ಮುಸಿ ಮುಸಿ ನಗೋದು.

ಒಂದು ದಿವಸ ರಾಜಾ- ರಾಣಿ ಸೀ ಫುಡ್ ತಿನ್ನಬೇಕು ಅಂತ ಹೇಳಿ ಹೋಟೆಲಿಗೆ ಹೋದರು. ಅವರ ತಾಟಿನಾಗ ತಂದು ಇಟ್ಟ ಭೂತಾಯಿ ಮೀನು ಸಹಿತ “ರಾಜನ ಕಿವಿ ಕತ್ತಿ ಕಿವಿ” ಅಂತ ಹೇಳಿ ಕಣ್ಣು ಹೊಡೀತು! ಅದನ್ನ ನೋಡಿ ಬಂದ ರಾಜಾಗ ನಿದ್ದಿ ಬರಲಿಲ್ಲ. ಆದ ಬೇಜಾರಿನಾಗ ಅವ ಕೊರಗಿ ಕೊರಗಿ ಒಂದು ದಿವಸ ಸತ್ತು ಹೋದ. ಅವನ ಸಮಾಧಿ ಮ್ಯಾಲೆ ಒಂದು ಗಿಡ ನೆಟ್ಟರು. ಅದಕ್ಕ ಮೀನಿನ ಗೊಬ್ಬರ ಹಾಕಿದರು. ಆ ಗಿಡದಿಂದ ರಾತ್ರಿ ಅವಾಜು ಬರಲಿಕ್ಕ ಶುರು ಆತು. “ರಾಜನ ಕಿವಿ ಕತ್ತಿ ಕಿವಿ”.

ಈ ತಾಜಾ ಪಂಚತಂತ್ರದ ಕತಿಯಿಂದ ನಾವು ಏನು ಪಾಠ ಕಲಿಯಬಹುದು ಅಂದ್ರ – ಸತ್ಯ ಹೇಳಿದವರು, ಅದನ್ನ ಕೇಳಲಾರದವರು, ಹೇಳಕೂಡದು ಅಂದವರು, ಹೇಳಿದವರಿಗೆ ಶಿಕ್ಷೆ ಕೊಟ್ಟವರು, ಕೇಳಿಸಿಕೊಂಡವರು, ಹೇಳಲಿಕ್ಕೆ ಅನುಕೂಲ ಮಾಡಿಕೊಟ್ಟವರು, ಕೇಳಿದರೂ ಕೇಳಲಿಲ್ಲ ಅಂತ ನಟನೆ ಮಾಡಿದವರು ಇವರು ಯಾರೂ ಉಳಿಯಲಿಕ್ಕೆ ಇಲ್ಲ, ಆದರ ಸತ್ಯ ಉಳಿತದ.

ನೀವು ಸತ್ಯ ಹೇಳಿದವರ ಇತಿಹಾಸ ನೋಡಿಕೊತ ಹೋದರ ಏನು ಬಹಳ ಖುಷಿ ಆಗೋದಿಲ್ಲ. ಯಹೂದೀ ಕುಟುಂಬದಾಗ ಹುಟ್ಟಿ, ದೆಹಲಿಯ ಗಲ್ಲಿಗಳಲ್ಲಿ ಸಂತನ ಹಂಗ ಬದುಕಿ, ಹಿಂದೂ -ಇಸ್ಲಾಮಿನ ತತ್ವ ತಿಳಿದುಕೊಂಡು, ಸಮಭಾವದ ಪಾಠ ಹೇಳಿದ ಸೂಫಿ ಸರ್ಮದನ ಕತಿ ಏನು ಆತು ಅಂತ ನೋಡ್ರಿ. ಸರ್ವಶಕ್ತ ಒಬ್ಬನನ್ನು ಬಿಟ್ಟು ಇನ್ನೊಬ್ಬರು ಪೂಜೆಗೆ ಅರ್ಹರಲ್ಲ ಅಂತ ಹೇಳಿದ ರಾಜನ ಮಾತನ್ನು ಕೇಳದೆ ಯಾರು ಪೂಜೆಗೆ ಅರ್ಹರಲ್ಲ ಅಂತ ಹೇಳಿದ. ಗಲ್ಲುಶಿಕ್ಷೆ ವಿಧಿಸಿದಾಗ ನಾನು ಸಾಯಬಹುದು, ನನ್ನ ಮಾತನ್ನು ನೀವು ಏನು ಮಾಡುವಿರಿ ಅಂತ ಮರು ಪ್ರಶ್ನೆ ಮಾಡಿದ.

ನಾನೇ ಸತ್ಯ ಅಂತ ಘೋಷಿಸಿ ಕೊಂಡ ಸೂಫಿ ಮನ್ಸೂರ್ ನನ್ನು ರಾಜಾ ಗಲ್ಲಿಗೆ ಹಾಕುತ್ತಾನ. ಸಾಯುವ ಮುನ್ನ ಅವನ ಕೈ ಕತ್ತರಿಸಿ ಹಾಕುತ್ತಾರ. ಮುಖಕ್ಕೆ ತನ್ನ ರಕ್ತ ಬಳಿದುಕೊಂಡು ನಾನು ಸಾಯುವಾಗ ನನ್ನ ಮುಖ್ಯ ಬಿಳಿಚಿತ್ತು ಅಂತ ಯಾರೂ ತಿಳಿದು ಕೊಳ್ಳುವುದುಬೇಡ ಅಂತ ಗಹಗಹಿಸಿ ನಗುತ್ತಾನೆ.

ನಾನು ದೇವಪುತ್ರ ಅಂತ ಹೇಳಿಕೊಂಡು, ಜನರಿಂದ ಯಹೂದೀಗಳ ದೇವರು ಅಂತ ಅನ್ನಿಸಿಕೊಂಡ ಯೇಸುವಿನ ಇತಿಹಾಸ ನೋಡಿದರ ಆಶ್ಚರ್ಯ ಆಗತದ. ಹಳೆಯ ದೇವರ ಗುಡಿಗಳನ್ನು ಧ್ವಂಸ ಮಾಡಿ, ಅಲ್ಲಿ ಸಾಲ ಕೊಡುತ್ತಿದ್ದ ಅರ್ಚಕರನ್ನು ಓಡಿಸಿ, ಕೂಲಿ ಮಾಡುವ ಜನ ವಾರದ ರಜಾ ದಿನಗಳಾದ ಶನಿವಾರ- ಭಾನುವಾರವೂ ಸಹ ಕೆಲಸ ಮಾಡಿದರೆ ತಪ್ಪೇನೂ ಇಲ್ಲ ಅಂದಿದ್ದು, ಅಂಧ ವಿಶ್ವಾಸದ ಬಗ್ಗೆ ಜಾಗೃತಿ ಮೂಡಿಸಿದ್ದು, ಏಕತೆ, ಸಮಾನತೆ, ಭ್ರಾತೃತ್ವ ಇರಬೇಕು ಅಂತ ಹೇಳಿದ್ದು ಅವನಿಗೆ ಮುಳುವಾದವು. ಅಂದಿನ ರಾಜಾ ಪಾಂತಿಯಸ ಪಿಲೆಟ್ ಅವನಿಗೆ ಶಿಲುಬೆ ಶಿಕ್ಷೆ ವಿಧಿಸಿದ.

ಆ ಮಾತಿಗೆ ಈಗ ಎರಡು ಸಾವಿರ ವರ್ಷ ಮೀರಿದವು. ಅವರು ಯಾರು ಈಗ ಉಳಿದಿಲ್ಲ. ಅವರು ಹೇಳಿದ ಸತ್ಯ ಮಾತ್ರ ಉಳಕೊಂಡದ.

ಈಗ ನಮ್ಮನ್ನು ಆಳುವ ಪರಂತಪರು ಯಾವ ಟೀಕೆಯನ್ನು ಸಹಿಸುತ್ತಿಲ್ಲ. ಸೃಜನಾತ್ಮಕ ಟೀಕೆಗೆ ಸಹಿತ ಇಲ್ಲೇ ಜಾಗ ಇಲ್ಲ. ಅಧಿಕಾರ ಅವರನ್ನ ಕುರುಡರನ್ನಾಗಿಸಿದೆ. ಸತ್ಯಕ್ಕೆ ಸಾವಿಲ್ಲ ಅನ್ನುವ ಸರಳ ಸತ್ಯ ಅವರಿಗೆ ಕಾಣುತ್ತಿಲ್ಲ.

ಅಂಥವರಿಗೆ ಡೆನ್ಮಾರ್ಕ್ ದೇಶದ ಒಂದು ಕತೆ ನೆನಪು ಮಾಡಿಕೊಡಬಹುದು. ಅದು ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಅವರು 1850 ರ ಸುಮಾರಿಗೆ ಬರೆದ ಮಕ್ಕಳ ಕತೆ `ಮಹಾರಾಜರ ಹೊಸ ಉಡುಪು’.

ಎಲ್ಲರಿಗೂ ಗೊತ್ತಿರುವ ಈ ಕತೆಯಲ್ಲಿ ದಗಾಕೋರ ದರ್ಜಿಗಳು ರಾಜನಿಗೆ ಹೊಸ ಉಡಪು ತಯಾರಿಸುವ ನೆಪದಲ್ಲಿ ಬಂಗಾರ – ರೇಷ್ಮೆ ದಾನ ಪಡಿತಾರ. ಇದು ಬರೀ ಬುದ್ಧಿವಂತರಿಗೆ ಕಾಣತದ ಅಂತ ಸುಳ್ಳು ಹೇಳಿ ಯಾವ ಬಟ್ಟೆಯನ್ನು ತಯಾರು ಮಾಡದೆ, ರಾಜನನ್ನು ನಗ್ನವಾಗಿಸಿ ಊರಾಗ ಎಲ್ಲ ಓಡಾಡಿಸಿ ಬಿಡತಾರ. ದೊಡ್ಡವರು ಎಲ್ಲ ಸುಮ್ಮನೆ ಇದ್ದರೂ ಅಲ್ಲಿನ ಮಗುವೊಂದು ಮಹಾರಾಜರ ಮೈ ಮೇಲೆ ಬಟ್ಟೆ ಇಲ್ಲ ಅಂತ ಜೋರಾಗಿ ಹೇಳಿ ಬಿಡತದ. ದೊಡ್ಡವರು ನಕ್ಕು ಬಿಡತಾರ.

ಆವಾಗ ರಾಜಾಗ ನಾಚಿಕೆ ಆಗತದ. ಮಕ್ಕಳ ನೋಟವೇ ಅವರ ಒಳನೋಟ. ದೊಡ್ಡವರಿಗೆ ಅದು ಸಾಲದು. ವಿಶೇಷ ಪ್ರಯತ್ನ ಬೇಕು ಅಂತ ಹ್ಯಾನ್ಸ್ ಅವರು ಹೇಳತಾರ. ಸತ್ಯ ಕಪಟಿಗಳಿಗೆ ಕಾಣುವುದಿಲ್ಲ. ಮುಗ್ಧರಿಂದ ಅದನ್ನು ಮುಚ್ಚಿ ಇಡಲಿಕ್ಕೆ ಸಾಧ್ಯ ಇಲ್ಲ ಅನ್ನುವುದನ್ನು ಎಷ್ಟು ಸರಿ ಹೇಳಿದರು ಹಳಸಲ್ಲ.

ಇದನ್ನು ತಿಳಿಯದಷ್ಟೂ ಇವರು ಮುಗ್ಧರಲ್ಲ, ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ದಿನಕರ ದೇಸಾಯಿಯವರ ನಂತರ ನಿಜ ನಾಯಕತ್ವದ ಕನವರಿಕೆಯಲ್ಲಿ ದಿಕ್ಕೆಟ್ಟ ಉತ್ತರ ಕನ್ನಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...