ರಾಜಸ್ಥಾನ ಬಿಜೆಪಿಯಲ್ಲಿನ ಆಂತರಿಕ ಬೇಗುಧಿ ಬೀದಿಗೆ ಬಿದ್ದಿದೆ. ಮಾಜಿ ಸ್ಪೀಕರ್ ಮತ್ತು ಹಿರಿಯ ಶಾಸಕ ಕೈಲಾಶ್ ಮೇಘವಾಲ್ ವಿಪಕ್ಷ ನಾಯಕ ಗುಲಾಬ್ ಚಾಂದ್ ಕಟಾರಿಯ ವಿರುದ್ಧ ತಿರುಗಿ ಬಿದ್ದಿದ್ದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾರವರಿಗೆ ಪತ್ರ ಬರೆದಿದ್ದಾರೆ.
ಗುರುವಾರದಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನಕ್ಕೂ ಮುನ್ನ ‘ಶ್ರೀರಾಮ ಮತ್ತು ಮಹಾರಾಣ ಪ್ರತಾಪ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಗುಲಾಬ್ ಚಾಂದ್ ವಿರುದ್ದ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿರುವ ಕೈಲಾಶ್ ಮೇಘವಾಲ್, 11 ಪುಟಗಳ ಸುಧೀರ್ಘ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಲು ಮಹಾರಾಣ ಪ್ರತಾಪ್ ಕಾರಣ ಎಂದು ಗುಲಾಬ್ ಚಾಂದ್ ಹೇಳಿಕೆ ನೀಡಿದ್ದರು. ಇದು ವಿವಾದದ ಕಿಡಿ ಹಬ್ಬಿಸಿದೆ. ರಾಜಸಮಂದ್ ಶಾಸಕಿ ಕಿರಣ್ ಮಹೇಶ್ವರಿ ವಿರುದ್ಧ ಅಸಭ್ಯ, ನಿಂದನೀಯ ಮಾತುಗಳನ್ನಾಡಲಾಗಿದೆ ಎಂದು ಕೈಲಾಶ್ ಮೇಘಲಾಲ್ ದೂರಿದ್ದಾರೆ.
ಗುಲಾಬ್ ಚಾಂದ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಟಿಕೆಟ್ ನೀಡಲು ಕೋಟ್ಯಾಂತರ ರೂ ಲಂಚ ಪಡೆದಿದ್ದಾರೆ. ಇದೆಲ್ಲದರ ಬಗ್ಗೆ ಮಾಜಿ ಬಿಜೆಪಿ ಅಧ್ಯಕ್ಷರಿಗೆ ತಿಳಿದು ಹಣ ವಾಪಸ್ ಕೊಡಿಸಿದ್ದಾರೆ. ಹಾಗಾಗಿ ಅವರನ್ನು ತುಳಿಯಲಾಗುತ್ತಿದೆ ಎಂದು ಪತ್ರದಲ್ಲಿ ದೂರಲಾಗಿದೆ.
ಅವರು ಬಳಸುವ ಭಾಷೆಯನ್ನು ಕೇಳಿದರೆ ನೀವೆಂದೂ ಅವರ ಮುಖ ನೋಡಲು ಇಷ್ಟಪಡುವುದಿಲ್ಲ. ಇತಿಹಾಸದಲ್ಲಿಯೇ ಅತ್ಯಂತ ಕಳಪೆ ವಿರೋಧ ಪಕ್ಷ ಇದಾಗಿದೆ. ಅದಕ್ಕೆ ಗುಲಾಬ್ ಚಾಂದ್ ಕಟಾರಿಯ ನೇರ ಹೊಣೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಾತನಾಡಿರುವ ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ, “ಅವರು ಹಿರಿಯರು ದೂರು ನೀಡಿದ್ದಾರೆ. ನಾನು ಈ ಕುರಿತು ಪ್ರತಿಕ್ರಿಯಿಸುವುದಿಲ್ಲ. ಪಕ್ಷವು ಈ ಬಗ್ಗೆ ತನಿಖೆ ನಡೆಸಬಹುದು. ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: ಸಿಎಎ ಹಿಂಪಡೆಯುವಂತೆ ನಿರ್ಣಯ ಅಂಗೀಕರಿಸಿದ ತಮಿಳುನಾಡು ಅಸೆಂಬ್ಲಿ: ಬಿಜೆಪಿ ಮಿತ್ರ ಪಕ್ಷದ ಬೆಂಬಲ


