ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದ್ದ ರಾಜಸ್ಥಾನದ ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಗೆಹ್ಲೋಟ್ ಮಂಡಿಸಿದ ವಿಶ್ವಾಸ ಮತ ಗೊತ್ತುವಳಿ ಪರ 125 ಮತಗಳು ಪಡೆದು ಗೆಲುವು ಸಾಧಿಸಿದ್ದಾರೆ. ವಿರುದ್ಧವಾಗಿ 75 ಮತಗಳು ಮಾತ್ರ ಚಲಾವಣೆಗೊಂಡವು.
ಕಾಂಗ್ರೆಸ್ ನ ಎಲ್ಲಾ ಬಂಡಾಯಗಾರರು ಸೇರಿ 107 ಸದಸ್ಯರು, 13 ಪಕ್ಷೇತರ ಶಾಸಕರು, ಸಿಪಿಎಂ ಇಬ್ಬರು ಸದಸ್ಯರು,ಸೇರಿ ಒಟ್ಟು 125 ಮತಗಳು ಅಶೋಕ್ ಗೆಹ್ಲೋಟ್ ಪರವಾಗಿ ಮತ ಚಲಾಯಿಸಿದರು. ಹೀಗಾಗಿ ಒಂದು ತಿಂಗಳ ಕಾಲ ಅನಿಶ್ಚಿತತೆಯಲ್ಲಿದ್ದ ಸರ್ಕಾರಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ.
ರಾಜಸ್ಥಾನ ಸರ್ಕಾರ ಉರುಳಿಹೋಗುವ ಎಲ್ಲಾ ಲಕ್ಷಣಗಳಿದ್ದರೂ ಒಂದು ತಿಂಗಳಾಂತ್ಯದಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸರ್ಕಾರ ಸೇಫಾಗಿದೆ. ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ಬಂಡಾಯ ತಣ್ಣಗಾಗಿತ್ತು. ಇದು ಗೆಹ್ಲೋಟ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿತ್ತು.
ಬಹುಜನ ಸಮಾಜ ಪಕ್ಷದ ಆರು ಸದಸ್ಯರನ್ನು ಕಾಂಗ್ರೆಸ್ ಸೇರ್ಪಡೆಗೆ ಒಪ್ಪಿಗೆ ನೀಡುವ ಸ್ಪೀಕರ್ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ರಾಜಸ್ಥಾನ ಹೈಕೋರ್ಟ್ ಕೂಡ ಅದೇ ಮಾರ್ಗವನ್ನು ಅನುಸರಿಸಿತ್ತು. ಆದರೆ ಇಂದು ವಿಶ್ವಾಸ ಮತ ಯಾಚಿಸಿದ ಗೆಹ್ಲೋಟ್ ಗೆಲುವು ಕಂಡರು. ಹಾಗಾಗಿ ಗೆಹ್ಲೋಟ್ ಸರ್ಕಾರ ಮುಂದಿನ ಅವಧಿ ಪೂರೈಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿ 19 ಶಾಸಕರು ಬಂಡಾಯದ ಬಾವುಟ ಹಾರಿಸಿದ ಸಂದರ್ಭವನ್ನು ಬಳಸಿಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿಗೆ ಮುಖಭಂಗ ಉಂಟಾಗಿದೆ.
ಕರ್ನಾಟಕ, ಮಧ್ಯಪ್ರದೇಶದಲ್ಲಿ ರಾಜಕೀಯ ಪಲ್ಲಟಗಳು ನಡೆದಂತೆ ರಾಜಸ್ಥಾನದಲ್ಲೂ ನಡೆಸಬಹುದು ಎಂಬ ಬಿಜೆಪಿ ತಂತ್ರಗಳಿಗೆ ಹಿನ್ನಡೆಯಾಗಿದೆ. ಶಾಸಕರ ಕುದುರೆ ವ್ಯಾಪಾರಕ್ಕೂ ಸೋಲುಂಟಾಗಿದೆ. ಇದರಿಂದ ರಾಜಸ್ಥಾನದಲ್ಲಿ ಉದ್ಭವಿಸಿದ್ದ ಅನಿಶ್ಚಿತತೆ ಮತ್ತು ರಾಜಕೀಯ ಬಿಕ್ಕಟ್ಟು ಕೊನೆಗೊಂಡಂತಾಗಿದೆ.
ಇದನ್ನೂ ಓದಿ: ಬಿಜೆಪಿ ವಿಲೀನ ಮಾಡಿದ್ರೆ ಸರಿ, ಕಾಂಗ್ರೆಸ್ ಮಾಡಿದರೆ ತಪ್ಪೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ


