ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದ ಪ್ರಾದೇಶಿಕ ಪಕ್ಷದ ಇಬ್ಬರು ಶಾಸಕರು ಈಗ ಮತ್ತೆ ಆಡಳಿತ ಸರ್ಕಾರವನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
“ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಪಿ)ಯ ಇಬ್ಬರೂ ಶಾಸಕರು ತಮ್ಮ ರಾಜ್ಯ ಕಾರ್ಯಕಾರಿ ಸಮಿತಿಯನ್ನು ಭೇಟಿಯಾಗಿ ಅವರ ಬೇಡಿಕೆಗಳೊಂದಿಗೆ ಚರ್ಚಿಸಿದ ನಂತರ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದರು” ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
भारतीय ट्राइबल पार्टी (बीटीपी) के दोनों विधायकों ने उनकी प्रदेश कार्यकारिणी के पदाधिकारियों के साथ मुलाक़ात कर और अपने मांगपत्र के साथ चर्चा कर सरकार को समर्थन देने की घोषणा की। pic.twitter.com/a2783tQYDo
— Ashok Gehlot (@ashokgehlot51) July 18, 2020
ಮುಖ್ಯಮಂತ್ರಿಗಳ ಕಚೇರಿ ಹಂಚಿಕೊಂಡ ಫೋಟೋಗಳಲ್ಲಿ ಶಾಸಕರ ಬೆಂಬಲ ಪತ್ರವನ್ನು ಅಶೋಕ್ ಗೆಹ್ಲೋಟ್ ಸ್ವೀಕರಿಸುತ್ತಿರುವುದು ಕಂಡುಬಂದಿದೆ.
ಸಚಿನ್ ಪೈಲಟ್ ಬಂಡಾಯವೆದ್ದ ನಂತರ ಈ ಇಬ್ಬರೂ ಶಾಸಕರ ಮೇಲೆ ಎಲ್ಲರ ಗಮನ ನೆಟ್ಟಿತ್ತು. ಆಗ ಅವರು ತಮ್ಮ ಇಚ್ಚೆಗೆ ವಿರುದ್ಧವಾಗಿ ಮುಖ್ಯಮಂತ್ರಿ ಗೆಹ್ಲೋಟ್ ಐಷಾರಾಮಿ ಹೋಟೆಲ್‌ನಲ್ಲಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿ ವಿಡಿಯೋವೊಂದನ್ನು ಮಾಡಿ ಹಂಚಿಕೊಂಡಿದ್ದರು.
ತನ್ನ ಬೆಂಬಲದ ಶಾಸಕರನ್ನು ಉಳಿಸಿಕೊಳ್ಳುವಲ್ಲಿ ಹೆಣಗಾಡುತ್ತಿರುವ ಕಾಂಗ್ರೆಸ್ ಇಬ್ಬರು ಶಾಸಕರನ್ನು ಕಳೆದುಕೊಂಡರೆ ಸರ್ಕಾರದ ಪರವಾಗಿರುವ ಬೆಂಬಲದ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿತ್ತು.
ಸಚಿನ್ ಪೈಲಟ್ ತಮಗೆ 30 ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ. ಇತ್ತ ಕಡೆ ಗೆಹ್ಲೋಟ್ ಕೂಡಾ ತನಗೆ 109 ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಉಳಿಯಬೇಕಾದ 101 ಸದಸ್ಯರ ಬೆಂಬಲ ಸಾಕಾಗುತ್ತದೆ.
ಗುರುವಾರ ಬಿಟಿಪಿ ಶಾಸಕರಲ್ಲಿ ಒಬ್ಬರಾದ ರಾಜ್‌ಕುಮಾರ್ ನಾವು ಸಚಿನ್ ಪೈಲಟ್ ಬೆಂಬಲಿಗರಲ್ಲ, ಕೆಲವು ವಿಷಯಗಳ ಬಗ್ಗೆ ಚರ್ಚಿಸಲು ಗೆಹ್ಲೋಟ್‌ರನ್ನು ಭೇಟಿ ಮಾಡಲು ಯೋಜಿಸಿದ್ದೇವೆ ಎಂದು ತಿಳಿಸಿದ್ದರು.
ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಪಕ್ಷ ತಟಸ್ಥವಾಗಿರಬೇಕು ಎಂದು ಬಿಟಿಪಿ ಮುಖ್ಯಸ್ಥ ಮಹೇಶ್ ಭಾಯ್ ವಾಸವ ಸೋಮವಾರ ತಮ್ಮ ಶಾಸಕರಿಗೆ ಪತ್ರ ಬರೆದಿದ್ದಾರೆ.
ಆಗ ಇಬ್ಬರು ಶಾಸಕರು ತಾವು ಅಶೋಕ್ ಗೆಹ್ಲೋಟ್ ಅವರೊಂದಿಗೆ ಇದ್ದೇವೆ ಎಂದು ಹೇಳಿದ್ದರು. “ಸ್ವಲ್ಪ ಗೊಂದಲವಿದೆ. ಇದೀಗ ನಾವು ಸರ್ಕಾರದೊಂದಿಗಿದ್ದೇವೆ. ಆದರೆ ನಮ್ಮ ನಾಯಕರೊಂದಿಗೆ ಮಾತನಾಡಿದ ನಂತರ ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆಂದು ಎನ್‌ಡಿಟಿವಿ ವರದಿ ಮಾಡಿದೆ.
ಓದಿ: ರಾಜಸ್ಥಾನ ಬಿಕ್ಕಟ್ಟು: ಕೇಂದ್ರ ಸಚಿವ, ಬಂಡಾಯ ಶಾಸಕನ ವಿರುದ್ಧ FIR: ಒಬ್ಬನ ಬಂಧನ


