ಇಂಡಿಯಾ ಟುಡೇ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ವಿರುದ್ಧದ ಮಾನನಷ್ಟ ಪ್ರಕರಣದಲ್ಲಿ ಸತ್ಯ ಮುಚ್ಚಿಟ್ಟಿದ್ದಕ್ಕಾಗಿ ದೆಹಲಿ ಹೈಕೋರ್ಟ್ ಶುಕ್ರವಾರ (ಏ.4) ಬಿಜೆಪಿ ನಾಯಕಿ ಶಾಝಿಯಾ ಇಲ್ಮಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಇಂಡಿಯಾ ಟುಡೇ ಚಾನೆಲ್‌ನಲ್ಲಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಿಂದ ಶಾಝಿಯಾ ಇಲ್ಮಿ ಹೊರನಡೆದ ನಂತರ ರಾಜ್‌ದೀಪ್ ಸರ್ದೇಸಾಯಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಾಕಿದ್ದ ವಿಡಿಯೋ ಪೋಸ್ಟ್ ವಿರುದ್ದ ಇಲ್ಮಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಇಲ್ಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಭಾಗಶಃ ಮಾನ್ಯ ಮಾಡಿದ್ದಾರೆ. ಆದರೆ, ಅರ್ಜಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎರಡು ಎಕ್ಸ್ ಪೋಸ್ಟ್‌ಗಳನ್ನು ಇಲ್ಮಿ ಮುಚ್ಚಿಟ್ಟಿರುವುದು ಕಂಡು ಬಂದಿದೆ ಎಂದ ನ್ಯಾಯಾಲಯ ದಂಡ ವಿಧಿಸಿದೆ ಎಂದು ವರದಿ ಹೇಳಿದೆ.
ರಾಜ್‌ದೀಪ್ ಸರ್ದೇಸಾಯಿ ಪೋಸ್ಟ್ ಮಾಡಿದ್ದ, ಇಲ್ಮಿ ಮತ್ತು ಇಂಡಿಯಾ ಟುಡೇ ವಿಡಿಯೋ ಪತ್ರಕರ್ತನ ನಡುವಿನ ವಾಗ್ವಾದವನ್ನು ತೋರಿಸುವ 18 ಸೆಕೆಂಡುಗಳ ವಿಡಿಯೋ ತುಣುಕನ್ನು ತೆಗೆದು ಹಾಕುವಂತೆ ನಿರ್ದೇಶಿಸಿದ್ದ ಈ ಹಿಂದಿನ ಮಧ್ಯಂತರ ಆದೇಶವನ್ನು ನ್ಯಾಯಾಲಯ ಸಮರ್ಥಿಸಿಕೊಂಡಿದೆ.
“ಇಲ್ಮಿ ಚರ್ಚಾ ಕಾರ್ಯಕ್ರಮದಿಂದ ಹೊರನಡೆದ ನಂತರವೂ ವಿಡಿಯೋ ರೆಕಾರ್ಡಿಂಗ್ ಮಾಡಿರುವುದು, ಅವರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಿದೆ. ಹಾಗಾಗಿ, ಅದನ್ನು ಆನ್‌ಲೈನ್‌ನಲ್ಲಿ ಉಳಿಸಲು ಸಾಧ್ಯವಿಲ್ಲ” ಎಂದಿದೆ.
Breaking news:
Delhi High Court rules:
i) BJP leader Shazia Ilmi has suppressed material facts on 2 counts. Has IMPOSED FINE of Rs. 25,000 on her for this. FINE IMPOSED by court on a BJP spokesperson!
ii) Has approved the video which was transmitted on India Today… https://t.co/7goU5q3Et3
— Rajdeep Sardesai (@sardesairajdeep) April 4, 2025
ವಿಡಿಯೋ ಪತ್ರಕರ್ತ ತನ್ನ ನಡವಳಿಕೆ ಮೂಲಕ ನನಗೆ ಕೋಪ ಬರಿಸಿದರು ಎಂಬ ಇಲ್ಮಿ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಪತ್ರಕರ್ತನನ್ನು ವಿಕೃತ, ಕಾಮುಕ ಎಂದು ಹೇಳುವುದು ಸಮರ್ಥನೀಯವಲ್ಲ ಎಂದಿದೆ. ಸರ್ದೇಸಾಯಿ ಪೋಸ್ಟ್ ಮಾಡಿದ್ದ ವಿಡಿಯೋವನ್ನು ತಿರುಚಲಾಗಿದೆ ಎಂಬ ಇಲ್ಮಿ ಆರೋಪನ್ನೂ ನ್ಯಾಯಾಲಯ ತಳ್ಳಿ ಹಾಕಿದೆ.
ತನ್ನ ಮನೆಯಲ್ಲಿದ್ದ ಇಂಡಿಯಾ ಟುಡೇ ವಿಡಿಯೋ ಪತ್ರಕರ್ತನ ಮೇಲೆ ಇಲ್ಮಿ ದೌರ್ಜನ್ಯವೆಸಗಿದ್ದಾರೆ ಎಂದು ರಾಜ್‌ದೀಪ್ ಸರ್ದೇಸಾಯಿ ಎಕ್ಸ್ ಪೋಸ್ಟ್ ಮೂಲಕ ಮಾಡಿದ್ದ ಆರೋಪವನ್ನು ವಜಾಗೊಳಿಸಬೇಕೇ ಎಂದು ನ್ಯಾಯಾಲಯ ಪರಿಶೀಲಿಸಿದೆ.
“ಇಲ್ಮಿ ಮೈಕ್ ಕಿತ್ತು ಹಾಕಿದ್ದಾರೆ, ಪತ್ರಕರ್ತನನ್ನು ಮನೆಯಿಂದ ಹೊರದಬ್ಬಿದ್ದಾರೆ” ಎಂದು ಹೇಳುವುದು ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿದೆ.
ಆದಾಗ್ಯೂ, ರಾಜ್‌ದೀಪ್ ಅವರ ಅದೇ ಪೋಸ್ಟ್‌ನ ಉಳಿದ ಭಾಗಗಳು (ನಮ್ಮ ಪತ್ರಕರ್ತನನ್ನು ನಿಂದಿಸಲಾಗಿದೆ, ಕೆಟ್ಟ ನಡವಳಿಕೆಗೆ ಕ್ಷಮೆಯಿಲ್ಲ) ಪ್ರಾಥಮಿಕವಾಗಿ ರದ್ದುಗೊಳಿಸಬೇಕಿಲ್ಲ ಎಂದ ನ್ಯಾಯಾಲಯ, ಅವುಗಳಿಗೆ ಕೆಲವು ಆಧಾರಗಳಿವೆ ಎಂದು ತೋರುತ್ತದೆ ಎಂದಿದೆ.
ಏನಿದು ಪ್ರಕರಣ?
ಈ ಪ್ರಕರಣವು, ಕಾರ್ಗಿಲ್ ವಿಜಯ್ ದಿವಸ್ ರಾಜಕೀಯ, ಅಗ್ನಿವೀರ್ ಮತ್ತು ರಕ್ಷಣಾ ಪಡೆಗಳ ರಾಜಕೀಯೀಕರಣ ಕುರಿತು ಇಂಡಿಯಾ ಟುಡೆಯಲ್ಲಿ ರಾಜ್‌ದೀಪ್ ಸರ್ದೇಸಾಯಿ ಅವರು ಜುಲೈ 26, 2024ರಂದು ನಡೆಸಿದ್ದ ಚರ್ಚೆಗೆ ಸಂಬಂಧಿಸಿದೆ.
ಚರ್ಚೆಯಲ್ಲಿ ಮೇಜರ್ ಜನರಲ್ (ನಿವೃತ್ತ) ಯಶ್ ಮೋರ್ ಅವರು ಅಗ್ನಿವೀರ್ ಯೋಜನೆಯಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದರು. ಈ ವೇಳೆ ಬಿಜೆಪಿ ವಕ್ತಾರೆ ಇಲ್ಮಿ ಮಧ್ಯ ಪ್ರವೇಶಿಸಿದ್ದರು. ಆಗ ಇಲ್ಮಿ ಮತ್ತು ಸರ್ದೇಸಾಯಿ ನಡುವೆ ವಾಗ್ವಾದ ನಡೆದಿತ್ತು. ಮಾಜಿ ಜನರಲ್ “ಕಠಿಣ ಸಂಗತಿಗಳನ್ನು ಮುಂದಿಡುತ್ತಿದ್ದಾರೆ” ಎಂದು ಸರ್ದೇಸಾಯಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇಲ್ಮಿ, “ನಮಗೆ ಉಪದೇಶ ಕೊಡಬೇಡಿ” ಎಂದಿದ್ದರು.
ಸರ್ದೇಸಾಯಿ ಮತ್ತು ಇಲ್ಮಿ ನಡುವೆ ವಾಗ್ವಾದ ತಾರಕಕ್ಕೇರಿ, ಇಲ್ಮಿ ಕಾರ್ಯಕ್ರಮದಿಂದ ಹೊರ ನಡೆದಿದ್ದರು. ಅದೇ ದಿನ ರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಇಲ್ಮಿ “ಸರ್ದೇಸಾಯಿ ಶೋನಲ್ಲಿ ನನ್ನ ಧ್ವನಿ ಅಡಗಿಸಿದ್ದಾರೆ” ಎಂದು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿದ್ದ ಸರ್ದೇಸಾಯಿ ಮರುದಿನ ಬೆಳಿಗ್ಗೆ ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಇಲ್ಮಿ ಅವರು ತಮ್ಮ ಮನೆಯಲ್ಲಿ ಇಂಡಿಯಾ ಟುಡೇಯ ವಿಡಿಯೋ ಪತ್ರಕರ್ತನನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು.
ಸರ್ದೇಸಾಯಿ ಅವರ ಪೋಸ್ಟ್‌ಗೆ ಸಂಬಂಧಿಸಿದಂತೆ ಎಕ್ಸ್‌ನಲ್ಲೇ ಪ್ರತಿಕ್ರಿಯೆ ನೀಡಿದ್ದ ಇಲ್ಮಿ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು. ಅದರಂತೆ, ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸಂಭಾಲ್ | ಶಾಹಿ ಮಸೀದಿಯಲ್ಲಿ ಹಿಂದೂ ಆಚರಣೆಗೆ ಯತ್ನಿಸಿದ ಮೂವರು ದುಷ್ಕರ್ಮಿಗಳ ಬಂಧನ


