ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ಬಿಜೆಪಿ ಹೈಕಮಾಂಡ್ ಈರಣ್ಣಾ ಕಡಾಡಿ ಮತ್ತು ಅಶೋಕ್ ಗಸ್ತಿ ಅವರ ಉಮೇದುವಾರಿಕೆಯನ್ನು ಘೋಷಿಸಿದೆ. ಈ ಮೂಲಕ ಪಕ್ಷದ ರಾಜ್ಯ ಘಟಕ ಶಿಫಾರಸು ಮಾಡಿದ ಹೆಸರುಗಳನ್ನು ತಿರಸ್ಕರಿಸಿ ಅಚ್ಚರಿಮೂಡಿಸಿದೆ.
ರಾಜ್ಯ ಘಟಕವು ಪಕ್ಷದ ಉನ್ನತ ನಾಯಕರಿಗೆ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಲೋಕಸಭಾ ಮಾಜಿ ಸದಸ್ಯ ರಮೇಶ್ ಕತ್ತಿ ಮತ್ತು ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ ಒಟ್ಟು ಮೂರು ಹೆಸರುಗಳನ್ನು ಅನುಮೋದನೆಗಾಗಿ ಶಿಫಾರಸು ಮಾಡಿತ್ತು. ಆದಾಗ್ಯೂ, ಬಿಜೆಪಿ ಹೈಕಮಾಂಡ್ ಈ ಎಲ್ಲಾ ಮೂರು ಹೆಸರುಗಳನ್ನು ತಿರಸ್ಕರಿಸಿದೆ.
ಬಿಜೆಪಿ ಹೈಕಮಾಂಡ್‌ನ ಈ ಅಚ್ಚರಿದಾಯಕ ನಡೆಯು ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರ ಪ್ರಭಾವವನ್ನು ಹಂತಹಂತವಾಗಿ ತಗ್ಗಿಸುವ ಪ್ರಯತ್ನವಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
“ಕಡಾಡಿ ಮತ್ತು ಗಸ್ತಿ ಇಬ್ಬರೂ ಪಕ್ಷದ ತಳಮಟ್ಟದ ಕಾರ್ಯಕರ್ತರು ಹಾಗೂ ಹಲವಾರು ದಶಕಗಳಿಂದ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ, ಪಕ್ಷದ ಉನ್ನತ ನಾಯಕರು ಅವರ ಹೆಸರನ್ನು ಮೇಲ್ಮನೆ ಚುನಾವಣೆಗೆ ಅನುಮೋದಿಸಿದರು” ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದರು ಎಂದು ವರದಿಯಾಗಿದೆ.
ಈರಣ್ಣ ಕಡಾಡಿ ಬೆಳಗಾವಿ ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಈ ಹಿಂದೆ ಅವರು ಪಕ್ಷದ ಬೆಳಗವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಅಶೋಕ್ ಗಸ್ತಿ ರಾಯಚೂರು ಜಿಲ್ಲೆಯ ಸವಿತಾ ಸಮಾಜ ಸಮುದಾಯಕ್ಕೆ ಸೇರಿದವರು. ಅವರು ಬಳ್ಳಾರಿ ಜಿಲ್ಲೆಯ ಪಕ್ಷದ ಉಸ್ತುವಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
“ಹಲವಾರು ನಾಯಕರ ತೀವ್ರ ಲಾಬಿ ಹೊರತಾಗಿಯೂ, ರಾಜ್ಯಸಭಾ ಚುನಾವಣೆಗೆ ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡುವ ಮೂಲಕ, ಪಕ್ಷವು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿದೆ. ಮಾತ್ರವಲ್ಲದೆ ಹಣದ ಚೀಲ ಮತ್ತು ಪ್ರಭಾವಿ ವ್ಯಕ್ತಿಗಳು ಮೇಲ್ಮನೆ ಸದಸ್ಯತ್ವವನ್ನು ಪಡೆಯಬಾರದು ಎಂದು ಖಚಿತಪಡಿಸಿದೆ” ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆ ಜೂನ್ 19 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಜೂನ್ 9 ಕೊನೆಯ ದಿನಾಂಕವಾಗಿದೆ.
ಜೆಡಿಎಸ್‌ನ ಕುಪೇಂದ್ರ ರೆಡ್ಡಿ, ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಮತ್ತು ಪ್ರೊ.ರಾಜೀವ್ ಗೌಡ, ಬಿಜೆಪಿಯ ಪ್ರಭಾಕರ್ ಅವರ ರಾಜ್ಯಸಭೆ ಅವಧಿ ಜೂನ್ 25ಕ್ಕೆ ಕೊನೆಗೊಳ್ಳಲಿದೆ. ಈ ನಾಲ್ಕು ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ.
ಓದಿ: ರಾಜ್ಯಸಭೆಯಲ್ಲಿ ಖರ್ಗೆ ಗಟ್ಟಿ ದನಿಯಾಗಲಿದ್ದಾರೆ: ನಾಮಪತ್ರ ಸಲ್ಲಿಕೆ ವೇಳೆ ಸಿದ್ದು ಹೇಳಿಕೆ


