“ಭಾರತದಲ್ಲಿ ಕೇವಲ ಒಂದು ದಿನ ಮಾತ್ರ ದೀಪಾವಳಿ, ಗಾಝಾದಲ್ಲಿ ಪ್ರತಿದಿನವೂ ದೀಪಾವಳಿ” ಎಂದು ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸೋಮವಾರ (ಅ.20) ಪೋಸ್ಟ್ ಹಾಕಿದ್ದು, ಈ ಮೂಲಕ ಗಾಝಾ ನರಮೇಧವನ್ನು ಸಂಭ್ರಮಿಸಿ ವಿಕೃತಿ ಮೆರೆದಿದ್ದಾರೆ.
ವರ್ಮಾ ಅವರ ಈ ವಿಕೃತ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಶಸ್ತಿ ವಿಜೇತ ಪತ್ರಕರ್ತೆ ರಾಣಾ ಅಯ್ಯೂಬ್ ವರ್ಮಾ ಅವರ ಪೋಸ್ಟ್ ಅನ್ನು ರೀಪೋಸ್ಟ್ ಮಾಡಿದ್ದು, “ಪುನರುಚ್ಚರಿಸುತ್ತಿದ್ದೇನೆ: ನೈತಿಕವಾಗಿ ಭ್ರಷ್ಟಗೊಂಡಿರುವ ರಾಷ್ಟ್ರದಲ್ಲಿ ವೈರಸ್‌ಗೆ ಕೊಲ್ಲಲು ಏನು ಉಳಿದಿದೆ?” ಬರೆದುಕೊಂಡಿದ್ದಾರೆ.
Repeating: What is left for a virus to kill in a morally corrupt nation https://t.co/hoAYra2Cj4
— Rana Ayyub (@RanaAyyub) October 21, 2025
“ಭಾರತದ ಹೊರಗಿನ ಜನರು ಭಾರತದಲ್ಲಿ ಮುಖ್ಯವಾಹಿನಿಯಲ್ಲಿರುವ ಮತ್ತು ಭಾರತೀಯ ಸೆಲೆಬ್ರಿಟಿಗಳು ಹೆಚ್ಚು ಪ್ರತಿಪಾದಿಸುವ ರಾಜಕೀಯದ ಕೀಳು ಮಟ್ಟವನ್ನು ಗ್ರಹಿಸಿಲೂ ಸಾಧ್ಯವಿಲ್ಲ” ಎಂದು ಪತ್ರಕರ್ತೆ ಮತ್ತು ಅಂಕಣಗಾರ್ತಿ ಸಾರಾ ಅಥರ್ ಆಕ್ರೋಶ ಹೊರ ಹಾಕಿದ್ದಾರೆ.
ಶಿಕ್ಷಣ ತಜ್ಞೆ ಮತ್ತು ಹೋರಾಟಗಾರ್ತಿ ರಾಖಿ ತ್ರಿಪಾಠಿ ಅವರು ರಾಮ್ ಗೋಪಾಲ್ ವರ್ಮಾ ಅವರ ಸಹಾನುಭೂತಿಯ ಕೊರತೆಯನ್ನು ಖಂಡಿಸಿದ್ದು, “ದೀಪಾವಳಿ ಅಂದರೆ ಭರವಸೆ, ಬೆಳಕು ಮತ್ತು ಹೊಸತನ. ಗಾಝಾ ಅಂದರೆ ಬದುಕಿನ ಹೋರಾಟ. ಈ ಮನುಷ್ಯನಿಗೆ ಆಚರಣೆ ಮತ್ತು ವಿನಾಶದ ನಡುವಿನ ವ್ಯತ್ಯಾಸ ತಿಳಿದಿಲ್ಲ, ಈತ ಕ್ರೂರಿ” ಎಂದು ಕಿಡಿಕಾರಿದ್ದಾರೆ.
ವರ್ಮಾ ಅವರ ಹೇಳಿಕೆ ನಿಜವಾಗಿಯೂ ಅಸಹ್ಯಕರ ಸಮಾಜದ ಪ್ರತಿಬಿಂಬ ಎಂದ ಅಲಿ ಅಸಾದ್, “ಇವರು ಝಿಯೋನಿಸ್ಟ್ ಗುಲಾಮರಾಗಲು ಮುಂದಾಗುವ ಜನರು, ಇಸ್ರೇಲಿಗಳಿಗಿಂತ ಕೆಟ್ಟವರಾಗಿರುವ ವಿಶ್ವದ ಏಕೈಕ ಜನರು” ಎಂದಿದ್ದಾರೆ.
ವರ್ಮಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ಕೊಟ್ಟಿರುವ ದೀಕ್ಷಾ ಕಂಡ್ಪಾಲ್ ಎಂಬ ಎಕ್ಸ್ ಬಳಕೆದಾರರೊಬ್ಬರು, “ದೀಪಾವಳಿ ಎಂದರೆ ಶ್ರೀರಾಮನು ತನ್ನ ರಾಜ್ಯಕ್ಕೆ ಮರಳುವುದನ್ನು ನಾವು ಆಚರಿಸುವ ಹಬ್ಬ. ಇದು ಬೆಳಕು, ಸಮೃದ್ಧಿ, ಸಕಾರಾತ್ಮಕತೆಯ ಹಬ್ಬ. ನೀವು ಗಾಝಾದಲ್ಲಿ ಪ್ರತಿದಿನ ದೀಪಾವಳಿ ಎಂದು ಹೇಳುವ ಮೂಲಕ ದೀಪಾವಳಿಯನ್ನು ಸಾವು ಮತ್ತು ಯುದ್ಧದೊಂದಿಗೆ ಸಂಯೋಜಿಸುತ್ತಿದ್ದೀರಿ” ಎಂದು ಹೇಳಿದ್ದಾರೆ.
ಮುಂದುವರಿದು, “ದೀಪಾವಳಿಯಂದು ನಾವು ಸಾವನ್ನು ಸಂಭ್ರಮಿಸುತ್ತೇವೆಯೇ? ಈ ರೀತಿಯ ಪೋಸ್ಟ್‌ಗಳಿಂದಾಗಿ ನಾವು ಭಾರತೀಯರು ಮತ್ತು ಹಿಂದೂಗಳು ಹೆಚ್ಚು ದ್ವೇಷವನ್ನು ಪಡೆಯುತ್ತೇವೆ. ವಿದೇಶಗಳಲ್ಲಿ ಜನರು ಕಿರುಕುಳಕ್ಕೊಳಗಾಗುವ ನೈಜ ಉದಾಹರಣೆಗಳಿವೆ. ಇದನ್ನು ಅಳಿಸಿ” ಎಂದು ಬರೆದುಕೊಂಡಿದ್ದಾರೆ.
ಗಾಝಾದ ಕದನ ವಿರಾಮವನ್ನು ಮುರಿದಿರುವ ಇಸ್ರೇಲ್ ಅಮಾಯಕರ ಹತ್ಯೆಯನ್ನು ಮುಂದುವರಿಸಿರುವ ನಡುವೆ ರಾಮ್ ಗೋಪಾಲ್ ವರ್ಮಾ ವಿಕೃತ ಪೋಸ್ಟ್ ಹಾಕಿದ್ದಾರೆ.
ವರ್ಮಾ ಅವರ ದ್ವೇಷ ಹರಡುವ ಮತ್ತು ಸಾಮೂಹಿಕ ಹತ್ಯೆಗಳನ್ನು ಅಣಕಿಸುವ ಪೋಸ್ಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ಎಕ್ಸ್ ಅನ್ನು ಒತ್ತಾಯಿಸಿದ್ದಾರೆ.
ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವರ್ಮಾ ಹಾಕಿರುವ ಪೋಸ್ಟ್ ಈಗಾಲೂ ಇದೆ. ಅವರು ಇದುವರೆಗೆ ಪೋಸ್ಟ್ ಅಳಿಸಿಲ್ಲ, ಕ್ಷಮೆಯೂ ಕೇಳಿಲ್ಲ.
ಹಿಂದಿ ವಿದ್ವಾಂಸೆ ಫ್ರಾನ್ಸೆಸ್ಕಾ ಓರ್ಸಿನಿ ಭಾರತ ಪ್ರವೇಶಿಸದಂತೆ ವಿಮಾನ ನಿಲ್ದಾಣದಲ್ಲಿ ತಡೆ: ವರದಿ


