ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರಿನ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಧಾರಣೆಗೆ ಕಾರಣನಾಗಿದ್ದಾನೆ ಎಂದು ಆರೋಪಿಸಲಾಗಿದ್ದ ಆರೆಸ್ಸೆಸ್ ಮುಖಂಡ ನಾರಾಯಣ ರೈ(73) ಬುಧವಾರ ಪುತ್ತೂರಿನ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯು ಸೆಪ್ಟೆಂಬರ್ 5 ರಂದು ತನ್ನ ಸಂಬಂಧಿಕರೊಬ್ಬರ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ನಂತರ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಆದಾಗ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದದ್ದರಿಂದ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದ ಬಳಿಕ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ‘ಸತಿ’ ಹೋದ ರೂಪ್ ಕನ್ವರ್ ದೇಗುಲಕ್ಕೆ ಆರೆಸ್ಸೆಸ್ ಬೆಂಬಲ ಮತ್ತು ನಾನು ಆರೆಸ್ಸೆಸ್ ತೊರೆದದ್ದು ಹೀಗೆ..!
ಈ ವೇಳೆ ಪುತ್ತೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ ಪೊಲೀಸರು ಸಂತ್ರಸ್ತೆಯ ಸಹೋದರನನ್ನೆ ಬಂಧಿಸಿದ್ದರು. ಜೊತಗೆ ಘಟನೆಗೆ ಸಂಬಂಧವೇ ಇಲ್ಲದ ಯುವಕನೊಬ್ಬನನ್ನು ಪ್ರಕರಣದಲ್ಲಿ ಹೆಸರಿಸಿ ಪ್ರಕರಣವನ್ನು ತಿರುಚಿದ್ದರು. ಈ ನಡುವೆ ಸಂತ್ರಸ್ತ ಬಾಲಕಿ ನ್ಯಾಯಾಲಯದ ಮುಂದೆ ತನ್ನ ಸ್ಥಿತಿಗೆ ಆರೆಸ್ಸೆಸ್ ಮುಖಂಡ ನಾರಾಯಣ ರೈ ಕಾರಣ ಎಂದು ಹೇಳಿಕೆ ನೀಡಿದ್ದರು.
ಬಾಲಕಿಯು ಆರೋಪಿ ನಾರಾಯಣ ರೈಗೆ ಸೇರಿದ ತೋಟಕ್ಕೆ ಬಾಲಕಿ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಹುಡುಗಿಯ ಅಸಹಾಯಕತೆಯನ್ನು ಬಳಸಿಕೊಂಡು ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಆರೋಪಿಯ ಪ್ರಭಾವಕ್ಕೊಳಗಾಗಿ ಪೊಲೀಸರು ಪ್ರಕರಣವನ್ನು ತಿರುಚಿದ್ದಾರೆ ಎಂದು ದಲಿತ ಸಂಘಟನೆಗಳು ಹೆತ್ತವರೊಂದಿಗೆ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದವು.
ಇದನ್ನೂ ಓದಿ: ಆರ್.ಎಸ್.ಎಸ್ ಸಖ್ಯಕ್ಕೆ ಬಂದದ್ದು ಮತ್ತು ಪ್ರಶ್ನಿಸಿ ಹೊರಬಂದದ್ದು..
ಈ ನಡುವೆ, ಆರೋಪಿ ನಾರಾಯಣ ರೈ ಬಂಧನದ ಭೀತಿಯಿಂದ ತನ್ನ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಆದರೆ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು ಮತ್ತು ಆತ ಅಡಗಿದ್ದಾನೆ ಎನ್ನಲಾಗಿದ್ದ ಮನೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆ ನಂತರ ಬುಧವಾರ ಆರೋಪಿ ನಾರಾಯಣ ರೈ ಪುತ್ತೂರು ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಆರೋಪಿಯ ವಿಚಾರಣೆ ನಡೆಸಿದ ನ್ಯಾಯಾಲಯ ಎರಡು ದಿನಗಳ ಕಾಲ ಪೋಲೀಸ್ ಕಸ್ಟಡಿಗೆ ನೀಡಿದೆ. ಮುಂದಿನ ವಿಚಾರಣೆ ಶುಕ್ರವಾರ ನಡೆಯಲಿದೆ ಎಂದು ದಲಿತ ಮುಖಂಡ ಆನಂದ್ ಬೆಳ್ಳಾರೆ ನಾನುಗೌರಿ.ಕಾಂ ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಅಮಾನವೀಯ ಜಾತಿ ದೌರ್ಜನ್ಯ: ದಲಿತ ಯುವಕನ ಮೇಲೆ ಹಲ್ಲೆ, ಹಸುವಿಗೆ ಕಟ್ಟಿ ಮೆರವಣಿಗೆ


