11 ವರ್ಷದ ಬಾಲಕಿಯೊಬ್ಬರ ಮೇಲೆ ಆಕೆಯ ಹದಿಹರೆಯದ ಸಹೋದರ ಮತ್ತು ತಂದೆ ಪ್ರತ್ಯೇಕ ಸಂದರ್ಭಗಳಲ್ಲಿ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಷ್ಟೇ ಅಲ್ಲದೆ ಬಾಲಕಿಯ ಅಜ್ಜ ಮತ್ತು ಸೋದರ ಸಂಬಂಧಿ ಕೂಡ ಅವರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು ಅವರ ಮೇಲೆ ಕಳೆದ ಐದು ವರ್ಷಗಳಲ್ಲಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದು, ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಕ್ಕಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಂದೆ ಮತ್ತು ಸಹೋದರನ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ರ ಅಡಿಯಲ್ಲಿ ಅತ್ಯಾಚಾರದ ಪ್ರಕರಣವನ್ನು ದಾಖಲಿಸಲಾಗಿದ್ದು, ಬಾಲಕಿಯ ಅಜ್ಜ ಮತ್ತು ದೂರದ ಸೋದರ ಸಂಬಂಧಿಯ ವಿರುದ್ಧ ಸೆಕ್ಷನ್ 354 ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಪುಣೆ ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗೆ ಕೊಲೆ ಬೆದರಿಕೆ ಆರೋಪ; ಪ್ರಕರಣ ದಾಖಲು
ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಸದಸ್ಯರು ಬಿಹಾರದವರಾಗಿದ್ದು, ಪ್ರಸ್ತುತ ಪುಣೆಯಲ್ಲಿ ವಾಸಿಸುತ್ತಿದ್ದಾರೆ.
“ತನ್ನ ಶಾಲೆಯಲ್ಲಿ ‘ಗುಡ್ ಟಚ್ ಮತ್ತು ಬ್ಯಾಡ್ ಟಚ್’ ಬಗ್ಗೆ ತಿಳಿಸಿ ಕೊಡುತ್ತಿರುವಾಗ ಬಾಲಕಿಯು ಘಟನೆಯ ಬಗ್ಗೆ ಹೇಳಿದ್ದಾರೆ. ಕಳೆದ ಐದು ವರ್ಷಗಳಿಂದ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ” ಎಂದು ಪೊಲೀಸ್ ಇನ್ಸ್‌ಪೆಕ್ಟರ್ (ಅಪರಾಧ) ಅಶ್ವಿನಿ ಸಾತ್ಪುತೆ ಹೇಳಿದ್ದಾರೆ.
2017ರಲ್ಲಿ ಬಿಹಾರದಲ್ಲಿ ಇರುವಾಗಲೇ ತಂದೆ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸಿದ್ದ ಎಂದು ದೂರನ್ನು ಉಲ್ಲೇಖಿಸಿ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
“ಹುಡುಗಿಯ ಹಿರಿಯ ಸಹೋದರ ನವೆಂಬರ್ 2020 ರ ಸುಮಾರಿಗೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಪ್ರಾರಂಭಿಸಿದ್ದ. ಆಕೆಯ ಅಜ್ಜ ಮತ್ತು ದೂರದ ಸೋದರ ಸಂಬಂಧಿ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದರು” ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಎಲ್ಲಾ ಘಟನೆಗಳು ಪ್ರತ್ಯೇಕವಾಗಿ ನಡೆದಿರುವುದರಿಂದ ಆರೋಪಿಗಳು ಪರಸ್ಪರರ ಕೃತ್ಯಗಳ ಬಗ್ಗೆ ತಿಳಿದಿಲ್ಲದೆ ಇರಬಹುದು. ಇದು ಸಾಮೂಹಿಕ ಅತ್ಯಾಚಾರದ ಪ್ರಕರಣವಲ್ಲ ಎಂದು ಇನ್ಸ್‌ಪೆಕ್ಟರ್ ಸಾತ್ಪುತೆ ಹೇಳಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳನ್ನು ಸೇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತ್ ಫೈಲ್ಸ್: ಮೀಸೆ ಬಿಟ್ಟಿದ್ದಕ್ಕೆ, ಚೆಂದವಾಗಿ ಕಾಣುತ್ತಿದ್ದಕ್ಕೆ ದಲಿತನ ಕೊಲೆ


