ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ‘ಕ್ಷಮೆ ಕೇಳಲು ಸಿದ್ದ’ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಂಗಳವಾರ (ಆ.26) ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಿಮಗೆ ಕ್ಷಮೆ ಬೇಕಾ?..ಓಕೆ…ಎಲ್ಲಾ ಕಾಂಗ್ರೆಸಿಗರಿಗೆ, ಇಂಡಿಯಾ ಒಕ್ಕೂಟದ ವಿವಿಧ ಪಕ್ಷಗಳ ಗೆಳೆಯರಿಗೆ ಬೇಜಾರಾಗಿದ್ರೆ, ನಾನು ತಪ್ಪು ಮಾಡಿದ್ದೇನೆ ಎಂದನಿಸಿದ್ದರೆ ‘ನಾನು ಕ್ಷಮೆ ಕೇಳಲು ಮತ್ತು ಅವರ ಸಲಹೆಗಳನ್ನು ಸ್ವೀಕರಿಸಲು ಸಿದ್ದ” ಎಂದಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿಯವರು ಮಾತನಾಡಿದಂತಹ ಸಂದರ್ಭದಲ್ಲಿ, ಅವರ ಪಕ್ಷ, ಸಿದ್ದಾಂತ ಎಲ್ಲದರ ಬಗ್ಗೆ ನನಗೆ ಅರಿವಿದೆ ಎಂದು ಕಾಲೆಳೆದಿದ್ದೆ. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆಯಲ್ಲಿ, ವಿಧಾನಸಭೆಯಲ್ಲೇ ನಾನು ನನ್ನ ಆಚಾರ-ವಿಚಾರಗಳನ್ನು ಮಾತನಾಡಿದ್ದೇನೆ” ಎಂದು ತಿಳಿಸಿದ್ದಾರೆ.
1980ರಿಂದ ಸತತವಾಗಿ ವಿದ್ಯಾರ್ಥಿ ನಾಯಕನಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು, ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡು ಬಂದವನು. ನಾನೇನು ಹೊಸದಾಗಿ ಪಕ್ಷಕ್ಕೆ ಸೇರಿದವನಲ್ಲ. ಯಾರಿಂದ ಪಾಠ ಕೂಡ ನನಗೆ ಅವಶ್ಯಕತೆಯಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿಯ ಆರ್. ಅಶೋಕ್ ಮಾತನಾಡಿದಂತಹ ಸಂದರ್ಭದಲ್ಲಿ “ನಿನ್ನ ಇತಿಹಾಸ ಗೊತ್ತಿದೆಯಪ್ಪ, ನೀನು ಯಾವಾಗಿಂದ ಬಂದೇ ಗೊತ್ತಿದೆ” ಎಂದು ಪರಮೇಶ್ವರ್ ಅವರ ಪಕ್ಕದಲ್ಲಿ ಕುಳಿತು ಮಾತನಾಡದ್ದೆ. ಆ ಸಂದರ್ಭದಲ್ಲಿ ಭೂಮಿಗೆ ಹೇಗೆ ಪ್ರಾರ್ಥನೆ ಮಾಡ್ತಾರೆ ಎಂದು ನಾನು ತಿಳಿದುಕೊಂಡ ಎರಡು ಲೇನ್ ಹೇಳಿದ್ದೆ. ಅದನ್ನು ಕಟ್ ಮಾಡಿ, ಪೇಸ್ಟ್ ಮಾಡಿ, ಎಲ್ಲೆಲ್ಲಿಗೋ ಲಿಂಕ್ ಮಾಡಿ ನ್ಯಾಷನಲ್ ನ್ಯೂಸ್, ಇಂಟರ್‌ನ್ಯಾಷನಲ್ ನ್ಯೂಸ್, ಎಲ್ಲಾ ಭಾಷೆಗಳಲ್ಲಿ ಸುದ್ದಿ ಮಾಡಿಬಿಟ್ರು ಎಂದಿದ್ದಾರೆ.
ನಾನು ಮೊನ್ನೆ ಬಿಹಾರಕ್ಕೆ ಹೋದಾಗ ಕೆಲವರು ನನ್ನ ಹೇಳಿಕೆ ಬಗ್ಗೆ ಕೇಳಿದ್ರು. ಒಬ್ಬರು ನಮ್ಮ ಪಕ್ಷದ ಹಿರಿಯ ನಾಯಕ, ನನ್ನ ಗೆಳೆಯ ಬಹಳ ದೊಡ್ಡ ದೊಡ್ಡ ಸಲಹೆಗಳನ್ನೆಲ್ಲಾ ನೀಡಿದ್ದಾರೆ. ಅದು ಬಹಳ ಸಂತೋಷದ ವಿಷಯ. ನಾನು ಯಾರಿಗಿಂತಲೂ ದೊಡ್ಡವನಲ್ಲ. ಅವರಿಗಿಂತ ದೊಡ್ಡವನಲ್ಲ. ಇರಲಿ, ಆ ಬಗ್ಗೆ ಸಂತೋಷವಿದೆ ಎಂದು ಡಿಕೆಶಿ ಹೇಳಿದ್ದಾರೆ.
ನನ್ನ ಹೇಳಿಕೆ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಹೇಳಿಕೆ ಕೊಡುವ ಅವಶ್ಯಕತೆ ಇಲ್ಲ. ನೀವು ಕಾಂಗ್ರೆಸ್ ಕಚೇರಿಗೆ ಬನ್ನಿ, ಸಭೆ ಮಾಡಿ ಚರ್ಚೆ ಮಾಡೋಣ. ಮಾಧ್ಯಮ ಹೇಳಿಕೆಗಳಿಂದ ನಿಮಗೆ ಸಮಾಧಾನ ಆಗಬಹುದು, ಯಾವುದೇ ಲಾಭ ಆಗುವುದಿಲ್ಲ. ಹಲವರು ಸಲಹೆ ಕೊಟ್ಟಿದ್ದಾರೆ. ಖಂಡಿತ ನಾನು ನಿಮ್ಮ ಸಲಹೆಗಳಿಗಿಂದ ದೊಡ್ಡವನಲ್ಲ ಎಂದು ಕುಟುಕಿದ್ದಾರೆ.
ನಾನು ಎಲ್ಲರ ಕಷ್ಟ ಕಾಲದಲ್ಲಿ ಅವರ ಜೊತೆ ನಿಂತವನು. ಈಗಲೂ ನಾನು ಅವರ ಜೊತೆ ನಿಲ್ಲುತ್ತೇನೆ. ನಾನು ಏನೇ ಆಗಿಬರಹುದು, ಏನೋ ಆಗಬಹುದು. ಯಾವುದೇ ಹುದ್ದೆಯಲ್ಲಿರಬಹುದು. ಅದು ಮುಖ್ಯ ಅಲ್ಲ. ನಾನೊಬ್ಬ ನಿಷ್ಠಾವಂತ ಕಾಂಗ್ರೆಸಿಗನಾಗಿ ಯಾರ ಮನಸ್ಸಿಗೂ ನೋಯಿಸುವ ಅಗತ್ಯವಿಲ್ಲ. ನನ್ನ ಜೀವನ ನಿಮ್ಮಗಳ ಬದುಕಿಗೆ ಒಂದು ಅಡಿಪಾಯ ಹಾಕಬೇಕು, ನಿಮ್ಮ ಜೀವನಕ್ಕೆ ಮೆಟ್ಟಿಲಾಗಬೇಕು. ಅದಲ್ಲದೆ, ನಾನು ಯಾರ ಭಾವನೆಗೂ ನೋವುಂಟು ಮಾಡಲು ಬಯಸುವುದಿಲ್ಲ. ನಾನು ಹುಟ್ಟು ಕಾಂಗ್ರೆಸಿಗ, ನಾನು ಕಾಂಗ್ರೆಸಿಗನಾಗಿಯೇ ಸಾಯುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 6635 ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣ: ಸಿಎಂ ಸಿದ್ದರಾಮಯ್ಯ


