ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಪ್ರಾಯೋಜಿಸಲು ಚೀನಾದ ಪ್ರಮುಖ ಕಂಪನಿ VIVOಗೆ ಅವಕಾಶ ನೀಡುವ ನಿರ್ಧಾರವನ್ನು ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಮರುಪರಿಶೀಲಿಸಬೇಕು ಎಂದು ಸ್ವದೇಶಿ ಜಾಗರಣ ಮಂಚ್ (ಎಸ್‌ಜೆಎಂ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಒತ್ತಾಯಿಸಿದೆ.
ಚೀನಾದ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದ ರಾಷ್ಟ್ರೀಯ ಸ್ವಯಂ ಸೇವಾಸಂಘದ (ಆರ್‌ಎಸ್‌ಎಸ್) ಅಂಗಸಂಸ್ಥೆಯಾದ ಎಸ್‌ಜೆಎಂ, ಚೀನಾದ ಪ್ರಾಯೋಜಕತ್ವವನ್ನು ಅನುಮತಿಸುವ ಬಿಸಿಸಿಐ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಾಯೋಜಕತ್ವವನ್ನು ಬದಲಿಸುವ ನಿರ್ಧಾರ ತೆಗೆದುಕೊಳ್ಳದಿದ್ದರೆ ಭಾರತೀಯರು ಈ ಪ್ರಮುಖ ಕ್ರಿಕೆಟ್ ಸರಣಿಯನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.
ಎಸ್‌ಜೆಎಂನ ರಾಷ್ಟ್ರೀಯ ಸಹ-ಸಂಚಾಲಕ ಅಶ್ವನಿ ಮಹಾಜನ್ ‘ಬಿಸಿಸಿಐ ನಿರ್ಧಾರವು ಪ್ರಸ್ತುತ ರಾಷ್ಟ್ರದ ಪರಿಸ್ಥಿತಿಗೆ ವಿರುದ್ಧವಾಗಿದೆ’ ಎಂದಿದ್ದಾರೆ.
“ಚೀನೀ ಸರಕುಗಳನ್ನು ಬಹಿಷ್ಕರಿಸುವ ಕರೆ ಇನ್ನು ಮುಂದೆ ಕೇವಲ ಎಸ್‌ಜೆಎಂನ ಕರೆಯಲ್ಲ. ಇದು ಭಾರತ ಮತ್ತು ಚೀನಾ ನಡುವೆ ಏನಾಯಿತು ಎಂಬುದರ ಹಿನ್ನೆಲೆಯಲ್ಲಿ ಸಾಮಾನ್ಯ ನಾಗರಿಕರ ಕರೆ” ಎಂದು ಅವರು ಹೇಳಿದರು.
ಕ್ರಿಕೆಟ್ ಮಂಡಳಿ ರಾಷ್ಟ್ರದ ವಿಷಯದಲ್ಲಿ ಸೂಕ್ಷ್ಮವಾಗಿರಬೇಕು, ಮತ್ತು ಅದು ಭದ್ರತಾ ಕಾಳಜಿಗಳನ್ನು ಹೊಂದಿರಬೇಕು ಎಂದು ಮಹಾಜನ್ ಹೇಳಿದರು.
“ಇಡೀ ಜಗತ್ತು ಚೀನಾವನ್ನು ಬಹಿಷ್ಕರಿಸುತ್ತಿದೆ, ಆದರೆ ಐಪಿಎಲ್ ಅವರಿಗೆ ಆಶ್ರಯ ನೀಡುತ್ತಿದೆ. ರಾಷ್ಟ್ರಕ್ಕಿಂತ ಯಾವುದು ದೊಡ್ಡದಲ್ಲ ಎಂದು ಅವರು ಅರ್ಥಮಾಡಿಕೊಳ್ಳಬೇಕು” ಎಂದಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು.
ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳು ಚೀನಾವನ್ನು ಎದುರಿಸಲು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಮರುಪರಿಶೀಲಿಸುವ ಅಭಿಯಾನವನ್ನು ತೀವ್ರಗೊಳಿಸಿವೆ.
ಚೀನಾದ ಸರಕುಗಳನ್ನು ಬಹಿಷ್ಕರಿಸುವ ಬೇಡಿಕೆಗೆ ಬೆಂಬಲ ನೀಡಿ, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭೈಯಾಜಿ ಜೋಶಿ ಕಳೆದ ತಿಂಗಳು ಆರ್‌ಎಸ್‌ಎಸ್ ಪ್ರಕಟಣೆಯೊಂದಕ್ಕೆ ಮಾತನಾಡುತ್ತಾ, ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನವು ಸ್ವಾಭಾವಿಕವಾಗಿ ಸಂಭವಿಸಿದೆ ಎಂದಿದ್ದರು. ಪ್ರತಿಪಕ್ಷಗಳು ಕೂಡ ಬಿಸಿಸಿಐ ನಿರ್ಧಾರವನ್ನು ಟೀಕಿಸಿವೆ.
ಇದನ್ನೂ ಓದಿ: VIVO IPL 2020 ಹಾಗೂ ದೇಶಭಕ್ತಿ; ಸಾಮಾಜಿಕ ಜಾಲತಾಣದಲ್ಲಿ ’ಜಸ್ಟ್ ಆಸ್ಕಿಂಗ್’


