Homeಮುಖಪುಟದಲಿತ ಹೋರಾಟಗಾರ್ತಿ ನೊದೀಪ್ ಕೌರ್ ಬಿಡುಗಡೆಗೊಳಿಸಿ: ನಟ ದಿಲ್ಜಿತ್, ನಟಿ ರಮ್ಯಾ ಒತ್ತಾಯ

ದಲಿತ ಹೋರಾಟಗಾರ್ತಿ ನೊದೀಪ್ ಕೌರ್ ಬಿಡುಗಡೆಗೊಳಿಸಿ: ನಟ ದಿಲ್ಜಿತ್, ನಟಿ ರಮ್ಯಾ ಒತ್ತಾಯ

ರೈತರು ಮತ್ತು ಕಾರ್ಮಿಕರು ಬೇರ್ಪಡಿಸಲಾಗದವರು. ಕಾರ್ಖಾನೆಗಳಲ್ಲಿ ಕಾರ್ಮಿಕರು ಉತ್ಪಾದಿಸುತ್ತಾರೆ ಮತ್ತು ರೈತರು ಹೊಲಗಳಲ್ಲಿ ಉತ್ಪಾದಿಸುತ್ತಾರೆ - ನೊದೀಪ್ ಕೌರ್

- Advertisement -
- Advertisement -

ಒಂದು ತಿಂಗಳಿನಿಂದ ಬಂಧನದಲ್ಲಿರುವ ದಲಿತ, ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್ ಬಿಡುಗಡೆಗೊಳಿಸುವಂತೆ ಪಂಜಾಬ್‌ನ ನಟ ದಿಲ್ಜಿತ್ ದೋಸಾಂಜ್, ನಟಿ ರಮ್ಯಾ, ಅಮೆರಿಕದ ವಕೀಲೆ ಮೀನಾ ಹ್ಯಾರಿಸ್ ಸೇರಿದಂತೆ ನೂರಾರು ಜನ ದನಿಯೆತ್ತಿದ್ದಾರೆ.

23 ವರ್ಷದ ಪಂಜಾಬ್ ಮೂಲದ ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್ ಅವರನ್ನು ರೈತರ ಪರವಾಗಿ ದೆಹಲಿಯ ಸಿಂಘು ಗಡಿಯಲ್ಲಿ ಹೋರಾಡುತ್ತಿದ್ದಾಗ ಹರಿಯಾಣ ಪೊಲೀಸರು ಬಂಧಿಸಿದ್ದರು. ಅವರಿಗೆ ಫೆಬ್ರವರಿ 2 ರಂದು ಹರಿಯಾಣದ ಸೋನೆಪತ್‌ನ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿತ್ತು. ಪ್ರಸ್ತುತ ಹರಿಯಾಣದ ಕರ್ನಾಲ್ ಜೈಲಿನಲ್ಲಿರುವ ಅವರನ್ನು ಹಿಂಸಿಸಲಾಗುತ್ತಿದೆ ಮತ್ತು ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ದಿ ವೈರ್ ಪತ್ರಿಕೆಯ ಲೇಖನವನ್ನು ಟ್ವೀಟ್ ಮಾಡಿರುವ ಪಂಜಾಬ್‌ನ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ #ReleaseNodeepKaur ಎಂಬ ಹ್ಯಾಷ್‌ಟ್ಯಾಗ್ ಬಳಸಿ ಅವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ.

ಕನ್ನಡದ ಚಿತ್ರನಟಿ ರಮ್ಯಾ ದಿವ್ಯಸ್ಪಂದನರವರು ನೊದೀಪ್ ಕೌರ್‌ರವರ ಸಹೋದರಿ ರಾಜ್‌ವಿರ್ ಕೌರ್‌ರವರ ಟ್ವೀಟ್ ಅನ್ನು ಹಂಚಿಕೊಂಡು ನೊದೀಪ್ ಕೌರ್ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಟ್ವೀಟ್‌ನಲ್ಲಿ “ನನ್ನ ಸಹೋದರಿ ನೊದೀಪ್ ಕೌರ್ ಅವರನ್ನು ಜನವರಿ 12 ರಿಂದ ಮತ್ತು ಶಿವ ಕುಮಾರ್ ಅವರನ್ನು ಜನವರಿ 23 ರಿಂದ ಜೈಲಿನಲ್ಲಿರಿಸಲಾಗಿದೆ. ನೊದೀಪ್ ಕೌರ್ ಮತ್ತು ಶಿವ ಕುಮಾರ್‌ರವರ ಸಂಘಟನೆಯು ರೈತರು ಮತ್ತು ಕಾರ್ಮಿಕರಿಗಾಗುತ್ತಿರುವ ಲೂಟಿ ಮತ್ತು ಅನ್ಯಾಯವನ್ನು ಬಹಿರಂಗಪಡಿಸುವ ಧೈರ್ಯ ತೋರಿಸಿತು. ಹಾಗಾಗಿ ಅವರನ್ನು ಹಿಂಸಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

ಇನ್ನು ಅಮೆರಿಕ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ರವರ ಸೊಸೆ ಮತ್ತು ವಕೀಲೆ ಮೀನಾ ಹ್ಯಾರಿಸ್ ಟ್ವೀಟ್ ಮಾಡಿ “ಉಗ್ರಗಾಮಿ ಗುಂಪೊಂದು ನಿಮ್ಮ ಫೋಟೊ ಸುಟ್ಟು ಹಾಕುವುದನ್ನು ನೋಡಲು ದುಃಖವಾಗುವುದಾದರೆ, ನಾವು ಭಾರತದಲ್ಲಿದ್ದರೆ ಏನಾಗುತ್ತಿತ್ತು ಊಹಿಸಿ. ಹೇಳುತ್ತೇನೆ ಕೇಳಿ, ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ನೊದೀಪ್ ಕೌರ್ ಬಂಧನದಲ್ಲಿದ್ದಾಳೆ, ಹಿಂಸೆಗೊಳಗಾಗಿದ್ದಾಳೆ ಮತ್ತು ಪೊಲೀಸ್ ಕಸ್ಟಡಿಯಲ್ಲಿಯೇ ಆಕೆಗೆ ಲೈಂಗಿಕ ಹಿಂಸೆ ನೀಡಲಾಗಿದೆ. ಕಳೆದ 20 ಕ್ಕೂ ಹೆಚ್ಚು ದಿನಗಳಿಂದ ಜಾಮೀನು ನೀಡದೇ ಆಕೆಯನ್ನು ಬಂಧನದಲ್ಲಿಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೊದೀಪ್ ಕೌರ್ ಯಾರು?

ಪಂಜಾಬ್‌ ಮೂಲದ ಮಜ್ದೂರ್ ಅಧಿಕಾರ ಸಂಘಟನ್ (ಎಂಎಎಸ್) ಕಾರ್ಮಿಕ ಸಂಘದ ಕಾರ್ಯಕರ್ತೆಯಾಗಿರುವ ದಲಿತ ಸಮುದಾಯದ ನೊದೀಪ್ ಕೌರ್ ಡಿಸೆಂಬರ್ 2020 ರಿಂದ ಸಿಂಘು ಗಡಿಯಲ್ಲಿ ರೈತರ ಆಂದೋಲನದಲ್ಲಿ ಭಾಗವಹಿಸುತ್ತಿದ್ದರು.

ರೈತ ಪ್ರತಿಭಟನೆಯನ್ನು ಬೆಂಬಲಿಸಿ ಕುಂಡ್ಲಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ಕಾರ್ಮಿಕರ ಗುಂಪಿನೊಂದಿಗೆ ನೊದೀಪ್ ಕೌರ್ ಸಿಂಘು ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಅವರು, ಕಾರ್ಮಿಕರು ಸಹ ರೈತರಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕಾರ್ಮಿಕರು ಕಾರ್ಖಾನೆಯ ಮಾಲಿಕರಿಂದ ಶೋಷಣೆಗೆ ಒಳಗಾಗಿದ್ದಾರೆ, ಅವರ ವೇತನವನ್ನು ತಡೆಹಿಡಿಯಲಾಗಿದೆ ಮತ್ತು ಅವರನ್ನು ಉದ್ಯೋಗಗಳಿಂದ ಕಿತ್ತು ಎಸೆಯಲಾಗಿದೆ ಎಂದು ಆರೋಪಿಸಿದ್ದರು.

ಸಿಂಘು ಗಡಿಯಲ್ಲಿ ಈ ಪ್ರದೇಶದ ಕಾರ್ಮಿಕರು ಮತ್ತು ರೈತರನ್ನು ಒಟ್ಟುಗೂಡಿಸಿ ನೊದೀಪ್ ಹೋರಾಟ ಮುನ್ನಡೆಸಿದ್ದರು. ಸಿಂಘು ಮತ್ತು ಕುಂಡ್ಲಿ ಗಡಿಯಲ್ಲಿ, ‘ಕಿಸಾನ್ ಮಜ್ದೂರ್ ಏಕ್ತಾ ಜಿಂದಾಬಾದ್’ ಘೋಷಣೆಗಳು ಪ್ರತಿಧ್ವನಿಸುತ್ತಿದ್ದವು. ಎಂಎಎಸ್ ಮತ್ತು ಇತರ ಕಾರ್ಮಿಕ ಸಂಘಗಳು ರೈತರ ಹೋರಾಟಕ್ಕೆ ಕೈಜೋಡಿಸಿದ್ದವು.

“ರೈತರು ಮತ್ತು ಕಾರ್ಮಿಕರು ಬೇರ್ಪಡಿಸಲಾಗದವರು. ಕಾರ್ಖಾನೆಗಳಲ್ಲಿ ಕಾರ್ಮಿಕರು ಉತ್ಪಾದಿಸುತ್ತಾರೆ ಮತ್ತು ರೈತರು ಹೊಲಗಳಲ್ಲಿ ಉತ್ಪಾದಿಸುತ್ತಾರೆ” ಎಂದು ಕೌರ್ ಸಂದರ್ಶನವೊಂದರಲ್ಲಿ ಹೇಳಿದ್ದರು. “ಸರ್ಕಾರವು ನಮ್ಮನ್ನು, ನಮ್ಮ ಕೆಲಸವನ್ನು ತಮಗಾಗಿ ಹಣ ಸಂಪಾದಿಸಲು ಮಾರುತ್ತಿದೆ” ಎಂದು ಅವರು ಒತ್ತಿ ಹೇಳಿದ್ದರು.

ಕಾರ್ಮಿಕರ ಮೇಲಿನ ದೌರ್ಜನ್ಯವು ಹೆಚ್ಚಾದರಿಂದ ಅವರು ರೈತ ಆಂದೋಲನವನ್ನು ಬೆಂಬಲಿಸಲು ಪ್ರಾರಂಭಿಸಿದರು. ಪ್ರತಿದಿನ 300ಕ್ಕೂ ಹೆಚ್ಚು ಕಾರ್ಮಿಕರು ರೈತ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಹಾಗಾಗಿ ಕಾರ್ಮಿಕ ಮುಖಂಡೆಯಾದ ನೊದೀಪ್ ಕೌರ್‌ರವರನ್ನು ಕುಂಡ್ಲಿ ಕೈಗಾರಿಕಾ ಸಂಘ ಮತ್ತು ಹರಿಯಾಣ ಪೊಲೀಸರ ಸಶಸ್ತ್ರ ಕಾವಲುಗಾರರು ಅವರನ್ನು ಗುರಿಯಾಗಿಸಿ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಆಕೆಯ ಸಹೋದರಿ ಆರೋಪಿಸಿದ್ದಾರೆ.

“ನಾನು ಆಕೆಯನ್ನು ಬಂಧನವಾದ ಮಾರನೇ‌ ದಿನವೇ ಕರ್ನಲ್ ಜೈಲಿನಲ್ಲಿ ಭೇಟಿಯಾದೆ. ಆಕೆ ತನ್ನ ಮೇಲೆ ನಡೆದ ದೌರ್ಜನ್ಯದ ಕುರಿತು ಹೇಳಿದಳು. ಪುರುಷ ಪೊಲೀಸರು ಭೀಕರವಾಗಿ ಥಳಿಸಿದ್ದರು. ಆಕೆಯ ಗುಪ್ತಾಂಗಗಳ ಮೇಲೂ ಗಾಯದ ಗುರುತುಗಳಿವೆ. ಅವಳಿಗೆ ನಾವು ನೀಡಿರುವ ಔಷಧಿಗಳನ್ನು ಸಹ ಪೊಲೀಸರು ನೀಡಲಿಲ್ಲ. ಠಾಣೆಯ ಎಸ್‌ಎಚ್‌ಒ ಅವಳನ್ನು ಗ್ಯಾಂಗ್ ಲೀಡರ್ ಆಗಿ ತೋರಿಸಲು ಬಯಸಿದ್ದಾರೆ” ಎಂದು ರಾಜ್‌ವೀರ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸಬ್‌ರಂಗ್ ವರದಿ ಮಾಡಿದೆ.

ಹರಿಯಾಣ ಪೊಲೀಸರು ನೊದೀಪ್ ವಿರುದ್ದ ಗಲಭೆ, ಕಾನೂನುಬಾಹಿರ ಸಭೆ, ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸದಂತೆ ತೊಂದರೆ ನೀಡುವುದು, ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ, ಸುಲಿಗೆ, ಕೊಲೆ ಯತ್ನ ಸೇರಿದಂತೆ ಭಾರತೀಯ ದಂಡ ಸಂಹಿತೆ ಹಲವು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಸೋನಿಪತ್‌ನ ಕುಂಡ್ಲಿ ಪೊಲೀಸ್ ಠಾಣೆಯ ಎಸ್‌ಎಚ್ಒ ಇನ್ಸ್‌ಪೆಕ್ಟರ್ ರವಿ ಕುಮಾರ್ ಹೇಳಿಕೆಯ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿದೆ.

ಆದರೆ ನೊದೀಪ್ ಅವರ ವಕೀಲರು, ಯಾವುದೇ ಪ್ರಚೋದನೆ ಇಲ್ಲದೆ ಕಾರ್ಖಾನೆಯ ಬಳಿ ನಿಂತಿರುವಾಗ ಪೊಲೀಸರು, ನೊದೀಪ್ ಸೇರಿದಂತೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ವಾದಿಸಿದ್ದಾರೆ.

ನೋದೀಪ್ ಕೌರ್ ಬಿಡುಗಡೆಗೆ ಆಗ್ರಹ

ನೋದೀಪ್ ಕೌರ್ ಬಿಡುಗಡೆಗೆ ಆಗ್ರಹಿಸಿ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ (ಸಿಜೆಪಿ) ಆನ್‌ಲೈನ್ ಅರ್ಜಿಯನ್ನು ಪ್ರಾರಂಭಿಸಿದೆ. ಸಿಜೆಪಿಯು ತನ್ನ ಅರ್ಜಿಯಲ್ಲಿ ನೊದೀಪ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುವುದಲ್ಲದೆ, ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದೆ.

ಅರ್ಜಿಗೆ ಸಹಿ ಹಾಕುವವರು, ಕರ್ನಾಲ್ ಜೈಲು ಅಧಿಕಾರಿಗಳಿಗೆ ಪತ್ರ ಬರೆದು ನೊದೀಪ್ ವಿರುದ್ಧದ ದೌರ್ಜನ್ಯವನ್ನು ಪ್ರತಿಭಟಿಸುವಂತೆ ಸಿಜೆಪಿ ಒತ್ತಾಯಿಸಿದೆ. ಚೇಂಜ್.ಆರ್ಗ್‌ನಲ್ಲಿರುವ ಅರ್ಜಿಯನ್ನು ಇಲ್ಲಿ ಸಹಿ ಮಾಡಬಹುದು.


ಇದನ್ನೂ ಓದಿ: ಸಿಂಘು ಗಡಿ: ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್‌ ಬಂಧನ ಯಾಕಾಗಿದೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...