Homeಕರ್ನಾಟಕನೆನಪು; ನಿಜ ಭಾರತದ ಅಂತಃಸಾಕ್ಷಿಗಳಲ್ಲಿ ಒಬ್ಬರಾದ ಹಂಪಿಯ ಸದಾಶಿವಯೋಗಿ

ನೆನಪು; ನಿಜ ಭಾರತದ ಅಂತಃಸಾಕ್ಷಿಗಳಲ್ಲಿ ಒಬ್ಬರಾದ ಹಂಪಿಯ ಸದಾಶಿವಯೋಗಿ

- Advertisement -
- Advertisement -

ನಾನು ಹಂಪಿಗೆ ಹೋದ ಮೊದಲ ದಿನಗಳಲ್ಲಿ, ತುಂಗಭದ್ರಾ ದಡದಲ್ಲಿ ಆಶ್ರಮ ಮಾಡಿಕೊಂಡಿದ್ದ ಸದಾಶಿವಯೋಗಿ ಅವರ ಬಗ್ಗೆ ತಿಳಿಯಿತು. ಎಲ್ಲಿಂದಲೊ ಬಂದ ಅವರು ಹಂಪಿಯ ಗುಡ್ಡಗುಹೆಗಳಲ್ಲಿ ಕೌಪೀನಧಾರಿಯಾಗಿ ಸೊಪ್ಪುಸದೆ ತಿಂದುಕೊಂಡು ಇದ್ದವರು; ಬೀದಿ ಹುಡುಗರೊಂದಿಗೆ ಹೊಳೆಯಲ್ಲಿ ನೀರಾಟವಾಡುತ್ತಿದ್ದವರು; ಇಡೀ ಭಾರತ ತಿರುಗಾಡಿದವರು; ಮೂಢನಂಬಿಕೆಗಳ ಮೇಲೆ ಸಮರ ಸಾರಿದವರು. ವಿಚಾರವಾದಿ ಸಮ್ಮೇಳನಕ್ಕೆ ಕೊವೂರ್ ಬಂದಾಗ ಅದರ ಅಧ್ಯಕ್ಷತೆ ವಹಿಸಿದ್ದವರು; ಪವಾಡ ಪುರುಷರ ಮತ್ತು ಜ್ಯೋತಿಷಿಗಳ ಕೈಚಳಕ ಬಯಲು ಮಾಡಿದವರು – ಇತ್ಯಾದಿ ದಂತಕತೆಗಳು ಹಬ್ಬಿದ್ದವು. ಆದರೂ ಆಶ್ರಮ-ಮಠ, ಯೋಗಿಗಳು, ಸಂತರು ಎಂದರೆ ಶಂಕೆಯಿಂದ ದೂರವಿರುತ್ತಿದ್ದ ನನ್ನಂತಹವರು ವೈಚಾರಿಕ ಸೊಕ್ಕಿನಿಂದ ಅವರ ಜತೆ ಗುರುತಿಸಿಕೊಳ್ಳುವುದಕ್ಕೆ ಅಳುಕಿದ್ದೆವು. ಒಮ್ಮೆ ಗುರುಪೂರ್ಣಿಮೆಯ ದಿನ ಅವರು ನನ್ನನ್ನು ಕರೆದರು. ಅಷ್ಟು ಹೊತ್ತಿಗಾಗಲೇ ಸಂತರ ಅಧ್ಯಯನ ಮಾಡುತ್ತ ಶುದ್ಧವಿಚಾರವಾದದಿಂದ ಪಥಗೆಟ್ಟಿದ್ದ ನಾನು ಹಿಂದೇಟುಹಾಕದೆ ಹೋದೆ.

ಅವರ ‘ಶಿವಾನಂದ ಯೋಗಾಶ್ರಮ’ದ ಪ್ರವೇಶ ಬಾಗಿಲಲ್ಲೇ “ಕಾಲಿಗೆ ಬೀಳುವಂತಹ ಹೀನಪದ್ಧತಿಯ ನಮಸ್ಕಾರವನ್ನು ಆಶ್ರಮದಲ್ಲಿ ನಿಷೇಧಿಸಲಾಗಿದೆ” ಎಂಬ ಬೋರ್ಡಿತ್ತು. ಬಂದವರು ಅವರ ಜತೆ ಸಮಾನವಾಗಿ ಕೂರುವಂತೆ ಸುತ್ತಮುತ್ತ ಕುರ್ಚಿಗಳಿದ್ದವು. ಕೆಲವೊಮ್ಮೆ ಹೊಸಬರು ಬಂದರೆ ತಾವು ಎದ್ದುನಿಂತು ತಮ್ಮ ಕುರ್ಚಿಯಲ್ಲೇ ಕೂರಿಸುತ್ತಿದ್ದರು. ಆಶ್ರಮದಲ್ಲಿ ಮೂರು ಚಿತ್ರಗಳಿದ್ದವು. 1. ಶಿವಾನಂದ ಪರಮಹಂಸರದು. 2. ಜರ್ಮನ್ ವೈದ್ಯನೊಬ್ಬನದು. (ಯೋಗಿಯವರು ಆಯುರ್ವೇದ ವೈದ್ಯರಾಗಿದ್ದರು. ಅವರಲ್ಲಿ ನೂರಾರು ಸೀಸೆಗಳಲ್ಲಿಟ್ಟ ಮದ್ದುಗಳಿದ್ದವು.) 3. ಮಿಲಿಟರಿ ದಿರಿಸಿನಲ್ಲಿರುವ ಸುಭಾಶ್ ಚಂದ್ರ ಬೋಸರದು. ಯೋಗಿ ವೈದ್ಯ ಸೇನಾನಿಗಳ ಈ ತ್ರಿಕೂಟ ವಿಶಿಷ್ಟವಾಗಿತ್ತು. ಸುಭಾಷರ ಒಲವಿಗೆ ಕಾರಣ ಕೇಳಿದೆ. ಅವರು ಪೂರ್ವಾಶ್ರಮದಲ್ಲಿದ್ದಾಗ ತಿಪಟೂರಿನಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರಂತೆ. ಸುಭಾಷರ ಸೇನೆ ಸೇರುವ ತವಕವಿತ್ತಂತೆ. ವಯಸ್ಸು ಚಿಕ್ಕದಾದ ಕಾರಣ ಸಾಧ್ಯವಾಗಲಿಲ್ಲವಂತೆ ಎಂದು ಬದಲು ಸಿಕ್ಕಿತು.

ಗುರುಪೂರ್ಣಿಮೆಯ ದಿನ ಸದಾಶಿವ ಯೋಗಿಯವರ ಗುರುಗಳಾದ ಶಿವಾನಂದ ಪರಮಹಂಸರ ಜಯಂತಿ. ಅದಕ್ಕೆ ಸಮಸ್ತ ಜಾತಿಧರ್ಮಗಳಿಗೆ ಸೇರಿದ ಅವರ ಶಿಷ್ಯರು ಸೇರಿದ್ದರು. ‘ಜಿಜ್ಞಾಸುಗಳ ಜತೆ ಚರ್ಚೆ’ ಇರುತ್ತದೆ. ಸದಾಶಿವಯೋಗಿಗಳು ಬಂದವರ ಜೊತೆಗೆ ಅಂದು ಕನ್ನಡ ಇಂಗ್ಲೀಶು ಹಿಂದಿ ತೆಲುಗು ತಮಿಳು ಹೀಗೆ ನಾನಾ ಭಾಷೆಗಳಲ್ಲಿ ಉತ್ತರಿಸುತ್ತ ತಮ್ಮ ಚಿಂತನೆ ಹಂಚಿಕೊಂಡರು. ಅವರ ಪ್ರಕಾರ ಬಹಿರ್ಮುಖಿಯಾದ ಮನಸ್ಸನ್ನು ಲಯಬದ್ಧ ಉಸಿರಾಟ ಹಾಗೂ ದೃಷ್ಟಿಯ ಜತೆ ಏಕತ್ರಗೊಳಿಸಿ ನಿಲ್ಲಿಸುವುದೇ ಯೋಗ. ಅದುವೇ ತನ್ನ ತಾನರಿವ, ತನ್ನೊಳಗಿನ ಚೈತನ್ಯವನ್ನು ತಿಳಿವ ಪರಿ. ಈ ಚೈತನ್ಯ ಬಿಟ್ಟು ಬೇರಾವ ದೇವರೂ ಇಲ್ಲ. ಯೋಗದ ಉದ್ದೇಶ ಮಾನಸಿಕ ನೆಮ್ಮದಿ. ಇದು ಸರ್ಕಸ್ಸಿನವರಂತೆ ದೇಹವನ್ನು ನುಲಿಸುವ ಕಸರತ್ತಲ್ಲ. ಈ ಯೌಗಿಕ ಅಂಶವು ಮಗುವನ್ನು ಮುದ್ದಿಸುವ ತಾಯಿ, ತನ್ಮಯವಾಗಿ ಬರೆವ ಲೇಖಕರು, ಒಕ್ಕಲುತನ ಮಾಡುವ ರೈತರು, ಯಂತ್ರ ರಿಪೇರಿಸುವ ಮೆಕ್ಯಾನಿಕ್ ಮುಂತಾಗಿ ಎಲ್ಲರಲ್ಲೂ ಇರುತ್ತದೆ. ಸಾಧಕರು ಅದನ್ನು ಗುರುಮುಖೇನ ಕಲಿಯುತ್ತಾರೆ ಅಷ್ಟೆ.

ಸದಾಶಿವಯೋಗಿಯವರ ಈ ಕುರಿತ ಚಿಂತನೆ ಅವರ ‘ಯೋಚಿಸಿ ನೋಡಿ’, ‘ಶೈವತತ್ವ ಮುಂತಾದ ಕೃತಿಗಳಲ್ಲಿದೆ. ಇಷ್ಟೇ ಆಗಿದ್ದರೆ ಯೋಗ ಪ್ರತಿಪಾದಿಸುತ್ತಿರುವ ಅನೇಕ ಸಂತರ ಸಾಲಿಗೆ ಅವರೂ ಸೇರಿಬಿಡುತ್ತಿದ್ದರು. ಆದರೆ ಅವರು ಧರ್ಮ ಮತ್ತು ದೇವರ ಹೆಸರಲ್ಲಿ ಸಮಾಜದಲ್ಲಿ ನಡೆಯುವ ಕಪಟ ಢಾಂಬಿಕತೆ ಪವಾಡ ಜ್ಯೋತಿಷ್ಯ ಪುರೋಹಿತಶಾಹಿ-ಮುಂತಾದ ವಿಕೃತಿಗಳನ್ನು ವಿರೋಧಿಸಿದವರು; ತಮ್ಮ ಆಲೋಚನ ಶಕ್ತಿ ಕಳೆದುಕೊಂಡಿರುವ ಜನರ ಅಸಹಾಯಕತೆಗೆ ಮಿಡಿದವರು. ಇದು ಅವರ ಚಿಂತನೆಗೆ ಸಾಮಾಜಿಕ ಆಕ್ಟಿವಿಸಂ ಹಾಗೂ ಮಾನವೀಯತೆಯ ಆಯಾಮ ಒದಗಿಸಿತು. ಅವರೊಂದು ದಿನ ನನಗೆ ಫೋನು ಮಾಡಿದರು. “ಟೀವಿ ನೋಡ್ತಿದೀರಾ? ಯಾರೊ ಒಬ್ಬ ಜನರನ್ನು ವಶೀಕರಣ ಮಾಡಿ, ಅವರ ಹಿಂದಿನ ಜನ್ಮದ ಕಥೆಯನ್ನು ಹೇಳಿಸ್ತಿದಾನೆ. ನನಗೆ ಅರ್ಧಗಂಟೆ ಅವಕಾಶ ಸಿಕ್ಕರೆ ಸಾಕು. ಅವನ ಸುಳ್ಳನ್ನು ತೋರಿಸ್ತೇನೆ. ಬೆಂಗಳೂರಿಗೆ ಹೋಗೋಣ ನಡೀರಿ” ಎಂದರು. ಆಹ್ವಾನವಿಲ್ಲದೆ ಟಿವಿ ಕಾರ್ಯಕ್ರಮಗಳಿಗೆ ನಾವಾಗೇ ಹೋಗುವ ಕಷ್ಟದ ಬಗ್ಗೆ ಮುಗ್ಧರಾಗಿದ್ದ ಅವರಿಗೆ ನಾನು ವಿವರಿಸಿದೆ. ಅವರು ಸುಮ್ಮನಾದರು. ಆದರೆ ಆಧುನಿಕ ತಂತ್ರಜ್ಞಾನದ ಭಾಗವಾಗಿರುವ ಟಿವಿ ಜನರನ್ನು ಮೌಢ್ಯಯುಗಕ್ಕೆ ಕರೆದೊಯ್ಯುವಂತಹ ಮತ್ತು ಪುರೋಹಿತಶಾಹಿಯನ್ನು ನೆಲೆಗೊಳಿಸುವಂತಹ ಉಪಕರಣ ಆಗಿರುವ ಕುರಿತು, ಚಳುವಳಿಗಳು ತೋರಬೇಕಾದ ಕಾಳಜಿ ಚಡಪಡಿಕೆಗಳು, ಒಬ್ಬ ಯೋಗಿಯಲ್ಲಿರುವ ಸಂಗತಿ ನನಗೆ ಕಾಡಿತು.

ಕೆಟ್ಟದ್ದು ಅನಿಸಿದ್ದನ್ನು ವಿರೋಧಿಸುವ ದೃಢತೆ ಹಾಗೂ ಅದಕ್ಕಾಗಿ ಕಾರ್ಯಾಚರಣೆ ಮಾಡುವ ಸಾಹಸಶೀಲತೆ ಯೋಗಿಯವರ ಗುಣವಾಗಿತ್ತು. ಈ ಗುಣದಿಂದ ಜೀವಮಾನದ ತುಂಬ ಅವರು ಹಲವಾರು ಜನರೊಟ್ಟಿಗೆ ಸಂಘರ್ಷ ಮಾಡಿದ್ದರು. ಹುಸಿಸಂತರನ್ನು ಮತ್ತು ಕಪಟ ಆಶ್ರಮಗಳನ್ನು ವಿರೋಧಿಸಿದ್ದರು. ಅವರ ಪ್ರಕಾರ ಭಾರತದ ಹೆಚ್ಚಿನ ಸಾಧುಗಳಿಗೆ ಯೋಗದಲ್ಲಿ ಆಸಕ್ತಿಯೂ ಇಲ್ಲ, ತಿಳಿವಳಿಕೆಯೂ ಇಲ್ಲ. ಇದನ್ನು ಅವರ
ಆತ್ಮಕಥೆಯಲ್ಲೂ ಕಾಣಬಹುದು. ಅವರಿಗೆ ಸಾವಿಲ್ಲದ ಸಾಸಿವೆ ತರಲುಹೇಳಿ, ಬಾಳಿನ ಗಾಢಸತ್ಯವೊಂದನ್ನು ಹೇಳಿದ ಬುದ್ಧನ ಜೀವಕರುಣೆ ಮತ್ತು ವಿವೇಕದ ಬಗ್ಗೆ ಮೆಚ್ಚುಗೆ. ಕಾಶ್ಮೀರದಲ್ಲಿದ್ದಾಗ ಅವರು ಸೂಫಿಗಳ ಸಂಗದಲ್ಲಿದ್ದವರು. ಸೂಫಿಗಳ ಪ್ರೇಮತತ್ವ, ಜೀವಕಾರುಣ್ಯತೆ, ಹಂಚಿತಿನ್ನುವ ಸ್ವಭಾವಗಳ ಬಗ್ಗೆ ಅವರಿಗೆ ಹಿಡಿಸಿತ್ತು. ಅನೇಕ ನಾಥಯೋಗಿಗಳ ಬಗ್ಗೆ ಅವರಿಗೆ ಗೌರವವಿತ್ತು. ತರ್ಕಜ್ಞಾನದ ಮೂಲಕ ಸತ್ಯವನ್ನು ಶೋಧಿಸುವ ಪ್ರಾಚೀನ ಭಾರತದ ಚಾರ್ವಾಕರ ಬಗ್ಗೆ ಪ್ರೀತಿಯಿತ್ತು. ಚಾರ್ವಾಕರನ್ನು ಪುರೋಹಿತಶಾಹಿಯು ವ್ಯವಸ್ಥಿತವಾಗಿ ನಾಶಮಾಡಿದ್ದು ಈ ನಾಡಿನ ದುರಂತ ಎನ್ನುತ್ತಿದ್ದರು. ಜನರನ್ನು ಭಕ್ತ-ಭವಿ ಆಧಾರದಲ್ಲಿ ವಿಭಜಿಸಿದ ಶರಣರ ಬಗ್ಗೆ ಅವರಿಗೆ ಭಿನ್ನಮತವಿತ್ತು. ಆದರೆ ಅಲ್ಲಮಪ್ರಭು, ದೇವರ ದಾಸಿಮಯ್ಯ, ಸಿದ್ಧರಾಮ, ಅಕ್ಕಮಹಾದೇವಿ, ಹೇರೂರ ವಿರುಪನಗೌಡ ಮುಂತಾದವರು ಅವರ ಪ್ರಕಾರ ದೊಡ್ಡ ಯೋಗಿಗಳು. ತರ್ಕದ ಮೂಲಕ ಸತ್ಯಶೋಧ ಮಾಡಬೇಕು ಎನ್ನುವ ಅವರು ಕಲ್ಪಿತ ದೇವರುಗಳನ್ನು ನಿರಾಕರಿಸಿದ್ದು, ‘ಗುಡಿಚರ್ಚು ಮಸಜೀದುಗಳ ಬಿಟ್ಟು ಹೊರಬನ್ನಿ’ ಕರೆಗೊಟ್ಟ ಕುವೆಂಪು ಅವರ ನಿರಂಕುಶಮತಿ ಚಿಂತನೆಯನ್ನು ನೆನಪಿಸುತ್ತದೆ.

ಅವರು ಮೊದಲಿದ್ದ ಶಿವಾನಂದಾಶ್ರಮವು ಹಂಪಿಯ ವಿರೂಪಾಕ್ಷ ಗುಡಿಯ ಎಡಮಗ್ಗುಲಿಗೆ ಹೊಳೆಯ ದಂಡೆಯ ಮೇಲಿರುವ ಪರ್ಯಾಯ ಗಡ್ಡೆಯಲ್ಲಿತ್ತು. ಗಡ್ಡೆಯ ಒಂದು ಭಾಗ ದಂಡೆಗೆ ಲಗತ್ತಾಗಿದ್ದು, ಮೂರು ಕಡೆ ಹೊಳೆಗೆ ಮುಖಮಾಡಿತ್ತು. ಹೊಳೆ ತುಂಬಿ ಹರಿಯುವಾಗ ನಾವು ಹೊಳೆಯ ನಡುವೆ ಇದ್ದೇವೇನೊ, ಆಶ್ರಮವೇ ನೀರಲ್ಲಿ ತೇಲುತ್ತಿದೆಯೇನೊ ಎಂಬಂತೆ ಭಾಸವಾಗುತ್ತಿತ್ತು. ನಾನೊಮ್ಮೆ ಬೆಳದಿಂಗಳ ಇರುಳಲ್ಲಿ ಅವರ ಜತೆ ಮಾತುಕತೆ ಮಾಡಿದೆ. ಪ್ರವಾಹವು ಇಡೀ ರಾತ್ರಿ ಭೋರೆಂದು ಲಯಬದ್ಧವಾಗಿ ಸಪ್ಪಳಗೈಯುತ್ತ ಹರಿಯುತ್ತಿತ್ತು. ಹೊಳೆಗೆ ಅಭಿಮುಖವಾಗಿ ಕುಳಿತು ಯೋಗಿಯವರು ತಮ್ಮ ತಿರುಗಾಟದ ಅನುಭವವನ್ನು ನಡುರಾತ್ರಿಯವರೆಗೆ ಹೇಳಿದರು. ಅರ್ಧಶತಮಾನ ಕಾಲ ಭಾರತವನ್ನು ಕಾಲ್ನಡಿಗೆಯಲ್ಲಿ ಸುತ್ತಿರುವ ಅವರ ಅನುಭವ ಕೇಳುವುದೇ ಒಂದು ಅಪರ್ವ ಅನುಭವ. ಅವರು ಸಾವಿರಾರು ಬಗೆಯ ಜನರನ್ನು ಭೇಟಿಯಾಗಿದ್ದಾರೆ. ಹೃಷಿಕೇಶದಲ್ಲಿ ಖ್ಯಾತ ಗೀತಾ ಪ್ರವಚನಕಾರ ಚಿನ್ಮಯಾನಂದರು ಅವರ ಸಹಪಾಠಿ. ಪುಣೆಯ ಆಶ್ರಮದಲ್ಲಿ ಓಶೋ ಜತೆ ಒಂದು ರಾತ್ರಿ ಕಳೆದಿದ್ದಾರೆ; ಉಜ್ಜಯಿನಿಯಲ್ಲಿ ತನ್ನ ತಲೆಯನ್ನು ದೇವಿಯ ಎದುರು ಕತ್ತರಿಸಿಕೊಂಡ ಶಾಕ್ತ ಸಾಧಕನನ್ನು ನೋಡಿದ್ದಾರೆ. ಮಾನಸ ಸರೋವರಕ್ಕೆ ಹೋಗಿ ಹಿಮಪಾತದಲ್ಲಿ ಸಿಲುಕಿ, ಚೀನೀ ಸೈನಿಕರಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಧಾರವಾಡದ ರೈಲು ನಿಲ್ದಾಣದಲ್ಲಿ ಕಳ್ಳನೆಂಬ ಆರೋಪಕ್ಕೆ ಗುರಿಯಾಗಿ ಹೊಡೆತ ತಿಂದಿದ್ದಾರೆ. ಗುಜರಾತಿನ ಸಿಂಹಕಾಡುಗಳಲ್ಲಿ ಓಡಾಡಿದ್ದಾರೆ. ಸಾಧುವೊಬ್ಬನ ಕೈಗೆ ಸಿಕ್ಕು ನರಬಲಿ ಆಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ಹಸಿವಾದಾಗ ಬೇಡಬಾರದು ಎಂದು ಬಾಳೆಹಣ್ಣು ಸಿಪ್ಪೆ ತಿಂದು ಕಾಲಯಾಪನೆ ಮಾಡಿದ್ದಾರೆ.

ಅವರ ಈ ವಿಶಿಷ್ಟ ಅನುಭವ ಮತ್ತು ಪ್ರಯೋಗಗಳಿಂದ ಕೂಡಿರುವ ಆತ್ಮಚರಿತ್ರೆಯು ರೋಚಕವಾದ ಕಾದಂಬರಿಯಂತೆ, ಅದ್ಭುತ ಪ್ರವಾಸ ಕಥನದಂತೆ, ಹಾಸ್ಯಲೇಖನದಂತೆ ಓದಿಸಿಕೊಂಡು ಹೋಗುತ್ತದೆ. ಉಜ್ಜಯಿನಿಯಲ್ಲಿ ರಾಮರಸ ಕುಡಿದು ಹೊಳೆಯನ್ನು ದಾಟಲು ಹೋದ ಪ್ರಸಂಗವು, ಅತ್ಯುತ್ತಮ ವಿನೋದ ಬರೆಹಗಳಲ್ಲಿ ಒಂದಾಗಬಲ್ಲದು. ಇದರಲ್ಲಿ ನಮ್ಮ ಆಲೋಚನೆಯನ್ನು ಪ್ರಭಾವಿಸಬಲ್ಲ ಅನೇಕ ಚಿಂತನೆ ಮತ್ತು ಘಟನೆಗಳು ಇವೆ. ಪುಸ್ತಕದ ಬೆನ್ನುಡಿಯಲ್ಲಿ ಅವರ ಹೇಳಿಕೆಯೊಂದು ಹೀಗಿದೆ: “ಸತ್ಯವನ್ನು ಹುಡುಕಲು ಹೋಗಿ ಬಹುವಿಧಗಳಿಂದ ನೊಂದಿರುವವನು. ನಾನು ಕುತರ್ಕಿಯಲ್ಲ. ಆದರೆ ತರ್ಕವಾದಿಯಂತೂ ಹೌದು. ತರ್ಕಿಸದೇ ಸತ್ಯವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಹಾಗೂ ತನ್ನ ಅನುಭವಕ್ಕೆ ಬಾರದೇ ಇದ್ದರೂ, ಅದನ್ನೇ ನಂಬಿ ಅನುಸರಿಸುವುದು ಅಂಧವಿಶ್ವಾಸವೆಂದೇ ನನ್ನ ಮತ. ದೇವರು ಧರ್ಮ ಜಾತಿ ಕರ್ಮ ಮುಂತಾದ ವಿಚಾರದಲ್ಲಿ ನಾವು ಅಂಧರಂತೆ ಯಾರದೋ ಅನುಭವಹೀನರ ಆಜ್ಞೆಯಂತೆ ಅನುಸರಿಸಿ ನಡೆಯುತ್ತಿರುವ ರೀತಿ ತಪ್ಪೇ? ಎಂಬ ವಿಚಾರವು ತರ್ಕಬದ್ಧವಾಗಿ ವಿಮರ್ಶೆಯಾಗಿ, ಇದರಿಂದ ಯತಾರ್ಥ ಸತ್ಯವು ತೇಲಿ ಹೊರಬರುವುದರಿಂದ, ಅಂತಹ ವಿಮರ್ಶಾ ಸಹಿತವಾದ ಸತ್ಯವು ಒಂದೇ ಮಾನವಧರ್ಮದ ಉದಯಕ್ಕೆ ಕಾರಣವಾಗಿ, ಅಂತಹ ಮಾನವಧರ್ಮದತ್ತ ನಾವೆಲ್ಲರೂ ಒಂದಾಗಿ ಕೂಡಿ ಸಾಗೋಣ”.

ಸದಾಶಿವಯೋಗಿಯವರ ಚಿಂತನೆ ಮತ್ತು ಕಾರ್ಯಕ್ರಮಗಳ ಜತೆ, ಭಿನ್ನಮತದ ಜತೆ ಜಗಳ ಮಾಡುವುದಕ್ಕೆ ಅವಕಾಶವಿತ್ತು. ಅವರು ಬರೀ ಹೇಳುವ ಪ್ರವಚನಕಾರರಲ್ಲ. ಕೇಳಿ ಕಲಿಯಬಲ್ಲ ಜಿಜ್ಞಾಸು ಕೂಡ ಆಗಿದ್ದರು. ತರ್ಕದ ಮೂಲಕವೇ ಜಗತ್ತನ್ನು ನೋಡಬಯಸುವ ವೈಚಾರಿಕತೆ, ತಾಯಿಯಂತೆ ಪ್ರೀತಿಸುವ ಕರುಳುತನ, ಜನರ ನೋವಿಗೆ ಮಿಡಿವ ಮಾನವೀಯತೆಗಳಿಂದ ಕೂಡಿದ ಸದಾಶಿವಯೋಗಿ ನಾನು ಕಂಡ ಘನವ್ಯಕ್ತಿತ್ವಗಳಲ್ಲಿ ಒಬ್ಬರು. ನಿಮ್ಮ ಜೀವನದಲ್ಲಿ ಈಡೇರದ ಆಸೆಯೇನಾದರೂ ಇದೆಯೇ ಎಂದೊಮ್ಮೆ ಕೇಳಿದೆ. ಅವರು ಹೇಳಿದರು: “ಎಲ್ಲ ಜಾತಿ ಧರ್ಮದ ಮಕ್ಕಳನ್ನು ಸೇರಿಸಿಕೊಂಡು, ಪ್ರಶ್ನೆ ಮತ್ತು ತರ್ಕದ ಮೂಲಕ ಜಗತ್ತನ್ನು ಅರಿಯುವ ವಿಚಾರವಂತರನ್ನಾಗಿ ಬೆಳೆಸುವ ಒಂದು ಶಾಲೆ ತಗೀಬೇಕು ಅಂತ ಆಸೆಯಿತ್ತು ಕಂಡ್ರೀ. ಶಾಲೆ ಮಾಡಲು ಸಂಪನ್ಮೂಲ ಇರಲಿಲ್ಲ. ಈಗ ಸಂಪನ್ಮೂಲ ಐತೆ. ನನಗೆ ಶಕ್ತಿಯಿಲ್ಲ”.

ಪಂಡಿತ ತಾರಾನಾಥರ ‘ಧರ್ಮಸಂಭವ’ವನ್ನು ನೆನಪಿಸುವ ಅವರ ‘ಭಾರತೀಯರಿಗೆ ಭಗವಂತರೆಷ್ಟು?’ ನವಕರ್ನಾಟಕದಿಂದ ಪ್ರಕಟವಾಗಿತ್ತು. ಆಗ ಅವರಿಗೆ ಸಂಪ್ರದಾಯವಾದಿಗಳು ‘ದೈವನಿಂದಕನಾದ ನೀನು ನರಕಕ್ಕೆ ಹೋಗುತ್ತೀಯಾ’ ಎಂದು ಶಾಪಹಾಕಿದ್ದರು. ಅದಕ್ಕೆ ಯೋಗಿಯವರು “ಸಮಾಜದಲ್ಲಿ ಈಗ ಅನುಭವಿಸುತ್ತಿರುವ ಘನಘೋರ ನರಕಕ್ಕಿಂತಲೂ ಮತ್ತೊಂದು ನರಕ ಎಲ್ಲೋ ಇದೆ ಎಂದು ನರಕ ಎಂಬುದನ್ನು ನಾನು ನಂಬುವುದಿಲ್ಲ” ಎಂದು ಉತ್ತರಿಸಿದ್ದರು. ಕಾರ್ಪೊರೇಟ್ ಜಗತ್ತಿನವರ ಸಂಕಟ ವಿಮೋಚನೆಗೆಂದು ಜನ್ಮತಳೆದಿರುವ ಸಂತರು, ಭಾರತೀಯ ಸಂಸ್ಕೃತಿಯ ಪ್ರತಿನಿಧಿಗಳೆಂಬಂತೆ ಪೋಸುಕೊಡುವ ಯೋಗವನ್ನು ಮಾರುಕಟ್ಟೆಯ ಸರಕಾಗಿಸಿರುವ ಯೋಗಿಗಳು, ಶಕ್ತಿರಾಜಕಾರಣದಲ್ಲಿ ಇರುವ ಭ್ರಷ್ಟರನ್ನು ರಕ್ಷಿಸುವ ಧಾರ್ಮಿಕ ನಾಯಕರು ಇರುವ ಸನ್ನಿವೇಶದಲ್ಲಿ, ಪಂಡಿತ ತಾರಾನಾಥ, ಮುಕುಂದೂರುಸ್ವಾಮಿ, ಸದಾಶಿವಯೋಗಿ ಮುಂತಾದ ಸಾಧಕರು ಮತ್ತು ಚಿಂತಕರು ನಿಜವಾಗಿ ಭಾರತದ ಅಂತಃಸಾಕ್ಷಿಗಳಾಗಿ ಕಾಣುತ್ತಾರೆ. ದೊಡ್ಡ ಬದುಕನ್ನು ಬದುಕಿದ ಸದಾಶಿವಯೋಗಿಗಳು ಎರಡು ವರ್ಷಗಳಿಂದಲೂ ಮೌನವ್ರತ ಧರಿಸಿದ್ದರು. ಆಹಾರವನ್ನು ಕಡಿಮೆ ಮಾಡಿದ್ದರು. ದೇಹತ್ಯಾಗಕ್ಕೆ ಸಿದ್ಧರಾಗುತ್ತಿದ್ದರೋ ಎಂಬಂತೆ ಅವರ ವರ್ತನೆಯಿತ್ತು. ಹಾಗೆಯೇ ಆಯಿತು ಕೂಡ. ಅವರು ಈಚೆಗೆ (17.9.2021) ನಿಧನರಾದರು. ಅವರ ದೇಹತ್ಯಾಗ ಮಾಡಿದ ದಿನ, ಆಕಸ್ಮಿಕವೆಂಬಂತೆ ಪೆರಿಯಾರ್ ಅವರ ಜನ್ಮದಿನವೂ ಆಗಿತ್ತು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಅಧಿಕಾರಿಗಳು ನಮ್ಮ ಚಪ್ಪಲಿ ಎತ್ತಲಷ್ಟೇ ಯೋಗ್ಯರು ಹೇಳಿಕೆ: ಭಾಷೆ ಸುಧಾರಿಸಿಕೊಳ್ಳುತ್ತೇನೆ ಎಂದ ಉಮಾಭಾರತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...