Homeಮುಖಪುಟಇರುವ ಯೋಜನೆಗಳ ರೀಪ್ಯಾಕೇಜೇ ಹೊಸ ಪ್ಯಾಕೇಜ್: ಆರ್ಥಿಕತೆ ಮತ್ತಷ್ಟು ಕುಸಿಯುವುದರಲ್ಲಿ ಅನುಮಾನವಿಲ್ಲ

ಇರುವ ಯೋಜನೆಗಳ ರೀಪ್ಯಾಕೇಜೇ ಹೊಸ ಪ್ಯಾಕೇಜ್: ಆರ್ಥಿಕತೆ ಮತ್ತಷ್ಟು ಕುಸಿಯುವುದರಲ್ಲಿ ಅನುಮಾನವಿಲ್ಲ

ಜನರನ್ನು ಭೀತಿಯಿಂದ ಹೊರತರುವುದು ಮತ್ತು ಆರ್ಥಿಕತೆಯ ಭಾರೀ ಕುಸಿತವನ್ನು ತಡೆಗಟ್ಟುವುದು ಎರಡಕ್ಕೂ ಇದ್ದ ಮದ್ದು ಜನರ ಕೈಗೆ ಹೆಚ್ಚಿನ ಹಣ ಸಿಗುವಂತೆ ಮಾಡುವುದಾಗಿತ್ತು. ಆದರೆ ಅರೆಕಾಸಿನ ಮಜ್ಜಿಗೆಯನ್ನಷ್ಟೇ ನೀಡಿರುವ ಸರ್ಕಾರವು ಮತ್ತೊಮ್ಮೆ ಅಂತಹ ಅವಕಾಶವನ್ನು ಕಳೆದುಕೊಂಡಿದೆ.

- Advertisement -
- Advertisement -

ಜನಸಾಮಾನ್ಯರಿಗೆ ಕೊರೊನಾದಿಂದ ಉಂಟಾಗುವ ಆರ್ಥಿಕ ಹೊಡೆತಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರದ ಪ್ಯಾಕೇಜ್ ಘೋಷಣೆಯಾಗಿದೆ. ದೇಶದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ರಾಜ್ಯ ಮಂತ್ರಿ ಅನುರಾಗ್ ಠಾಕೂರ್ ಅವರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ 1.70 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಇದೆಂದು ಹೇಳಿದ್ದಾರೆ. ಅಂದಂದಿನ ಆದಾಯವನ್ನು ದುಡಿದುಕೊಂಡು ಬದುಕುವ ಮತ್ತು ಅನ್ನಕ್ಕೂ ಪರದಾಡಬೇಕಾಗಿ ಬರುವ ಕೋಟ್ಯಾಂತರ ಕುಟುಂಬಗಳಿಗೆ ನೆರವಾಗಲು ಈ ಪ್ಯಾಕೇಜ್ ಘೋಷಿಸಲಾಗಿದೆಯೆಂಬುದು ಸ್ಪಷ್ಟವಾಗಿದೆ ಮತ್ತು ಹಣಕಾಸು ಸಚಿವರೂ ಸಹಾ ಈ ಪ್ಯಾಕೇಜ್ ಯಾರೊಬ್ಬ ವ್ಯಕ್ತಿಯೂ ಹಸಿವಿನಿಂದ ಇರಬಾರದು ಮತ್ತು ಅವರ ಕೈಯ್ಯಲ್ಲಿ ಸ್ವಲ್ಪವಾದರೂ ಹಣ ಇರಬೇಕೆನ್ನುವ ಕಾರಣಕ್ಕೆ ಹೊರಡಿಸಲಾಗಿದೆ ಎಂಬುದನ್ನು ಪದೇ ಪದೇ ಒತ್ತಿ ಹೇಳಿದರು.

ಇದರ ಮತ್ತಷ್ಟು ವಿವರಗಳು ಲಭ್ಯವಾಗಬೇಕಿದ್ದು, ಹಣಕಾಸು ಸಚಿವಾಲಯದಿಂದ ಇದಕ್ಕಿಂತ ಹೆಚ್ಚಿನ ವಿವರಗಳು ಏನು ದೊರೆಯುತ್ತವೆಂಬುದನ್ನು ಕಾದು ನೋಡಬೇಕಿದೆ. ಆದರೆ, ಈಗ ಪತ್ರಿಕಾಗೋಷ್ಠಿಯ ಮುಖಾಂತರ ಸಿಕ್ಕಿರುವ ಮಾಹಿತಿಗಳು ನಿರಾಶಾದಾಯಕವಾದರೂ ನಿರೀಕ್ಷಿತವೇ ಆಗಿವೆ.

ಮೊದಲಿಗೆ ಈ ಪ್ಯಾಕೇಜ್‌ನಲ್ಲಿನ ಒಳ್ಳೆಯ ಸಂಗತಿಗಳನ್ನು ನೋಡೋಣ. ಮೊಟ್ಟಮೊದಲನೆಯದಾಗಿ ದೇಶದ ಬಡವರನ್ನು ಗಮನದಲ್ಲಿಟ್ಟುಕೊಂಡು ಪ್ಯಾಕೇಜ್‌ಅನ್ನು ಘೋಷಿಸಿದ್ದೇ ಒಂದು ಒಳ್ಳೆಯ ಸಂಗತಿ. ಏಕೆಂದರೆ ಮನೆಯಲ್ಲಿರಿ ಎಂದು ಹೇಳಿದುದರ ಆಚೆಗೆ ಸರ್ಕಾರವೇನೇನು ಮಾಡುತ್ತಿದೆ, ಇನ್ನೂ ಏನೇನು ಮಾಡಬಯಸಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಕೊಡದಿದ್ದುದು ಬಹಳ ದೊಡ್ಡ ತೊಡಕಾಗಿತ್ತು. ಉಳಿದ ದೇಶಗಳಲ್ಲಿ ಪ್ರತೀದಿನವೂ ಜನರಿಗೆ ಅಪ್‌ಡೇಟ್ ಕೊಡುವ ಕೆಲಸ ನಡೆಯುತ್ತಲೇ ಇದೆ.

ಪಡಿತರ ವಿತರಕ ವ್ಯವಸ್ಥೆಯಲ್ಲಿ ಈಗ ಸಿಗುತ್ತಿರುವ 5 ಕೆಜಿ ಆಹಾರ ಧಾನ್ಯದ ಜೊತೆಗೆ ಪ್ರತೀ ವ್ಯಕ್ತಿಗೆ ಇನ್ನೂ 5 ಕೆಜಿ (ಅಕ್ಕಿ ಅಥವಾ ಗೋಧಿ) ಮತ್ತು ಕುಟುಂಬಕ್ಕೆ 1 ಕೆಜಿ ಕಾಳು/ಬೇಳೆಯನ್ನು ಉಚಿತವಾಗಿ ನೀಡಲುದ್ದೇಶಿಸಿರುವುದು ಸ್ವಾಗತಾರ್ಹ. ಹೆಚ್ಚು ಕಡಿಮೆ ಇದು ಆ ಕುಟುಂಬದ ಆಹಾರ ಧಾನ್ಯದ ಅಗತ್ಯವನ್ನು ಪೂರೈಸುತ್ತದೆ. (ವ್ಯಕ್ತಿಯೊಬ್ಬರಿಗೆ 18 ಕೆ.ಜಿ. ಆಹಾರ ಧಾನ್ಯ ಒಂದು ತಿಂಗಳಿಗೆ ಬೇಕಾಗುತ್ತದಾದರೂ, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಇದಕ್ಕಿಂತ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗದು ಎಂದು ಭಾವಿಸೋಣ).

ಜನಧನ್ ಖಾತೆ ಹೊಂದಿರುವ ಮಹಿಳೆಯರ ಅಕೌಂಟಿಗೆ ಮುಂದಿನ ಮೂರು ತಿಂಗಳ ಕಾಲ, ತಿಂಗಳಿಗೆ 500 ರೂ.ಗಳನ್ನು ವರ್ಗಾವಣೆ ಮಾಡಲಾಗುವುದು. ಇದೂ ಸಹಾ ಒಳ್ಳೆಯ ಘೋಷಣೆಯಾಗಿದ್ದು, ಇದರ ಜೊತೆಗೆ ಉಜ್ವಲಾ ಗ್ಯಾಸ್ ಯೋಜನೆಯಡಿ ಅಡಿಗೆ ಅನಿಲ ಪಡೆಯುವ ಕುಟುಂಬಗಳಿಗೆ (8.3 ಕೋಟಿ) ಉಚಿತವಾಗಿ ಸಿಲಿಂಡರ್ ಕೊಡಲಾಗುವುದು.

ಕೊರೊನಾ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ 50 ಲಕ್ಷ ರೂ.ಗಳವರೆಗೆ ವಿಮೆಯನ್ನು ಕಲ್ಪಿಸಲಾಗುವುದು ಎಂದೂ ಸಚಿವರು ಹೇಳಿದ್ದಾರೆ. ಬಹುಶಃ ತಮಗೂ ಸೋಂಕು ಬರದಂತಿರಲು ವೈಯಕ್ತಿಕ ರಕ್ಷಣಾ ಉಪಕರಣಗಳನ್ನು ಕೊಟ್ಟರೆ ಸಾಕು ಎಂದು ಕೇಳುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಇದು ಬೋನಸ್ ಎಂದು ಸರ್ಕಾರವು ಭಾವಿಸಿರಬೇಕು.

ಇವಿಷ್ಟೂ ಸರ್ಕಾರವು ಸಂಪೂರ್ಣ ಹೊಸದಾಗಿ ಕಲ್ಪಿಸುತ್ತಿರುವ ಸಹಾಯ/ಸೌಲಭ್ಯವಾಗಿದ್ದು ಸಾಮಾನ್ಯ ಜನರಿಗೆ ಒಳ್ಳೆಯದನ್ನೇ ಮಾಡಲಿದೆ. ಜನಧನ್ ಖಾತೆಗೆ ತಿಂಗಳಿಗೆ 500 ರೂ ಹೆಚ್ಚಿಸುವುದು ಸಾಕಾಗುವುದಿಲ್ಲ ಎಂಬ ಕೊರತೆಯನ್ನು ಪಕ್ಕಕ್ಕಿಟ್ಟು ನೋಡೋಣ.

60 ವರ್ಷ ಮೇಲ್ಪಟ್ಟ ವೃದ್ಧರಿಗೆ ಮತ್ತು ವಿಧವೆಯರಿಗೆ ತಿಂಗಳಿಗೆ 1000 ರೂ. ನೀಡುವ ಅಂಶವೂ ಸಕಾರಾತ್ಮಕವಾದುದಾಗಿದ್ದು, ಇದು ಈಗಾಗಲೇ ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನ ಪಡೆಯುತ್ತಿರುವುದಕ್ಕೆ ಹೆಚ್ಚುವರಿಯಾಗಿ ನೀಡುತ್ತಾರೋ ಅಥವಾ ಅದರ ಭಾಗವೋ ಎಂಬುದು ಗೊತ್ತಾಗಿಲ್ಲ.

ಇದನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಒಂದು ರೀತಿಯ ಕಣ್ಕಟ್ಟಿನ ರೀತಿಯಲ್ಲೇ ಇವೆ. ಕಿಸಾನ್ ಸಮ್ಮಾನ್ ನಿಧಿಯಡಿ ಸರ್ಕಾರವು ಹೇಗೂ 2000 ರೂ.ಗಳನ್ನು ರೈತರಿಗೆ ನೀಡಲೇಬೇಕಿತ್ತು. ಅದನ್ನು ಈಗ ಏಪ್ರಿಲ್ ಮೊದಲ ವಾರದಲ್ಲಿ ಹಾಕುತ್ತೇವೆಂದು ಹೇಳಲಾಗಿದೆ. ನರೇಗಾ ಯೋಜನೆಯಡಿ (ಕೇಂದ್ರ ಸರ್ಕಾರ ನೀಡುವ) ದಿನವಹಿ ಕೂಲಿ 182 ರೂ. ಇದ್ದು ಅದನ್ನು 202 ರೂ.ಗಳಿಗೆ ಏರಿಸಲಾಗುತ್ತದೆ. ನೂರು ದಿನಗಳ ಕೆಲಸ ಕೊಟ್ಟಾಗ ದಿನಕ್ಕೆ 20 ರೂ ಹೆಚ್ಚಳದಂತೆ ಇದು 2000 ರೂ. ಆಗುತ್ತದೆ. ಇದನ್ನು ದಿನಗೂಲಿ ಕಾರ್ಮಿಕರಿಗೆ 2000 ರೂ. ಎಂದು ಹೇಳಲಾಯಿತು. ವಾಸ್ತವದಲ್ಲಿ ಕರ್ನಾಟಕದಲ್ಲಿ 2017ರಲ್ಲೇ ನರೇಗಾ ಕೂಲಿ 236 ರೂ.ಗಳಿದ್ದು, ಕೇಂದ್ರದ ಪಾಲನ್ನು ಕೊಡುವಲ್ಲಿ ಆಗುತ್ತಿರುವ ವಿಳಂಬದ ಕುರಿತು ಚರ್ಚೆ ನಡೆಯುತ್ತಲೇ ಇದೆ. ಕೇಂದ್ರವು ರಾಜ್ಯಗಳಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲಾ ಹಣವನ್ನು ಮೊದಲು ಕೊಟ್ಟರೆ ಅದರಿಂದ ರಾಜ್ಯಗಳು ನಿಟ್ಟುಸಿರು ಬಿಡಬಹುದು.

ಇದೇ ರೀತಿ ಸ್ವಸಹಾಯ ಸಂಘಗಳಿಗೆ 10 ಲಕ್ಷ ರೂ.ಗಳ ಸಾಲವನ್ನು ಜಾಮೀನಿಲ್ಲದೇ ನೀಡುತ್ತಿದ್ದುದನ್ನು ಈಗ 20 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಪ್ರತೀ ವಾರವೂ ತಪ್ಪದೇ ಸಾಲ ತೀರಿಸುವ ಈ ಮಹಿಳೆಯರು, ಈ ಸದ್ಯ ತಮ್ಮ ಜನಧನ ಅಕೌಂಟಿಗೆ ಅಥವಾ ವೃದ್ಧರೂ ಅಥವಾ ವಿಧವೆಯರಾಗಿದ್ದರೆ ಸರ್ಕಾರದಿಂದ ಬರುವ ಹಣವನ್ನು ಸಾಲಕ್ಕೆ ಕಟ್ಟಬೇಕಷ್ಟೇ. ಏಕೆಂದರೆ ಒಟ್ಟಾರೆ ಆರ್ಥಿಕತೆ ಕುಸಿಯುವ ಈ ಸಂದರ್ಭದಲ್ಲಿ ವಿವಿಧ ರೀತಿಯ ಕೂಲಿಗಳು ಸಿಗುವ ಸಾಧ್ಯತೆಯೂ ಕಡಿಮೆ.

ದೇಶದ ಆರ್ಥಿಕತೆ ಕುಸಿದು ಉದ್ಯೋಗ ನಷ್ಟವು ತೀವ್ರ ಪ್ರಮಾಣದಲ್ಲಿ ಏರುತ್ತಿದ್ದಾಗಲೇ ಉದ್ದಿಮೆದಾರರ ವಲಯವು ಪಿಎಫ್ ವಂತಿಗೆಯನ್ನು ಸರ್ಕಾರವೇ ಕಟ್ಟಲಿ ಎಂಬ ಬೇಡಿಕೆಯನ್ನು ಇರಿಸಿದ್ದರು. ಇದೀಗ ಮುಂದಿನ ಮೂರು ತಿಂಗಳ ಮಟ್ಟಿಗೆ ಮಾತ್ರ ಪಿಎಫ್‌ನ ವಂತಿಗೆ (ಕಾರ್ಮಿಕರ ಮತ್ತು ಮಾಲೀಕರ ಬಾಬ್ತು)ಯನ್ನು ಸರ್ಕಾರ ಕಟ್ಟಲು ಒಪ್ಪಿಕೊಂಡಿದೆ, 1000ಕ್ಕಿಂತ ಕಡಿಮೆ ಕಾರ್ಮಿಕರಿರುವ ಉದ್ದಿಮೆಗಳಿಗೆ ಮಾತ್ರ ಎಂಬ ಷರತ್ತಿನೊಂದಿಗೆ.

ಇನ್ನು ಕಟ್ಟಡ ಕಾರ್ಮಿಕರಿಗೆ ಪ್ಯಾಕೇಜ್ ಎಂದು ಹೇಳುವಾಗ ಅದನ್ನೊಂದು ಐಟಂ ಆಗಿ ತಂದಿದ್ದೇ ತಪ್ಪಾಗಿತ್ತು. ಈಗಾಗಲೇ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿರುವ ಹಣವನ್ನು ರಾಜ್ಯ ಸರ್ಕಾರವು ಅವರ ಕಲ್ಯಾಣಕ್ಕಾಗಿ ಉದಾರವಾಗಿ ಬಳಸಲಿ ಎಂಬ ಸೂಚನೆಯಷ್ಟೇ ಕೇಂದ್ರದ್ದು. ಹಣ ಯಾರದ್ದು? ಹಣ ಅದೇ ಕಾರ್ಮಿಕರಿಗೆ ಸೇರಬೇಕಿದ್ದ ಮಂಡಳಿಯಲ್ಲಿರುವ ಹಣವೇ ಆಗಿತ್ತು. ಅದೇ ರೀತಿಯಲ್ಲಿ ಜಿಲ್ಲಾ ಖನಿಜ (ಗಣಿ ಬಾಧಿತ ಪ್ರದೇಶಗಳಲ್ಲಿನ) ನಿಧಿಯಿಂದಲೂ ಹಣ ಬಳಸಿ ವೈದ್ಯಕೀಯ ಪರೀಕ್ಷೆಗಳಿಗೆ ಮತ್ತು ರೋಗಿಗಳನ್ನು ಸ್ಕ್ರೀನ್  ಮಾಡಲು ಬಳಸಿ ಎಂಬ ಪುಗಸಟ್ಟೆ ಸಲಹೆಯೂ ಕೇಂದ್ರದಿಂದ ಬಂದಿದೆ.

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಹಣಕಾಸು ಸಚಿವರಲ್ಲಿ ಉತ್ತರವಿರಲಿಲ್ಲ. ದಿನಸಿ, ತರಕಾರಿ, ಮೆಡಿಕಲ್ ಸ್ಟೋರ್‌ಗಳನ್ನು ಹೊರತುಪಡಿಸಿದರೆ ಬಹುತೇಕ ವ್ಯಾಪಾರಗಳು ನಡೆಯುತ್ತಲೇ ಇಲ್ಲ. ಅವರಿಗೆ ಏನಾದರೂ ಪರಿಹಾರ ಕಲ್ಪಿಸುತ್ತೀರಾ ಎಂಬ ಪ್ರಶ್ನೆಗೆ ‘ಇದು ಬಡವರನ್ನು ಗಮನದಲ್ಲಿಟ್ಟುಕೊಂಡು ಪ್ರಕಟಿಸಿರುವ ಪ್ಯಾಕೇಜ್’ ಎಂದಷ್ಟೇ ಹೇಳಿದರು.

1.70 ಲಕ್ಷ ಕೋಟಿ ಪ್ಯಾಕೇಜ್ ಎನ್ನುತ್ತಿದ್ದೀರಿ, ಇದಕ್ಕೆ ಹಣವನ್ನು ಎಲ್ಲಿಂದ ತರುತ್ತಿದ್ದೀರಿ? ಬೇರೆ ಕಡೆಯಿಂದ ಡೈವರ್ಟ್ ಮಾಡಲಾಗುವುದಾ ಅಥವಾ ಹೊಸ ಮೂಲಗಳಿವೆಯಾ ಎಂಬುದಕ್ಕೆ ಉತ್ತರವಿರಲಿಲ್ಲ.

ಆಹಾರ ಧಾನ್ಯ ಮತ್ತು ನೇರ ನಗದು ವರ್ಗಾವಣೆಯ ಯೋಜನೆಗಳಿಗೆ ತಲಾ ಎಷ್ಟು ಹಣ ನಿಗದಿ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರ ನೀಡದೇ ಜಾರಿಕೊಂಡರು. ಅದಕ್ಕೆ ಉತ್ತರ ನೀಡಿದರೆ 1.70 ಲಕ್ಷ ಕೋಟಿ ಪ್ಯಾಕೇಜ್ ಎಂಬುದೇ ಸುಳ್ಳು ಎಂದು ಗೊತ್ತಾಗುವ ಸಾಧ್ಯತೆ ಇರಬಹುದೇ ಎಂಬ ಅನುಮಾನವು ಮೂಡಲು ಇದು ಕಾರಣವಾಗಿದೆ. ಏಕೆಂದರೆ, ಕಿಸಾನ್ ಸಮ್ಮಾನ್ ನಿಧಿ, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿನ ಹಣ ಎಲ್ಲವನ್ನೂ ಸೇರಿಸಿ ಹೇಳಿರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು.

ನೀವು ಇಷ್ಟೆಲ್ಲಾ ಹಣ ನೀಡಿಬಿಟ್ಟರೆ ಬ್ಯಾಂಕುಗಳೊಳಗೆ ನೂಕು ನುಗ್ಗಲು ಆಗಿ ‘ಸುರಕ್ಷಿತ ಅಂತರ’ ಕಾಪಾಡಿಕೊಳ್ಳುವುದು ಕಷ್ಟವಲ್ಲವೇ ಎಂಬ ಪ್ರಶ್ನೆಯೊಂದನ್ನು ರಾಜಧಾನಿಯ ಪತ್ರಕರ್ತ ಮಹಾಶಯರು ಕೇಳಿದರು! ಇದು ಉತ್ತಮವಾದ ಪ್ರಶ್ನೆ ಎಂದು ಹಣಕಾಸು ಸಚಿವರು ಶ್ಲಾಘಿಸಿದರು!! ಇದಕ್ಕೆ ವಿವರವಾಗಿಯೇ ಉತ್ತರ ನೀಡಿದ ಸಚಿವರು ಬ್ಯಾಂಕು, ಎಟಿಎಂಗಳು ಸಂಪೂರ್ಣ ತೆರೆದಿರುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಒತ್ತಿ ಒತ್ತಿ ಹೇಳಿದರು!!!

ಮೊದಲೇ ಕುಸಿದಿದ್ದ ಆರ್ಥಿಕತೆಯ ಕಾರಣದಿಂದ ಜನರು ಈಗಾಗಲೇ ಸಾಲದ ಒತ್ತಡದಲ್ಲಿದ್ದಾರೆ; ಈಗ ಕೊರೊನಾ ಲಾಕ್‌ಡೌನ್‌ನ ಕಾರಣದಿಂದ ವಿವಿಧ ವಲಯಗಳ ಜನರು ಭೀತಿಗೊಳಗಾಗಿದ್ದಾರೆ. ಹೀಗಿರುವಾಗ ಅವರೆಲ್ಲರಿಗೂ ಭರವಸೆ ನೀಡುವ ಮಾತುಗಳು ದೇಶದ ಹಣಕಾಸು ಸಚಿವರಿಂದಲೇ ಬರಲಿಲ್ಲ. ಜನರ ಕೈಯ್ಯಲ್ಲಿ ಸ್ವಲ್ಪವಾದರೂ ಹಣ ಇರಬೇಕೆಂದು ಈ ವ್ಯವಸ್ಥೆ ಎಂದು ಹೇಳುವ ಹಣಕಾಸು ಸಚಿವರಿಗೆ, ಸರ್ಕಾರ ಕೊಡುತ್ತಿರುವ ಹಣದಿಂದ ಕನಿಷ್ಠ ಆಹಾರ ಪದಾರ್ಥಗಳನ್ನಷ್ಟೇ ಕೊಳ್ಳಲು ಸಾಧ್ಯ ಎಂಬುದೂ ತಿಳಿದಿದೆ. ಇನ್ನಿತರ ವ್ಯಾಪಾರ ವಹಿವಾಟು ಮಾಡಬೇಕೆಂದರೂ ಸಾಧ್ಯವಿಲ್ಲ. ಇದರಿಂದ ಸಣ್ಣ ಪುಟ್ಟ ವ್ಯಾಪಾರಸ್ಥರು ತೊಂದರೆಗೊಳಗಾಗುತ್ತಾರೆ. ಈ ದೇಶದಲ್ಲಿ ಅತೀ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವುದು ಈ ಅಸಂಘಟಿತ ಕ್ಷೇತ್ರವೇ ಆಗಿದ್ದು, ಅವರು ಕೋಟಿಗಟ್ಟಲೆ ಜನರಿಗೆ ಸಂಬಳವನ್ನು ಹೇಗೆ ನೀಡುತ್ತಾರೆ ಎಂಬ ಯೋಚನೆಯಿದ್ದಂತಿಲ್ಲ. ಹೀಗಿರುವಾಗ ಮನೆ ಬಾಡಿಗೆ ಒಳಗೊಂಡಂತೆ ಹಲವು ಸಂಗತಿಗಳನ್ನು ಹೇಗೆ ನಿಭಾಯಿಸುತ್ತಾರೆ?

ಇಂತಹ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರೇ ಬಿಪಿಎಲ್ ಕಾರ್ಡುದಾರರು ಎಂದಿಟ್ಟುಕೊಳ್ಳೋಣ. ಆದರೆ ಆಹಾರ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಅಗತ್ಯಗಳಿಗೂ ಕಷ್ಟದ ಪರಿಸ್ಥಿತಿಯಿದ್ದು, ಸಣ್ಣ ಪುಟ್ಟ ಅನಾರೋಗ್ಯದ ನಿಭಾವಣೆಯೂ ಹೆಚ್ಚಿನವರಿಗೆ ಕಷ್ಟ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಹೀಗಿರುವಾಗ ಸರ್ಕಾರವು ಇದುವರೆಗೆ ನೀಡುತ್ತಿದ್ದ ಮೂರ‍್ನಾಲ್ಕು ಯೋಜನೆಗಳ ಹಣವನ್ನೇ ರೀಪ್ಯಾಕೇಜ್ ಮಾಡಿ ಘೋಷಿಸಿ ‘ದೇಶದ ಮೂರನೇ ಎರಡು ಭಾಗದಷ್ಟಿರುವ ಬಡವರಿಗೆ ವಿಶೇಷ ಪ್ಯಾಕೇಜ್’ ಎಂದು ಹೇಳಲಾಗಿದೆ.

2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಂಟಾದಾಗ ಭಾರತವು ಅಷ್ಟು ಬಿಕ್ಕಟ್ಟಿಗೆ ಹೋಗದಿರಲು ಒಂದು ಕಾರಣ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಅಂದಿನ ಸರ್ಕಾರ ಕೈಗೊಂಡ ಕ್ರಮಗಳಾಗಿತ್ತು. ನರೇಗಾ ಮತ್ತು ರೈತರ ಸಾಲಮನ್ನಾ ಎರಡು ಪ್ರಮುಖ ಉತ್ತೇಜನಕಾರಿ ಯೋಜನೆಗಳಾಗಿದ್ದವು. ಅಂದರೆ ಜನಸಾಮಾನ್ಯರ ಕೈಯ್ಯಲ್ಲಿ ಹಣ ಓಡಾಡಿದರೆ ಅದರಿಂದ ಇಡೀ ಆರ್ಥಿಕತೆಗೆ ಚೇತರಿಕೆ ಉಂಟಾಗುತ್ತದೆ. ಮೋದಿ ಸರ್ಕಾರ ಬಂದ ನಂತರ ಆರ್ಥಿಕತೆ ಕುಸಿಯುತ್ತಲೇ ಹೋಗಲು ಕಾರಣವೇನೆಂದರೆ ಜನಸಾಮಾನ್ಯರ ಕೈಯ್ಯಲ್ಲಿ ಹಣ ಇಲ್ಲದಂತೆ ಮಾಡಲಾಗಿದೆ. ಅಂರ‍್ರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿದಿದ್ದರಿಂದ ಉಂಟಾದ ಅನುಕೂಲಕರ ಸ್ಥಿತಿಯನ್ನು ಬಳಸಿಕೊಂಡು ಜನರಿಗೆ ಅನುಕೂಲ ಕಲ್ಪಿಸುವ ಬದಲು ಕಾರ್ಪೋರೇಟ್‌ಗಳಿಗೆ ಮಣೆ ಹಾಕಿದ್ದೇ ಇದಕ್ಕೆ ಕಾರಣವಾಗಿತ್ತು. ಇದೀಗ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲೂ ಜನರನ್ನು ಭೀತಿಯಿಂದ ಹೊರತರುವುದು ಮತ್ತು ಆರ್ಥಿಕತೆಯ ಭಾರೀ ಕುಸಿತವನ್ನು ತಡೆಗಟ್ಟುವುದು ಎರಡಕ್ಕೂ ಇದ್ದ ಮದ್ದು ಜನರ ಕೈಗೆ ಹೆಚ್ಚಿನ ಹಣ ಸಿಗುವಂತೆ ಮಾಡುವುದಾಗಿತ್ತು. ಆದರೆ ಅರೆಕಾಸಿನ ಮಜ್ಜಿಗೆಯನ್ನಷ್ಟೇ ನೀಡಿರುವ ಸರ್ಕಾರವು ಮತ್ತೊಮ್ಮೆ ಅಂತಹ ಅವಕಾಶವನ್ನು ಕಳೆದುಕೊಂಡಿದೆ.

ಹಣಕಾಸು ಇಲಾಖೆಯ ವತಿಯಿಂದ ಬಿಡುಗಡೆಯಾಗಬಹುದಾದ ಉಳಿದ ವಿವರಗಳ ನಂತರ ಇನ್ನಷ್ಟು ವಿಶ್ಲೇಷಣೆ ಸಾಧ್ಯವಾಗಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....