ಸಂವಿಧಾನವು ತನ್ನ ಮೊದಲ ಅನುಚ್ಛೇದದಲ್ಲಿಯೇ ಭಾರತವನ್ನು ಒಂದು ರಾಜ್ಯಗಳ ಒಕ್ಕೂಟ ಎಂದು ಘೋಷಿಸುತ್ತದೆ. ಸಶಕ್ತ ರಾಜ್ಯಗಳ ಮೂಲಕ ಸಶಕ್ತ ಭಾರತ ನಿರ್ಮಿಸುವುದು ನಮ್ಮ ಸಂವಿಧಾನದ ನಿರ್ಮಾತೃಗಳ ಕನಸಾಗಿತ್ತು. ಆ ಕನಸಿಗೆ ಕುಂದುಂಟಾಗದಂತೆ ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸೋಮವಾರ (ಜ.26) ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ರಾಜ್ಯದ ಜನತೆಯನ್ನು ಉದ್ದೇಶಿಸಿ ಅವರು ಭಾಷಣ ಮಾಡಿದರು. ರಾಜ್ಯ ಸರ್ಕಾರ ಸಿದ್ದಪಡಿಸಿಕೊಟ್ಟ ಭಾಷಣವನ್ನು ಯಥಾವತ್ ಓದಿದರು.
ನಮ್ಮ ಸಂವಿಧಾನವು ಸಾರ್ವಭೌಮ ಅಧಿಕಾರವನ್ನು ಒಕ್ಕೂಟ ಮತ್ತು ರಾಜ್ಯಗಳ ನಡುವೆ ಹಂಚಿದೆ. ದೇಶದ ಅಖಂಡತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಒಕ್ಕೂಟ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವಾಗಲೂ ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ಗುರುತಿಸಿ ಗೌರವಿಸಿದೆ. ಆ ಮೂಲಕ ದೇಶದ ವಿವಿಧತೆಯನ್ನು ಎತ್ತಿ ಹಿಡಿದಿದೆ. ವೈವಿಧ್ಯಮಯವಾದ, ಅಧಿಕಾರ ಹಂಚಿಕೆಯ ಈ ತತ್ವವನ್ನು ಅಳವಡಿಸಿಕೊಂಡು ನಮ್ಮ ಸಂವಿಧಾನದ ನಿರ್ಮಾತೃಗಳು ಈ ಆಡಳಿತ ವ್ಯವಸ್ಥೆಯನ್ನು ನಮಗೆ ನೀಡಿದ್ದಾರೆ ಎಂದರು.
ಸಂವಿಧಾನದ ಕಾರಣಕ್ಕಾಗಿಯೇ ನಾವು ನೆಮ್ಮದಿಯಿಂದ ಇದ್ದೇವೆ. ದೇಶದ ಅಸಂಖ್ಯಾತ ಜನರು, ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಎಂದು ಆಳವಾಗಿ ನಂಬಿರುವುದರಿಂದ ಸಂವಿಧಾನವು ದಿನದಿಂದ ದಿನಕ್ಕೆ ಹೆಚ್ಚು ಪ್ರಸ್ತುತವಾಗುತ್ತಿದೆ ಎಂದು ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು, “ಸಂವಿಧಾನ ಎಷ್ಟೇ ಒಳ್ಳೆಯದಾಗಿರಲಿ, ಅದನ್ನು ಅನುಷ್ಠಾನಗೊಳಿಸುವ ಜನ ಕೆಟ್ಟವರಾಗಿದ್ದರೆ ಪರಿಣಾಮ ಕೆಟ್ಟದ್ದೇ ಆಗುತ್ತದೆ. ಸಂವಿಧಾನ ಎಷ್ಟೇ ಕೆಟ್ಟದ್ದಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ಒಳ್ಳೆಯವರಾಗಿದ್ದರೆ ಅದರ ಪರಿಣಾಮ ಒಳ್ಳೆಯದ್ದೇ ಆಗುತ್ತದೆ. ಸಂವಿಧಾನದ ಕಾರ್ಯನಿರ್ವಹಣೆಯು ಅದರ ಗುಣಲಕ್ಷಣದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದಿಲ್ಲ. ಸಂವಿಧಾನವು ರಾಷ್ಟ್ರದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆ ಮುಂತಾದವುಗಳನ್ನು ಮಾತ್ರ ಒದಗಿಸಬಹುದು. ಈ ಅಂಗಗಳ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ ಆ ದೇಶದ ಪ್ರಜೆಗಳು ಮತ್ತು ಅವರ ಆಶೋತ್ತರಗಳನ್ನು ಈಡೇರಿಸುವುದಕ್ಕೆ ತಮ್ಮ ಸಾಧನವಾಗಿ ಆಯ್ಕೆ ಮಾಡಿಕೊಂಡ ರಾಜಕೀಯ ಪಕ್ಷಗಳು” ಎಂದಿದ್ದಾರೆ. ಹಾಗಾಗಿ ಜನರು ಮಾಡಬೇಕಾದ ಅತಿ ಮುಖ್ಯ ಕೆಲಸವೆಂದರೆ ಸಂವಿಧಾನದ ಮೂಲ ಆಶಯವನ್ನು ಅರಿತು ಕೆಲಸ ಮಾಡುವ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುವುದು ಹಾಗೂ ನಿರಂತರವಾಗಿ ಪ್ರಶ್ನೆ, ಸಂವಾದ ಮಾಡುತ್ತಲೇ ಜನತಂತ್ರ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದಾಗಿದೆ. ಇದನ್ನೆ ಮಹಾತ್ಮ ಗಾಂಧೀಜಿಯವರು ಸಹ ಹೇಳಿದ್ದಾರೆ ಎಂದು ತಿಳಿಸಿದರು.
ನಮ್ಮ ಗಣರಾಜ್ಯದ ನೈಜ ಶಕ್ತಿಯು ವಿವಿಧತೆಯಲ್ಲಿ ಏಕತೆ, ಪ್ರಜಾಪ್ರಭುತ್ವ ಸಂಸ್ಥೆಗಳ ಚಲನಶೀಲತೆ ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳ ಬದ್ಧತೆಯಲ್ಲಿದೆ. ಭಾರತ ಸಂವಿಧಾನದ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ನಾಯಕತ್ವದ ಕರಡು ಸಮಿತಿಯ ಪ್ರತಿಯೊಬ್ಬ ಸದಸ್ಯರೂ ಸಹ ಈ ದೇಶಕ್ಕೆ ತಮ್ಮ ಅಭೂತಪೂರ್ವ ಕೊಡುಗೆಯನ್ನು ನೀಡಿದ್ದಾರೆ. 77ನೇ ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುತ್ತಾ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಮತ್ತು ದೇಶದ ಸೇವೆ ಮತ್ತು ಪ್ರಗತಿಗಾಗಿ ನಮ್ಮನ್ನು ನಾವು ಅರ್ಪಿಸಿಕೊಳ್ಳೊಣ ಎಂದರು.
ರಾಷ್ಟ್ರದ ಏಕತೆ, ಸಮಾನತೆ, ಸಮಗ್ರತೆ ಮತ್ತು ಸಮೃದ್ಧಿಯನ್ನು ಸಾಧಿಸುವಲ್ಲಿ ಪ್ರಜಾಪ್ರಭುತ್ವದ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತಲೇ ಇರಲಿ, ದೇಶಭಕ್ತಿ ಮತ್ತು ಏಕತೆಯ ಮನೋಭಾವವು ರಾಷ್ಟ್ರದ ಒಳಿತಿಗೆ ಕೊಡುಗೆ ನೀಡಲಿ, ಸುಭದ್ರ, ಸೌಹಾರ್ದ ಹಾಗೂ ಸಮೃದ್ಧ ಕರ್ನಾಟಕ ಹಾಗೂ ಭಾರತವನ್ನು ನಿರ್ಮಿಸಲು ಸಂವಿಧಾನದ ಶಕ್ತಿಯನ್ನು ಬಳಸಿಕೊಂಡು ಮುನ್ನಡೆಯೋಣ. ಮಾದರಿ ಗಣತಂತ್ರ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸೋಣ ಎಂದು ರಾಜ್ಯಪಾಲರು ಹೇಳಿದೆ.
ರಾಜ್ಯ ಸರ್ಕಾರ ಸಿದ್ದಪಡಿಸಿದ ಭಾಷಣ ಓದಿದ ರಾಜ್ಯಪಾಲರು
ಜನವರಿ 22ರಂದು ವಿಧಾನಮಂಡಲದ ವಿಶೇಷ ಅಧಿವೇಶನದ ಆರಂಭದ ವೇಳೆ ರಾಜ್ಯಪಾಲರು ಎರಡೇ ಸಾಲುಗಳ ಭಾಷಣ ಮಾಡಿ ಹೋಗಿದ್ದು ಗದ್ದಲಕ್ಕೆ ಕಾರಣವಾಗಿತ್ತು. ಅದಕ್ಕೂ ಮುನ್ನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ನಿರಾಕರಿಸಿದ್ದು ಮತ್ತು ಸ್ಪೀಕರ್, ಸಭಾಪತಿ ಸೇರಿದಂತೆ ಪ್ರಮುಖರು ರಾಜ್ಯಪಾಲರ ಮನವೊಲಿಸಿದ್ದು ಹಾಗೂ ರಾಜ್ಯಪಾಲರು ಸರ್ಕಾರ ಸಿದ್ದಪಡಿಸಿದ ಭಾಷಣ ಓದದೆ ನಿರ್ಗಮಿಸಿದ್ದು, ಆ ವೇಳೆ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ರಾಜ್ಯಪಾಲರನ್ನು ಅಡ್ಡಗಟ್ಟಿದ್ದು ಎಲ್ಲವೂ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಜಟಾಪಟಿಯನ್ನು ತೆರೆದಿಟ್ಟಿತ್ತು.
ಇದಾಗಿ ಒಂದು ವಾರದ ಬಳಿಕ ಮತ್ತೆ ಸರ್ಕಾರದ ಸಿದ್ದಪಡಿಸಿದ ಭಾಷಣವನ್ನು ರಾಜ್ಯಪಾಲರು ಓದುತ್ತಾರಾ ಎಂಬ ಪ್ರಶ್ನೆ ಮೂಡಿತ್ತು. ಆದರೆ, ರಾಜ್ಯಪಾಲರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೆರೆದವರು ಮತ್ತು ರಾಜ್ಯದ ಜನರನ್ನು ಉದ್ದೇಶಿಸಿ ಸರ್ಕಾರದ ಬರೆದುಕೊಟ್ಟ 11 ಪುಟಗಳ ಭಾಷಣವನ್ನು ಸಂಪೂರ್ಣ ಓದಿದರು. ನಮ್ಮ ಸರ್ಕಾರದ ಕಾರ್ಯಕ್ರಮ ಎಂದು ಭಾಷಣದಲ್ಲಿರುವ ಅಂಶಗಳನ್ನು ಉಲ್ಲೇಖಿಸಿದರು. 20 ನಿಮಿಷದಲ್ಲಿ ತಮ್ಮ ಭಾಷಣ ಮುಗಿಸಿದರು.
ರಾಜ್ಯಪಾಲರ ಭಾಷಣದ ಪೂರ್ಣ ಪಠ್ಯವನ್ನು ಕೆಳಗಡೆ ನೋಡಬಹುದು


