ಮೀಸಲಾತಿ ಕಣ್ಣಗಾಯಕ್ಕೊಂದು ಕನ್ನಡಿ
ಸರಣಿ ಸಂಪಾದಕರು: ವಿಕಾಸ್ ಆರ್ ಮೌರ್ಯ
ಜಾತಿ ಎನ್ನುವುದು ಭಾರತೀಯ ವ್ಯವಸ್ಥೆಯ ಮೂಲ ರಚನಾ ಕ್ರಮ. ಜಾತಿವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳದೆ ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಜಾತಿ ಹೊರತಾದ ಭಾರತೀಯ ಸಮಾಜವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಜಾತಿಯ ಅಡಿಪಾಯದ ಮೇಲೆ ನಿಂತಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಶತಶತಮಾನಗಳಿಂದ ಜಾತಿ ಆಧಾರದಲ್ಲಿ ದಲಿತರನ್ನು ದಮನಿಸಿದ ಪರಿಣಾಮವಾಗಿಯೇ ಇಂದು ಅದೇ ಜಾತಿಯಾಧಾರಿತ ಮೀಸಲಾತಿ ನೀಡಲಾಗುತ್ತಿದೆ. ಮೀಸಲಾತಿ ಅವಕಾಶವಷ್ಟೇ. ಈ ಮೀಸಲಾತಿ ಉದ್ದೇಶವು ಸಾಮಾಜಿಕ ವೈವಿಧ್ಯದಲ್ಲಿ ತಾರತಮ್ಯ ಅನುಭವಿಸುವ ಜನಾಂಗಗಳ ಹಕ್ಕು ರಕ್ಷಿಸುವುದು ಮತ್ತು ಮುಖ್ಯವಾಹಿನಿಗೆ ತರುವುದಾಗಿದೆ.
ಭಾರತದ ಸಾಮಾಜಿಕ ಚರಿತ್ರೆಯನ್ನು ಕಣ್ಣಮುಂದೆ ಹರಡಿಕೊಂಡಾಗ ಎದ್ದು ಕಾಣುವುದು ಒಬ್ಬರು ಇನ್ನೊಬ್ಬರನ್ನು ತುಳಿಯುತ್ತಿರುವ ದೃಶ್ಯ. ಈ ಏಣಿ ಚಿತ್ರದಲ್ಲಿ ಕೆಳಗೆ ತುಳಿಸಿಕೊಳ್ಳುತ್ತಿರುವ ವ್ಯಕ್ತಿಯ ಬದುಕು ಮೇಲಿನವರ ಸೇವೆಗಾಗಿಯೇ ಮೀಸಲಿದೆ. ಈ ಹೊತ್ತಿಗೂ ಈ ಸ್ಥಿತಿ ಬದಲಾಗಿಲ್ಲ. ಹೀಗೆ ವಾಸ್ತವವಾಗಿ ಗೋಚರಿಸುವ ಭಾರತದ ಬದುಕನ್ನು ಬದಲಾಯಿಸುವ ಉಮೇದನ್ನು ಸಾಕಷ್ಟು ಜನ ಚಿಂತಕರು ಪ್ರಯತ್ನಿಸಿದರೂ ಪೂರ್ಣ ಪ್ರಮಾಣದ ಬದಲಾವಣೆ ಸಾಧ್ಯವಾಗಲೇ ಇಲ್ಲ. ಹನ್ನೆರಡನೇ ಶತಮಾನದಲ್ಲಿ ನಡೆದ ಕ್ರಾಂತಿ, ಆಂದೋಲನ, ಜಾತ್ಯತೀತತೆ ನಂತರದ ಕಾಲದಲ್ಲಿ ವಿಫಲಗೊಂಡದ್ದು ಕರ್ನಾಟಕದ ಮಟ್ಟಿಗೆ ದುರಂತವೇ ಸರಿ. ಅದರ ನಡುವೆ ಬ್ರಿಟಿಷರು ಭಾರತದಲ್ಲಿ ಅದನ್ನು ಸಾಧಿಸಲು ಯೋಚಿಸಿದ್ದು. ಅದನ್ನು ಯೋಚಿಸುವಂತೆ ಮಾಡಿದ್ದು ಬಾಬಾಸಾಹೇಬ್ ಅಂಬೇಡ್ಕರರು.. ಇವೆಲ್ಲ ಮುಖ್ಯವಾಗಿ ಕಾಣುತ್ತವೆ. ಅಂಥ ದಾರಿಗಳನ್ನು ಚಾರಿತ್ರಿಕವಾಗಿ ಹೀಗೆ ಗುರುತಿಸಬಹುದಾಗಿದೆ.
ಇದನ್ನೂ ಓದಿ: ಮೀಸಲಾತಿಯ ಮೂಲ, ಋಗ್ವೇದ ಕಾಲ: ವಿಕಾಸ್ ಆರ್. ಮೌರ್ಯ
ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ 1882ರ ಹಂಟರ್ ಆಯೋಗ ನೇಮಕವಾಗಿದ್ದು. ಹೆಚ್ಚು ಕಡಿಮೆ ಅದೇ ಹೊತ್ತಿನಲ್ಲಿ ಮಹಾತ್ಮ ಜ್ಯೋತಿಬಾಪುಲೆ ಅವರ ಕ್ರಾಂತಿಕಾರ ನಿಲುವು. ಅವರ ಉಚಿತ ಶಿಕ್ಷಣ ಮತ್ತು ಸರ್ಕಾರಿ ಕೆಲಸಗಳಲ್ಲಿ ಅಗತ್ಯ ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದು ಮುಖ್ಯವಾದ ಹೆಜ್ಜೆಯಾಗಿದೆ.
1891ರಲ್ಲಿ ಸರ್ಕಾರಿ ಕೆಲಸಗಳಲ್ಲಿ ಮೀಸಲಾತಿ ಬೇಕೆಂಬ ಬೇಡಿಕೆಯೂ 1891ರ ಆರಂಭದಲ್ಲೇ ಕೇಳಿಬಂತು. ಟ್ರ್ಯಾವಂಕೂರು ರಾಜಮನೆತನದ ಆಡಳಿತದಲ್ಲಿ ಸ್ಥಳೀಯರಲ್ಲದವರನ್ನು ಕೆಲಸಗಳಲ್ಲಿ ನೇಮಕ ಮಾಡಿಕೊಂಡು ಸ್ಥಳೀಯ ಪ್ರತಿಭೆಗಳನ್ನು ಕಡೆಗಣಿಸಲಾಯಿತೆಂದು ಹೋರಾಟ ಮಾಡಲಾಯಿತು.
1901ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ರಾಜ ಶಾಹು ಮಹಾರಾಜರ ಆಡಳಿತದಲ್ಲಿ ಮೀಸಲಾತಿಗಳನ್ನು ಜಾರಿಗೊಳಿಸಲಾಯಿತು. ಅಷ್ಟೊತ್ತಿಗಾಗಲೇ ಬರೋಡಾ ಮತ್ತು ಮೈಸೂರು ಸಂಸ್ಥಾನಗಳಲ್ಲಿ ಮೀಸಲಾತಿಯ ಜಾರಿಯಲ್ಲಿತ್ತು.
1908ರ ಹೊತ್ತಿಗೆ ಹಲವಾರು ಜಾತಿಗಳು ಮತ್ತು ಸಮುದಾಯಗಳಿಗೆ ಬ್ರಿಟಿಷ್ ಆಡಳಿತದಲ್ಲಿ ಪ್ರಾತಿನಿದ್ಯ ನೀಡಲು ಮೀಸಲಾತಿ ಆರಂಭವಾಯಿತು. ಮುಂದುವರೆದು ಇದಕ್ಕೆ ಪೂರಕವಾಗಿ 1909ರ ಮಾಂಟೆಗೋ ಚೆಲ್ಸ್-ಪೊರ್ಡ್ ರಿಫಾರ್ಮ್ ಮೂಲಕ ಆದ ಸುಧಾರಣೆಗಳು, 1919ರಲ್ಲಿ ಗವರ್ನ್ಮೆಂಟ್ ಆಪ್ ಇಂಡಿಯಾ ಆಕ್ಟ್ ಅದರ ಮುಂದುವರಿದ ರೂಪಗಳು ಮುಖ್ಯ ಅಡಿಗಲ್ಲಾಗತೊಡಗಿದವು.
1921ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಸರ್ಕಾರಿ ಆದೇಶವೊಂದನ್ನು ಹೊರಡಿಸಿ ಬ್ರಾಹ್ಮಣೇತರರರಿಗೆ ಶೇ.44%, ಬ್ರಾಹ್ಮಣರಿಗೆ ಶೇ 16%, ಮುಸಲ್ಮಾನರಿಗೆ ಶೇ 16%, ಆಂಗ್ಲೋ ಇಂಡಿಯನ್ನರಿಗೆ ಶೇ 16% ಮತ್ತು ಪರಿಶಿಷ್ಟ ಜಾತಿಯವರಿಗೆ ಶೇ 8% ಮೀಸಲಾತಿಯನ್ನು ಪ್ರಕಟಿಸಿತು.
ಪೂನಾ ಒಪ್ಪಂದದ ನಂತರ 1935 ರ ಬ್ರಿಟಿಷ್ ಇಂಡಿಯಾ ಕಾಯ್ದೆಯಲ್ಲಿ ನಿಮ್ನ ವರ್ಗಗಳಿಗೆ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ರಾಜಕೀಯವಾಗಿ ಮೀಸಲು ಕ್ಷೇತ್ರಗಳನ್ನು ನೀಡಲಾಯಿತು.
ಮುಂದೆ 1942ರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟವನ್ನು ರಚಿಸಿ ದಲಿತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಉದ್ಯೋಗಗಳಲ್ಲಿ ಪರಿಶಿಷ್ಟರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
1946ರ ಕ್ಯಾಬಿನೆಟ್ ಮಿಶನ್ ಆಫ್ ಇಂಡಿಯಾ ತನ್ನ ನಿಯೋಗದಲ್ಲಿ ಆಯಾ ಜನಸಂಖ್ಯೆ ಅನುಪಾತಕ್ಕನುಗುಣವಾಗಿ ಪ್ರಾತಿನಿಧ್ಯ ನೀಡಲು ಆಗ್ರಹಿಸಿ ಹಲವಾರು ಶಿಪಾರಸ್ಸುಗಳನ್ನು ಮಾಡಿತು.
ಇದರ ಜತೆಗೆ ಕರ್ನಾಟಕದ ಮೀಸಲಾತಿಯ ಚರಿತ್ರೆಯೇ ಮುಖ್ಯವಾದ ಅಧ್ಯಾಯ. ಅದರಲ್ಲೂ ಆಧುನಿಕ ಕರ್ನಾಟಕದ ಚರಿತ್ರೆಯಲ್ಲಿ ವೈಯಕ್ತಿಕವಾಗಿ ಸಾಮಾಜಿಕ ಸಮಾನತೆ ಸಾಧಿಸಲು ಪ್ರಯತ್ನಿಸಿದ್ದು, ಅದರ ಜತೆಗೆ ಸಾಮೂಹಿಕವಾಗಿ ಅದನ್ನು ಸಾಧಿಸಲು ಸಾಗಿದ್ದು ಕರ್ನಾಟಕದಲ್ಲಿ ಮಹತ್ವದ ಹೆಜ್ಜೆ. ಕುದ್ಮಲ್ ರಂಗರಾವ್‌ರಿಂದ ಹಿಡಿದುಕೊಂಡು ಕರ್ನಾಟಕದಲ್ಲಿ ನಡೆದ ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ನಡುವಿನ ಘರ್ಷಣೆಗಳು, ನಾಲ್ವಡಿಯವರ ಕಠಿಣ ತೀರ್ಮಾನಗಳು, ಪ್ರಜಾಪ್ರತಿನಿಧಿ ನಿರ್ಧಾರಗಳು ದಮನಿತ ಸಮುದಾಯಗಳ ಮೀಸಲಾತಿ ಬಗೆಗೆ ಸುವರ್ಣ ಕಾಲವೆಂದೇ ಗುರುತಿಸಬಹುದಾಗಿದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಾಬಾ ಸಾಹೇಬರು ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಮೇಲೆ ತಳ ಸಮುದಾಯಗಳ ಪ್ರಾತಿನಿಧ್ಯಕ್ಕೆ ಅಧಿಕೃತ ಮುದ್ರೆ ಬಿತ್ತು. ಭಾರತದ ಸಂವಿಧಾನವು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಸಂವಿಧಾನಬದ್ಧವಾಯಿತು. ಕೇಂದ್ರ ಸರ್ಕಾರದಲ್ಲಿ ಪರಿಶಿಷ್ಟ ಜಾತಿಗಳಿಗೆ 15% ಮತ್ತು ಪರಿಶಿಷ್ಟ ಪಂಗಡಗಳಿಗೆ 7.5% ಮೀಸಲಾತಿ ನೀಡಲಾಗಿದೆ. ಜನಸಂಖ್ಯೆಗಳಿಗನುಗುಣವಾಗಿ ಪ್ರತಿ ರಾಜ್ಯದಲ್ಲಿಯೂ ಇದರ ಪ್ರಮಾಣ ವ್ಯತ್ಯಾಸವಾಗುತ್ತದೆ. ಕರ್ನಾಟಕದಲ್ಲಿ ಕ್ರಮವಾಗಿ 15% ಮತ್ತು 3%. ರಾಜಕೀಯ ಮೀಸಲಾತಿಯು ಸಂವಿಧಾನ ಸಭೆಯಲ್ಲಿ ತೀರ್ಮಾನವಾದಂತೆ ಪ್ರತಿ 10 ವರ್ಷಗಳಿಗೊಮ್ಮೆ ಪುನರ್ ಪರಿಶೀಲನೆಗೆ ಒಳಗೊಳ್ಳುವಂತಾಯಿತು.
ಹೀಗೆ ಸ್ವತಂತ್ರ ಭಾರತದಲ್ಲಿ ದಲಿತರು ಮೀಸಲಾತಿ ಪಡೆದರು. ಆದರೆ 1950 ರಲ್ಲಿ ಜಾರಿಯಾದ ಭಾರತದ ಸಂವಿಧಾನದಲ್ಲಿ ದಲಿತರಿಗೆ ನೀಡಲಾದ ಮೀಸಲಾತಿಯನ್ನು ಒಂದೇ ವರ್ಷದಲ್ಲಿ ಅಂದರೆ 1951 ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಯಿತು. ಆದಾಗ್ಯೂ ಸಂವಿಧಾನಕ್ಕೆ ತರಲಾದ ಮೊಟ್ಟ ಮೊದಲನೇ ತಿದ್ದುಪಡಿಯಿಂದ ಅದನ್ನು ಉಳಿಸಿಕೊಳ್ಳಲಾಯಿತು.
ದಲಿತರ ಮೀಸಲಾತಿ: ಇಂದಿನ ಸ್ಥಿತಿಗತಿ
ದಲಿತರಿಗೆ ಸರ್ಕಾರದ ಎಲ್ಲಾ ವಿಭಾಗಗಳಲ್ಲೂ ಮೀಸಲಾತಿ ಇದೆಯೇ? ಎಂಬ ಪ್ರಶ್ನೆಯೊಂದಿಗೆ ಮೀಸಲಾತಿಯ ಫಲಾಫಲಗಳನ್ನು ಗಮನಿಸೋಣ. ಇದಕ್ಕೆ ಉತ್ತರ ಇಲ್ಲ. ಉನ್ನತ ಸೆಕ್ರೆಟೇರಿಯಟ್ ದರ್ಜೆಯ ಹುದ್ದೆಗಳಲ್ಲಿ, ನ್ಯಾಯಾಧೀಶರ ಹುದ್ದೆಗಳಲ್ಲಿ, ಸ್ವತಂತ್ರ ಸಂಸ್ಥೆಗಳಲ್ಲಿ, ಮುಜರಾಯಿ ಇಲಾಖೆಯ ಅರ್ಚಕರ ಹುದ್ದೆಗಳಲ್ಲಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಪದವಿಗಳಲ್ಲಿ ಮೀಸಲಾತಿ ಅನ್ವಯಿಸುವ ಪದ್ಧತಿ ಇಲ್ಲ.
ಮಾರ್ಚ್ 2011 ರಲ್ಲಿ ಪ್ರಧಾನಮಂತ್ರಿ ಕಛೇರಿಯ ರಾಜ್ಯ ಸಚಿವರಾಗಿದ್ದ ವಿ. ನಾರಾಯಣಸ್ವಾಮಿಯವರಿಗೆ ಕೇಂದ್ರ ಸರ್ಕಾರದ ಕಛೇರಿ ಮತ್ತು ಇಲಾಖೆಗಳಲ್ಲಿ ಪ.ಜಾ ಮತ್ತು ಪ.ಪಂ ನೌಕರರ ಪ್ರಮಾಣದ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ನೀಡಿದ ವರದಿ ಪ್ರಕಾರ 149 ಸೆಕ್ರಟೇರಿಯಟ್ ದರ್ಜೆ ಅಧಿಕಾರಿಗಳಲ್ಲಿ ಒಬ್ಬರೂ ಪರಿಶಿಷ್ಟ ಜಾತಿಯವರಿಲ್ಲ. ಕೇವಲ 4 ಜನ ಮಾತ್ರ ಪರಿಶಿಷ್ಟ ಪಂಗಡದವರಿದ್ದಾರೆ. 108 ಹೆಚ್ಚುವರಿ ಸೆಕ್ರೆಟರಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂ ದವರು ತಲಾ ಇಬ್ಬರಿದ್ದಾರೆ. 477 ಜಂಟಿ ಸೆಕ್ರೆಟೇರಿಯಟ್ ಹುದ್ದೆಗಳಲ್ಲಿ 31 ಪ.ಜಾ ಮತ್ತು 15 ಜನ ಪ.ಪಂದವರಿದ್ದಾರೆ. 590 ನಿರ್ದೇಶಕರುಗಳ ಹುದ್ದೆಯಲ್ಲಿ 17 ಪ.ಜಾಗಳು ಮತ್ತು 7 ಪ.ಪಂದವರಿದ್ದಾರೆ.
ಇನ್ನು ಮೀಸಲಾತಿ ಇರುವ ಕೇಂದ್ರೀಯ 73 ಇಲಾಖೆಗಳಲ್ಲಿ 25,037 ಪ.ಜಾಗಳ ಬ್ಯಾಕ್‌ಲಾಗ್ ಹುದ್ದೆಗಳು ಖಾಲಿಯಿದ್ದವು. ಪ್ರೊಮೋಷನ್ ಹುದ್ದೆಗಳಲ್ಲಿ 4,518 ಖಾಲಿ ಉಳಿದಿವೆ. ಅದೇ ರೀತಿ ಪ.ಪಂಗಳ 28,173 ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಉಳಿದಿದ್ದು 7,416 ಬಡ್ತಿ ಹುದ್ದೆಗಳು ನೆನೆಗುದಿಗೆ ಬಿದ್ದಿವೆ. ಒಟ್ಟು ಕೇಂದ್ರ ಸರ್ಕಾರದ ನೌಕರರಲ್ಲಿ 17% ಪ.ಜಾಗಳು ಮತ್ತು 7.4% ಪಪಂಗಳು.
ಇವರಲ್ಲಿ ಗ್ರೂಪ್ ‘ಎ’ ಅಧಿಕಾರಿಗಳ ಪ್ರಮಾಣ ಕ್ರಮವಾಗಿ 11.1% ಮತ್ತು 4.6%. ಗ್ರೂಪ್ ‘ಬಿ’ ಹುದ್ದೆಗಳಲ್ಲಿ 14.3% ಮತ್ತು 5.5%. ಗ್ರೂಪ್ ‘ಸಿ’ ಹುದ್ದೆಗಳಲ್ಲಿ 16% ಮತ್ತು 7.8%. ಗ್ರೂಪ್ ‘ಡಿ’ ಹುದ್ದೆಗಳಲ್ಲಿ 19.3% ಮತ್ತು 7%. ಈಗ ನಮಗೆ ಪ.ಜಾ ಮತ್ತು ಪ.ಪಂಗಳಿಗೆ ದಕ್ಕಿರುವ ಮೀಸಲಾತಿಯ ಪ್ರಮಾಣ ಅರ್ಥವಾಗುತ್ತದೆ.
ಇಲ್ಲಿಯೂ ಸಹ ಶ್ರೇಣಿಕರಣ ಎದ್ದು ಕಾಣುತ್ತಿದೆ. ಆಶ್ಚರ್ಯಕರವೆಂದರೆ 2011 ರಲ್ಲಿಯೂ ಸಹ ಸಫಾಯಿ ಕರ್ಮಾಚಾರಿಗಳ ಪ್ರಮಾಣದಲ್ಲಿ ಪ.ಜಾಗಳ ಸಂಖ್ಯೆ 40% ಇದೆ. ಮೇಲ್ನೋಟಕ್ಕೆ ನೋಡಿದರೆ ದಲಿತರಿಗೆ ಮೀಸಲಾತಿ ಪ್ರಮಾಣ ಸಿಕ್ಕಂತೆ ಕಾಣುತ್ತದೆ. ಆದರೆ ಅದರಲ್ಲಿನ ಶ್ರೇಣೀಕರಣವೂ ಕಾಣುತ್ತದೆ. ಗ್ರೂಪ್ ‘ಎ’ ಹುದ್ದೆಗಳಲ್ಲಿ ಇನ್ನೂ ಸಂಪೂರ್ಣ ಪ್ರಮಾಣದ ಮೀಸಲಾತಿ ಸಿಕ್ಕಿಲ್ಲ. ಇದು ಸರ್ಕಾರಿ ಕ್ಷೇತ್ರದಲ್ಲಿನ ಮೀಸಲಾತಿ ಹಣೆಬರಹ.
ಇದನ್ನೂ ಓದಿ: ಮಹಿಳಾ ಮೀಸಲಾತಿ: ವಾಸ್ತವ ಮತ್ತು ವೈರುಧ್ಯಗಳು – ಭಾರತೀದೇವಿ.ಪಿ
ಮತ್ತೊಂದು ಆಶ್ಚರ್ಯಕರ ವಿಚಾರವೊಂದಿದೆ. ಅದೇನೆಂದರೆ ಭಾರತದಲ್ಲಿ ಈಗಿರುವ ಮೀಸಲಾತಿ ಪ್ರಮಾಣವೇ ಚಿಲ್ಲರೆಯಷ್ಟು. 2012 ರಲ್ಲಿದ್ದ ಒಟ್ಟು 856 ಲಕ್ಷ ನೌಕರಿಗಳಲ್ಲಿ ಶೇ. 70 ರಷ್ಟು (600 ಲಕ್ಷ) ಖಾಸಗಿ ಕ್ಷೇತ್ರದಲ್ಲಿದ್ದರು. (ಕೃಷಿ ಮತ್ತು ಕೃಷಿಯೇತರ ಉದ್ಯಮಿ ಮತ್ತು ಕೂಲಿ ಕಾರ್ಮಿಕರನ್ನು ಬಿಟ್ಟು) ಕೇವಲ 30% ಅಂದರೆ 256 ಲಕ್ಷ ನೌಕರಿಗಳು ಮಾತ್ರ ಸಾರ್ವಜನಿಕ ಕ್ಷೇತ್ರದವಾಗಿದ್ದವು. ಅದರಲ್ಲಿ 40% ನಷ್ಟು ನೌಕರಿಗಳು ತಾತ್ಕಾಲಿಕವಾದವು. ಇದು ಮೀಸಲಾತಿಯ ಕತೆ. ಕೇವಲ 154 ಲಕ್ಷ ನೌಕರಿಗಳು ಮಾತ್ರ ಮೀಸಲಾತಿ ವ್ಯಾಪ್ತಿಗೆ ಒಳಪಡುತ್ತವೆ. ಅಂದರೆ ಒಟ್ಟಾರೆ ಭಾರತದ ನೌಕರಿಗಳಲ್ಲಿ (ಕೃಷಿ, ಕೃಷಿಯೇತರ, ಖಾಸಗಿ, ದಿನಗೂಲಿ ಎಲ್ಲಾ ಸೇರಿ) ಕೇವಲ 18% ರಷ್ಟು ನೌಕರಿಗಳು ಮಾತ್ರ ಮೀಸಲಾತಿ ವ್ಯಾಪ್ತಿಗೆ ಒಳಪಡುತ್ತವೆ.
ದಲಿತರ ಬಡತನ ಪ್ರಮಾಣ ವಿಚಾರಕ್ಕೆ ಬಂದಾಗ 2011-12 ರ ಎನ್‌ಎಸ್‌ಎಸ್‌ಒ ಸಮೀಕ್ಷೆ ಪ್ರಕಾರ ಪ.ಜಾಗಳು ರೈತರಲ್ಲಿ 29%, ಕೃಷಿಯೇತರ ನೌಕರರಲ್ಲಿ 24%, ದಿನಗೂಲಿ ನೌಕರರಲ್ಲಿ 43% ಬಡತನ ರೇಖೆಗಿಂದ ಕಡಿಮೆ ಇದ್ದಾರೆ. ಇದೇ ರೀತಿ ನಗರ ಪ್ರದೇಶಗಳಲ್ಲಿ ಉದ್ಯಮ ವಲಯದಲ್ಲಿ 23% ಮತ್ತು ದಿನಗೂಲಿ ನೌಕರರಲ್ಲಿ 38% ಪ.ಜಾಗಳು ಬಡವರಾಗಿದ್ದಾರೆ. ಆದರೆ ಖಾಯಂ ಉದ್ಯೋಗಿಗಳಲ್ಲಿ ಕೇವಲ 12% ರಿಂದ 13% ಪ.ಜಾಗಳು ಬಡವರಾಗಿದ್ದಾರೆ. ಇದರ ಅರ್ಥ ಖಾಯಂ ಉದ್ಯೋಗಗಳು ಮಾತ್ರ ಪ.ಜಾಗಳನ್ನು ಬಡತನದಿಂದ ಮೇಲೆತ್ತುತ್ತವೆ.
ಆದರೆ 1990 ರಲ್ಲಿ ಖಾಸಗೀಕರಣ, ಜಾಗತೀಕರಣ ಮತ್ತು ಉದಾರೀಕರಣ ನೀತಿಗಳು ಜಾರಿಯಾದಾಗಿನಿಂದ ಖಾಯಂ ಉದ್ಯೋಗಗಳನ್ನೇ ನುಂಗಿ ನೀರು ಕುಡಿಯುತ್ತಿವೆ. ಈ ಕಾರಣಕ್ಕಾಗಿಯೇ 2012 ರಲ್ಲಿ ದೇಶದ ನಿರುದ್ಯೋಗ ದರ 5.86% ಇತ್ತು. ಅದರಲ್ಲಿ ಪ.ಜಾಗಳದ್ದು 7.3%, ಹಿಂದುಳಿದ ಜಾತಿಗಳದ್ದು 5.2% ಮತ್ತು ಮೇಲ್ಜಾತಿಗಳದ್ದು 4.3%. ಸದ್ಯ ಬಾರತದ ನಿರುದ್ಯೋಗ ಸ್ಥಿತಿಯಲ್ಲಿ ಅದರ ಪ್ರಮಾಣ ಇನ್ನೆಲ್ಲಿ ಮುಟ್ಟಿರಬಹುದು ಊಹಿಸಿಕೊಳ್ಳಿ.
ಒಟ್ಟಾರೆ ಮೀಸಲಾತಿ ಪದ್ಧತಿ ದಲಿತರಲ್ಲಿನ ಕೆಲವರನ್ನು ಮಾತ್ರ ಆರ್ಥಿಕವಾಗಿ ಮೇಲೆತ್ತಿದೆ. ಇನ್ನೂ 80% ನಷ್ಟು ದಲಿತರಿಗೆ ಮೀಸಲಾತಿ ದಕ್ಕಿಯೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೀಸಲಾತಿ ವಿರುದ್ಧ ಹೋರಾಡುತ್ತಿರುವ ಮನಸ್ಥಿತಿಗಳು ‘ದೇಶದ ಪ್ರಗತಿಯೆಂದರೆ ಭಾರತದ ಸರ್ವ ಜನಾಂಗಗಳ ಪ್ರಗತಿ’ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆ ಸರ್ವ ಜನಾಂಗಗಳಲ್ಲಿ ದಲಿತರೂ ಇದ್ದಾರೆ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಮೀಸಲಾತಿ ಪರಿಕಲ್ಪನೆಯನ್ನು ಇನ್ನೂ ಗಟ್ಟಿಗೊಳಿಸಿ ದೇಶದ ಪ್ರಗತಿಗೆ ಸಹಕರಿಸಬೇಕಿದೆ.


