ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ನೀಡಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಮತ್ತೆ ನೀಡಬೇಕು. ಜತೆಗೆ ಅಧ್ಯಕ್ಷರ ಘನತೆ, ಗೌರವಗಳನ್ನು ಮರಳಿ ಸ್ಥಾಪಿಸಬೇಕು ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಕೋರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮಹೇಶ್ ಜೋಶಿ, ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಮರಳಿ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರಕಾರದ ನಡುವಿನ ಸೌಹಾರ್ದವನ್ನು ಕಾಪಾಡಬೇಕೆಂದು ಏಳು ಕೋಟಿ ಕನ್ನಡಿಗರ ಪರವಾಗಿ ವಿನಂತಿಸುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪರಿಷತ್ ಅಧ್ಯಕ್ಷರಿಗೆ ಇತಿಹಾಸದಲ್ಲಿಯೇ ಮೊದಲ ಬಾರಿ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ನೀಡಲಾಗಿದೆ. ಸಚಿವ ಸ್ಥಾನಮಾನಕ್ಕೆ ದೊರಕುವ ಇಂಧನ ಭತ್ಯೆ, ನೀರು, ವಿದ್ಯುತ್ ಸೌಲಭ್ಯ, ಸಿಬ್ಬಂದಿ ನೇಮಕಾತಿ ಮುಂತಾದ ಸೌಲಭ್ಯಗಳನ್ನು ಬಳಸಿಕೊಳ್ಳದೇ, ಕೇವಲ ಶಿಷ್ಟಾಚಾರ ಹಾಗೂ ಕನ್ನಡದ ಹಿತದೃಷ್ಠಿಯಿಂದ ಅನಿವಾರ್ಯತೆ ಬಂದಾಗ ಮಾತ್ರ ಕೆಲವು ಸೌಲಭ್ಯಗಳನ್ನು ಬಳಸಿಕೊಂಡಿದ್ದು, ಇದರಿಂದ ಕಸಾಪಗೆ ಯಾವುದೇ ಆರ್ಥಿಕ ಹೊರೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಸಾಪ ಅಧ್ಯಕ್ಷರ ಚುನಾವಣೆಯ ಸಂದರ್ಭದಿಂದಲೂ, ಹಿರಿಯ ಸಾಹಿತಿಗಳಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್, ಜಯಪ್ರಕಾಶ ಗೌಡ, ಮೀರಾ ಶಿವಲಿಂಗಯ್ಯ, ಸಿ.ಕೆ.ರಾಮೇಗೌಡ, ಆರ್.ಜಿ.ಹಳ್ಳಿ ನಾಗರಾಜ್, ವಿಮಲಾ ಕೆ.ಎಸ್., ಸುನಂದ ಜಯರಾಂ ಮುಂತಾದವರ ಒಂದು ಗುಂಪು ನನ್ನ ಬಗ್ಗೆ ಅಸಹನೆಯಿಂದ ಯಾವಾಗಲೂ ನನ್ನ ವಿರುದ್ಧ ವೈಯಕ್ತಿಕವಾಗಿ ವಿರೋಧ ಮಾಡುತ್ತಾ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿದೆ ಎಂದು ಮಹೇಶ್ ಜೋಶಿ ದೂರಿದ್ದಾರೆ.
ಸಚಿವ ಸ್ಥಾನಮಾನವನ್ನು ಹಿಂಪಡೆಯುವಾಗ ರಾಜ್ಯ ಸರಕಾರ ಸೌಜನ್ಯಕ್ಕಾದರೂ ಕಸಾಪ ಅಧ್ಯಕ್ಷರ ಪ್ರತಿಕ್ರಿಯೆ ಕೇಳದೆ ಏಕಪಕ್ಷೀಯವಾಗಿ ಕ್ರಮಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಸಚಿವ ಸ್ಥಾನಮಾನ ವಾಪಸ್ ಪಡೆದಿದ್ದ ಸರಕಾರ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನ ಮತ್ತು ಸವಲತ್ತುಗಳನ್ನು ರಾಜ್ಯ ಸರ್ಕಾರವು ಮೇ 31ರಂದು ಹಿಂದಕ್ಕೆ ಪಡೆದಿತ್ತು.
ಮಹೇಶ್ ಜೋಶಿ ಅವರ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕೆಲ ಸಾಹಿತಿಗಳು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಸಾಹಿತ್ಯ ಪರಿಷತ್ತಿನ ಸ್ಥಾನದಿಂದ ಅವರನ್ನು ಇಳಿಸಬೇಕು ಎಂದು ಕೋರಿದ್ದರು. ಅದರ ಬೆನ್ನಲ್ಲೇ ರಾಜ್ಯ ಸರ್ಕಾರವು ಈ ಆದೇಶ ಹೊರಡಿಸಿತ್ತು.
ನಾಡೋಜ ಡಾ. ಮಹೇಶ್ ಜೋಶಿ ಅವರಿಗೆ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನ ಹಾಗೂ ಸವಲತ್ತುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ-2 ಬಾಣದರಂಗಯ್ಯ ಎನ್.ಆರ್. ಅವರು ಈ ಆದೇಶ ಹೊರಡಿಸಿದ್ದರು.
ಇರಾನ್ ಮೇಲೆ ಇಸ್ರೇಲ್ ದಾಳಿ; ಭಾರತೀಯರಿಗೆ ತುರ್ತು ಪ್ರಯಾಣ ಸಲಹೆ ನೀಡಿದ ಭಾರತ!


