ಅಕ್ಟೋಬರ್ 10ರಂದು ಬಿಡುಗಡೆಯಾಗಲಿರುವ ರಜನಿಕಾಂತ್ ಅಭಿನಯದ ‘ವೇಟ್ಟೈಯಾನ್’ ಸಿನಿಮಾದ ಡೈಲಾಗ್‌ಗಳ ವಿರುದ್ಧ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ನಿಗಮದ ನಿವೃತ್ತ ನಿರ್ವಾಹಕರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ನಲ್ಲಿರುವ ಡೈಲಾಗ್‌ಗಳು ಪೊಲೀಸರ ಕಾನೂನುಬಾಹಿರ ಹತ್ಯೆ ಅಥವಾ ಎನ್‌ಕೌಂಟರ್‌ಗಳನ್ನು ವೈಭವೀಕರಿಸುತ್ತದೆ ಎಂದು ಪಳನಿವೇಲು ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಈ ಸಂಬಂಧ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಪೊಲೀಸರ ಕಾನೂನು ಬಾಹಿರ ಕ್ರಮಗಳು, ಎನ್‌ಕೌಂಟರ್ ಹೆಸರಿನಲ್ಲಿ ಅವರು ಮಾಡುವ ಹತ್ಯೆಗಳನ್ನು “ಎನ್‌ಕೌಂಟರ್ ಕೇವಲ ಶಿಕ್ಷೆಯಲ್ಲ, ಅದು ಅಪರಾಧಗಳನ್ನು ತಡೆಗಟ್ಟುವ ಕ್ರಮ” ಎಂಬ ಸಿನಿಮಾದ ಡೈಲಾಗ್ ಮೂಲಕ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅದು ‘ಅಸಂವಿಧಾನಿಕ’ ದೃಷ್ಟಿಕೋನವಾಗಿದೆ. ಕಾನೂನು ಬಾಹಿರ ಕ್ರಮಗಳನ್ನು ಗೌರವಿಸಲು ಪ್ರೇಕ್ಷಕರನ್ನು ಪ್ರೋತ್ಸಾಹಿಸುತ್ತದೆ ಎಂದು ಕಂಡಕ್ಟರ್ ಪಳನಿವೇಲು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.
ತಮಿಳುನಾಡು ಸರ್ಕಾರ, ವೇಟ್ಟೈಯಾನ್ ನಿರ್ಮಾಪಕರಾದ ಲೈಕಾ ಪ್ರೊಡಕ್ಷನ್ಸ್ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ವಿರುದ್ಧ ಅರ್ಜಿ ಸಲ್ಲಿಸಿರುವ ಪಳನಿವೇಲು ಅವರು, ವಿವಾದಾತ್ಮಕ ಡೈಲಾಗ್‌ಗಳನ್ನು ತೆಗೆದು ಹಾಕುವವರೆಗೆ ಸಿನಿಮಾ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು. ಸಿನಿಮಾಗೆ ನೀಡಿರುವ ‘ಯುಎ’ ಸರ್ಟಿಫಿಕೇಟ್ ಹಿಂಪಡೆದು ‘ಎ’ ಸರ್ಟಿಫಿಕೇಟ್ ನೀಡಲು ಸಿಬಿಎಫ್‌ಸಿ ಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ. ಮಧುರೈ ಪೀಠ ಮೂವರಿಗೂ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದೆ.
ವೇಟ್ಟೈಯಾನ್ ಸಿನಿಮಾದ ಮೊದಲ ಟೀಸರ್ ಸೆಪ್ಟೆಂಬರ್ 20ರಂದು ಬಿಡುಗಡೆಯಾಗಿತ್ತು. ಅಕ್ಟೋಬರ್ 2 ರಂದು ಅಂತಿಮ ಟ್ರೇಲರ್ ಬಿಡುಗಡೆಗೊಳಿಸಲಾಗಿದೆ. ಚಿತ್ರವು ಅಕ್ಟೋಬರ್ 10 ರಂದು ತೆರೆಗೆ ಬರಲಿದೆ. ರಜನಿಕಾಂತ್, ಮಂಜು ವಾರಿಯರ್, ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ದುಶಾರ ವಿಜಯನ್ ಸಿನಿಮಾದಲ್ಲಿ ನಟಿಸಿದ್ದಾರೆ.
ಸಿನಿಮಾದಲ್ಲಿ ರಜನಿಕಾಂತ್ ಅವರ ‘ಪ್ರಸಿದ್ಧ ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂಬ ಪಾತ್ರದ ಕುರಿತು ಪಳನಿವೇಲು ತನ್ನ ಅರ್ಜಿಯಲ್ಲಿ ಪ್ರಶ್ನೆ ಎತ್ತಿದ್ದಾರೆ. ಎನ್‌ಕೌಂಟರ್ ಎನ್ನುವುದು ಅಪರಾಧಿಗಳು ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದಾಗ ಗುಂಡು ಹಾರಿಸುವ ಮೂಲಕ ಅಥವಾ ಗುಂಡಿಕ್ಕಿ ಕೊಲ್ಲುವ ಮೂಲಕ ಆತ್ಮರಕ್ಷಣೆ ಮಾಡುವ ಪ್ರಕ್ರಿಯೆ. ಒಬ್ಬ ಪೋಲೀಸ್ ತನ್ನ ಸೇವಾವಧಿಯಲ್ಲಿ ಒಂದು ಅಥವಾ ಎರಡು ಬಾರಿ ಇಂತಹ ಅಹಿತಕರ ಘಟನೆಯನ್ನು ಎದುರಿಸಬಹುದು ಅಥವಾ ‘ಎನ್ಕೌಂಟರ್’ ಮಾಡಬಹುದು. ಯಾವುದೇ ಪೊಲೀಸರು ‘ಹೆಸರಾಂತ ಎನ್‌ಕೌಂಟರ್ ಸ್ಪೆಷಲಿಸ್ಟ್’ ಆಗಲು ಸಾಧ್ಯವಿಲ್ಲ” ಎಂದಿದ್ದಾರೆ.
“ಸಿನಿಮಾದ ಡೈಲಾಗ್‌ಗಳು ಸಂವಿಧಾನ ವಿರೋಧಿ ನೀತಿಯನ್ನು ವೈಭವೀಕರಿಸುತ್ತದೆ. ಇದಕ್ಕೆ ಅನುಮತಿ ನೀಡಿದರೆ, ಸಂವಿಧಾನದ ಮೌಲ್ಯಗಳು ಮನೋರಂಜನೆಯ ವಸ್ತುವಾಗಿ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಕುತ್ತು ತರಬಹುದು. ಅಸಂವಿಧಾನಿಕ ಡೈಲಾಗ್‌ಗಳ ಪ್ರದರ್ಶನಕ್ಕೆ ಅನುಮತಿಸಿದರೆ, ಜನರು ನ್ಯಾಯಾಂಗ ವಿಚಾರಣೆಯ ಮೂಲಕ ಅಪರಾಧಿಯನ್ನು ಕಂಬಿ ಹಿಂದೆ ತಳ್ಳುವ ಬದಲು, ಪ್ರತಿ ಕ್ರಿಮಿನಲ್ ಪ್ರಕರಣದಲ್ಲಿ ‘ಎನ್‌ಕೌಂಟರ್’ ಪರಿಹಾರವನ್ನು ಕೇಳಬಹುದು. ಆ ಸಂದರ್ಭದಲ್ಲಿ, ಅಪರಾಧಿಯು ಭಾರತದ ಸಂವಿಧಾನದ 21 ನೇ ವಿಧಿಯಡಿ ನೀಡಿರುವ ರಕ್ಷಣೆಯ ಮೂಲಭೂತ ಹಕ್ಕನ್ನು ಕಳೆದುಕೊಳ್ಳುವ ಮೂಲಕ ರಕ್ಷಣೆಯಿಲ್ಲದವನಾಗುತ್ತಾನೆ” ಎಂದು ಪಲನಿವೇಳು ತನ್ನ ಅರ್ಜಿಯಲ್ಲಿ ವಿವರಿಸಿದ್ದಾರೆ.
ರಜನಿಕಾಂತ್ ಮತ್ತು ಕಾಲಿವುಡ್ ಚಲನಚಿತ್ರಗಳಲ್ಲಿ ನಾಯಕನ ಆರಾಧನೆಯನ್ನು ಉತ್ತೇಜಿಸುವ ಪ್ರವೃತ್ತಿಯನ್ನು ಪಳನಿವೇಲು ಟೀಕಿಸಿದ್ದು, “ಸಿನಿಮಾವನ್ನು ಕೇವಲ ಮನರಂಜನೆ ಎಂದು ನಾವು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಸಿನೆಮಾದಲ್ಲಿನ ವೈಭವೀಕರಣವು ನೈತಿಕ, ಕಲಾತ್ಮಕ ಮತ್ತು ಸಾಮಾಜಿಕ ಪ್ರಶ್ನೆಗಳನ್ನು ಹುಟ್ಟುಹಾಕುವ ಒಂದು ಸಂಕೀರ್ಣ ವಿದ್ಯಮಾನವಾಗಿದೆ. ಹಿಂಸಾಚಾರದಲ್ಲಿ ತೊಡಗುವ ಪಾತ್ರಗಳನ್ನು, ಆಕ್ರಮಣಕಾರಿ ಕ್ರಮಗಳ ಹೊರತಾಗಿಯೂ ವೀರರು, ಕೆಚ್ಚೆದೆಯ, ಪ್ರಶಂಸನೀಯ ಮತ್ತು ‘ಜೀವನಕ್ಕಿಂತ ದೊಡ್ಡವರು’ ಎಂದು ಚಿತ್ರಿಸಲಾಗುತ್ತಿದೆ. ವೇಟ್ಟೈಯಾನ್ ಸಿನಿಮಾದಲ್ಲೂ ‘ಎನ್‌ಕೌಂಟರ್’ ಹಿಂಸೆಯನ್ನು ಜನರ ಸಂರಕ್ಷಕನಂತೆ ಬಿಂಬಿಸಲಾಗಿದೆ” ಎಂದಿದ್ದಾರೆ.
ಸೌಜನ್ಯ : thenewsminute.com
ಇದನ್ನೂ ಓದಿ : ನವರಾತ್ರಿ | ಸುಪ್ರೀಂಕೋರ್ಟ್ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ಇಲ್ಲ; ಪ್ರತಿಭಟನೆ ಹಿನ್ನಲೆ ನಿರ್ಧಾರ ವಾಪಾಸ್!


