ಬಿಜೆಪಿ ನಾಯಕ ಮತ್ತು ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ದ್ವೇಷ ಭಾಷಣ ಮಾಡಿದ್ದು, ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೆಲಂಗಾಣವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡಲು ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2047 ರ ವೇಳೆಗೆ ಭಾರತವನ್ನು ಮುಸ್ಲಿಂ ದೇಶವನ್ನಾಗಿ ಪರಿವರ್ತಿಸುವ ಓವೈಸಿ ಅವರ ಕನಸಿನ ಬಗ್ಗೆ ಹಿಂದೂಗಳು ಜಾಗರೂಕರಾಗಿರಬೇಕು ಎಂದು ಬೋರಬಂಡಾದಲ್ಲಿ ಗುರುವಾರ ನಡೆದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಎನ್. ರಾಮಚಂದರ್ ರಾವ್ ಅವರೊಂದಿಗೆ ಸಂಜಯ್, ಪಕ್ಷದ ಜುಬಿಲಿ ಹಿಲ್ಸ್ ಉಪಚುನಾವಣಾ ಅಭ್ಯರ್ಥಿ ಲಂಕಾಲಾ ದೀಪಕ್ ರೆಡ್ಡಿ ಪರ ಪ್ರಚಾರ ನಡೆಸಿದರು.
ಉಪಚುನಾವಣಾ ಪ್ರಚಾರದ ಸಮಯದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ನಾಯಕರು ತಲೆಗೆ ಟೋಪಿ ಧರಿಸಿದ್ದಕ್ಕಾಗಿ ಗುರಿಯಾಗಿಸಿಕೊಂಡ ಸಂಜಯ್, ಅಸಾದುದ್ದೀನ್ ಓವೈಸಿ ಅವರನ್ನು ಭಾಗ್ಯ ಲಕ್ಷ್ಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಮಾಡಿ ಎಂದು ಸಿಎಂಗೆ ಸವಾಲು ಹಾಕಿದರು.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಜಯ್, ಕಾಂಗ್ರೆಸ್ ಅಭ್ಯರ್ಥಿ ನವೀನ್ ಯಾದವ್ ಅವರನ್ನು ‘ನವೀನ್ ಖಾನ್’ ಮತ್ತು ಬಿಆರ್‌ಎಸ್ ಅಭ್ಯರ್ಥಿ ಮಗಂತಿ ಸುನೀತಾ ಅವರನ್ನು ‘ಸುನೀತಾ ಬೇಗಂ’ ಎಂದು ಉಲ್ಲೇಖಿಸುವ ಮೂಲಕ ವಿವಾದವನ್ನು ಸೃಷ್ಟಿಸಿದರು.
“ಈ ಅಭ್ಯರ್ಥಿಗಳು ಗೆದ್ದರೆ, ಎಲ್ಲ ಸಮುದಾಯ ಭವನಗಳು ಮಸೀದಿಗಳಾಗಿ ಬದಲಾಗುತ್ತವೆ. ಬೀದಿಗಳಲ್ಲಿ ರಕ್ತ ಹರಿಯುತ್ತದೆ. ವಿನಾಯಕ ಚೌತಿ ಮತ್ತು ದಸರಾದಂತಹ ಹಬ್ಬಗಳನ್ನು ಇನ್ನು ಮುಂದೆ ಆಚರಿಸಲಾಗುವುದಿಲ್ಲ” ಎಂದು ಹೇಳಿದರು.
ಹಿಂದೂ ಮತದಾರರು ಬಿಜೆಪಿಗೆ ಬೆಂಬಲಿಸುವಂತೆ ಒತ್ತಾಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಹತ್ತು ವರ್ಷಗಳ ಕಾಲ ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಬಿಆರ್‌ಎಸ್ ಅನ್ನು ತೋಟದ ಮನೆಗೆ ಸೀಮಿತಗೊಳಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪ್ರಸಾರ ಮಾಡುವ ‘ನಕಲಿ ಸಮೀಕ್ಷೆ ವರದಿಗಳನ್ನು’ ನಂಬಬೇಡಿ. ಆ ಪಕ್ಷಗಳಿಂದ ಹಣ ತೆಗೆದುಕೊಂಡು ಬಿಜೆಪಿಗೆ ಮತ ಹಾಕಿ ಎಂದು ಒತ್ತಾಯಿಸಿದರು.
ಕೇರಳ| ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಮುಸ್ಲಿಂ ಸಂಪರ್ಕ ಕಾರ್ಯಕ್ರಮ ಪ್ರಾರಂಭಿಸಲಿರುವ ಬಿಜೆಪಿ


