ನಕಲಿ ಸುದ್ದಿ ಹರಡಿದ, ಮಾಧ್ಯಮ ಸುಲಿಗೆಗಾಗಿ ಈ ಹಿಂದೆ ಎರಡು ಬಾರಿ ಜೈಲು ಶಿಕ್ಷೆಗೆ ಒಳಗಾದ ವಿವಾದಾತ್ಮಕ ಸುದ್ದಿ ನಿರೂಪಕ ಸುಧೀರ್ ಚೌಧರಿ ಅವರೊಂದಿಗೆ ಕೇಂದ್ರ ಸರ್ಕಾರದ ಅಡಿಯಲ್ಲಿರುವ ದೂರದರ್ಶನವು ವಾರ್ಷಿಕ 15 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಾಧ್ಯಮ ತಂಡದಿಂದ ನೇರವಾಗಿ ಮೇಲ್ವಿಚಾರಣೆ ಮಾಡಲ್ಪಡುವ ದೂರದರ್ಶನ ನ್ಯೂಸ್ (ಡಿಡಿ ನ್ಯೂಸ್), ಸುಧೀರ್ ಚೌಧರಿಯಂತಹ ಕಳಂಕಿತ ಪತ್ರಕರ್ತರೊಂದಿಗೆ ದೈನಂದಿನ ಸುದ್ದಿ ಪ್ರಸ್ತುತಿ ಒಪ್ಪಂದವನ್ನು ಮಾಡಿರುಕೊಂಡುರಿವ ಬಗ್ಗೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಲಪಂಥೀಯ ನಿರೂಪಕ
ಡಿಡಿ ನ್ಯೂಸ್‌ನ ಮಂಡಳಿಯು ನಿರೂಪಕ ಸುಧೀರ್ ಚೌಧರಿ ಅವರು ಮಾಡಿದ ಒಪ್ಪಂದದಂತೆ, ಅವರು ಡಿಡಿ ನ್ಯೂಸ್‌ನಿಂದ ಒಂದು ಗಂಟೆಯ ಅವಧಿಯ ವಿಶೇಷ ಕಾರ್ಯಕ್ರಮವನ್ನು ವಾರಕ್ಕೆ 5 ದಿನಗಳ ಕಾಲ ನಿರ್ಮಿಸಬೇಕಾಗಿದೆ. ಇದಕ್ಕಾಗಿ ವಾರ್ಷಿಕ ರೂ. 15 ಕೋಟಿಯನ್ನು ಅವರಿಗೆ ನಿಗದಿಪಡಿಸಲಾಗಿದ್ದು,, ಈ ಮೊತ್ತದಲ್ಲಿ ಜಿಎಸ್‌ಟಿ ಕೂಡಾ ಸೇರಿದೆ. ಅಷ್ಟೆ ಅಲ್ಲದೆ, ಈ ಮೊತ್ತವು ಪ್ರತಿ ವರ್ಷ 10% ದರದಲ್ಲಿ ಹೆಚ್ಚಳಕ್ಕೆ ಒಳಪಟ್ಟಿರುತ್ತದೆ ಎಂದು ಒಪ್ಪಂದ ಸೂಚಿಸಿದೆ. ಬಲಪಂಥೀಯ ನಿರೂಪಕ
“ಪುನರ್ರಚಿಸಲಾದ ಮಾತುಕತೆ ಸಮಿತಿಯು ಫೆಬ್ರವರಿ 6 ರಿಂದ 20, 2025 ರ ನಡುವೆ ಐದು ಬಾರಿ ಸಭೆ ಸೇರಿ ಸುಧೀರ್ ಚೌಧರಿ ಪ್ರತಿನಿಧಿಸುವ ನಿರ್ಮಾಣ ಕಂಪನಿ M/s ESSPRIT ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಮಾತುಕತೆ ನಡೆಸಿತು. ಹಾರ್ಡ್‌ವೇರ್, ಸ್ಟುಡಿಯೋ ಬಳಕೆಯ ವೆಚ್ಚ, ಸ್ಥಳ, ಪೀಠೋಪಕರಣಗಳು, ಸುದ್ದಿ ಸಂಸ್ಥೆ ಶುಲ್ಕಗಳು ಮತ್ತು ಇತರ ವಿವಿಧ ವೆಚ್ಚಗಳಂತಹ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಪ್ರಸಾರ ಭಾರತಿಯಿಂದ ಭರಿಸಬೇಕಾದ ಉತ್ಪಾದನಾ ವೆಚ್ಚದ ಕುರಿತು ಸರಣಿ ಚರ್ಚೆಗಳ ನಂತರ, ಎರಡೂ ಕಡೆಯವರು ಉತ್ಪಾದನಾ ವೆಚ್ಚವನ್ನು ಒಪ್ಪಿಕೊಂಡವು” ಎಂದು ದೂರದರ್ಶನದಂತಹ ಸಾರ್ವಜನಿಕ ಪ್ರಸಾರ ಸಂಸ್ಥೆಗಳನ್ನು ನಿಯಂತ್ರಿಸುವ ಪ್ರಸಾರ ಭಾರತಿ ಮಂಡಳಿಯ ಕಾರ್ಯಸೂಚಿ ಹೇಳುತ್ತದೆ.
“ಡಿಡಿ ನ್ಯೂಸ್‌ನಲ್ಲಿ ವಾರಕ್ಕೆ 5 ದಿನಗಳು (ಒಂದು ವರ್ಷದಲ್ಲಿ ಒಟ್ಟು 260 ಸಂಚಿಕೆಗಳು) ಒಂದು ಗಂಟೆಯ ವಿಶೇಷ ಕಾರ್ಯಕ್ರಮಗಳನ್ನು ವರ್ಷಕ್ಕೆ ರೂ.15.00 ಕೋಟಿ ಮತ್ತು ಜಿಎಸ್‌ಟಿಯಲ್ಲಿ ಪ್ರಸಾರ ಮಾಡಲಾಗುತ್ತದೆ” ಎಂದು ಪ್ರಸಾರ ಭಾರತಿ ಮಂಡಳಿಯ ಕಾರ್ಯಸೂಚಿ ಹೇಳಿದೆ. ವಾರ್ಷಿಕವಾಗಿ 260 ಸಂಚಿಕೆಗಳನ್ನು ಉತ್ಪಾದಿಸಲು ಒಪ್ಪಿದ ವೆಚ್ಚವನ್ನು 2012 ರಲ್ಲಿ ನಿಗದಿಪಡಿಸಿದ ಸಿಬಿಸಿ-ಅನುಮೋದಿತ ದರಗಳಲ್ಲಿ ಪರಿಗಣಿಸಲಾಗಿದೆ ಎಂದು ಅದು ಹೇಳಿದೆ.
ಈ ಮಧ್ಯೆ, ಸುಧೀರ್ ಚೌಧರಿ ಅವರ ಕಂಪನಿಯಾದ ಮೆಸರ್ಸ್ ಇಎಸ್‌ಎಸ್‌ಪಿಆರ್‌ಐಟಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಬಗ್ಗೆ ಯಾವುದೇ ಸಾರ್ವಜನಿಕ ದಾಖಲೆಗಳು ಮತ್ತು ವಿವರಗಳು ಲಭ್ಯವಿಲ್ಲ ಎಂದು pgurus.com ವರದಿ ಮಾಡಿದೆ.
ಎರಡು ಬಾರಿ ಜೈಲು ಶಿಕ್ಷೆಗೊಳಗಾಗಿದ್ದ ನಿರೂಪಕ ಸುಧೀರ್ ಚೌಧರಿ
2008 ರಲ್ಲಿ, ಶಾಲಾ ಶಿಕ್ಷಕಿಯೊಬ್ಬರ ವಿರುದ್ಧ ನಕಲಿ ವರದಿಯನ್ನು ಪ್ರಕಟಿಸಿದ್ದಕ್ಕಾಗಿ ಸುಧೀರ್ ಚೌಧರಿ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಸುದ್ದಿ ಮಾಡುವ ವೇಳೆ, ಶಿಕ್ಷಕಿಯು ಶಾಲಾ ಹುಡುಗಿಯರ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ಸುಧೀರ್ ಆರೋಪಿಸಿದ್ದರು. ಆ ಸಮಯದಲ್ಲಿ ಸುಧೀರ್ ಚೌಧರಿ ಅವರು ಲೈವ್ ಇಂಡಿಯಾ ಟಿವಿ ಚಾನೆಲ್‌ನ ಸಂಪಾದಕರಾಗಿದ್ದರು. ಅವರ ಈ ನಕಲಿ ವರದಿಗಾಗಿ ಅವರ ಟಿವಿ ಚಾನೆಲ್ ಅನ್ನು ಕೆಲವು ವಾರಗಳ ಕಾಲ ನಿಷೇಧಿಸಲಾಗಿತ್ತು ಮತ್ತು ಸುಧೀರ್ ಚೌಧರಿ ಅವರನ್ನು ಜೈಲಿಗೆ ಹಾಕಲಾಯಿತು.
2012 ರಲ್ಲಿ, ಕಲ್ಲಿದ್ದಲು ಹಗರಣದಲ್ಲಿ ಕಂಪನಿಯ ಪಾತ್ರವನ್ನು ಮುಚ್ಚಿಹಾಕಿದ್ದಕ್ಕಾಗಿ ಜಿಂದಾಲ್ ಗ್ರೂಪ್‌ನಿಂದ ರೂ.100 ಕೋಟಿ ಸುಲಿಗೆ ಮಾಡಲು ಪ್ರಯತ್ನಿಸಿದ್ದ ಸುಧೀರ್ ಚೌಧರಿ ಅವರನ್ನು ಮತ್ತೆ ಜೈಲಿಗೆ ಹಾಕಲಾಗಿತ್ತು. ಆ ಸಮಯದಲ್ಲಿ ಸುಧೀರ್ ಚೌಧರಿ ಅವರು ಸುಭಾಷ್ ಚಂದ್ರ ಅವರ ಜೀ ಗ್ರೂಪ್‌ನ ಮುಖ್ಯಸ್ಥರಾಗಿದ್ದರು. ಈ ವೇಳೆ ಅವರು ಜಿಂದಾಲ್ ಗ್ರೂಪ್‌ನಿಂದ ರೂ.100 ಕೋಟಿ ಸುಲಿಗೆ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಸಿಕ್ಕಿಬಿದ್ದಿದ್ದರು.
ಈ ಪ್ರಕರಣದಲ್ಲಿ ಚೌಧರಿ ಮತ್ತು ಜೀ ಬಿಸಿನೆಸ್ ಸಂಪಾದಕ ಸಮೀರ್ ಅಹ್ಲುವಾಲಿಯಾ ಅವರನ್ನು ಬಂಧಿಸಿ ತಿಂಗಳುಗಟ್ಟಲೆ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಜಿಂದಾಲ್ ಗ್ರೂಪ್ ಮುಖ್ಯಸ್ಥ ನವೀನ್ ಜಿಂದಾಲ್ ಸಲ್ಲಿಸಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಕ್ರಮ ಈ ಕೈಗೊಂಡಿದ್ದರು. ಜೊತೆಗೆ ಜೀ ಗ್ರೂಪ್‌ನ ಸುಭಾಷ್ ಚಂದ್ರ ಅವರನ್ನು ಕೂಡಾ ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರು.
ಭ್ರಷ್ಟ ಮತ್ತು ಕಳಂಕಿತ ನಿರೂಪಕನೊಂದಿಗೆ ಪ್ರಸಾರ ಭಾರತಿ 15 ಕೋಟಿ ರೂ.ಗಳಿಗೆ ಒಪ್ಪಂದ ಮಾಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಇದರ ಬಗ್ಗೆ ಧ್ವನಿಯೆತ್ತಿದ್ದಾರೆ.
“ಎರಡು ಜೈಲು ಶಿಕ್ಷೆಯನ್ನು ಎದುರಿಸಿದ ಕಳಂಕಿತ ಪತ್ರಕರ್ತ ಸುಧೀರ್ ಚೌಧರಿ ಜೊತೆ ಸರ್ಕಾರಿ ಟಿವಿ ವಾರ್ಷಿಕ ರೂ.15 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ! ದೂರದರ್ಶನವು ನಮ್ಮ ಹಣದಲ್ಲಿ ನಡೆಯುತ್ತದೆ. ಗಂಭೀರ ಆರೋಪಗಳ ಮೇಲೆ ಎರಡು ಬಾರಿ ಜೈಲಿನಲ್ಲಿದ್ದು ಪ್ರತಿದಿನ ದ್ವೇಷವನ್ನು ಹರಡುವ ವ್ಯಕ್ತಿಗೆ ಪಾವತಿಸಲು ಅದನ್ನು ಲೂಟಿ ಮಾಡಲಾಗುತ್ತಿದೆ.” ಎಂದು ಪ್ರಶಾಂತ್ ಭೂಷಣ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಚಿನ್ನ ಕಳ್ಳಸಾಗಣೆ ಆರೋಪಿ ರನ್ಯಾ ರಾವ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಬಿಜೆಪಿ ಶಾಸಕ ಯತ್ನಾಳ್
ಚಿನ್ನ ಕಳ್ಳಸಾಗಣೆ ಆರೋಪಿ ರನ್ಯಾ ರಾವ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಬಿಜೆಪಿ ಶಾಸಕ ಯತ್ನಾಳ್

