“ಕೋಮು ವಿಷಜಂತುಗಳು ಹೆಣ್ಣು ಮಕ್ಕಳ ಮೇಲಿನ ಗಂಭೀರ ಅತ್ಯಾಚಾರ ಪ್ರಕರಣಕ್ಕೂ ಧರ್ಮದ ಲೇಪನ ಹಚ್ಚಿರುವುದು ಈ ಸುದ್ದಿಯ ವಿಪರ್ಯಾಸ ಮತ್ತು ಅತ್ಯಂತ ಬೇಸರದ ಸಂಗತಿ”.
ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿ ಸ್ಥಳೀಯ ಹೋಮ್ ಸ್ಟೇ ಮಾಲಕಿ ಮತ್ತು ಇಸ್ರೇಲಿ ಯುವತಿ ಮೇಲೆ ಅತ್ಯಾಚಾರವೆಸಗಿ, ಅವರ ಜೊತೆಗಿದ್ದ ಯುವಕನ ಮೇಲೆ ಹಲ್ಲೆ ನಡೆಸಿ, ಕಾಲುವೆಗೆ ನೂಕಿ ಕೊಲೆಗೈದಿರುವ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಈ ಆಘಾತಕಾರಿ ಘಟನೆ ಹೆಣ್ಣು ಮಕ್ಕಳಿನ ಮೇಲಿನ ದೌರ್ಜನ್ಯ, ಪ್ರವಾಸಿಗರ ಸುರಕ್ಷತೆ, ಯುವಕರು ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿರುವುದು ಇತ್ಯಾದಿ ವಿಚಾರಗಳ ಕುರಿತು ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದೆ.
ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಭಾನುವಾರ (ಮಾ.9) ಮೂರನೇ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ, ಕೆಲ ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು ಇಸ್ರೇಲಿ ಯುವತಿ ಮೇಲೆ ನಡೆದ ಅತ್ಯಾಚಾರ ಘಟನೆಯನ್ನು ಉಲ್ಲೇಖಿಸಿ, ಇಸ್ರೇಲ್-ಹಮಾಸ್ ಯುದ್ಧ, ಪ್ಯಾಲೆಸ್ತೀನಿಯರು, ಭಾರತೀಯ ಮುಸ್ಲಿಮರು, ಹೀಗೆ ಎಲ್ಲೆಲ್ಲಿಗೂ ಸಂಬಂಧ ಕಲ್ಪಿಸಿ ಪ್ರಕರಣಕ್ಕೆ ಕೋಮು ಬಣ್ಣ ಬಳಿದಿದ್ದಾರೆ.
ಪ್ರತಿಯೊಂದು ವಿಷಯಗಳನ್ನು ಕೋಮು ಆಯಾಮದಿಂದ ಮಾತ್ರ ನೋಡುತ್ತಾ, ಮುಸ್ಲಿಮರನ್ನು ಅಪರಾಧಿ, ದೇಶದ್ರೋಹಿ ಸ್ಥಾನಗಳಲ್ಲಿ ನಿಲ್ಲಿಸುವ ಚಾಳಿ ಹೊಂದಿರುವ ಬಲಪಂಥೀಯ ಸಾಮಾಜಿಕಜಾಲತಾಣ ಬಳಕೆದಾರ ಮಿ. ಸಿನ್ಹಾ (@MrSinha_)ಕೊಪ್ಪಳದ ಘಟನೆ ಸಂಬಂಧ ಮಾರ್ಚ್ 8ರಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿ “ಕರ್ನಾಟಕ: ಇಸ್ರೇಲಿ ಪ್ರವಾಸಿ ಮತ್ತು ಒಡಿಶಾದ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಇತರ ಮೂವರು ಪುರುಷ ಜೊತೆಗಾರರ ಮೇಲೆ ಹಲ್ಲೆ ನಡೆಸಲಾಗಿದೆ. ಅವರಲ್ಲಿ ಒಬ್ಬನ ಮೃತದೇಹ ಕಾಲುವೆಯಲ್ಲಿ ಪತ್ತೆಯಾಗಿದೆ. ಇಸ್ರೇಲಿ ಪ್ರಜೆಯೊಬ್ಬರು ಇದರಲ್ಲಿ ಬಲಿಪಶು ಆಗಿರುವುದರಿಂದ ಪ್ಯಾಲೆಸ್ತೀನ್ ಪರ ವ್ಯಕ್ತಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸುವಂತಿಲ್ಲ.ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು. ಈ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕದಂತೆ ನೋಡಿಕೊಳ್ಳಬೇಕು” ಎಂದು ಬರೆದುಕೊಂಡಿದ್ದ. ತನ್ನ ಪೋಸ್ಟ್ ಅನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದ.

“ಪ್ಯಾಲೆಸ್ತೀನ್ ಪರ ವ್ಯಕ್ತಿಗಳು ಈ ಪ್ರಕರಣದ ಹಿಂದೆ ಇರುವುದನ್ನು ಅಲ್ಲಗಳೆಯುವಂತಿಲ್ಲ” ಎಂದು ಉಲ್ಲೇಖಿಸುವ ಮೂಲಕ ಮಿ.ಸಿನ್ಹಾ ಅತ್ಯಾಚಾರ ಪ್ರಕರಣವನ್ನು ಇಲ್ಲಿನ ಮುಸ್ಲಿಮರ ತಲೆಗೆ ಕಟ್ಟುವಂತಹ ನೀಚ ಪ್ರಯತ್ನ ಮಾಡಿದ್ದಾನೆ.
ಈತನ ಪೋಸ್ಟ್‌ಗೆ ಕಾಮೆಂಟ್ ಹಾಕಿರುವ ಅನೇಕ ಜನರಲ್ಲಿ ಕೆಲವರು ನೇರವಾಗಿ, ಇನ್ನೂ ಕೆಲವರು ಪರೋಕ್ಷವಾಗಿ ಅತ್ಯಾಚಾರ ಪ್ರಕರಣಕ್ಕೆ ಮುಸ್ಲಿಮರೊಂದಿಗೆ ಸಂಬಂಧ ಕಲ್ಪಿಸುವ ಪ್ರಯತ್ನ ಮಾಡಿದ್ದಾರೆ. ಅವುಗಳಲ್ಲಿ ಕೆಲವನ್ನು ಕೆಳಗೆ ಸ್ಕ್ರೀನ್ ಶಾಟ್ ಹಾಕಲಾಗಿದೆ.

ಮೇಲೆ ಕಾಮೆಂಟ್ ಹಾಕಿರುವ ವ್ಯಕ್ತಿಗಳಿಗೆ ಕೊಪ್ಪಳದ ಘಟನೆಯ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ಅಥವಾ ಗೊತ್ತಿದ್ದರೂ ಒಂದು ಸಮುದಾಯದವರನ್ನು ಎಳೆದು ತರುತ್ತಿದ್ದಾರೋ ಗೊತ್ತಿಲ್ಲ. ಆದರೆ, ಪೋಸ್ಟ್ ಹಾಕಿರುವ ಮಿ.ಸಿನ್ಹಾಗೆ ಪ್ರಕರಣದ ಬಗ್ಗೆ ಖಂಡಿತವಾಗಿಯೂ ಮಾಹಿತಿ ಇರುತ್ತದೆ. ಆದರೆ, ಆತನಿಗೆ ಸುಳ್ಳು, ಕೋಮು ದ್ವೇಷದ ಸುದ್ದಿಗಳನ್ನು ಹರಡುವುದೇ ಕಾಯಕ.
ಕೊಪ್ಪಳದ ಘಟನೆಯ ಸತ್ಯಾಂಶವೇನು?
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿ ತುಂಗಾಭದ್ರಾ ನದಿಯ ಕಾಲುವೆಯ ಪಕ್ಕದ ರಸ್ತೆಯಲ್ಲಿ ಪ್ರವಾಸಿಗರು ರಾತ್ರಿ ಹೊತ್ತು ಕುಳಿತು ನಕ್ಷತ್ರಗಳನ್ನು ನೋಡುತ್ತಾ ಪ್ರಕೃತಿ ಆಸ್ವಾದಿಸುವುದು ಸಾಮಾನ್ಯ ಚಟುವಟಿಕೆ.
ಹಂಪಿ ಪ್ರವಾಸಕ್ಕೆ ಬರುವ ವಿದೇಶಿ ಪ್ರಜೆಗಳು ಹೆಚ್ಚಾಗಿ ಸ್ಥಳೀಯ ಹೋಮ್ ಸ್ಟೇಗಳಲ್ಲಿ ಉಳಿದುಕೊಂಡು ರಾತ್ರಿ ಹೊತ್ತು ನಕ್ಷತ್ರ ನೋಡಲು ತೆರಳುತ್ತಾರೆ. ಹೀಗೆ ಕಳೆದ ಗುರುವಾರ (ಮಾ.6) ರಂದು ಇಸ್ರೇಲ್ ಯುವತಿ ಮತ್ತು ಒಡಿಶಾದ ಯುವಕ ಸ್ಥಳೀಯ ಹೋಂ ಸ್ಟೇಯೊಂದರ ಒಡತಿ ಜೊತೆ ರಾತ್ರಿ ಕುಳಿತು ಗಿಟಾರ್ ಬಾರಿಸುತ್ತಿದ್ದರು.
ಈ ವೇಳೆ ಅಲ್ಲಿಗೆ ಬೈಕ್ ಮೇಲೆ ಬಂದ ಮೂವರು ದುಷ್ಕರ್ಮಿಗಳು ಮೊದಲು ಹಣದ ಬೇಡಿಕೆಯಿಟ್ಟಿದ್ದರು. ಹಣ ನೀಡದ ಕಾರಣಕ್ಕೆ ಜಗಳವಾಗಿದ್ದು ಒಡಿಶಾದ 27ವರ್ಷದ ಯುವಕ ಬಿಬಾಶ್ ಮೇಲೆ ಹಲ್ಲೆ ನಡೆಸಿ, ಕಾಲುವೆಗೆ ನೂಕಿದ್ದಾರೆ. ಇಬ್ಬರು ಯವತಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಗಂಗಾವತಿಯ ಮಲ್ಲೇಶ ದಾಸರ ಮತ್ತು ಚೇತನಸಾಯಿ ಕಾಮೇಶ್ವರ ರಾವ್ ಎಂಬ ಆರೋಪಿಗಳನ್ನು ಆರಂಭದಲ್ಲಿ ಬಂಧಿಸಿದ್ದರು. ಭಾನುವಾರ ಮೂರನೇ ಆರೋಪಿ ಗಂಗಾವತಿಯ ಸಾಯಿ ನಗರದ ನಿವಾಸಿ ಶರಣಬಸವ ಎಂಬಾತನನ್ನು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಂಧಿತ ಮೂವರೂ ಆರೋಪಿಗಳು ಗಾರೆ ಕೆಲಸ ಮಾಡುತ್ತಿದ್ದರು. “ಮೂರನೇ ಆರೋಪಿ ಕೃತ್ಯ ನಡೆಸಿದ್ದನ್ನು ಒಪ್ಪಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ ಬೈಕ್ ಜಪ್ತಿ ಮಾಡಲಾಗಿದೆ. ಘಟನೆ ನಡೆದಾಗ ಆರೋಪಿಗಳು ಮದ್ಯ ಸೇವನೆ ಮಾಡಿದ್ದರು ಎನ್ನುವುದು ಸಾಬೀತಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


