ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಅವರ ಆತ್ಮಹತ್ಯೆ ಪ್ರಕರಣದ ಮರು ತನಿಖೆ ನಡೆಸುವ ಕಾನೂನು ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ ಎಂದು ತೆಲಂಗಾಣದ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ತಿಳಿಸಿದ್ದಾರೆ.
“ಪ್ರಕರಣದ ಮರು ತನಿಖೆಗೆ ನಿರ್ದೇಶನ ನೀಡುವಂತೆ ನಾವು ಈಗಾಗಲೇ ಹೈಕೋರ್ಟ್‌ಗೆ ಟಿಪ್ಪಣಿ ಸಲ್ಲಿಸಿದ್ದೇವೆ. ಪ್ರಕರಣದ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ ಬಿಡುವುದಿಲ್ಲ” ಎಂದು ವಿಕ್ರಮಾರ್ಕ ಹೇಳಿದ್ದಾರೆ.
ತೆಲಂಗಾಣದ ಬಿಜೆಪಿ ಅಧ್ಯಕ್ಷರಾಗಿ ರಾಮಚಂದರ್ ರಾವ್ ಅವರ ನೇಮಕದ ಕುರಿತು ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ “ಆಗ ಎಂಎಲ್‌ಸಿ ಆಗಿದ್ದ ರಾವ್, ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರಿಸಲಾದ ಆರೋಪಿಗಳಲ್ಲಿ ಒಬ್ಬರು” ಎಂದಿದ್ದಾರೆ.
“ರಾವ್ ಅವರ ನೇಮಕಾರಿ ಆದಿವಾಸಿಗಳ, ದಲಿತರ ವಿರುದ್ಧ ಯಾರು ಇರುತ್ತಾರೋ ಅವರಿಗೆ ಬಿಜೆಪಿಯಿಂದ ಪ್ರತಿಫಲ ಸಿಗುತ್ತದೆ ಎಂಬುದನ್ನು ತೋರಿಸುತ್ತದೆ” ಎಂದ ವಿಕ್ರಮಾರ್ಕ, “ಬಿಜೆಪಿ ರಾಷ್ಟ್ರದ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ. “ರಾವ್ ಅವರನ್ನು ಅಧ್ಯಕ್ಷರಾಗಿ ನೇಮಿಸುವ ಮೂಲಕ ನೀವು ದಲಿತರನ್ನು ಗುರಿಯಾಗಿಸಿಕೊಂಡಿದ್ದೀರಾ?” ಎಂದು ಬಿಜೆಪಿ ಹೈಕಮಾಂಡ್ ಅನ್ನು ಪ್ರಶ್ನಿಸಿದ್ದಾರೆ.
ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಜಾತಿ ತಾರತಮ್ಯಕ್ಕೆ ರೋಹಿತ್ ಬಲಿಯಾಗಿದ್ದಾರೆ ಎನ್ನಲಾಗಿದೆ. ರೋಹಿತ್ ಸಾವು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿತ್ತು.
ರೋಹಿತ್ ಸಾವು ಸಂಬಂಧ, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ರೋಹಿತ್ ನಿಧನದ ಎಂಟು ವರ್ಷಗಳ ನಂತರ, ಅಂದರೆ ಮೇ 2024ರಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯ ವರದಿಯನ್ನು ಸಲ್ಲಿಸಿದ್ದಾರೆ. ನ್ಯಾಯಾಲಯ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಮುಕ್ತಾಯ ವರದಿಯಲ್ಲಿ ರೋಹಿತ್ ವೇಮುಲ ದಲಿತನಲ್ಲ, ಒಬಿಸಿ ಎಂದು ಹೇಳಲಾಗಿದೆ.
ರಾಹುಲ್ ಗಾಂಧಿಯವರ ಮನವಿ ಮೇರೆಗೆ ತೆಲಂಗಾಣ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಯಲು ರೋಹಿತ್ ವೇಮುಲ ಕಾಯ್ದೆಯನ್ನು ಜಾರಿಗೆ ತರಲಿದೆ. ನಾವು ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಭವಿಷ್ಯದಲ್ಲಿ ಯಾವುದೇ ರೀತಿಯ ಕಾನೂನು ಸವಾಲನ್ನು ಎದುರಿಸದಂತೆ ಕಾಯ್ದೆಯನ್ನು ಸರಿಯಾಗಿ ಮತ್ತು ಸಂಪೂರ್ಣವಾಗಿ ಪರಿಶೀಲಿಸಲು ಕಾನೂನು ಇಲಾಖೆಗೆ ನೀಡಿದ್ದೇವೆ” ಎಂದು ಭಟ್ಟಿ ವಿಕ್ರಮಾರ್ಕ ಹೇಳಿದ್ದಾರೆ.
ರೋಹಿತ್ ವೇಮುಲ ಆತ್ಮಹತ್ಯೆಯನ್ನು ಒಂದು ಸಾಂಸ್ಥಿಕ ಕೊಲೆ ಎಂದು ಕರೆದ ವಿಕ್ರಮಾರ್ಕ, “ಪಿಎಚ್‌ಡಿ ಮಟ್ಟಕ್ಕೆ ತಲುಪಿದ್ದ ಯುವಕ, ವರ್ಣರಂಜಿತ ಜೀವನವನ್ನು ನಡೆಸುವ ಕನಸು ಕಂಡಿದ್ದ ಯುವಕ, ತನ್ನ ಜೀವನವನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳುವ ಹಂತಕ್ಕೂ ಹೋಗಿದ್ದರೆ ಯೋಚಿಸಿ, ಅವರು ಆ ತೀರ್ಮಾನಕ್ಕೆ ಬರಲು ಏನು ಪ್ರೇರೇಪಿಸರಬಹುದು ಎಂದು. ಇದು ಸಾಂಸ್ಥಿಕ ಕೊಲೆಯಲ್ಲವೇ?” ಎಂದು ವಿಕ್ರಮಾರ್ಕ ಪ್ರಶ್ನಿಸಿದ್ದಾರೆ.
ಒಡಿಶಾ: ಬುಡಕಟ್ಟು ನಿಯಮ ಮೀರಿ ಮದುವೆ ಆರೋಪ-ಜೋಡಿಗೆ ನೇಗಿಲು ಕಟ್ಟಿ ಹೊಲ ಉಳುಮೆ ಮಾಡಿದ ಗ್ರಾಮಸ್ಥರು-video


