ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್, ಕಾರ್ಯಕ್ರಮ ಸಂಘಟಕರ ಜೊತೆ ಅಕ್ಟೋಬರ್ 28ರಂದು ಶಾಂತಿ ಸಭೆ ನಡೆಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ. ಸಬೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಏಕಸದಸ್ಯ ಪೀಠ ನಿರ್ದೇಶಿಸಿದೆ. ಸಭೆಯ ತೀರ್ಮಾನವನ್ನು ಅಕ್ಟೋಬರ್ 30ರ ಮಧ್ಯಾಹ್ನ 2.30ಕ್ಕೆ ತಿಳಿಸಬೇಕು ಎಂದು ಸೂಚಿಸಿರುವ ನ್ಯಾಯಾಲಯ ವಿಚಾರಣೆ ಮುಂದೂಡಿತು.
ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಹಾಗೂ ವಿಜಯದಶಮಿ ಉತ್ಸವದ ಭಾಗವಾಗಿ ಆಯೋಜಿಸಲಾಗುತ್ತಿರುವ ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಆರ್‌ಎಸ್‌ಎಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಗೂ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪಥಸಂಚಲಕ್ಕೆ ಅನುಮತಿ ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿ ಕುರಿತು ನಿರ್ಧಾರ ಕೈಗೊಳ್ಳಲು ಸರ್ಕಾರ ಇದೇ 28ರಂದು ಆಯೋಜಕರೊಂದಿಗೆ ಸಭೆ ನಡೆಸಬೇಕು. ಸಭೆಯ ತೀರ್ಮಾನವನ್ನು ಅಕ್ಟೋಬರ್ 30ರ ಮಧ್ಯಾಹ್ನ 2.30ಕ್ಕೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಸೂಚಿಸಿತು.
ಶಾಂತಿ ಸಭೆಯನ್ನು ಎಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ಶನಿವಾರ ಅರ್ಜಿದಾರರಿಗೆ ತಿಳಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ, ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇದನ್ನು ಹೆಚ್ಚು ಎಳೆಯದಿರುವುದು ಒಳಿತು ಎಂದು ಮೌಖಿಕವಾಗಿ ತಿಳಿಸಿ, ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿತು.
ಕೋರ್ಟ್‌ನಲ್ಲಿ ನಡೆದ ವಾದ –ವಿವಾದ
ಸರ್ಕಾರದ ಪರ ವಕೀಲ ಎಜಿ ಶಶಿಕಿರಣ್ ಶೆಟ್ಟಿ: ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ 2 ಅಭಿಪ್ರಾಯಗಳನ್ನು ನೀಡಿದ್ದಾರೆ. ಜನರಿಗೆ ತೊಂದರೆಯಾಗುವ ಬಗ್ಗೆ ಕಲಬುರಗಿ ಎಸ್‌ಪಿ ವರದಿ ನೀಡಿದ್ದಾರೆ. ಪಥಸಂಚಲನದ ಮಾರ್ಗದಲ್ಲಿ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಪರಿಸ್ಥಿತಿ ಸಾಮಾನ್ಯವಾದ ನಂತರ ಪಥಸಂಚಲನ ಸೂಕ್ತ. ಕೆಲ ವಾರಗಳ ಬಳಿಕ ಪಥಸಂಚಲನ ನಡೆಸುವುದು ಸೂಕ್ತವೆಂದು ವರದಿಯಿದೆ. ಇದರಿಂದ ಯಾವುದೇ ಸಂಘಟನೆಗಳಿಗೂ ಅನುಮತಿ ನೀಡದಂತೆ ವರದಿಯಿದೆ ಎಂದು ಸರ್ಕಾರದ ಪರ ವಕೀಲ ಎಜಿ (ಅಡ್ವೊಕೇಟ್ ಜನರಲ್) ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ಎಜಿ ಶಶಿಕಿರಣ್ ಶೆಟ್ಟಿ: ನಾವು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿಲ್ಲ, ಬಾಕಿಯಿರಿಸಿದ್ದೇವೆ.
ಹೈಕೋರ್ಟ್: ಹಾಗಿದ್ದರೆ ಯಾವಾಗ ತೀರ್ಮಾನ ಕೈಗೊಳ್ಳುತ್ತೀರಿ?
ಎಜಿ ಶಶಿಕಿರಣ್ ಶೆಟ್ಟಿ: ಶಾಂತಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಎರಡು ವಾರಗಳ ಬಳಿಕ ವಿಚಾರಣೆ ನಡೆಸಬೇಕೆಂದು ಮನವಿ.
ಹೈಕೋರ್ಟ್: ನಿಮ್ಮ ಆಡಳಿತ ಸಾಮರ್ಥ್ಯ ಸಾಬೀತಿಗೆ ಇದು ಸಕಾಲ. ಎಲ್ಲರಿಗೂ ಸಮಾಧಾನಕರವಾಗುವಂತೆ ಸಮಸ್ಯೆ ಬಗೆಹರಿಸಿ
ಹೈಕೋರ್ಟ್: ಸಮಸ್ಯೆ ಬಗೆಹರಿಯುವ ಮಾರ್ಗದ ಬಗ್ಗೆ ವರದಿಯಲ್ಲಿ ಸ್ಪಷ್ಟತೆಯಿಲ್ಲ
ಎಜಿ ಶಶಿಕಿರಣ್ ಶೆಟ್ಟಿ: 8 ಬೇರೆ ಸಂಘಟನೆಗಳೂ ಪಥಸಂಚಲನಕ್ಕೆ ಅನುಮತಿ ಕೋರಿದ್ದರೂ ಪರಿಗಣಿಸಿಲ್ಲ. ಪಥಸಂಚಲನದ ಬಗ್ಗೆ ಒಂದೊಂದು ರೀತಿಯ ಹೇಳಿಕೆ ನೀಡಿದ್ದಾರೆ. ಹೀಗಾಗಿ 2 ವಾರಗಳಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ.
ಆರ್‌ಎಸ್‌ಎಸ್ ಪರ ವಕೀಲ: ನವೆಂಬರ್ 2ರಂದು ಪಥಸಂಚಲನಕ್ಕೆ ನಾವು ಒಪ್ಪಿದ್ದೆವು. ಈಗ ಪಥಸಂಚಲನಕ್ಕೆ ಅಡ್ಡಿ ಸೃಷ್ಟಿಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಕೇಂದ್ರದ ಪಡೆ ನಿಯೋಜಿಸಲಿ. ಪಥಸಂಚಲನ ನಡೆಸುವುದು ಮೂಲಭೂತ ಹಕ್ಕಾಗಿದೆ.
ಹೈಕೋರ್ಟ್: ಶಾಂತಿ ಸಮಿತಿ ಸಭೆ ಯಾವತ್ತು ಕರೆಯುತ್ತೀರಿ? ಅ.28ರಂದು ಶಾಂತಿ ಸಭೆ ನಡೆಸಿ ಅ.30ರಂದು ವರದಿ ಸಲ್ಲಿಸಿ
ಆರ್‌ಎಸ್‌ಎಸ್ ಪರ ವಕೀಲ: ನಾಳೆ ಶಾಂತಿ ಸಭೆ ಕರೆಯಲು ಅನುಮತಿಸಬೇಕು.
ಎಜಿ ಶಶಿಕಿರಣ್ ಶೆಟ್ಟಿ: ಸಭೆ ಯಾವಾಗ ಕರೆಯಬೇಕೆಂದು ಅರ್ಜಿದಾರರು ಆದೇಶಿಸುವಂತಿಲ್ಲ. ಚಿತ್ತಾಪುರದಲ್ಲಿ ಪ್ರತಿದಿನ ಏನೆಲ್ಲಾ ಆಗುತ್ತಿದೆ ಎಂಬುದನ್ನು ದಿನಂಪ್ರತಿ ಮಾಧ್ಯಮಗಳಲ್ಲಿ ನೋಡುತಿದ್ದೇವೆ. ಎಲ್ಲವನ್ನೂ ಪರಿಹರಿಸಲಾಗುವುದು. ಅರ್ಜಿದಾರರು ಸಹಕಾರ ನೀಡಬೇಕು.
ಆರ್‌ಎಸ್‌ಎಸ್ ಪರ ವಕೀಲ: ನಾವು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ.
ಹೈಕೋರ್ಟ್: ಸಂಘಟನೆಗಳೊಂದಿಗೆ ಅ.28 ರಂದು ಶಾಂತಿ ಸಭೆ ನಡೆಸಬೇಕು. ಚಿತ್ತಾಪುರದಲ್ಲಿನ ಪರಿಸ್ಥಿತಿ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು. ಸಭೆಯ ನಿರ್ಧಾರವನ್ನು ಅ.30 ರಂದು ತಿಳಿಸಿ
ಹೈಕೋರ್ಟ್ ಸಭೆಯ ಸಮಯವನ್ನು ಒಂದು ದಿನದಲ್ಲಿ ಅರ್ಜಿದಾರರಿಗೆ ತಿಳಿಸಿ. ವಿಚಾರವನ್ನು ಹೆಚ್ಚು ಅಲಂಬಿಸಬೇಡಿ. ಬೇಗ ಸಮಸ್ಯೆ ಬಗೆಹರಿಯುವುದು ಎಲ್ಲರಿಗೂ ಒಳ್ಳೆಯದು ಎಂದು ಹೇಳಿ ವಿಚಾರಣೆಯನ್ನು ಅ.30ಕ್ಕೆ ಮುಂದೂಡಿತು.
ಕೋರ್ಟ್ ಸೂಚನೆಯಂತೆ ಸರ್ಕಾರ ಅಕ್ಟೋಬರ್ 28ರಂದು ಸಭೆ ನಡೆಸಿ ಚಿತ್ತಾಪುರದಲ್ಲಿ ಸ್ಥಿತಿಗತಿ ಬಗ್ಗೆ ಅಕ್ಟೋಬರ್ 30ರೊಳಗೆ ವರದಿ ನೀಡಬೇಕಿದೆ. ಬಳಿಕ ಕೋರ್ಟ್, ಈ ವರದಿ ಆಧಾರದ ಮೇಲೆ ಆದೇಶ ನೀಡಲಿದೆ.
ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ : ಆದೇಶ ಕಾಯ್ದಿರಿಸಿದ ಹೈಕೋರ್ಟ್


