ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ (ಡಿಪಿಡಿಪಿ)ಯ ಸೆಕ್ಷನ್ 44 (3) ಅನ್ನು ರದ್ದುಗೊಳಿಸುವಂತೆ ಇಂಡಿಯಾ ಮೈತ್ರಿಕೂಟ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದು, ಇದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯನ್ನು ನಾಶಪಡಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆರ್‌ಟಿಐ ಕಾಯ್ದೆ
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿ ಪಕ್ಷಗಳ 120 ಕ್ಕೂ ಹೆಚ್ಚು ಸಂಸದರು ಈ ಸೆಕ್ಷನ್ ಅನ್ನು ರದ್ದುಗೊಳಿಸಲು ಜಂಟಿ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ್ದಾರೆ ಮತ್ತು ಅದನ್ನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಂಎಂ ಅಬ್ದುಲ್ಲಾ (ಡಿಎಂಕೆ), ಪ್ರಿಯಾಂಕಾ ಚತುರ್ವೇದಿ (ಶಿವಸೇನೆ-ಯುಬಿಟಿ), ಜಾನ್ ಬ್ರಿಟ್ಟಾಸ್, (ಸಿಪಿಐ-ಎಂ), ಜಾವೇದ್ ಅಲಿ ಖಾನ್, (ಎಸ್‌ಪಿ) ಮತ್ತು ನವಲ್ ಕಿಶೋರ್ (ಆರ್‌ಜೆಡಿ) ಭಾಗವಹಿಸಿದ್ದರು.
ಡಿಪಿಡಿಪಿ ಕಾಯ್ದೆಯ ಸೆಕ್ಷನ್ 44 (3) ಅನ್ನು ನಾಗರಿಕ ಹಕ್ಕುಗಳ ಹೋರಾಟಗಾರರು ವಿರೋಧಿಸಿದ್ದು, ಇದು 2005 ರ ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) (ಜೆ) ಅನ್ನು ಬದಲಾಯಿಸಲು ಪ್ರಯತ್ನಿಸುತ್ತದೆ ಎಂದು ಗೊಗೊಯ್ ಹೇಳಿದ್ದಾರೆ.
ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಿಸದಿದ್ದರೆ ಅಥವಾ ಗೌಪ್ಯ ಮಾಹಿತಿ ಆಗಿದ್ದರೆ ಅದನ್ನು ತಡೆಹಿಡಿಯಲು ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(ಜೆ) ಅವಕಾಶ ನೀಡುತ್ತದೆ. ಅದಾಗ್ಯೂ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರವು ಈ ಮಾಹಿತಿಯು ಜನರ ಒಳಿತಿಗೆ ಉಪಯೋಗವಾಗುತ್ತದೆ ಎಂದು ನಿರ್ಧರಿಸಿ, ಅದನ್ನು ಸಾರ್ವಜನಿಕವಾಗುವಂತೆ ಮಾಡಬಹುದಾಗಿದೆ.
ಡಿಪಿಡಿಪಿ ಕಾಯ್ದೆಯ ಸೆಕ್ಷನ್ 44 (3) ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(ಜೆ) ಅನ್ನು ತಿದ್ದುಪಡಿ ಮಾಡುತ್ತದೆ. ಇದು ಸರ್ಕಾರಿ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿ ಅಥವಾ ಯಾವುದೇ ಇತರ ವಿನಾಯಿತಿಗಳನ್ನು ಪರಿಗಣಿಸದೆ “ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಮಾಹಿತಿಯನ್ನು” ತಡೆಹಿಡಿಯಲು ಅನುಮತಿ ನೀಡುತ್ತದೆ. ಹಾಗಾಗಿ ಸರ್ಕಾರಿ ಅಧಿಕಾರಿಗಳು ಅಥವಾ ರಾಜಕಾರಣಿಗಳ ಮಾಹಿತಿಯು ‘ವೈಯಕ್ತಿಕ ಮಾಹಿತಿ’ ಎಂಬ ಕಾರಣ ನೀಡಿ ಇನ್ನು ಮುಂದಕ್ಕೆ ಮಾಹಿತಿ ಕೇಳುವವರಿಗೆ ಲಭ್ಯವಾಗದಂತೆ ಮಾಡುವ ಅಪಾಯವಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: 1 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಬಿಜೆಪಿ ಸಂಸದೆ ಕಂಗನಾ; ಎಚ್‌ಪಿಎಸ್‌ಇಬಿಎಲ್ ಸ್ಪಷ್ಟನೆ
1 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಬಿಜೆಪಿ ಸಂಸದೆ ಕಂಗನಾ; ಎಚ್‌ಪಿಎಸ್‌ಇಬಿಎಲ್ ಸ್ಪಷ್ಟನೆ

