ತನ್ನ ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಆಡಳಿತ ನಡೆಸುತ್ತಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ದಂಗೆ ಉಂಟಾಗಿದ್ದು, ಅವರನ್ನು ಪದಚ್ಯುತಗೊಳಿಸಲಾಗಿದೆ ಎಂಬ ಊಹಾಪೋಹಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶನಿವಾರ ಹರಿಬಿಡಲಾಗಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೃಹಬಂಧನದಲ್ಲಿದ್ದಾರೆ ಎಂದು ವದಂತಿ ಹಬ್ಬಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಹಲವಾರು ಪೋಸ್ಟ್‌ಗಳ ಪ್ರಕಾರ, “ಕ್ಸಿ ಜಿನ್‌ಪಿಂಗ್ ಅವರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ” ಎಂದು ಪ್ರತಿಪಾದಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದೇಶದ ಆಡಳಿತಾರೂಢ ಚೀನೀ ಕಮ್ಯುನಿಸ್ಟ್ ಪಕ್ಷ ಅಥವಾ ಸರ್ಕಾರಿ ಮಾಧ್ಯಮಗಳು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಯಾವುದೇ ಪ್ರತಿಷ್ಠಿತ ಅಂತರಾಷ್ಟ್ರೀಯ ಸುದ್ದಿವಾಹಿನಿಯು ಈ ಕುರಿತು ಅಧಿಕೃತವಾಗಿ ಸುದ್ದಿ ಮಾಡಿಲ್ಲ. ಆದಾಗ್ಯೂ, ಚೀನಾದ ವಿದೇಶಾಂಗ ಸಚಿವಾಲಯ ಮೌನವಹಿಸಿದೆ.
ಚೀನಾದ ಮಾಧ್ಯಮಗಳಿಂದಲೂ ಈ ವಿಷಯದ ಬಗ್ಗೆ ಯಾವುದೇ ವರದಿಗಳು ಆಗಿಲ್ಲ. ಈ ವದಂತಿಗಳು ಆಧಾರರಹಿತವಾಗಿವೆ. ಅವು ಕ್ಸಿ ಜಿನ್‌ಪಿಂಗ್ ವಿರೋಧಿ ಪಿತೂರಿಯ ಭಾಗವಾಗಿದೆ ಎಂದು ಹೇಳಲಾಗಿದೆ.
ಅಕ್ಟೋಬರ್ 16ರಂದು ಚೀನೀ ಕಮ್ಯುನಿಸ್ಟ್ ಪಕ್ಷದ 20 ನೇ ರಾಷ್ಟ್ರೀಯ ಕಾಂಗ್ರೆಸ್ ನಡೆಯುವ ಮುಂಚಿತವಾಗಿ ಈ ವದಂತಿಗಳನ್ನು ಹರಡಲಾಗಿದೆ. ಕ್ಸಿ ಅವರು ಐದು ವರ್ಷಗಳ ಅಧಿಕಾರವಧಿಯನ್ನು ಮೂರನೇ ಅವಧಿಗೆ ಮುಂದುವರಿಸುವ ನಿರೀಕ್ಷೆ ಇದೆ.
ಈ ವಾರದ ಆರಂಭದಲ್ಲಿ ಭ್ರಷ್ಟಾಚಾರದ ವಿರುದ್ಧ ಕ್ಸಿ ಅವರು ಜರುಗಿಸಿದ ಶಿಸ್ತುಕ್ರಮದ ಭಾಗವಾಗಿ ಇಬ್ಬರು ಮಾಜಿ ಮಂತ್ರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಆದರೆ ಶಿಕ್ಷೆಗೊಳಗಾದವರನ್ನು ಕ್ಸಿ ವಿರೋಧಿ ರಾಜಕೀಯ ಬಣದ ಭಾಗವಾಗಿ ಗುರುತಿಸಲಾಗಿದೆ.
ಸೆಪ್ಟೆಂಬರ್ 16 ರಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಮರ್ಕಂಡ್ ಕಾಂಗ್ರೆಸ್ ಕೇಂದ್ರದಲ್ಲಿ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಕೌನ್ಸಿಲ್ ಆಫ್ ಸ್ಟೇಟ್‌ನ 22 ನೇ ಸಭೆಯಲ್ಲಿ ಭಾಗವಹಿಸಿದ್ದರು. ಚೀನಾದ ಅಧ್ಯಕ್ಷರು ಅಧಿಕೃತ ಸಮಾರೋಪ ಸಮಾರಂಭಕ್ಕೂ ಮೊದಲು ಸಮರ್‌ಕಂಡ್‌ನಿಂದ ಹೊರಟು ಸೆಪ್ಟೆಂಬರ್ 16 ರಂದು ಬೀಜಿಂಗ್‌ನಲ್ಲಿ ಇಳಿಯುವಾಗ ಗೃಹಬಂಧನಕ್ಕೆ ಒಳಗಾಗಿದ್ದಾರೆ ಎಂದು ಅನಧಿಕೃತ ಟ್ವಿಟರ್ ಖಾತೆಗಳು ಸುದ್ದಿ ಹಬ್ಬಿಸಿವೆ.
ಇದನ್ನೂ ಓದಿರಿ: ‘ಅನ್ನಭಾಗ್ಯ ಕನ್ನಭಾಗ್ಯ’ ಇತ್ಯಾದಿ ಸಾಲುಸಾಲು ಜಾಹೀರಾತು ನೀಡಿದ್ದ ಬಿಜೆಪಿ ದಾಖಲೆಯನ್ನೇ ಒದಗಿಸಿಲ್ಲ: ವರದಿ
ಬೀಜಿಂಗ್ ವಿಮಾನ ನಿಲ್ದಾಣವು 6,000 ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳನ್ನು ರದ್ದುಗೊಳಿಸಿದೆ. ಹೈಸ್ಪೀಡ್ ರೈಲು ಮತ್ತು ಹೈಸ್ಪೀಡ್ ರೈಲುಗಳ ಟಿಕೆಟ್ ಮಾರಾಟವನ್ನೂ ನಿಲ್ಲಿಸಲಾಗಿದೆ ಎಂದು ಟ್ವಿಟರ್ ಪೋಸ್ಟ್‌ಗಳು ಸುದ್ದಿ ಹರಡಿವೆ.
ಕ್ಸಿ ಜಿನ್‌ಪಿಂಗ್ ಇತ್ತೀಚೆಗೆ ಉಜ್ಬೇಕಿಸ್ತಾನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಹಲವಾರು ಇತರ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿದರು. 2020ರಲ್ಲಿ ಗಡಿ ಘರ್ಷಣೆಗಳು ಏರ್ಪಟ್ಟು ಭಾರತ ಮತ್ತು ಚೀನಾ ನಡುವಿನ ಸಂಬಂಧ ಹದಗೆಟ್ಟ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕ್ಸಿ ಮುಖಾಮುಖಿಯಾಗಿದ್ದರು.


