ರಷ್ಯಾದ ಸೇನಾ ಬೆದರಿಕೆ ಹೆಚ್ಚಿರುವ ಕಾರಣ ಉಕ್ರೇನ್‌ನಲ್ಲಿ ಉಳಿದಿರುವ ಎಲ್ಲ ಅಮೆರಿಕನ್ ನಾಗರಿಕರು ತಕ್ಷಣವೇ ದೇಶವನ್ನು ತೊರೆಯಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕರೆ ನೀಡಿದ್ದಾರೆ.
ಉಕ್ರೇನ್ ಮೇಲೆ ಮಾಸ್ಕೋ ಆಕ್ರಮಣ ಮಾಡಿದರೆ ಅಮೆರಿಕನ್ನರನ್ನು ರಕ್ಷಿಸಲು ಪಡೆಗಳನ್ನು ಕಳುಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಪರಿಸ್ಥಿತಿ ಸ್ಥಿಮಿತ ಕಳೆದುಕೊಳ್ಳಬಹುದು ಎಂದು ಬೈಡನ್ ಎಚ್ಚರಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಗಡಿಯಲ್ಲಿ 1,00,000ಕ್ಕೂ ಹೆಚ್ಚು ಸೈನಿಕರನ್ನು ಹೊಂದಿದ್ದರೂ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಯಾವುದೇ ಯೋಜನೆಯನ್ನು ರಷ್ಯಾ ಪದೇ ಪದೇ ನಿರಾಕರಿಸಿದೆ.

ಮುಂದಿನ ವಾರದಲ್ಲಿ ರಷ್ಯಾ ನೌಕಾ ಸಮರಾಭ್ಯಾಸಕ್ಕೆ ತಯಾರಿ ನಡೆಸುತ್ತಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಸಮುದ್ರಕ್ಕೆ ತನ್ನ ಪ್ರವೇಶವನ್ನು ನಿರ್ಬಂಧಿಸುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.
ಅಜೋವ್ ಸಮುದ್ರಕ್ಕೆ ಪ್ರವೇಶಿಸುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ರಷ್ಯಾದ ಸೇನೆಗಳು ಕಪ್ಪು ಸಮುದ್ರದ ಸಂಪರ್ಕವನ್ನು ಕತ್ತರಿಸಿ ಹಾಕಿವೆ ಎಂದು ಉಕ್ರೇನಿನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ.
ನೆರೆಯ ಬೆಲಾರಸ್‌ನೊಂದಿಗೆ ಬೃಹತ್ ಮಿಲಿಟರಿ ಕಸರತ್ತುಗಳನ್ನು ರಷ್ಯಾ ಪ್ರಾರಂಭಿಸಿದೆ. ಬೆಲಾರಸ್ ರಷ್ಯಾದ ನಿಕಟ ಮಿತ್ರರಾಷ್ಟ್ರವಾಗಿದೆ. ಉಕ್ರೇನ್‌ನೊಂದಿಗೆ ಸುದೀರ್ಘವಾದ ಗಡಿಯನ್ನು ಹೊಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾನ್ಸ್, “ಶೀತಲ ಸಮರದ ನಂತರ ಬೆಲಾರಸ್‌ಗೆ ರಷ್ಯಾದ ಅತಿದೊಡ್ಡ ನಿಯೋಜನೆ ಇದೆಂದು ನಂಬಲಾಗಿದೆ. ಇದು ಹಿಂಸೆಯ ಮುನ್ಸೂಚನೆ” ಎಂದಿದೆ. ಈ ಬೆಳವಣಿಗೆಯನ್ನು ಉಕ್ರೇನ್, “ಮಾನಸಿಕ ಒತ್ತಡ” ಎಂದು ಪರಿಗಣಿಸಿದೆ.
ಉಕ್ರೇನ್‌ನ ದಕ್ಷಿಣ ಭಾಗದಲ್ಲಿರುವ ಕಪ್ಪು ಸಮುದ್ರ ಮತ್ತು ಅಜೋವ್ ಸಮುದ್ರದಲ್ಲಿ ಮುಂದಿನ ವಾರ ರಷ್ಯಾದ ನೌಕಾ ಸಮರಾಭ್ಯಾಸ ನಡೆಯಲಿದೆ. ಕ್ಷಿಪಣಿ ಮತ್ತು ಗುಂಡಿನ ದಾಳಿಯ ಕಸರತ್ತುಗಳನ್ನು ಉಲ್ಲೇಖಿಸಿರುವ ರಷ್ಯಾ ಕರಾವಳಿ ಭಾಗದಲ್ಲಿ ಎಚ್ಚರಿಕೆಗಳನ್ನು ನೀಡಿದೆ.
ಉಕ್ರೇನ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿ ಈ ಬೆಳವಣಿಗೆಗಳ ಕುರಿತು ಆತಂಕ ವ್ಯಕ್ತಪಡಿಸಿದ್ದು, “ಮಿಲಿಟರಿ ಕಸರತ್ತಿನ ನೆಪದಲ್ಲಿ ಉಕ್ರೇನ್‌ನ ಕಡಲ ಸಾರ್ವಭೌಮತ್ವವನ್ನು ರಷ್ಯಾ ನಿರ್ಬಂಧಿಸಲಿದೆ. ಕಪ್ಪು ಸಮುದ್ರ, ಅಜೋವ್ ಸಮುದ್ರದಲ್ಲಿ ನೌಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲಿದೆ. ಉಕ್ರೇನ್‌ನ ಆರ್ಥಿಕತೆಗೆ ಅಗತ್ಯವಾದ ಸಮುದ್ರ ಮಾರ್ಗಕ್ಕೆ ಅಡ್ಡಿಪಡಿಸಲಿದೆ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿರಿ: ವಿವಾದಕ್ಕೆ ಎಡೆಮಾಡಿಕೊಟ್ಟ ವಿದೇಶಿ ಕಂಪನಿಗಳ ಸಾಮಾಜಿಕ ಜಾಲತಾಣಗಳ ಪೋಸ್ಟ್


