ರೈತರ ಹೋರಾಟದ ವಿಷಯದಲ್ಲಿ ಸರ್ಕಾರವನ್ನು ಬೆಂಬಲಿಸಿ ಟ್ವೀಟ್ ಮಾಡುವಂತೆ ಕೇಳುವ ಮೂಲಕ ಕೇಂದ್ರ ಸರ್ಕಾರವು ಲತಾ ಮಂಗೇಶ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪ್ರತಿಷ್ಠೆಯನ್ನು ಕಸಿದುಕೊಳ್ಳಬಾರದಿತ್ತು ಎಂದು ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಇವರೆಲ್ಲರೂ ದೊಡ್ಡ ವ್ಯಕ್ತಿಗಳು. ಆದರೆ ಅವರೀಗ ಕೇಂದ್ರ ಹೇಳಿದಂತೆ ಟ್ವೀಟ್ ಮಾಡಿದ್ದರಿಂದ ಸಾಕಷ್ಟು ಟ್ರೋಲ್‌ಗೊಳಗಾಗುತ್ತಿದ್ದಾರೆ, ಇದಕ್ಕೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ರಾಜ್ ಠಾಕ್ರೆ ದೂರಿದ್ದಾರೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ 74 ದಿನಗಳಿಂದ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ರೈತರ ಹೋರಾಟ ತಡೆಯಲು ಇಂಟರ್ನೆಟ್ ಕಡಿತ, ರಸ್ತೆಗಳಲ್ಲಿ ಮುಳ್ಳು ನೆಡುವುದು ಮಾಡಿತ್ತು. ಇದನ್ನು ವಿರೋಧಿಸಿ ಅಮೆರಿಕದ ಪಾಪ್ ತಾರೆ ರಿಹಾನ್ನ ಕೇವಲ ಆರು ಪದಗಳಲ್ಲಿ ಟ್ವೀಟ್ ಮಾಡಿದ್ದರು. ಇದು ಇಡೀ ವಿಶ್ವಾದಾದ್ಯಂತ ವೈರಲ್ ಆಗಿ ಭಾರತ ಸರ್ಕಾರಕ್ಕೆ ಮುಜುಗರ ತಂದಿತ್ತು.
ಆನಂತರ ವಿದೇಶಾಂಗ ಸಚಿವಾಲಯವು ಇದು ಭಾರತದ ಆಂತರಿಕ ವಿಷಯ ವಿದೇಶಿಗರು ತಲೆಹಾಕಬಾರದು ಎಂದು ಹೇಳಿಕೆ ನೀಡಿತ್ತು. ಅಲ್ಲದೆ ‘ಪ್ರೊಪಗಂಡಾ ವಿರುದ್ದ ಭಾರತ’ ಎಂಬ ಹ್ಯಾಷ್‌ಟ್ಯಾಗ್ ನೀಡಿತ್ತು. ನಂತರ ಒಂದೇ ರೀತಿಯ ಹೇಳಿಕೆ ಮತ್ತು ಹ್ಯಾಷ್‌ಟ್ಯಾಗ್ ಬಳಸಿ ಸಚಿನ್, ಲತಾ ಮಂಗೇಶ್ಕರ್, ಅಕ್ಷಯ್ ಕುಮಾರ್, ವಿರಾಟ್ ಕೊಹ್ಲಿ, ಸೈನಾ ನೆಹವಾಲ್ ಸೇರಿ ಹಲವರು ಟ್ವೀಟ್ ಮಾಡಿದ್ದರು. ಇದರಿಂದ ಕೆರಳಿದ ಲಕ್ಷಾಂತರ ಜಾಲತಾಣಿಗರು ಅಷ್ಟು ದಿನ ರೈತ ಹೋರಾಟ ಇವರಿಗೆ ಕಾಣುವುದಿಲ್ಲವೇ ಎಂದು ಈ ತಾರೆಯರನ್ನು ವಿರೋಧಿಸಿ ದೊಡ್ಡ ಮಟ್ಟದ ಟ್ರೋಲ್ ನಡೆಸಿದ್ದರು.
Raj Thackeray says Central Gov't shouldn't force Bharat Ratna awardees @mangeshkarlata & @sachin_rt to write tweets for Gov't propaganda.@akshaykumar is best for such kind of work ?? pic.twitter.com/dfJ9ZfIshQ
— Zeeshan Mhaskar (@MhaskarChief) February 6, 2021
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್‌ಠಾಕ್ರೆ “ಈ ರೈತ ಹೋರಾಟವನ್ನು ಹತ್ತಿಕ್ಕುತ್ತಿರುವುದಕ್ಕೆ ಬರುತ್ತಿರುವ ಅಂತರಾಷ್ಟ್ರೀಯ ಪ್ರತಿಕ್ರಿಯೆಯು ಸರ್ಕಾರಕ್ಕೆ ಸಂಬಂಧಿಸಿದ ವಿಷಯವೇ ಹೊರತು ಇಡೀ ರಾಷ್ಟ್ರಕ್ಕೆ ಸಂಬಂಧಿಸಿಲ್ಲ. ಇದು ಚೀನಾ ಅಥವಾ ಪಾಕಿಸ್ತಾನದಿಂದ ರಾಷ್ಟ್ರವು ಅಪಾಯವನ್ನು ಎದುರಿಸುತ್ತಿರುವುದಲ್ಲ” ಎಂದು ತಿಳಿಸಿದ್ದಾರೆ. ಹಾಗಾಗಿ ಇದನ್ನು ಸರ್ಕಾರವೇ ಎದುರಿಸಬೇಕೆ ಹೊರತು ಇಡೀ ರಾಷ್ಟ್ರಕ್ಕೆ ಅವಮಾನ ಎಂಬಂತೆ ಬಿಂಬಿಸಿ ದೊಡ್ಡ ದೊಡ್ಡ ವ್ಯಕ್ತಿಗಳು ಸರ್ಕಾರದ ಪರ ಟ್ವೀಟ್ ಮಾಡುವಂತೆ ಕೇಳಿಕೊಳ್ಳುವುದು ಸರಿಯಲ್ಲ, ವಿಶೇಷವಾಗಿ ಸಚಿನ್, ಲತಾ ಮಂಗೇಶ್ಕರ್‌ರವರನ್ನು ಕೇಳಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಪಾಪ್ ಗಾಯಕಿ ರಿಯಾನ್ನಾ, ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್, ವಕೀಲೆ ಮೀನಾ ಹ್ಯಾರಿಸ್ ಮತ್ತು ಚಲನಚಿತ್ರ ನಟಿ ಮಿಯಾ ಖಲೀಫರವರು ರೈತ ಹೋರಾಟ ಬೆಂಬಲಿಸಿ ಮಾಡಿದ ಟ್ವೀಟ್‌ಗಳಿಗೆ ಪ್ರತಿಯಾಗಿ ಭಾರತದ ಚಿತ್ರನಟರು ಮತ್ತು ಕ್ರೀಡಾಪಟುಗಳು ಯೋಜಿತ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದರಿಂದ ಅವರ ವ್ಯಕ್ತಿತ್ವಕ್ಕೂ ಹಾನಿ ಉಂಟಾಗಿದೆ. ಅದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ಸರ್ಕಾರ ತನ್ನ ಪರವಾಗಿ ಟ್ವೀಟ್ ಮಾಡುವಂತೆ ಅಕ್ಷಯ್ ಕುಮಾರ್ ಅವರಂತಹ ಜನರನ್ನು ಕೇಳಿಕೊಂಡರೆ ಪರವಾಗಿಲ್ಲ. ಆದರೆ ಲತಾ ಮಂಗೇಶ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರು ಭಾರತ್ ರತ್ನ ಪಡೆದಿರುವವರು. ಅಂತಹ ಸರಳ ಜನರು ಟ್ವೀಟ್ ಮಾಡುವಂತೆ ಸರ್ಕಾರ ಕೇಳಿದೆ ಮತ್ತು ಅವರೀಗ ಟ್ರೋಲ್‌ಗೊಳಗಾಗುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಿಗ್ಗೆ ಮಾತನಾಡಿದ್ದ ಎನ್‌ಸಿಪಿ ನಾಯಕ ಶರದ್ ಪವಾರ್ ಕೂಡ ‘ಮಾತನಾಡುವ ಮುನ್ನ ಅದರ ಪರಿಣಾಮದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಚಿನ್‌ಗೆ ಸಲಹೆ ನೀಡುತ್ತೇನೆ’ ಎಂದು ತಿಳಿಸಿದ್ದರು.
ಇದನ್ನೂ ಓದಿ: ’ಟ್ರಾಕ್ಟರ್ ಕ್ರಾಂತಿ’ಯಲ್ಲಿ ಭಾಗವಹಿಸಿ: ದೇಶಕ್ಕೆ ರೈತ ಮುಖಂಡ ಟಿಕಾಯತ್ ಕರೆ


