ತನ್ನ ತಾಯಿಗೆ ಬ್ರಿಜ್ ಭೂಷಣ್ ಸಿಂಗ್ ಬೆಂಬಲಿಗರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬ್ರಿಜ್ ಭೂಷಣ್ ಸಿಂಗ್ ಅವರ ಗೂಂಡಾಗಳು ಸಕ್ರಿಯರಾಗಿದ್ದಾರೆ. ನನ್ನ ತಾಯಿಗೆ ಫೋನ್ ಮುಖಾಂತರ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ರಕ್ಷಣೆ ಸರ್ಕಾರದ ಹೊಣೆ” ಎಂದು ಹೇಳಿದ್ದಾರೆ.
ಬ್ರಿಜ್ ಭೂಷಣ್ ಪ್ರಭಾವಿ ಎಂದು ನಮಗೆ ಗೊತ್ತಿತ್ತು. ಆದರೆ, ಅವರು ಯಾರೊಂದಿಗೂ ಚರ್ಚಿಸದೆ ತಮ್ಮ ಊರಿನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಘೋಷಣೆ ಮಾಡುವಷ್ಟು ಶಕ್ತಿಶಾಲಿ ಎಂದು ತಿಳಿದಿರಲಿಲ್ಲ. ಈಗ ನಾವು ಕಿರಿಯ ಕುಸ್ತಿಪಟುಗಳ ಭವಿಷ್ಯ ಹಾಳು ಮಾಡಿದ ಆರೋಪ ಎದುರಿಸುತ್ತಿದ್ದೇವೆ. ನಾನು ಕುಸ್ತಿಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ. ನನ್ನಿಂದ ಸಾಧ್ಯವಾಗದಿದ್ದನ್ನು ನನ್ನ ಜೂನಿಯರ್ ಹುಡುಗಿಯರು ಮಾಡಬೇಕೆಂದು ನಾನು ಬಯಸುತ್ತೇನೆ. ಅವರು ದೇಶಕ್ಕಾಗಿ ಬೆಳ್ಳಿ, ಚಿನ್ನ ಗೆಲ್ಲಬೇಕೆಂದು ಆಶಿಸುತ್ತೇನೆ. ಯಾವುದೇ ಜೂನಿಯರ್ ನಮಗಾಗಿ ನೋವು ಅನುಭವಿಸುವುದು ಬೇಡ ಎಂದಿದ್ದಾರೆ.
ಕುಸ್ತಿ ಫೆಡರೇಶನ್‌ನ ಹೊಸ ಆಡಳಿತ ಸಮಿತಿ ಅಥವಾ ತಾತ್ಕಾಲಿಕ ನಿರ್ವಹಣಾ ಸಮಿತಿ ಜೊತೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಜೊತೆ ಮಾತ್ರ ನಮ್ಮ ವಿರೋಧ ಇತ್ತು ಎಂದು ಸಾಕ್ಷಿ ತಿಳಿಸಿದ್ದಾರೆ.
ಕಳೆದ ವರ್ಷದಿಂದ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದ್ದೇನೆ. ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಕುಸ್ತಿ ಫೆಡರೇಶನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂಬ ಕಲ್ಪನೆ ನನಗಿರಲಿಲ್ಲ. ಅವರು ಆಯ್ಕೆಗೊಂಡಾಗ ಬೇಸರಗೊಂಡು ಕುಸ್ತಿಗೆ ವಿದಾಯ ಹೇಳಿದ್ದೇನೆ. ಮುಂದೆ ಏನು ಮಾಡಬೇಕು ಎಂದು ನನಗೆ ಗೊತ್ತಿಲ್ಲ ಎಂದು ಸಾಕ್ಷಿ ಮಲಿಕ್ ಬೇಸರ ಹೊರ ಹಾಕಿದ್ದಾರೆ.
ಬಿಜೆಪಿ, ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಕುಸ್ತಿ ಫೆರೇಶನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಬೇಸರಗೊಂಡು ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಹೇಳಿದ್ದಾರೆ.
ಡಿಸೆಂಬರ್ 21ರಂದು ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ)ಗೆ ನಡೆದ ಚುನಾವಣೆಯಲ್ಲಿ ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಸಾಕ್ಷಿ ಮಲಿಕ್ ತಮ್ಮ ಬೂಟು ಕಳಚಿಟ್ಟು ಕುಸ್ತಿಗೆ ವಿದಾಯ ಹೇಳಿದ್ದರು.
ಸಾಕ್ಷಿ ಮಲಿಕ್ ಬೆಂಬಲಿಸಿದ್ದ ಮತ್ತೋರ್ವ ಕುಸ್ತಿಪಟು ಬಜರಂಗ್ ಪೂನಿಯಾ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ಇಟ್ಟು ಪ್ರಧಾನಿಗೆ ತಲುಪಿಸುವಂತೆ ಹೇಳಿ ಹೊರಟು ಹೋಗಿದ್ದರು. ಇದರ ಬೆನ್ನಲ್ಲೇ ಕುಸ್ತಿಪಟು ವಿರೇಂದರ್ ಯಾದವ್ ತಮ್ಮ ಪದ್ಮಶ್ರೀ ಪ್ರಶಸ್ತಿ ಮರಳಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ್ದರು. ಬಳಿಕ ಕುಸ್ತಿಪಟು ವಿನೇಶ್ ಫೋಗಟ್ ಕೂಡ ತಮ್ಮ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ದೆಹಲಿಯ ಕರ್ತವ್ಯ ಪಥದ ಪಾದಾಚಾರಿ ಮಾರ್ಗದಲ್ಲಿಟ್ಟು ತೆರಳಿದ್ದರು.
ಜೂನಿಯರ್ ಕುಸ್ತಿಪಟುಗಳಿಂದ ಪ್ರತಿಭಟನೆ
ಕುಸ್ತಿ ಫೆಡರೇಶ್‌ನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ದ ಹೋರಾಟ ನಡೆಸಿದ್ದ ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ವಿರುದ್ದವೇ ಇಂದು ಜೂನಿಯರ್ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದಾರೆ.
#Breaking
Fresh protests erupt at Jantar Mantar, hundreds of junior wrestlers assemble to protest against the loss of one crucial year in their wrestling careers, blaming Bajrang Punia, Sakshi Malik & Vinesh Phogat for the slumpSince January 2023, national camps &… pic.twitter.com/swwgHKgB7f
— Nabila Jamal (@nabilajamal_) January 3, 2024
ದೆಹಲಿಯ ಜಂತರ್ ಮಂತರ್‌ನಲ್ಲಿ ಜಮಾಯಿಸಿದ ಜೂನಿಯರ್ ಕುಸ್ತಿಪಟುಗಳು ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಒಂದು ವರ್ಷದಿಂದ ನಮ್ಮ ಕುಸ್ತಿ ತರಬೇತಿಯನ್ನು ಹಾಳುಗೆಡವಿದ್ದಾರೆ. ಅವರಿಂದಾಗಿ ನಾವು ಅತಂತ್ರರಾಗಿದ್ದೇವೆ. ಈ ಮೂವರಿಂದ ಕುಸ್ತಿ ಫೆಡರೇಶನ್ ರಕ್ಷಿಸಿ ಎಂದು ಬ್ಯಾನರ್ ಹಿಡಿದು ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ : ಮೋದಿ 3D ಸೆಲ್ಫಿ ಬೂತ್ ನಿರ್ಮಾಣ ವೆಚ್ಚದ ಮಾಹಿತಿ ನೀಡಿದ ಅಧಿಕಾರಿ ದಿಡೀರ್ ವರ್ಗಾವಣೆ


