ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್‌ರವರ ಹತ್ಯೆಯ ಮುಖ್ಯ ರುವಾರಿಯಾದ ಸನಾತನಾ ಸಂಸ್ಥೆಯ ವಿರೇಂದ್ರಸಿನ್ಹ ತಾವ್ಡೆ ಸಮಾಜಕ್ಕೆ ಅಪಾಯಕಾರಿ ವ್ಯಕ್ತಿಯಾಗಿದ್ದು, ಆತನಿಗೆ ಜಾಮೀನು ನೀಡಬಾರದು ಎಂದು ಸಿಬಿಐ ಬಾಂಬೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಪಿತೂರಿ ಮಾಡಿ, ಶಾರ್ಪ್ ಶೂಟರ್‌ಗಳನ್ನು ನೇಮಕ ಮಾಡಿಕೊಂಡು 2013ರಲ್ಲಿ ನರೇಂದ್ರ ದಾಭೋಲ್ಕರ್‌ರವರನ್ನು ಹತ್ಯೆ ಮಾಡಲಾಗಿತ್ತು. ಸನಾತನಾ ಸಂಸ್ಥೆಯ ನಂಬಿಕೆ ಮತ್ತು ಆಚರಣೆಗಳ ವಿರುದ್ಧವಿದ್ದವರನ್ನು ಹಿಂದೂ ವಿರೋಧಿಗಳೆಂಬ ಹಣೆಪಟ್ಟಿ ಕಟ್ಟಿ ಕೊಲೆಗೈಯುವುದು ವಿರೇಂದ್ರಸಿನ್ಹ ತಾವ್ಡೆಯ ಉದ್ದೇಶವಾಗಿತ್ತು ಎಂದು ಸಿಬಿಐ ಹೇಳಿದೆ.
ಸನಾತನಾ ಸಂಸ್ಥೆಯ ಕ್ಷಾತ್ರ ಧರ್ಮ ಸಾಧನದ ಬೋಧನೆಗಳನ್ನು ತಾವ್ಡೆ ಮತ್ತವನ ಅನುಯಾಯಿಗಳು ಅನುಸರಿಸುತ್ತಿದ್ದರು. ಸನಾತನ ಸಂಸ್ಥೆ / ಹಿಂದೂ ಜನ ಜಾಗೃತಿ ಸಮಿತಿಯು ತಮಗೆ ಇಷ್ಟವಿಲ್ಲದೆ ಅಥವಾ ಸಹಿಸದ ಯಾವುದೇ ಕೃತ್ಯವನ್ನು ಮಾಡುವವರನ್ನು ಕ್ರೂರ ರೀತಿಯಲ್ಲಿ ವ್ಯವಹರಿಸಲಾಗುವುದು ಎಂಬ ಭಾವನೆಯನ್ನು ಅಪರಾಧಿಗಳಿಗೆ ನೀಡಿತು. ಅಂತಹ ಭಾವನೆಯು ಬೆದರಿಕೆಗೆ ಸಮಾನವಾಗಿದೆ. ಜನರು ಮತ್ತು ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಇದು ಸಮಾಜದ ಮೇಲೆ ಭಯೋತ್ಪಾದಕ ಪರಿಣಾಮವನ್ನು ಬೀರಿದೆ” ಎಂದು ಸಿಬಿಐ ಅಫಿಡವಿಟ್ ನಲ್ಲಿ ತಿಳಿಸಿದೆ.
ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಮೂಲಕ ಮೌಢ್ಯಾಚರಣೆಗ ವಿರುದ್ಧ ಹೋರಾಡುತ್ತಿದ್ದ ನರೇಂದ್ರ ದಾಭೋಲ್ಕರ್‌ರವರನ್ನು ಪುಣೆಯಲ್ಲಿ ಅವರು ಬೆಳಗಿನ ವಾಕಿಂಗ್ ಮಾಡುತ್ತಿದ್ದಾಗ ಆಗಸ್ಟ್ 20, 2013ರಂದು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಅವರನ್ನು ಹತ್ಯೆಗೈದವರೆ ಗೋವಿಂದ ಪಾನ್ಸಾರೆ, ಎಂ.ಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್‌ರವರನ್ನು ಸಹ ಹತ್ಯೆಗೈದಿದ್ದಾರೆ ಎಂದು ನಂತರದ ತನಿಖೆಯಿಂದ ಬಹಿರಂಗವಾಗಿದೆ.
ಮೂರು ವರ್ಷಗಳ ನಂತರ, ಜೂನ್ 10, 2016 ರಂದು ಸಿಬಿಐ ತಾವ್ಡೆಯನ್ನು ಬಂಧಿಸಿತು ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿಯಲ್ಲಿ (UAPA) ಕೊಲೆ, ಪಿತೂರಿ ಮತ್ತು ಭಯೋತ್ಪಾದನೆ ಸಂಬಂಧಿತ ಅಪರಾಧಗಳಿಗೆ ಇತರ ಮೂವರ ಜೊತೆಗೆ ಆರೋಪ ಹೊರಿಸಿತು. ಐದನೇ ಆರೋಪಿ ವಕೀಲ ಸಂಜೀವ್ ಪುನಾಲೇಕರ್ ವಿರುದ್ಧ ಸಾಕ್ಷ್ಯ ನಾಶಪಡಿಸಿದ ಆರೋಪ ಹೊರಿಸಲಾಗಿತ್ತು.
ಇದನ್ನೂ ಓದಿ: ಶಾಲೆ ತೆರೆಯಲು ಹೈಕೋರ್ಟ್ ಮೌಖಿಕ ಆದೇಶ; ಹಿಜಾಬ್, ಕೇಸರಿ ವಿಚಾರಣೆ ಮುಂದೂಡಿಕೆ


