ಬೆಳಗಾವಿಯ ಪೀರನವಾಡಿ ವೃತ್ತದಲ್ಲಿ ಸ್ಥಾಪಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಖಂಡಿಸಿ, ಅದೇ ಸ್ಥಳದಲ್ಲೀ ಕೂಡಲೇ ಪ್ರತಿಮೆ ನಿರ್ಮಿಸಬೇಕೆಂದು ಆಗ್ರಹಿಸಿ ಇಂದು ಬೆಳಗಾವಿ ಚಲೋ ಹೋರಾಟ ನಡೆಯುತ್ತಿದ್ದು, ಭಾರೀ ಜನಬೆಂಬಲ ವ್ಯಕ್ತವಾಗಿದೆ.
ಕರ್ನಾಟಕ ರಣಧೀರರ ಪಡೆ ರಾಜ್ಯಾಧ್ಯಕ್ಷ ಬಿ.ಹರೀಶ್ ಕುಮಾರ್ ನೇತೃತ್ವದಲ್ಲಿ ನೂರಾರು ಕನ್ನಡಿಗರು ನಿನ್ನೆ ಬೆಂಗಳೂರಿನಿಂದ ಹಲವು ವಾಹನಗಳಲ್ಲಿ ಜಾಥ ಹೊರಟಿದ್ದು ಇಂದು ಮುಂಜಾನೆ ಬೆಳಗಾವಿ ತಲುಪಿವೆ. ಸಾಮಾಜಿಕ ಕಾರ್ಯಕರ್ತ ನಿಕೇತ್ ರಾಜ್ ಮೌರ್ಯ ನೇತೃತ್ವದಲ್ಲಿ ಮತ್ತೊಂದು ತಂಡ ಬೆಳಗಾಗಿ ತಲುಪಿದ್ದು ಅಲ್ಲಿನ ಸ್ಥಳೀಯರು, ಕನ್ನಡಪರ ಹೋರಾಟಗಾರರು ಸೇರಿ ಬೆಳಗಾವಿಯ ಸುವರ್ಣ ವಿಧಾನಸೌಧದೆಡೆಗೆ ಬೃಹತ್ ಮೆರವಣಿಗೆ ನಡೆಸುತ್ತಿದ್ದಾರೆ.

ಆಗಸ್ಟ್ 15 ರಂದು ಸಂಗೊಳ್ಳಿ ರಾಯಣ್ಣನ ಜನ್ಮದಿನದಂದು ಹಲವು ಕನ್ನಡಪರ ಹೋರಾಟಗಾರರು ರಾತ್ರೋರಾತ್ರಿ ಬೆಳಗಾವಿಯ ಪೀರನವಾಡಿ ವೃತ್ತದಲ್ಲಿ ಪ್ರತಿಮೆ ಸ್ಥಾಪಿಸಿದ್ದರು. ಆದರೆ ಪೊಲೀಸರು ಅದನ್ನು ತೆರವುಗೊಳಿಸಿ, ತಡೆಯಲು ಮುಂದಾದ ಕನ್ನಡಪರ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದರು.
ಅಂದಿನಿಂದ ನೂರಾರು ಕನ್ನಡಪರ ಸಂಘಟನೆಗಳು ಅದೇ ಸ್ಥಳದಲ್ಲಿ ರಾಯಣ್ಣನ ಪ್ರತಿಮೆ ನಿರ್ಮಾಣವಾಗಬೇಕೆಂದು ಪಟ್ಟು ಹಿಡಿದು ಕುಳಿತಿವೆ. ಹತ್ತಾರು ಪ್ರತಿಭಟನೆಗಳು ದಾಖಲಾಗಿವೆ. ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ದನಿಯೆತ್ತಲಾಗುತ್ತಿದೆ. ಆದರೂ ಸರ್ಕಾರವಾಗಲೀ, ಬೆಳಗಾವಿ ಜಿಲ್ಲಾಡಳಿತವಾಗಲಿ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.
ಆಗಸ್ಟ್ 17 ರಂದು ಬೆಳಗಾವಿಯಲ್ಲಿ ಸಾವಿರಾರು ಜನರು ಸೇರಿ ಭಾರೀ ಪ್ರತಿಭಟನೆ ನಡೆಸಿದ್ದರು. ಪೀರನವಾಡಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಕೂಡಲೇ ಪ್ರತಿಮೆ ಸ್ಥಾಪನೆಗೆ ಪಟ್ಟು ಹಿಡಿದಿದ್ದರು. ಅದೇ ದಿನ ಬೆಂಗಳೂರಿನಲ್ಲಿ ಕರ್ನಾಟಕ ರಣಧೀರ ಪಡೆಯಿಂದ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆದಿತ್ತು.
ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು: ಕನ್ನಡಿಗರಿಂದ ತೀವ್ರ ಆಕ್ರೋಶ
ಪ್ರತಿಮೆ ಸ್ಥಾಪನೆಗೆ ಅನುಮತಿ ಪಡೆದಿಲ್ಲ ಎಂಬುದು ಪೊಲೀಸರ ವಾದವಾದರೆ, ಅಲ್ಲಿನ ಸ್ಥಳೀಯರು ಮೂರು ವರ್ಷಗಳಿಂದ ಅನುಮತಿಗೆ ಪ್ರಯತ್ನಿಸಲಾಗುತ್ತಿದೆ. ಪೀರನವಾಡಿ ಗ್ರಾಮಪಂಚಾಯ್ತಿಯು ಅನುಮತಿ ನೀಡಿದೆ. ಆದರೆ ಪೊಲೀಸರು ಅನುಮತಿ ನಿರಾಕರಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ದನಿಯೆತ್ತಿದ್ದರು. ಶಾಂತಿಯುತವಾಗಿ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಸಹಕರಿಸಬೇಕು ಎಂದು ಕೋರಿದ್ದರು.
ಕರ್ನಾಟಕ ರಣಧೀರ ಪಡೆ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರಾಯಣ್ಣಿನಿಗಾಗಿ ಉಪವಾಸ ಸತ್ಯಾಗ್ರಹ ಕೂಡ ನಡೆದಿತ್ತು. ನಿನ್ನೆ ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದ ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಸ್ವಾಮೀಜಿಯವರು ಶಾಂತಿಯುತವಾಗಿ ವಿವಾದ ಬಗೆಹರಿಸುವಂತೆ ಮನವಿ ಮಾಡಿದ್ದರು.
ಗೃಹಸಚಿವ ಬಸವರಾಜ ಬೊಮ್ಮಾಯಿಯವರು ಮಾತನಾಡಿ ವಿವಾದ ಬಗೆಹರಿಸಿ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಕೆಲಸ ಮಾಡುತ್ತಿದ್ದು, ಸ್ವಲ್ಪಸಮಯಾವಕಾಶಬೇಕು ಎಂದಿದ್ದರು.
ಇಂದು ಬೆಳಗಾವಿಯಲ್ಲಿ ಈ ವಿಚಾರಕ್ಕೆ ಭಾರೀ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ಹಲವು ಭಾಗಗಳಿಂದ ಕನ್ನಡಿಗರು ಬೆಳಗಾವಿ ಚಲೋಗೆ ಕೈಜೋಡಿಸಿದ್ದಾರೆ. ಪೀರನವಾಡಿ ಸರ್ಕಲ್‌ಗೆ ರಾಯಣ್ಣ ವೃತ್ತ ಎಂದು ಹೆಸರಿಡಬೇಕೆಂದು ಒತ್ತಾಯಿಸಿದ್ದಾರೆ.
ಸರ್ಕಾರ ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಆದಷ್ಟು ಬೇಗ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡದಿದ್ದಲ್ಲಿ ಪ್ರತಿಭಟನೆಯ ಕಿಚ್ಚು ಜೋರಾಗುವ ಸಂಭವವಿದೆ.
ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಪಟ್ಟು: ಬೆಳಗಾವಿ, ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ
Also Read: BJP: Yes to Savarkar, No to Kitturu Rani Chennamma


