ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿಯಲ್ಲಿ ರೂಪಿಸಲಾಗಿರುವ ಪಠ್ಯಪುಸ್ತಕಗಳಲ್ಲಿ ಮಾಡಿರುವ ತಪ್ಪುಗಳು ಒಂದೊಂದಾಗಿ ಹೊರಬರುತ್ತಿತ್ತು, ಈಗ ಸ್ಮಾರ್ತ ಬ್ರಾಹ್ಮಣರು, ಸಮಿತಿಯ ಎಡವಟ್ಟಿನ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಾಘವಾಂಕ ರಚಿತ ಕಾವ್ಯ ಭಾಗವನ್ನು ಒಂಬತ್ತನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ನೀಡಲಾಗಿದೆ. “ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು” ಪದ್ಯದ ಕುರಿತ ಅಭ್ಯಾಸ ಭಾಗದಲ್ಲಿ ಶಂಕರಾಚಾರ್ಯರಿಗೆ ಅವಮಾನ ಮಾಡಲಾಗಿದೆ ಎಂದು ಸ್ಮಾರ್ತ ಬ್ರಾಹ್ಮಣರು ಬೇಸರ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ಭಾಷೆಯ ಸೊಬಗು’ ಎಂಬ ಅಭ್ಯಾಸ ಭಾಗವನ್ನು ಚಕ್ರತೀರ್ಥ ಸಮಿತಿ ಸೇರಿಸಿದ್ದು ಅಲ್ಲಿನ ಸಾಲುಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ.
“ಕನ್ನಡದಲ್ಲಿರುವ ಶ, ಷ, ಸ ವರ್ಣಗಳಿಗೆ ಉಚ್ಚಾರದಲ್ಲಿ ವ್ಯತ್ಯಾಸಗಳಿವೆ ಎಂಬುದನ್ನು ಗಮನಿಸಿ. ಈ ಮೂರು ವರ್ಣ (ಅಥವಾ ಅಕ್ಷರ)ಗಳನ್ನು ಬಳಸುವಾಗ ನಾವು ಅರ್ಥ ವ್ಯತ್ಯಾಸವಾಗದಂತೆ ಎಚ್ಚರ ವಹಿಸಬೇಕು. ಉದಾಹರಣೆಗೆ ಶಕಲ- ಒಂದು ಸಣ್ಣ ತುಂಡು ಅಥವಾ ಸಣ್ಣ ಭಾಗ ಎಂದು ಅರ್ಥ. ಆದರೆ ಸಕಲ ಎಂದಾಗ ಇಡಿಯಾದ, ಪೂರ್ಣವಾದ, ಎಲ್ಲ- ಎಂಬ ಅರ್ಥಗಳು ಬರುತ್ತವೆ. ಎರಡೂ ಪರಸ್ಪರ ವಿರುದ್ಧಾರ್ಥಗಳನ್ನು ಕೊಡುವ ಪದಗಳು!
ಹಾಗೆಯೇ, ಶಂಕರ ಎಂದರೆ ಮಂಗಳವನ್ನುಂಟುಮಾಡುವವನು, ಶಿವ ಎಂದು ಅರ್ಥ. ಮೂವರು ಪ್ರಮುಖ ಮತಾಚಾರ್ಯರಲ್ಲಿ ಮೊದಲನೆಯವರ ಹೆಸರು ಶಂಕರ. ಆದರೆ ಸಂಕರ ಎಂದರೆ ಬೆರಕೆ, ಕಲಬೆರಕೆ, ಒಪ್ಪತಕ್ಕದ್ದಲ್ಲದ ಮಿಶ್ರಣ ಎಂಬ ಅರ್ಥವೂ ಹೊಮ್ಮುತ್ತದೆ.
ಶರ್ವ ಎಂಬುದು ಶಿವ ಮತ್ತು ವಿಷ್ಣು ದೇವರುಗಳಿಗೆ ಇರುವ ಒಂದು ಹೆಸರು ಸರ್ವ ಎಂದರೆ ಎಲ್ಲ ಅಥವಾ ಸಮಗ್ರ ಎಂದು ಅರ್ಥವಾಗುತ್ತದೆ. ದೋಷ ಎಂದರೆ ತಪ್ಪು ಎಂಬರ್ಥವೂ ಹೊಮ್ಮಿದರೆ ದೋಸ ಎಂಬುದು ದೋಸೆಯ ಅಪಭ್ರಂಶವಾಗಿ ಇಂದು ಬಳಕೆಯಲ್ಲಿರುವ ಪದವಾಗಿದೆ. ಹಾಗೆಯೇ ಶರ ಎಂದರೆ ಬಾಣ ಎಂಬ ಅರ್ಥವಾದರೆ ಸರ ಎಂಬುದು ಕೊರಳಮಾಲೆ ಎಂಬ ಅರ್ಥವನ್ನು ಕೊಡುತ್ತದೆ. ಹೀಗೆ ಅಕ್ಷರಗಳ ವ್ಯತ್ಯಾಸವಾದಾಗ ಅರ್ಥವ್ಯತ್ಯಾಸವಾಗುವ ಶಬ್ದಗಳನ್ನು ಪಟ್ಟಿ ಮಾಡಿ.

ಹೀಗೆ ಅಭ್ಯಾಸ ಪಠ್ಯವನ್ನು ರೂಪಿಸಲಾಗಿದೆ.
ಮಾಧ್ವರು ಹಾಗೂ ಸ್ಮಾರ್ತ ಬ್ರಾಹ್ಮಣರ ನಡುವಿನ ವಿವಾದ ಇಂದು ಮೊನ್ನೆಯದ್ದಲ್ಲ. ಆದರೆ ವಿವಾದಕ್ಕೆ ಪಠ್ಯಪುಸ್ತಕವೂ ಉಪ್ಪು ಸುರಿದಿದೆ. ಫೇಸ್‌ಬುಕ್‌ನಲ್ಲಿರುವ “ಶ್ರೀಶ್ರೀ ಶಂಕರಾಚಾರ್ಯರ “ನಿಂದಾ ನಿರ್ಮೂಲನ ಅಭಿಯಾನ” ಎಂಬ ಗ್ರೂಪ್‌ನಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.
ಶ್ರಿನಾಥ್ ಋಗ್ವೇದಿ ಎಂಬವರು ಪೋಸ್ಟ್ ಮಾಡಿದ್ದು, “ನೂತನವಾಗಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ ರೋಹಿತ್ ಚಕ್ರತೀರ್ಥರಿಗೆ ಅಭಿನಂದನೆಗಳು. ಪಠ್ಯ ಪುಸ್ತಕದಲ್ಲಿ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್‌ರ ಮತ್ತು ಚಕ್ರವರ್ತಿ ಸೂಲಿಬೆಲೆಗಳ ಪಾಠ ಪುಸ್ತಕಕ್ಕೆ ತೂಕ ತಂದಿದೆ. ದೇಶಿಯ ವಿಚಾರಗಳನ್ನು ಅಳವಡಿಸಿರುವುದು ಪ್ರಶಂಸನೀಯ. ಆದರೆ 9ನೇ ತರಗತಿಯ ಮಕ್ಕಳಿಗೆ ಉದಾಹರಣೆ ಕೊಡುವಾಗ ಭಾರತದ ಪ್ರಪಥಮ ಆಚಾರ್ಯರಾದ ಜಗದ್ಗುರು ಶಂಕರಾಚಾರ್ಯರ ಹೆಸರನ್ನು ಸಂಕರ ಎಂದರೆ ಕಲಬೆರಿಕೆ ಎಂದು ಹಾಕಿರುವುದು ಖಂಡನೀಯ. ಉಚ್ಚರಣೆಯ ದೋಷಗಳನ್ನು ತಿಳಿಸಿಕೊಡಬೇಕಾದರೆ ಬೇರೆ ಉದಾಹರಣೆ ಸಿಗಲಿಲ್ವಾ ನಿಮಗೆ. ಅದನ್ನು ಹಾಕುವ ಅವಶ್ಯವಾದರೂ ಏನಿತ್ತು?” ಎಂದು ಪ್ರಶ್ನಿಸಿದ್ದಾರೆ.


ಇದಕ್ಕೆ ಹಲವು ಜನರು ಪ್ರತಿಕ್ರಿಯೆ ನೀಡಿದ್ದಾರೆ. “ಬ್ರಾಹ್ಮಣರ ಒಗ್ಗಟ್ಟು ಒಗ್ಗಟ್ಟು ಅಂತಿದ್ದವರು ಈಗ ಬಾಯಿ ಬೊಡ್ಕೊಳ್ಳಿ. ಹುಟ್ಟ ಗುಣ ಸುಟ್ಟರೂ ಹೋಗೋಲ್ಲ ಅಂತ ಗಾದೇನೆ ಇದೆ. ಹಿಂಗಿದ್ದಾಗ ಹೋಗಿ ಹೋಗಿ ಅವನ ಕೈಯಲ್ಲಿ ಪುಸ್ತಕ ಪರಿಷ್ಕರಣೆ ಮಾಡೋಕ್ಕೆ ಬಿಟ್ಟರೆ ಅವರ ಬುದ್ದಿ ತೋರಿಸದೆ ಇರ್ತಾರಾ? ತೋರಿಸಿಯೇ ಬಿಟ್ಟರು ಮಾಧ್ವರು” ಎಂದು ಶ್ರೀಕಾಂತ್ ಋಗ್ವೇದಿ ಎಂಬವರು ಕಮೆಂಟ್ ಮಾಡಿದ್ದಾರೆ. ಮುಂದುವರಿದು, “ಬೇರೆ ವಿಷ್ಯಕ್ಕೆ ಎದ್ದನೋ ಬಿದ್ದನೋ ಅಂತ ಮಧ್ಯದಲ್ಲಿ ಬರುತ್ತಿದ್ದ ತ್ರೈಮತಸ್ಥ ಬ್ರಾಹ್ಮಣ ಸಂಘಗಳು ಎಲ್ಲಿ ಹೊದ್ರಿ ಸ್ವಾಮಿ?” ಎಂದು ಪ್ರಶ್ನಿಸಿದ್ದಾರೆ.
ಶಂಕರಾಚಾರ್ಯರನ್ನು ನಿಂದನೆ ಮಾಡಿದವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿರುವ ಹಲವು ಪೋಸ್ಟ್‌ಗಳು ಈ ಗ್ರೂಪ್‌ನಲ್ಲಿ ಕಾಣಬಹುದು.


