Homeಸಾಹಿತ್ಯ-ಸಂಸ್ಕೃತಿಕಥೆಕನಸಿನಲ್ಲಿ ಬಂದ ಹುಡುಗಿ ಸಾರಾ ಶಗುಪ್ತಾ

ಕನಸಿನಲ್ಲಿ ಬಂದ ಹುಡುಗಿ ಸಾರಾ ಶಗುಪ್ತಾ

- Advertisement -
- Advertisement -

ಮಹಾಲಿಂಗಪ್ಪ ಆಲಬಾಳ |

ದುಂಡನೆಯ ಮುಖ, ಚೂಪಾದ ಮೂಗು, ಅವಳ ಮನಸಿನಂತೆ ಕದಡಿದ ಕೂದಲು. ಗೋಧಿ ಬಣ್ಣ, ತುಂಬಿಕೊಂಡ ಮೈಕಟ್ಟು, ಕಣ್ಣೋಟದಲ್ಲೇ ಸೆಳೆದು ಬಿಡುವ ಹರೆಯ.
ಆ ಹುಡುಗಿ ಅದೇಕೇ ನನಗೆ ಗಂಟು ಬಿದ್ದಳೋ…. ನನಗೇ ಗೊತ್ತಾಗಲಿಲ್ಲ. ನಾನು ಅವಳಲ್ಲಿಗೆ ಹೋದದ್ದು ಯಾಕೆ ಎಂಬುದೂ ಗೊತ್ತಿಲ್ಲ. ಆದರೆ ಯಾವುದೋ ಅಸ್ಪಷ್ಟ ಸ್ಥಳದಲ್ಲಿ, ಬಯಲಲ್ಲಿ ಒಂದು ಕಲ್ಲು ಬೆಂಚಿನ ಮೇಲೆ ಕುಳಿತು ಅವಳು ಆಗಾಗ ಏನೇನೊ ಬರೆಯುತ್ತಿದ್ದಳು ಎಂಬುದು ಕೂಡ ಆ ಸ್ಥಳದಷ್ಟೇ ಅಸ್ಪಷ್ಟವಾಗಿ ನೆನಪಿನಲ್ಲಿ ಉಳಿದಿದೆ.
ನಾನು ಕಾರಣವಿಲ್ಲದೇ ಹೀಗೆ ಹಾದು ಹೋಗುವಾಗ ಈ ಹುಡುಗಿಯನ್ನು ಕಂಡೆ ಅಷ್ಟೇ……..
ಸುಂದರಿ…… ನನಗಿಂತಲೂ ದಷ್ಟಪುಷ್ಟ. ತಲೆ ಎತ್ತಿ ನನ್ನನ್ನು ನೋಡಿದಳು ಎಂಬುದನ್ನು ಮಾತ್ರ ಹೇಳಬಲ್ಲೆ. ನಾನು ಅವಳ ಸೌಂದರ್ಯಕ್ಕೆ ಮಾರುಹೋದೆ.
ನನಗೂ ಇಷ್ಟೇ ಗೊತ್ತು.
ಮಾತಿಲ್ಲ ಕತೆ ಇಲ್ಲ……
ನನ್ನ ವಿಳಾಸ, ಪರಿಚಯ ಹಿನ್ನೆಲೆ ಮುನ್ನೆಲೆ ಏನೇನೂ ಗೊತ್ತಿಲ್ಲ, ಆದರೂ ಆಶ್ಚರ್ಯವೆಂಬಂತೆ ನಾನಿರುವಲ್ಲಿಗೆ ಬರತೊಡಗಿದಳು, ಬಂದು ಕಾಡತೊಡಗಿದಳು. ತನ್ನ ಕವಿತೆಗಳೊಂದಿಗೆ.
ಅವಳು ಬಂದದ್ದು ಹೇಗೆ ಎಂಬುದು ಅನವಶ್ಯಕ. ಬರತೊಡಗಿದಳು ತನ್ನ ಕವಿತೆಗಳೊಂದಿಗೆ.
ನೇರ ನೋಟ, ದೃಢವಾದ ಹೆಜ್ಜೆಗಳು, ಮುಲಾಜಿಲ್ಲದ ಮಾತುಗಳು, ಕೆಲವೇ ಕೆಲವು ಮಾತುಗಳು. ಕಳಂಕವನ್ನೇ ಕಲ್ಪಿಸಿಕೊಳ್ಳದ ಅವಳ ಒಡನಾಟ. ಬಿರುಗಾಳಿಯನ್ನೇ ಒಳಗೆ ಹುದುಗಿಸಿಕೊಂಡಂತೆÉ ಮನಸ್ಥಿತಿ.
ನನ್ನನ್ನು ಆಕರ್ಷಿಸಿ ಬಿಟ್ಟಳು ಆ ಹುಡುಗಿ. ಆದರೆ ಏನು ಮಾಡುವುದು? ಅವಳು ಕವಿತೆ ಮಾತ್ರವಾಗಿದ್ದಳು.
ಅವಳು ಬರೀ…… ಕವಿತೆ ಕವಿತೆ ಕವಿತೆ. ಮತ್ತೇನೂ ಆಗಿರಲಿಲ್ಲ.
ಅವಳ ಸೆಳೆಯುವ ನೋಟ, ತುಂಬಿದ ಗಲ್ಲ, ಚಂದನೆಯ ತುಟಿ, ಗಾಳಿಯೊಂದಿಗೆ ಸರಸವಾಡುತ್ತಿದ್ದ ಕೂದಲು. ಉಕ್ಕಿ ಹರಿಯುತ್ತಿದ್ದ ಯೌವ್ವನ. ಎಲ್ಲವೂ ಅವು ಅವುಗಳಾಗಿರಲಿಲ್ಲ. ಅವು ಕವಿತೆಗಳಾಗಿದ್ದವು. ಕಾಗದದ ಚೂರುಗಳಾಗಿದ್ದವು. ರದ್ದಿಯ ಮೇಲೆ ಅವಳು ಯಾವ್ಯಾವಾಗಲೋ ಗೀಚುತ್ತಿದ್ದ ಅಕ್ಷರಗಳಾಗಿದ್ದವು, ಅವಳ ಹಠವಾಗಿದ್ದವು. ಅವಳ ಕಣ್ಣುಗಳಿಂದ ಸಿಡಿದು ಬರುತ್ತಿದ್ದ ಬೆಂಕಿಯ ಜ್ವಾಲೆಗಳಾಗಿದ್ದವು. ಅವಳ ಅಂತರಂಗದಲ್ಲಿ ಸ್ಫೋಟಗೊಳ್ಳುತ್ತಿದ್ದ ಜ್ವಾಲಾಮುಖಿಗಳಾಗಿದ್ದವು. ಈಗಲೂ ನನಗೆ ಗೊತ್ತಿಲ್ಲ, ಅವಳು ಹೇಗೆ ನನಗೆ ಗಂಟು ಬಿದ್ದಳು ಅಂತ. ಎಲ್ಲವೂ ಅಸ್ಪಷ್ಟ ಅವಳ ನಿಲುವುಗಳಂತೆ, ನಡವಳಿಕೆಯಂತೆ, ಅವಳ ಮನಸ್ಸಿನಲ್ಲಿ ಉರಿಯುತ್ತಿದ್ದ ಬೆಂಕಿಯಿಂದ ಏಳುತ್ತಿದ್ದ ಘಾಸಿಗೊಂಡ ಭಾವನೆಗಳ ಅಲೆಗಳಂತೆ. ಅವಳು ಸೇದಿ ಹೊರಬಿಡುತ್ತಿದ್ದ ಸಿಗರೇಟಿನ ಹೊಗೆಯಂತೆ……
ಅವಳು ನನ್ನನ್ನು ಕಾಡಿಸತೊಡಗಿದಳು, ಪೀಡಿಸತೊಡಗಿದಳು. ಅವಳದು ಒಂದೇ ಹಠಮಾರಿತನದ ಬೇಡಿಕೆ, ಅದು ಅವಳು ಓದುವ ಕವಿತೆಗಳನ್ನು ನಾನು ಕೇಳಬೇಕು. ಅದರಾಚೆ ಮತ್ತೇನೂ ಇಲ್ಲ…… ಅವಳ ಹಠ ನನಗೆ ಗೊತ್ತು. ಅವಳು ಹೂವಿನ ಸುಗಂಧ ಸೂಸುವ ಹರೆಯದ ಹುಡುಗಿ, ನಾನೂ ಹರೆಯದ ಹುಡುಗ. ರಾತ್ರಿ ಹಗಲೂ….. ಯಾವ ಪರಿವೆಯೂ ಇಲ್ಲದಂತೆ ಹೊಳೆಯ ದಂಡೆಯ ಮೇಲೆ ಸಮುದ್ರದ ಅಲೆಗಳ, ಮೇಲೆ ಎತ್ತರದ ಬೆಟ್ಟದ ಮೇಲೆ, ಹಿಮ ಶಿಖರಗಳ ಮೇಲೆ ಮತ್ತು ದಟ್ಟ ಕಾಡುಗಳ ಅಪರಿಚಿತ ಕಲ್ಲು ಬಂಡೆಗಳ ಮೇಲೆ…… ಮತ್ತೇ ಎಲ್ಲೆಲ್ಲೂ ನನಗೆ ಗೊತ್ತಿಲ್ಲ. ಅಲ್ಲೆಲ್ಲ ಬರೀ ಕವಿತೆ…. ಕವಿತೆ…… ಕವಿತೆ…..
ಅವಳು ಓದುವುದು…… ನಾನು ಕೇಳುವುದು. ಅವಳು ಅದಷ್ಟೇ ಆಗಿದ್ದಳು. ಅದರಾಚೆಗಿನ ನನ್ನ ಯಾವ ಬಯಕೆಗಳೂ ಅವಳಾಗಿರಲಿಲ್ಲ. ಅವಳು ಓದುತ್ತಿದ್ದಳು……..

“ಏಕೆ ದಿಟ್ಟಿಸಬೇಕು ನಾನು
ಬರೀ ಚುಕ್ಕಿ ಚಂದ್ರಮರನ್ನು
ಅಲೆ ಇರುವುದು ಸಾಗರಕ್ಕಾಗಿ
ಭೂಮಿ ಬರೀ ಹೆಣ್ಣಿಗಾಗಿ
ಮದುವೆಯ ಊಟಕ್ಕೆ ಬಂದವರು
ಅದೆಲ್ಲಿಗೆ ಹೋದರು……………….
………………………………………….”

ನಾನು ಕವಿತೆಯ ಗಂಧ ಗಾಳಿ ತಿಳಿಯದ ಮನುಷ್ಯ. ಅವಳ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ. ಮೌನವಾಗಿ ಅವಳ ಮಾತು, ಕವಿತೆ ಕೇಳುವುದಷ್ಟೇ ನನ್ನ ಕೆಲಸವಾಗಿತ್ತು.
ಆದರೆ ಅವಳು ಸಿಡಿಮಿಡಿಗೊಂಡಳು. ಸಿಟ್ಟಿನಿಂದ ಇದೇನಿದು ನಿನ್ನ ಮೌನ. ನೀನು ಬೇಕಾದರೆ ಹೀಗೆಯೇ ಇರು ನಾನು ಮಾತಾಡುತ್ತಲೇ ಇರುತ್ತೇನೆ.
“ಮೌನವನ್ನು ನಾನು ದ್ವೇಷಿಸುತ್ತೇನೆ. ಮೌನ ನನ್ನನ್ನು ಮೋಸಗೊಳಿಸಿದೆ. ಅದು ನನ್ನ ವ್ಯಕ್ತಿತ್ವವಲ್ಲ, ನಾನು ಮಾತನಾಡಲೇಬೇಕಿದೆ. ಮೌನ ನನ್ನ ಮೇಲೆ ಹೇರಲ್ಪಟ್ಟಿದೆ. ಅದಕ್ಕೆ ನಾನು ಅದನ್ನು ದ್ವೇಷಿಸುತ್ತೇನೆ, ಮಾತನಾಡುತ್ತೇನೆ. ಅದಕ್ಕೇ ಸಮಾಜ ನನ್ನನ್ನು ದ್ವೇಷಿಸುತ್ತದೆ” ಎಂದವಳು ಮತ್ತೊಂದು ಕವಿತೆ ಓದತೊಡಗಿದಳು.

“ನನ್ನ ಕಾಲ ಬುಡದ ನೆಲವನು
ಪುರುಷ ಕಬಳಿಸಿದ್ದಾನೆ.
ಇತಿಹಾಸ ಮೌನವಾಗಿತ್ತು.
ನಾನು ಈ ಹೆಣ್ಣುಗಳ ಮೂಕತನ ಕಂಡು
ದಿಗ್ಭ್ರಮೆಯಾಗಿದೆ……………
…………………………………”

ಅದ್ಯಾಕೋ. ಹೇಗೋ ಗೊತ್ತಿಲ್ಲ ಅವಳು ಪ್ರತಿ ಕವಿತೆ ಓದುವಾಗಲೂ ನಮ್ಮ ಸ್ಥಳ ಬದಲಾಗುತ್ತಲೇ ಇದೆ. ಒಮ್ಮೆ ನದಿ ದಂಡೆ, ಕಾಡು, ಸಾಗರ ಹೀಗೆಯೇ. ತೇಲಿ ಬರುವ ತಂಗಾಳಿಯೊಂದಿಗೆ ಅವಳ ದೇಹದಿಂದ ಹರಿದು ಬರುವ ಸುವಾಸನೆ ಬೆರೆತು ವಿಚಿತ್ರವಾದ ಆಹ್ಲಾದಕರ ವಾತಾವರಣ ನಿರ್ಮಾಣವಾಗುತ್ತಿತ್ತು. ಅದು ಹಗಲೋ….. ರಾತ್ರಿನೋ…… ಅಲ್ಲ…… ಅವೆರಡೂ……. ಅಲ್ಲದ ಅವಳದೇ ಒಂದು ಕಾಲ, ಸಮಯ, ತನ್ನ ಮನಸ್ಸಿನ ಮೂಡಿಗೆ ಬೇಕಾದಂತೆ ಕಾಲ, ವಾತಾವರಣವನ್ನು ಅವಳೇ ನಿರ್ಮಿಸಿಕೊಂಡು ಬಿಡುತ್ತಿದ್ದಳು.
ಈಗೆಲ್ಲೋ…. ಚಂದ್ರನಿಗೆ ಸಮೀಪ ಕುಳಿತ ನೆನಪು. ಹಲವಾರು ನಕ್ಷತ್ರಗಳು ಬೆಳಗುತ್ತಿವೆ.
ಮೇಲೆ ನೀಲಿ ಆಕಾಶ ಗಂಭೀರವಾಗಿದೆ. ಚಂದ್ರನೆಡೆಗೆ ಒಮ್ಮೆ ನಿರ್ಭಾವುಕಳಾಗಿ ನೋಡಿದಳು. ನಂತರ ಇಬ್ಬರೂ ಹೋಗಿ ಒಂದು ಮೋಡದ ಮೇಲೆ ಕುಳಿತೆವು. ಅಲ್ಲಿ ಓದತೊಡಗಿದಳು.

“ಯಾವ ಚಂದ್ರನೂ ಇಳಿಯಲಿಲ್ಲ
ನನ್ನ ಕಪ್ಪು ರಂಧ್ರಗಳ ಮೂಲಕ
ನನ್ನ ಗೋರಿ ಮಾತ್ರ ತುಂಬಿ ಬಿಡುವುದು
ಭೂಮಿಯ ಮೇಲಿನ ದ್ವೇಷದಿಂದ.
…………………………………………..”
ಮತ್ತೊಂದು.
“ದಾಖಲಾಗಿದೆ ಅವಳ ದನಿ
ನೆಲದ ಹಣೆ ಬರಹದಲಿ
ನೆಲ ನನ್ನತ್ತ ಹಾರಿಸುತ್ತಿದೆ ಧೂಳನ್ನು
ತನ್ನ ಚಾಚಿದ ಕೈಗಳಿಂದ……………
……………………………………………”

ಇಷ್ಟು ಓದುವುದರೊಳಗೆ ಅವಳು ನಿಗಿನಿಗಿ ಉರಿಯುವ ಬೆಂಕಿ ಕೆಂಡದಂತಾಗಿದ್ದಳು. ಅದ್ಯಾಕೆ ಅಂತ ಗೊತ್ತಿಲ್ಲ. ಅವಳು ಹಾಗೆಯೇ…… ಆ ಸುಂದರ ಹೂವಿನಂತಹ ಮುಖದಲ್ಲಿ ಬಿಸಿ ಅಲೆಗಳು ಏಳಲಾರಂಭಿಸಿದ್ದವು.
ನಾನಂದೆ. ನಿನ್ನ ಹಾಗೂ ನಿನ್ನ ಕವಿತೆಯ ಬಿಸಿಗೆ ನಾವು ಕುಳಿತ ಮೋಡ ಕರಗಬಹುದು. ಬಾ ಹೋಗೋಣ…… ನನ್ನತ್ತ ತಿರುಗಿದವಳೇ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದಳು. ನೋಡುತ್ತ ನಿಂತವಳು ನಿಂತೇ ಇದ್ದಳು….. ಮುಖ ಪ್ರಶಾಂತವಾಗತೊಡಗಿತು…. ಬಾ ಹೋಗೋಣ….. ಎಂದಳು. ಆ ಕ್ಷಣ ನಾವು ಅಲ್ಲಿರಲಿಲ್ಲ.
ಅದೊಂದು ಲೋಕವೇ ಬೇರೆ. ಅದು ಅವಳೇ ಕಟ್ಟಿಕೊಂಡ ಲೋಕ. ಅಲ್ಲಿ ನಿರ್ಜೀವ ವಸ್ತುಗಳಿಗೆ ಜೀವವಿದೆ. ಜೀವವಿರುವವರು ನಿರ್ಜೀವವಾಗಿದ್ದಾರೆ. ಅವಳು ಹಾರುತ್ತಾಳೆ, ನಕ್ಷತ್ರಗಳೊಡನೆ ಬೆರೆಯುತ್ತಾಳೆ, ಚಂದ್ರನೊಂದಿಗೆ ಜಗಳಕ್ಕೆ ಬೀಳುತ್ತಾಳೆ. ಹರಿಯುವ ನದಿಯನ್ನು ತಡೆದು ಉಪದೇಶಿಸುತ್ತಾಳೆ. ಭೋರ್ಗರೆಯುವ ಸಮುದ್ರದ ಅಲೆಗಳೊಂದಿಗೆ ಒಡನಾಡುತ್ತಾಳೆ…….. ಇನ್ನೂ ಏನೇನೋ…. ಅದು ಅವಳದೇ ಲೋಕ. ಅವಳ ಅನತಿಯಂತೆ ನಡೆಯುವ ಲೋಕ.
ಹೀಗೆ…… ಒಂದು ಸಾರಿ, ಅದೆಲ್ಲಿ ಕುಳಿತಿದ್ದೆವೊ ಸ್ಪಷ್ಟವಾಗಿ ನೆನಪಿಲ್ಲ. ಅವಳ ಕವಿತೆ ಓದು ಆರಂಭವಾಗುವ ಮುನ್ನ ನನ್ನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಒಡಮೂಡಿ ಪುಟಿದೇಳಲು ಶುರುವಾದವು………
ಅಂತಿಮವಾಗಿ ಇವಳು ಯಾರು? ನನಗೇಕೆ ಗಂಟುಬಿದ್ದಳು? ಕೇಳಿಯೇ ಬಿಡಬೇಕು ಅಂಥ ನಿರ್ಧರಿಸಿ ತಣ್ಣಗೆ ಕೇಳಿದೆ.
“ನೀನು ಯಾರು?”
ಸತ್ತ ಸಮುದ್ರದಂತೆ ನಿರ್ಲೀಪ್ತವಾಗಿದ್ದ ಅವಳಲ್ಲಿ ಅಲೆಗಳು ಏಳಲಾರಂಭಿಸಿದವು. ಬೆಳದಿಂಗಳಂತಿದ್ದ ಮುಖ ಕಂಪೇರತೊಡಗಿತು. ಕಣ್ಣು
ಕೆಂಡದುಂಡೆಗಳಂತಾಗತೊಡಗಿದವು. ಅವಳು ಹಾಗೆಯೇ……… ಒಮ್ಮೆ ತಂಗಾಳಿಯಂತೆ, ಮತ್ತೊಮ್ಮೆ ಬಿರುಗಾಳಿಯಂತೆ.
“ನಾನು ರಾಕ್ಷಸನ ಅಂತಃಪುರದಲ್ಲಿ ಇರಲಾರದೇ, ಎದ್ದು ನಡೆದು ಬಂದವಳು”. ಅಂದಳು.
ಕೆಲಹೊತ್ತು ಮೌನವಾಗಿ, ನನ್ನ ಮುಖವನ್ನು ನೋಡಿ,
“ನನ್ನನ್ನು ಹುಚ್ಚಿ ಎಂದರು, ಅತಿಕಾಮಿ ಎಂದರು, ವ್ಯಭಿಚಾರಿ, ಚಂಚಲೆ, ದುಪ್ಪಟ್ಟಾ ಹೊದೆಯದವಳು. ಹೀಗೆ ಏನೇನೋ ಕರೆದರು………..
ನಾನು ಹದಿನಾರನೇ ವರ್ಷಕ್ಕೆ ಕಾಲಿಟ್ಟಾಗ ಒಬ್ಬ ಗಂಡಸಿಗೆ ನನ್ನ ದೇಹ ಮದುವೆ ಹೆಸರಲ್ಲಿ ಮಾರಾಟವಾಯ್ತು. ಏನೊಂದೂ ಗೊತ್ತಿರದ ಆ ವಯಸ್ಸಲ್ಲಿ ಅಪರಿಚಿತ ಗಂಡು ದೇಹವೊಂದು ನನ್ನನ್ನು ಆಕ್ರಮಿಸಿತು. ಅದನ್ನು ನಾನು ಒಪ್ಪಿಕೊಳ್ಳಲೇಬೇಕೆಂದು ನನಗೆ ಕಲಿಸಲಾಗಿತ್ತು. ನನ್ನ ಪಾಲಿಗೆ ಗಂಡನೇ ಸರ್ವಸ್ವವೆಂದು ತಂದೆ-ತಾಯಿ ನಂಬಿಸಿದ್ದರು. ನನ್ನ ಗಂಡ ವ್ಯಭಿಚಾರಿಯಾಗಿದ್ದ. ಅವನು ನನ್ನವನಾಗಲೇ ಇಲ್ಲ. ನನ್ನ ದೇಹ ಕಪ್ಪಿಟ್ಟು ಹೋಗುವಂತೆ ಹೊಡೆಯುತ್ತಿದ್ದ. ತನಗೆ ಬೇಕಾದಾಗ ರಬ್ಬರ ಬೊಂಬೆಯಂತೆ ನನ್ನನ್ನು ಸಂಭೋಗಿಸುತ್ತಿದ್ದ.”
ಮತ್ತೆ ಮೌನವಾದಳು. ಅವಳ ಮನದೊಳಗೆ ಬೆಂಕಿಯ ಜ್ವಾಲೆಗಳು ಏಳುತ್ತಿರುವುದನ್ನು ನಾನು ಗಮನಿಸಿದೆ. ಅವಳು ಮುಖ ಮೇಲಕ್ಕೆತ್ತಿ ಆಕಾಶವನ್ನೇ ತದೇಕಚಿತ್ತದಿಂದ ದಿಟ್ಟಿಸತೊಡಗಿದಳು. ಅವಳ ಕೆಂಪೇರಿದ ಮುಖದಿಂದೇಳುತ್ತಿದ್ದ ಬಿಸಿ ಅಲೆಗಳ ಪರಿಣಾಮವೇನೋ…… ಮೇಲೆ ಆಕಾಶ ಕೂಡ ಮೌನವಾಗಿ ಕೆಂಪಾಗತೊಡಗಿತು. ಅದೆಷ್ಟು ಹೊತ್ತೋ…….. ಮೌನ ಹಾಗೆಯೇ ಮುಂದುವರೆದು.
ಮತ್ತೇ ಅವಳೇ ಮಾತಾಡಿದಳು.
“ನಾನು ಕೇವಲ ಒಂದು ದೇಹವಲ್ಲ. ನಾನೊಂದು ಮನಸ್ಸು, ನಾನೊಂದು ಭಾವನೆ, ನಾನೊಂದು ಆಸೆ, ನಾನೊಂದು ಆಕಾಂಕ್ಷೆ, ನಾನೊಂದು ಪ್ರೀತಿಸುವ ಹೃದಯ. ನಾನು ಪ್ರೀತಿಸುವುದನ್ನು ನಿಷೇಧಿಸಲಾಗಿದೆ, ಆ ನಿಷೇಧವನ್ನು ನಾನು ಧಿಕ್ಕರಿಸುತ್ತೇನೆ”
ಅದಕ್ಕಾಗಿಯೇ ನಾನು ವ್ಯಭಿಚಾರಿ ಎನಿಸಿಕೊಂಡೆ, ನನಗೇನೂ ಬೇಜಾರಿಲ್ಲ. ಆದರೆ ನಾನು ಒಂದು ಪ್ರಶ್ನೆಯನ್ನು ಕೇಳಲೇಬೇಕು. ಹೆಣ್ತನವೆಂದರೆ, ಶರಣಾಗತಿ ಅಥವಾ ಗುಲಾಮಗಿರಿನಾ?.
ಅನ್ನದ ಹಸಿವು, ದೇಹದ ಹಸಿವು, ಪ್ರೀತಿಯ ಹಸಿವು, ಬದುಕಿನ ಹಸಿವು ಇವುಗಳಿಗೆ ಪರಿಹಾರ ಬಯಸಿದೆ. ಸಮಾಜ ನನಗೆ ಸೂಳೆಯ ಪಟ್ಟ ಕಟ್ಟಿತು. ಇಲ್ಲಿ ಹೆಣ್ಣಿಗೆ ಹಸಿವನ್ನು ನಿಷೇಧಿಸಲಾಗಿದೆ” ಅವಳ ಮಾತು ಕುದಿಯತೊಡಗಿದ್ದವು, ಜೊತೆಗೆ ಅವಳು ಕೂಡ. ಮುಂದೆ ಅವಳೊಂದಿಗೆ ಮಾತನಾಡುವ ಧೈರ್ಯ ಬರಲಿಲ್ಲ. ಅವಳೂ ಮೌನವಾದಳು ನಾನೂ ಅದರಲ್ಲಿ ಲೀನನಾದೆ. ಎಷ್ಟೋ ಹೊತ್ತು….
ಯಾರೋ ನನ್ನನು ಅಲುಗಾಡಿಸಿದಂತಾಗಿ ತಟ್ಟನೆ ಮುಖ ಎತ್ತಿ ನೋಡಿದೆ. ಅರೇ,… ಇದೇನಿದು?, ನಾವು ಬೇರೆ ಯಾವುದೋ ಸ್ಥಳದಲ್ಲಿದ್ದೇವೆ.
ಎತ್ತರದ ಪ್ರದೇಶ ಸುತ್ತಮುತ್ತ ಹಿಮರಾಶಿ. ನೆಲದಲ್ಲೂ ಗಾಳಿಯಲ್ಲೂ, ಆಕಾಶದಲ್ಲೂ ಬರೀ ಹಿಮರಾಶಿ. ಅದನ್ನು ಬಿಟ್ಟು ಮತ್ತೇನೂ ಕಾಣುತ್ತಿಲ್ಲ. ಕಣ್ಣು ಹಾಯಿಸಿದಷ್ಟು ಬರೀ ಬೆಳ್ಳನೆಯ ಶುಭ್ರ ಹಿಮರಾಶಿಯೇ ತುಂಬಿಕೊಂಡಿದೆ. ಆದರೆ ನಮ್ಮ ಮೈಗೆ ಅದು ತಾಕುತ್ತಿಲ್ಲ. ನಾವು ಎತ್ತರದ ಯಾವುದೋ ಶಿಖರದ ಮೇಲಿದ್ದೇವೆ. ಕೆಳಗೆ ಹಿಮನದಿಗಳು ಹರಿಯುತ್ತಿವೆ. ಅಲ್ಲಲ್ಲಿ ದೂರದಲ್ಲಿ ಹಿಮಸರೋವರಗಳು ತುಂಬಿ ನಿಂತಿವೆ. ಎತ್ತರದ ಇಳಿಜಾರಿನ ಹಳ್ಳಗಳಲ್ಲಿ ಹರಿಯುತ್ತಿರುವುದೂ ಹಿಮವೇ.
ಎದುರಿಗೆ ನಿಂತು ನಗುತ್ತಿದ್ದಾಳೆ. ಮನಸ್ಸು ಹಿಮಾಲಯದಷ್ಟೇ ತಣ್ಣಗಾಗಿದೆ. ಅವಳ ನಗುವು ಅಂಥ ಪರಿಸರದಲ್ಲಿಯೂ ಮತ್ತು ಬರಿಸುವಂತಿತ್ತು. ಬದಲಾಗಿದ್ದಳು. ಕೈ ಹಿಡಿದು ಎಳೆದು ಬಂಡೆಯೊಂದರ ಮೇಲೆ ಕೂಡಿಸಿ, ತಾನೂ ಕುಳಿತು, ತಣ್ಣಗೆ ಹೇಳಿದಳು. ನಾನು ಈಗ ಕವಿತೆ ಓದುತ್ತೇನೆ ಕೇಳು.

“ಕುಣಿಯಲಾರೆ ನಾನು ಅವರ ಅಂಗೈಯಲ್ಲಿ
ನಡೆಸಿಕೊಂಡು ನನ್ನ ಅಮಾನುಷವಾಗಿ
ತಿರುಚಲಾಗಿದೆ ನನ್ನ ನಾಲಿಗೆಯನ್ನು
ನಾನು ಬರೆಯುತ್ತಿಲ್ಲ…. ಉರಿಯುತ್ತೇನೆ.
……………
ಮತ್ತೊಂದು…..
“ಅವಳ ಹೊತ್ತಿ ಉರಿಯುವ
ಉಡುಗೆಯಲ್ಲಿದ್ದಂತಿದೆ ರಾತ್ರಿ
ಯಾರೋ ಕಣ್ಣು ನೆಟ್ಟಂತಿದೆ
ಗೋರಿಯ ಮೇಲೆ
ಗೋಡೆಗಳಗುಂಟ ನಡೆದೆ
ಮೈಲುಗಟ್ಟಲೆ…………….
………………………………..

ಏನಪ್ಪ, ಇವಳು ಇಂಥ ಹಿಮರಾಶಿಯ ತಂಪಿನಲ್ಲೂ ಉರಿಯುವ ಕವಿತೆಗಳನ್ನೇ ಹೇಳುತ್ತಾಳಲ್ಲ ಅನ್ನಿಸಿತು, ಸಿಟ್ಟು ಬಂತು. ಅದು ಯಾಕೆ ನನಗೆ ಗಂಟು ಬಿದ್ದಳೋ…. ನಾನು ಹೇಳಿದೆ. “ನೋಡು ನಾನು ಕವಿಯಲ್ಲ, ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು. ನನ್ನನ್ನು ಬಿಟ್ಟು ನೀನು ಹೋಗು.
ಆಗ ಅವಳು, “ನೋಡು… ನನ್ನನ್ನು ಅರ್ಥ ಮಾಡಿಕೋ…. ಈಗ ನಿನ್ನ ಬಿಟ್ಟು ನನಗ್ಯಾರೂ ಇಲ್ಲ. ನನ್ನ ಕವಿತೆಗಳಿಗೂ ಕೂಡ… ನಾನು ಯಾರಿಗಾಗಿ ಬರೆಯಲಿ… ನನ್ನ ತಂದೆ ನನ್ನ ತಾಯಿಯನ್ನು ಬಿಟ್ಟು ಬೇರೆ ಮದುವೆಯಾದ. ಆಗ ನಮ್ಮ ಮನೆಯ ಒಲೆ ನಮಗೆ ಉಣ್ಣಲು ಒಂದು ರೊಟ್ಟಿ ನೀಡುವ ಸ್ಥಿತಿಯಲ್ಲಿರಲಿಲ್ಲ. ನಮ್ಮ ಮನೆಯೊಳಗಿನ ಬೆಂಕಿಯ ತೀವ್ರತೆ ಮಾತ್ರ ಹೆಚ್ಚಾಗುತ್ತಿತ್ತು.. ತಂಗಳ ತುಣುಕಿಗಾಗಿ ನಿರಂತರ ಚಡಪಡಿಸುವ ಇಲಿಯಂತೆ ನಾನು ಅಡುಗೆ ಮನೆಯ ಒಂದೊಂದು ಡಬ್ಬಿಯನ್ನೂ ತಡಕಾಡಿದ್ದೇನೆ ಗೊತ್ತಾ… ತುತ್ತು ಅನ್ನಕ್ಕಾಗಿ, ಹಿಡಿ ಪ್ರೀತಿಗಾಗಿ ನಾನು ಅದೆಷ್ಟು ಹುಡುಕಾಡಿದ್ದೇನೆ.

“ನರ್ತಿಸತೊಡಗಿತು ಹಸಿವು
ನನ್ನ ಹೊಟ್ಟೆಯಲ್ಲಿ
ನನ್ನ ತಾಯಿಯ
ಅಡುಗೆ ಮಾಡುವ ಸದ್ದಿನೊಂದಿಗೆ.”

ಹಂ…. ಇನ್ನೊಂದು ವಿಷಯ… ನಾನು ಮೂರು ಮದುವೆಯಾದೆ. ಆದರೆ, ನನ್ನನ್ನು ಪ್ರೀತಿಸುವವನು ಒಬ್ಬನೂ ಸಿಗಲಿಲ್ಲ. ಬರೀ ದೇಹದ ವ್ಯವಹಾರವಾಯಿತು. ತಲೆ ಚಿಟ್ಟು ಹಿಡಿದುಹೋಯಿತು. ನನ್ನ ಎರಡನೇ ಗಂಡ, ಅವನಿಗಾದರೂ ಹೃದಯವಿರಬಹುದೆಂದು ನಂಬಿ, ಮೂರು ಮಕ್ಕಳನ್ನು ಹಡೆದೆ. ಆತ ಮೂರು ಮಕ್ಕಳನ್ನು ನನ್ನಿಂದ ದೂರ ಮಾಡಿದ. ಆ ಮಕ್ಕಳನ್ನು ಪಡೆಯಲು ನ್ಯಾಯಾಲಯದಲ್ಲಿ ನಾನೊಬ್ಬ ಸೂಳೆ ಎಂದು ಹೇಳಿಸಲಾಯಿತು… ಅದನ್ನು ನಾನೇ ಹೇಳಿ ಮಕ್ಕಳನ್ನು ಪಡೆದೆ… ಬಂದ ನನ್ನ ಗಂಡ ಕುರಾನ್ ಮೇಲೆ ಆಣೆ ಮಾಡಿ ಮರಳಿ ತಂದು ಒಪ್ಪಿಸುವುದಾಗಿ ಹೇಳಿ ಮಕ್ಕಳನ್ನು ಕರೆದುಕೊಂಡು ಹೋದ. ಸಂಪೂರ್ಣ ನನ್ನಿಂದ ದೂರ ಮಾಡಿದ. ಆಗ.. ಆಗ.. ಕುರಾನ್ ತನ್ನ ಕಳೆದುಕೊಂಡ ಘನತೆಯನ್ನು ಪುನಃ ಪಡೆದುಕೊಳ್ಳಬೇಕಿತ್ತು… ‘ನನ್ನ ಎದೆಯ ಹಾಲಿನ ಒಂದೊಂದು ಹನಿಯೂ ವ್ಯರ್ಥವಾಯಿತು. ಮೂರು ಮಕ್ಕಳಿದ್ದೂ ನಾನು ಏಕಾಂಗಿಯಾದೆ…’ ಈ ನೆಲದ ಹಸಿವಿಗಿಂತಲೂ ನನ್ನ ಹಸಿವು ತೀವ್ರವಾಗಿತ್ತು. ಆಗ ‘ನಾನು ನನ್ನ ಎದೆಯ ಹಾಲಿನ ಮೇಲೆ ಪ್ರತಿಜ್ಞೆ ಮಾಡಿದೆ. ನಾನು ಕವಿತೆ ಬರೆಯುತ್ತೇನೆಂದು’. ಕವಿತೆಗಳನ್ನು ಬರೆಯುತ್ತಲೇ ಹೋದೆ. ಈಗ ಜನ, ಸಮಾಜ ನನ್ನ ಕವಿತೆಗಳೊಂದಿಗೆ ನನ್ನನ್ನೂ ದೂರ ಮಾಡಿದ್ದಾರೆ. ನನ್ನ ಹಾದರಗಿತ್ತಿ ಎಂದು ಭಾವಿಸಿ ಮನೆಯವರೂ ದೂರವಾಗಿದ್ದಾರೆ. ಅದು ನಿಜಾನಾ? ನಾನು ವ್ಯಭಿಚಾರಿನಾ? ಕಾಮುಕಿನಾ? ಹೇಳು… ಹೌದಾ… ಹೇಳು” ಎಂದು ತಬ್ಬಿಕೊಂಡು ಅಳತೊಡಗಿದಳು. ಏನು ಹೇಳಬೇಕೆಂದು ತೋಚದೆ ಸುಮ್ಮನಿದ್ದುಬಿಟ್ಟೆ. ಅದೆಷ್ಟು ಸವಯವೋ…..
ಅದೊಂದು ಸ್ಮಶಾನಲೋಕ. ಎಲ್ಲ ಕಡೆಗೂ ಗೋರಿಗಳು… ಎತ್ತ ನೋಡಿದರೂ ಬರೀ ಗೋರಿಗಳೇ. ಅದು ಜೀವವೇ ಇರದ ಲೋಕ. ಜೀವವಿರುವ ನರಪಿಳ್ಳೆಯ ಸುಳಿವೂ ಇಲ್ಲ.. ಗಿಡ ಮರಗಳ ಸುಳಿವೂ ಇಲ್ಲ. ಬರೀ ಗೋರಿಗಳು, ಗೋರಿಗಳು.. ಗೋರಿಗಳು. ಕೆಲವು ಹೊಸದಾಗಿ ಕಟ್ಟಲ್ಪಟ್ಟ ಗೋರಿಗಳು. ಆ ಕರಾಳರಾತ್ರಿಯಲ್ಲೂ ಮಬ್ಬು ಬೆಳಕಿದೆ. ಚಂದಿರನ, ನಕ್ಷತ್ರಗಳ ಸುಳಿವಿಲ್ಲ. ಒಂದು ಎತ್ತರದ ಗೋರಿಯ ಮೇಲೆ ಅವಳು ಕುಳಿತಿದ್ದಾಳೆ. ಚಂದಿರನಂತೆ ಹೊಳೆಯುವ ಮುಖ, ಬೆಳ್ಳಿಯಂತಹ ದೇಹ, ಬೀಸದ ಗಾಳಿಗೆ ಹಾರಾಡುತ್ತಿರುವ ಕೂದಲು, ಇಡೀ ಅವಳ ಆಕೃತಿಯಿಂದ ಹೊರಹೊಮ್ಮುತ್ತಿರುವ ಹರೆಯ…. ಹರೆಯ ಅವಳಿಗೆ ಮಾತ್ರವಲ್ಲ. ಅವಳ ಕವಿತೆಗಳಿಗೂ…. ಅವಳು ಅವಳ ಕವಿತೆ ಎರಡೂ ಒಂದೇ. ಬೇರೆಯಲ್ಲ. ಅವಳು ಕುಳಿತ ಗೋರಿಯ ಪಕ್ಕದ ಗೋರಿಯ ಮೇಲೆ ನಾನು ಕುಳಿತಿದ್ದೆ. ಅವಳು ಹರಿದುಹೋಗಿದ್ದ ಕಾಗದದ ಚೂರುಗಳ ಮೇಲೆ ಬರೆದ ಕವಿತೆ ಓದಲಾರಂಭಿಸಿದಳು.

“ಮುರಿದ ಆಟಿಕೆಗಳು
ಅಳುತ್ತಿವೆ ನನ್ನ ಗರ್ಭದಲಿ
ಪತ್ತೆಯಾಗದೂ ಯಾರಿಗೂ
ಶತಮಾನಗಳ ತನಕ ನನ್ನ
ಅಪರಿಪೂರ್ಣ ಮಗುವು
……………………………..”
ಮತ್ತೊಂದು ಕವಿತೆ
“ಕಣ್ಣುಗಳು ಮರುಭೂಮಿಯಲಿ
ಮಿಣುಕು ಮಿಣುಕೆನ್ನುತ್ತಿವೆ
ಬಂಜೆ ನೆರಳುಗಳು
ನೋವಿನ
ಯಾವ ಬಜಾರಿಗೆ ಹೋಗುವಿರಿ
…………………………………….”

ಒಮ್ಮಿಂದೊಮ್ಮಿಗೆ ಕವಿತೆ ಓದುವದನ್ನು ನಿಲ್ಲಿಸಿ ನನ್ನ ಮುಖವನ್ನೇ ತದೇಕಚಿತ್ತದಿಂದ ನೋಡಲಾರಂಭಿಸಿದಳು. ಮರುಕ್ಷಣದಲ್ಲೇ ಅಳಲು ಶುರು ಮಾಡಿದಳು. ಮತ್ತೇ ಕ್ಷಣಾರ್ಧದಲ್ಲಿ “ನೋಡು ಈಗ ನನಗಿರುವುದು ನೀನು ಮಾತ್ರ. ನಾನು ಕವಿತೆ ಬರೆಯುತ್ತೇನೆ. ಅದಕ್ಕಾಗಿ ಬದುಕುತ್ತೇನೆ. ಅದಕ್ಕಾಗಿಯೇ ನೀನು ನನ್ನ ಕವಿತೆಗಳನ್ನು ಕೇಳಲೇಬೇಕು. ಇದರಲ್ಲಿ ನೀನು ನನಗೆ ಮಾಡುವ ಉಪಕಾರವೇನೂ ಇಲ್ಲ. ನೋಡು ನೀನು ಎಲ್ಲರಂತಾಗಬೇಡ. ನನಗೆ ಈಗ ಉಳಿದಿರೋದು ನೀನೊಬ್ಬ ಮಾತ್ರ” ಎಂದು ಕೆಂಡದಂಥ ಕಣ್ಣುಗಳಿಂದ ನನ್ನನ್ನು ಕೆಕ್ಕರಿಸಿ ನೋಡತೊಡಗಿದಳು.
ಈ ಜನ ಈ ಗಂಡಸರು ನನ್ನನ್ನೇ ಹಿಂಸಿಸಿ ಹುಚ್ಚಿಯನ್ನಾಗಿಸಿದ್ದಾರೆ. ಅವರು ನನ್ನ ಮಕ್ಕಳನ್ನು
ದೂರ ಮಾಡಿದ್ದಾರೆ. ಅವರ ಪ್ರೀತಿಯಿಂದ ವಂಚಿಸಿದ್ದಾರೆ. ಒಡಲ ಬೆಂಕಿ ಸದಾ ಉರಿಯುವಂತೆ ಮಾಡಿದ್ದಾರೆ. ನಾನು ನನ್ನ ಮಕ್ಕಳನ್ನು ನೋಡಲು ಹೋದರೆ ನನ್ನತ್ತ ಗುಂಡು ಹಾರಿಸಿದ್ದಾರೆ. ಕೆಲವು ಗುಂಡುಗಳು ತಲೆ ಮತ್ತು ಬಲಗಿವಿಯ ಬಳಿಗೆ ಹಾದುಹೋದವು. “ನೀನು ನನಗಾಗಿ ಇಂದು ಪ್ರಾರ್ಥಿಸು…….. ನೀನು ನನ್ನ ಯಾವುದೇ ಇಚ್ಛೆಯನ್ನು ಪೂರೈಸು ಎಂದು ನಾನು ಕೇಳಿಕೊಳ್ಳುವದಿಲ್ಲ. ಏಕೆಂದರೆ ತಾಯಂದಿರು ಇಚ್ಛೆಗಳಿಗಿಂತ ಮಿಗಿಲಾಗಿರುತ್ತಾರೆ” ಎಂದಳು. ಮತ್ತೆ ಕೆಲಕಾಲ ಮೌನ……ಹಾರಾಡುತ್ತಿದ್ದ ಕೂದಲನ್ನು ಸರಿಮಾಡಿಕೊಂಡು ಮತ್ತೇ ನನ್ನತ್ತ ನೋಡಿ ನಗಲಾರಂಭಿಸಿದಳು. ಮತ್ತೇ… ನೋಡು ನಾನು ಜನರನ್ನು ನಂಬುವುದಿಲ್ಲ. ಅದರಲ್ಲೂ ಗಂಡಸರನ್ನಂತೂ ನಂಬುವುದೇ ಇಲ್ಲ. ಅವರು ನನ್ನ ಮೇಲೆ ದಾಳಿ ಮಾಡಿದ್ದಾರೆ. ನನ್ನ ದೇಹವನ್ನು ನನ್ನಿಚ್ಛೆಗೆ ವಿರುದ್ಧವಾಗಿ ಭೋಗಿಸಿದ್ದಾರೆ. ನಾನು ನಿನ್ನನ್ನೂ ಅಷ್ಟಾಗಿ ನಂಬುವದಿಲ್ಲ. ಆದರೂ ನೀನು ಒಳ್ಳೆಯವ ಅನಿಸುತ್ತದೆ. ನಿನ್ನನ್ನು ನಂಬಬೇಕೊ ಬೇಡವೋ ಅನ್ನೋ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ. ಆದರೂ ನೀನು ನನ್ನ ಕವಿತೆಗಳಿಗೆ ಕಿವಿಯಾಗುತ್ತಿದ್ದಿಯಾ. ಅದಕ್ಕೆ ನಿನ್ನ ಹೊರತು ನಾನು ಎಲ್ಲರಿಂದಲೂ ದೂರ! ಎಂದವಳೇ ಕವಿತೆ ಓದತೊಡಗಿದಳು.

“ನನ್ನ ಸಲ್ವಾರ್ ಲಾಡಿಯಿಂದ ಅಳೆಯಬಲ್ಲೆ
ಪುರುಷನ ಎತ್ತರವನು
ನಾನು ಹೇಗೆ ಪಣಕ್ಕಿಡಲಿ ನನ್ನ ದೇಹವನು
……………………………………………………….”
ಮತ್ತೊಂದು ಕವಿತೆ
“ನನ್ನ ಮೂರು ಹೂಗಳಿಗೂ ನೀರಡಿಕೆ
ಉದುರತೊಡಗಿದ್ದವು ತಾಯಿಯ ಕಣ್ಣೀರು
ಜನರ ನಿಲ್ಲದ ಅಟ್ಟಹಾಸ
ಮೂರು ದಿನದೊಳಗೆ ಬರಲಿದೆ
ಸಾವು…..ಇದೆಂಥ ವಿದಾಯ?
……………………………………….”.

ನನಗೋ…. ತಳಬುಡ ಒಂದೂ ಅರ್ಥವಾಗದ ಸ್ಥಿತಿ. ಅವಳ ಮುಖದ ಮೇಲೆ ಏಳುತ್ತಿದ್ದ ಭಾವನೆಗಳ ಅಲೆಗಳನ್ನು, ಆಕ್ರೋಶಗಳನ್ನು, ಹತಾಶೆಯನ್ನು ನೋಡುತ್ತ ಕೂತು ಬಿಡುತ್ತಿದ್ದೆ.
ಅವಳು ಒಮ್ಮೆ ನಿರ್ಲಿಪ್ತವಾಗಿಯೂ ಮತ್ತೊಮ್ಮೆ ಬೆಂಕಿ ಕೆಂಡದಂತೆ ನಿಗಿನಿಗಿಯಾಗಿಯೂ, ಮಗದೊಮ್ಮೆ ಮುಗ್ಧ ಮಗುವಿನಂತೆ ನಕ್ಕುಬಿಡುತ್ತಿದ್ದಳು. ಕೈ ಹಿಸುಕಿ ಹಿಡಿದುಕೊಂಡು ತೊಡೆಯ ಮೇಲೆ ತಲೆ ಇಟ್ಟು ಮಲಗಿದವಳು ಐದೇ ನಿಮಿಷದಲ್ಲಿ ಎದ್ದು ನನ್ನ ಮುಖ ನೋಡುತ್ತಿದ್ದಳು. ಮತ್ತೇ ಕವಿತೆ……..
ರಾತ್ರಿ-ಹಗಲೂ ಹೀಗೆಯೇ…….. ಮತ್ತೇನೂ ಅಲ್ಲ. ಅವಳು ಅದೆಷ್ಟು ಕವಿತೆಗಳನ್ನು ಓದಿದಳೋ ಗೊತ್ತಿಲ್ಲ. ಯಾವಾಗ ಬರೆಯುತ್ತಿದ್ದಳೋ ಗೊತ್ತಿಲ್ಲ.
ಅದೆಷ್ಟು ಸಲ ಅವಳು ಅತ್ತಳು. ಕಿರುಚಿದಳು. ಬೀದಿಯಲ್ಲಿ ಓಡಾಡಿದಳು. ಮಸೀದಿಯ ಮುಂದೆ ನಿಂತು ಕಲ್ಲು ತೂರಿದಳು. ಪ್ರಜ್ಞೆ ತಪ್ಪಿ ಬಿದ್ದಳು. ರಕ್ತ ಕಾರಿಕೊಂಡಳು. ಲೆಕ್ಕವೂ ಅಸ್ಪಷ್ಟ.
ಆಗಾಗ ಆಕಾಶದಲ್ಲಿ ಕಾಗದದ ಚೂರುಗಳು ಹಾರಿ ಬರುವುದನ್ನು ನೋಡಿದ್ದೇನೆ. ಅವು ಬಂದು ಅವಳÀ ಕೈ ಸೇರುತ್ತಿದ್ದವು. ಮತ್ತೆ ಶುರುವಾಗುತ್ತಿತ್ತು ಕವಿತೆಯ ಓದು. ಕೆಲವೊಮ್ಮೆ ಅವಳು ಬಿರುಗಾಳಿಯ ಜೊತೆ ಮಾಯವಾಗುತ್ತಿದ್ದಳು………ಅವಳು ಹೋದಳು ಎಂದು ನಾನು ನಿಟ್ಟುಸಿರು ಬಿಡುವಷ್ಟರಲ್ಲಿ ಸಮುದ್ರದಿಂದ ಎದ್ದು ಬರುವುದು ಕಾಣಿಸುತ್ತಿತ್ತು. ಮತ್ತೇ ಪಾಪ ಎನ್ನಿಸಿ ಬರಮಾಡಿಕೊಳ್ಳುತ್ತಿದ್ದೆ. ನನ್ನ ಮನಸ್ಸಿನಲ್ಲಿ ನಾನು ಅಂದುಕೊಂಡದ್ದು ಅವಳಿಗೆ ಹೇಗೆ ಗೊತ್ತಾಯಿತೋ ಗೊತ್ತಿಲ್ಲ. ಮುಖ ಬಿಗಿದುಕೊಂಡು ಉರಿಗಣ್ಣಿನಿಂದ ಹೇಳುತ್ತಿದ್ದಳು.
ನೋಡು ಪಾಪ, ಪುಣ್ಯ ಎಲ್ಲ ಬೇಡ…. ಅದು ನನಗೆ ಇಷ್ಟ ಆಗುವದಿಲ್ಲ…… ನಿನಗೆ ಹೇಳಿದೆನಲ್ಲ. ನನ್ನ ಕವಿತೆ ಕೇಳಲು ಯಾರೂ ಇಲ್ಲ ಅಂತ….. ನಾನು ಬರೆಯುತ್ತೇನೆ, ನೀನು ಕೇಳುತ್ತಿಯಾ…… ನೀನು ನನಗೋಸ್ಕರ ಕೇಳಬೇಕಷ್ಟೆ. ಇದರಲ್ಲಿ ಪಾಪ ಪುಣ್ಯ ಏನ್ ಬಂತು….. ಏನ್ ಗಂಡಸರಪ್ಪಾ ನೀವು…. ಬಾ ಕೇಳು ಬಾ…. ಎಂದು ಮತ್ತೇ ಕವಿತೆ ಓದಲಾರಂಭಿಸಿದಳು.
ಅದೊಂದು ರಾತ್ರಿ ನಾನು ಅವಳು ಚಂದ್ರನ ಮೇಲೆ ಕುಳಿತಿದ್ದೆವು. ಅವಳು ಓದುತ್ತಿದ್ದಳು.

“ಸಾವು ನನ್ನನ್ನು ಮೂದಲಿಸಿತು ಸಾಕಷ್ಟು
ಈಗ ನಾನು ಮಾತಾಡಬೇಕಿದೆ ಗಟ್ಟಿಯಾಗಿ
ಆದರೆ, ಈ ಆಟದ ನಿಯಮವೇನು?”
………………………………………………..

ಹಾಗೆಯೇ ಅವಳು ಓದುತ್ತಿದ್ದಳು. ನಾನು ಕೇಳುತ್ತಿದ್ದೆ. ಅದೆಷ್ಟು ಹೊತ್ತೋ…
ಚಂದ್ರ ಬಂದು ಅವಳಿಗೆ, ಸಮಯವಾಯ್ತು ನಡೀ… ಇಲ್ಲಿಂದ ಅಂದ.’
ಅದಕ್ಕವಳು “ನನ್ನ ಕವಿತೆ ಓದುವುದು ಇನ್ನೂ ಮುಗಿದಿಲ್ಲ” ಎಂದು ಅವನಷ್ಟೆ ತಣ್ಣಗೆ ಉತ್ತರಿಸಿ ಮುಂದುವರೆಸಿದಳು. ಚಂದ್ರ ಮರಳಿ ಏನೂ ಹೇಳದೆ ಮೌನಕ್ಕೆ ಜಾರಿದ. ಕೆಲ ಹೊತ್ತಿನ ನಂತರ ಯಾವುದೋ ದಿಕ್ಕಿನಿಂದ ಸೂರ್ಯ ಉದಯಿಸುತ್ತ ಬೆಳಕು ಬರುತ್ತಿರುವುದನ್ನು ಕಂಡ ಅವಳು ಸಿಡಿಮಿಡಿಗೊಂಡಳು. ಆಶ್ಚರ್ಯವೆಂಬಂತೆ ಬೆಳಕು ಕರಗತೊಡಗಿ ಮತ್ತೆ ಕತ್ತಲು ಆವರಿಸತೊಡಗಿತು. ಅವಳು ಮತ್ತೆ ಏಕಾಂತಕ್ಕೆ ಸರಿದಳು. ಮುಖ ಪ್ರಶಾಂತವಾಗತೊಡಗಿತು. ಮತ್ತು ಅಸ್ಪಷ್ಟವಾಗತೊಡಗಿತು……
ಯಾರೋ ಕೂಗಿದಂತಾಯಿತು…..
ಕರ್ಕಶ ದನಿ….
ಅವಳು ಸತ್ತುಹೋದಳು… ಅವಳು ಸತ್ತು ಹೋದಳು…. ಆ ಕವಯಿತ್ರಿ ಸತ್ತು ಹೋದಳು…. ಒಳ್ಳೆಯದಾಯ್ತು. ಸತ್ತು ಹೋದಳು…. ನಾವು ಇನ್ನು ಮುಂದೆ ಅವಳಿದ್ದ ಬೀದಿಗಳಲ್ಲಿ ಹಾದುಹೋಗಬಹುದು… ಏಕೆಂದರೆ ಆ ನೀಚ, ಹಾದರಗಿತ್ತಿ ಕವಯಿತ್ರಿ ಇನ್ನು ಇಲ್ಲ… ಸತ್ತು ಹೋದಳು… ಅವಳಿಗೆ ದೇವರು ಶಿಕ್ಷೆ ನೀಡಿದ… ಇನ್ನು ಅವಳಿಲ್ಲ. ಸತ್ತು ಹೋದಳು. ಅವಳು ಸತ್ತು ಹೋದಳು…..
ನಾನು ಗಾಬರಿಯಾದೆ… ಇವರಿಗೇನು ಹುಚ್ಚು ಹಿಡಿದಿದೆಯಾ?… ಅವಳು ನನ್ನ ಜೊತೆಯಲ್ಲಿ ಇಲ್ಲಿಯೇ ಇದ್ದಾಳೆ… ಕವಿತೆ ಓದುತ್ತಿದ್ದಾಳೆ. ಆದರೆ ಈ ಜನ ಮಾತ್ರ ಅವಳು ಸತ್ತಳು ಅಂತ ಸಂಭ್ರಮಪಡುತ್ತಿದ್ದಾರೆ. ನಿಜವಾಗಲೂ ಹುಚ್ಚರು ಎಂದೆನಿಸಿ ನಕ್ಕು ಅವಳತ್ತ ತಿರುಗಿ ನೋಡಿದೆ.
ಅವಳು ಕಾಣುತ್ತಿಲ್ಲ…………….
ಎದೆ ಭಾರವೆನಿಸತೊಡಗಿತು. ಕಾಡಿದ, ಬೇಡಿದ, ಮರುಗಿದ, ತಿರುಗಿಬಿದ್ದ, ಆ ನನ್ನ ಹುಡುಗಿ ನಿಜವಾಗಿಯೂ ಸತ್ತು ಹೋದಳೇ……..
ಅಲ್ಲೆಲ್ಲೋ ಆಕಾಶದಲ್ಲಿ ಕಾಗದದ ಚೂರುಗಳು ಹಾರಿ ಬರುತ್ತಿರುವುದನ್ನು ಹಾಗೆಯೇ ನೋಡುತ್ತ ನಿಂತುಬಿಟ್ಟೆ. ಅವು…. ಅವಳದೇ ಕವಿತೆಗಳು…. ಈಗ ಅವುಗಳ ಜೊತೆ ಅವಳಿಲ್ಲ…. ನನ್ನ ಜೊತೆಗೂ ಕೂಡ. ಆಗ ಜಗತ್ತಿನಲ್ಲಿ ನಾನೇ ಏಕಾಂಗಿ ಅನ್ನಿಸತೊಡಗಿತು….
ಇನ್ನೇನು ಅವಳ ಹೆಸರನ್ನು ಹಿಡಿದು ಜೋರಾಗಿ ಕೂಗಬೇಕು…… ಅರೇ ಅವಳ ಹೆಸರೇ ಗೊತ್ತಿಲ್ಲ….. ಕನಲಿ ಹೋದೆ…. ಹೆಸರು ಗೊತ್ತಿಲ್ಲೋ ಅಥವಾ ನೆನಪಿಗೆ ಬರುತ್ತಿಲ್ಲವೋ ಗೊತ್ತಿಲ್ಲ. ಎಲ್ಲವೂ ಅಸ್ಪಷ್ಟ.
ಆಕಾಶದಲ್ಲಿ ತೇಲುತ್ತಿರುವ ಅವಳ ಕವಿತೆಗಳನ್ನಾದರೂ ಆಯ್ದುಕೊಳ್ಳಬೇಕು….. ಆಕಾಶಕ್ಕೆ ನೆಗೆಯಬೇಕು…. ಅಷ್ಟರಲ್ಲಿ ನಕ್ಷತ್ರಗಳ ಮಧ್ಯೆ ಅವಳ ಹೊಳೆಯುವ ಮುಖ ಕಂಡಿತು. ಅವಳು ನನ್ನನ್ನು ನೋಡಿ ನಗುತ್ತಿದ್ದಳು…. ನಾನು ನೋಡುತ್ತಲೇ ಇದ್ದೆ…. ಅಷ್ಟರಲ್ಲಿ ಯಾರೋ ಕೂಗಿದ ದನಿ ಕೇಳಿಸಿತು.
‘ಅದು ಅವಳೇನಾ’,
ಆ ದನಿ ಅವಳದೇ ಆಗಿರಲಿ…… ಎಂದುಕೊಳ್ಳುತ್ತಿರುವಾಗಲೇ…..
ಕಣ್ತೆರೆದು ನೋಡಿದರೆ ಹೊರಗೆ ಸೂರ್ಯ ಉದಯಿಸುತ್ತಿದ್ದ.
‘ಆ ನನ್ನ ಹುಡುಗಿಯ ಉರಿಯುವ ಕಣ್ಣೋಟಕ್ಕೆ ಹೆದರಿ ಓಡಿಹೋಗಿ ಮರೆಯಾಗಿದ್ದ ಸೂರ್ಯ ಇವನೇನಾ…. ಎಂದು ನೋಡಲು ಎದ್ದು ಹೊರನಡೆದೆ. ಆ ನನ್ನ ಹುಡುಗಿ ನನ್ನ ಹೃದಯದ ಭಾರವಾಗಿದ್ದಳು, ಭಾಗವಹಿಸಿದ್ದಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...