ಮರಣದಂಡನೆಯಿಂದ ಪಾರಾಗಿರುವ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಫರೂಕ್ ನಿವಾಸಿ ಅಬ್ದುಲ್ ರಹೀಂ ಅವರಿಗೆ ಸೌದಿ ಅರೇಬಿಯಾದ ಕೋರ್ಟ್ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ.
ಈಗಾಗಲೇ 19 ವರ್ಷಗಳನ್ನು ಜೈಲಿನಲ್ಲಿ ಕಳೆದಿರುವ ಅಬ್ದುಲ್ ರಹೀಂ ಮುಂದಿನ ವರ್ಷ (2026) ಡಿಸೆಂಬರ್ ತಿಂಗಳಲ್ಲಿ ರಿಯಾದ್ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ mathrubhumi.com ವರದಿ ಹೇಳಿದೆ.
ಸೌದಿ ಅರೇಬಿಯಾದ ಬಾಲಕನ ಸಾವಿನ ಪ್ರಕರಣದಲ್ಲಿ ಬಂಧನಕ್ಕೊಳಗಾದ ರಹೀಂ, ನವೆಂಬರ್ 2006ರಿಂದ ಜೈಲಿನಲ್ಲಿದ್ದಾರೆ. ಆರಂಭದಲ್ಲಿ ರಿಯಾದ್ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತ್ತು. ನಂತರ ಮೃತ ಬಾಲಕನ ಕುಟುಂಬ 1.5 ಕೋಟಿ ಮೊತ್ತದ ಸೌದಿ ರಿಯಾಲ್‌ಗಳ (ಸುಮಾರು 34 ಕೋಟಿಗಿಂತ ರೂ.ಗಿಂತ ಹೆಚ್ಚು) ಬ್ಲಡ್ ಮನಿ ಪಡೆದು ಅವರಿಗೆ ಕ್ಷಮಾಧಾನ ನೀಡಲು ಒಪ್ಪಿಕೊಂಡಿತ್ತು. ಹಾಗಾಗಿ, ರಹೀಂ ಅವರ ಮರಣದಂಡನೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಅಬ್ದುಲ್ ರಹೀಂ ಅವರು ನವೆಂಬರ್ 28, 2006ರಂದು ತನ್ನ 26ನೇ ವಯಸ್ಸಿನಲ್ಲಿ ಹೌಸ್ ಡ್ರೈವರ್ ವೀಸಾದಲ್ಲಿ ರಿಯಾದ್‌ಗೆ ತೆರಳಿದ್ದರು. ಅಲ್ಲಿ ಅವರನ್ನು ಪ್ರಾಯೋಜಕ ಫಯೀಝ್ ಅಬ್ದುಲ್ಲಾ ಅಬ್ದುರಹ್ಮಾನ್ ಅಲ್-ಶಹ್ರಿ ತನ್ನ ಮಗ ಅನಸ್ ಅನ್ನು ನೋಡಿಕೊಳ್ಳಲು ನೇಮಿಸಿದ್ದರು. ಕುತ್ತಿಗೆಯ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದ ಅನಸ್, ಆಹಾರ ಮತ್ತು ನೀರಿಗಾಗಿ ವಿಶೇಷ ಸಾಧನವನ್ನು ಅವಲಂಬಿಸಿದ್ದರು.
ಡಿಸೆಂಬರ್ 24,2006ರಂದು ರಿಯಾದ್‌ನ ಶಿಫಾ ಪ್ರದೇಶದ ಮನೆಯಿಂದ ಜಿಎಂಸಿ ವ್ಯಾನ್‌ನಲ್ಲಿ ಅನಸ್ ಅವರನ್ನು ಕರೆದೊಯ್ಯುತ್ತಿದ್ದಾಗ, ಆಕಸ್ಮಿಕವಾಗಿ ರಹೀಂ ಅವರ ಕೈ ಅನಸ್‌ನ ಕುತ್ತಿಗೆಗೆ ಅಳವಡಿಸಲಾಗಿದ್ದ ಸಾಧನಕ್ಕೆ ತಾಗಿದೆ. ಇದರಿಂದ ಆ ಸಾಧನ ಕಳಚಿ ಬಿದ್ದು ಅನಸ್ ಪ್ರಜ್ಞೆ ಕಳೆದುಕೊಂಡಿದ್ದ. ಇದರ ಅರಿವಿಲ್ಲದೆ ಪ್ರಯಾಣ ಮುಂದುವರಿಸಿದ್ದ ರಹೀಂ ಸ್ವಲ್ಪ ಹೊತ್ತಿನ ಬಳಿಕ ಬಾಲಕ ಪ್ರತಿಕ್ರಿಯಿಸದಿರುವುದನ್ನು ಗಮನಿಸಿದಾಗ ಆತ ಸಾವನ್ನಪ್ಪಿದ್ದ ಎಂದು ಹೇಳಲಾಗ್ತಿದೆ.
ಅನಸ್ ಸಾವಿನ ನಂತರ ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾದ ರಹೀಂ ಎರಡು ದಶಕಗಳಲ್ಲಿ ಹಲವಾರು ನ್ಯಾಯಾಲಯಗಳ ತೀರ್ಪುಗಳನ್ನು ಎದುರಿಸಿದ್ದಾರೆ. ಅವರಿಗೆ ಮೂರು ಬಾರಿ ಮರಣದಂಡನೆ ವಿಧಿಸಲಾಗಿತ್ತು. ಬಾಲಕ ಅನಸ್ ಕುಟುಂಬವು ಆರಂಭದಲ್ಲಿ ಮರಣದಂಡನೆಗೆ ಒತ್ತಾಯಿಸಿತ್ತು. ಆದರೆ, ಮಧ್ಯಸ್ಥಿಕೆಯ ಪ್ರಯತ್ನಗಳ ನಂತರ ಬ್ಲಡ್ ಮನಿಗೆ ಬದಲಾಗಿ ರಹೀಂಗೆ ಕ್ಷಮೆ ನೀಡಲು ಒಪ್ಪಿಕೊಂಡಿತು.
ಸೌದಿಯಲ್ಲಿ ಅತ್ಯಂತ ಸೂಕ್ಷ್ಮವೆಂದು ಪರಿಗಣಿಸಲಾದ ಈ ಪ್ರಕರಣವು ನ್ಯಾಯಾಂಗ ವಿಚಾರಣೆಯಲ್ಲಿ ಪದೇ ಪದೇ ವಿಳಂಬವನ್ನು ಕಂಡಿತ್ತು. ಸುಮಾರು 12 ಬಾರಿ ಪ್ರಕರಣವನ್ನು ಮುಂದೂಡಲಾಗಿತ್ತು.
ರಹೀಂ ಜೈಲಿನಲ್ಲಿದ್ದಾಗ ‘ರಿಯಾದ್ ರಹೀಮ್ ಸಪೋರ್ಟ್ ಕಮಿಟಿ’ ಅವರಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಬೆಂಬಲವನ್ನು ನೀಡಿತ್ತು. ಇದೇ ಕಮಿಟಿ ಈಗ ರಹೀಂ ಅವರ ಬಿಡುಗಡೆಯ ಹೊಸ ದಿನಾಂಕವನ್ನು ದೃಢಪಡಿಸಿದೆ ಮತ್ತು ಅವರ ವಾಪಸಾತಿ ಹಾಗೂ ಅಂತಿಮ ಕಾನೂನು ವಿಧಿವಿಧಾನಗಳ ಕುರಿತು ಹೆಚ್ಚಿನ ವಿವರಗಳನ್ನು ಸರಿಯಾದ ಸಮಯದಲ್ಲಿ ಹಂಚಿಕೊಳ್ಳಲಾಗುವುದು ಎಂಬುವುದಾಗಿ ಹೇಳಿದೆ ಎಂದು english.mathrubhumi.com ವರದಿ ತಿಳಿಸಿದೆ.
ಸಮುದ್ರ ತೀರಕ್ಕೆ ಬರಲಾರಂಭಿಸಿದ ಮುಳುಗಿದ ಹಡಗಿನ ಕಂಟೇನರ್‌ಗಳು: ಕೇರಳ ಕರಾವಳಿಯಲ್ಲಿ ಕಟ್ಟೆಚ್ಚರ


