ಸಂವಿಧಾನದ 370ನೇ ವಿಧಿ ರದ್ದತಿ ಮೂಲಕ ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಸೂರ್ಯಕಾಂತ್ ಮತ್ತು ಎಎಸ್ ಬೋಪಣ್ಣ ಅವರನ್ನೊಳಗೊಂಡ ಪೀಠವು, ಮರುಪರಿಶೀಲಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿದೆ. ಮೇ 1ರಂದು ಕೋರ್ಟ್ ಆದೇಶ ನೀಡಿದ್ದು, ಮಂಗಳವಾರದಂದು ತೀರ್ಪನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಮರುಪರಿಶೀಲನಾ ಅರ್ಜಿಗಳನ್ನು ಪರಿಶೀಲಿಸಿದಾಗ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ದೋಷ ಕಂಡು ಬಂದಿಲ್ಲ ಎಂದು ಹೇಳಿದೆ.
ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಈ ಕುರಿತು ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿಯುವ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿತ್ತು.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ 20 ಕ್ಕೂ ಹೆಚ್ಚು ಅರ್ಜಿಗಳ ಕುರಿತು ವಾದವನ್ನು ಆಲಿಸಿದ ನಂತರ ತೀರ್ಪು ಪ್ರಕಟಿಸಿತ್ತು. 370ನೇ ವಿಧಿ ತಾತ್ಕಾಲಿಕ ನಿಬಂಧನೆ ಎಂದು ಪೀಠ ತೀರ್ಪು ನೀಡಿತ್ತು.
ರಾಜ್ಯದಲ್ಲಿನ ಯುದ್ಧದ ಪರಿಸ್ಥಿತಿಗಳ ಕಾರಣದಿಂದಾಗಿ 370ನೇ ವಿಧಿಯು ಮಧ್ಯಂತರ ಪರಿಹಾರವಾಗಿತ್ತು. ಆರ್ಟಿಕಲ್ 370 ತಾತ್ಕಾಲಿಕ ನಿಬಂಧನೆಯಾಗಿದೆ. 370ನೇ ವಿಧಿಯ ಉದ್ದೇಶವು ಜಮ್ಮು ಮತ್ತು ಕಾಶ್ಮೀರವನ್ನು ನಿಧಾನವಾಗಿ ಭಾರತದ ಇತರ ರಾಜ್ಯಗಳಿಗೆ ಸರಿಸಮನಾಗಿ ತರುವುದಾಗಿತ್ತು ಎಂದು ನ್ಯಾಯಮೂರ್ತಿ ಕೌಲ್ ಅವರು ತೀರ್ಪಿನ ವೇಳೆ ಹೇಳಿದ್ದರು. ಇದಲ್ಲದೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ಮತ್ತು ಸೆಪ್ಟೆಂಬರ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶವನ್ನು ಕೂಡ ನೀಡಿತ್ತು.
ಇದನ್ನು ಓದಿ: ಭಾರತಕ್ಕೆ ಆಗಮಿಸಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ನಾಪತ್ತೆ


