ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳೆರಡರಲ್ಲೂ ಉನ್ನತ ನ್ಯಾಯಾಂಗಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇರುವುದರ ಬಗ್ಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ತೀವ್ರ ಕಳವಳ ವ್ಯಕ್ತಪಡಿಸಿದೆ. ಮುಂಬರುವ ನ್ಯಾಯಾಂಗ ನೇಮಕಾತಿಗಳಲ್ಲಿ ಸಾಕಷ್ಟು ಲಿಂಗ ವೈವಿಧ್ಯತೆಯನ್ನು ಕಾಯ್ದುಕೊಳ್ಳುವಂತೆ ಕೊಲಿಜಿಯಂ ಅನ್ನು ಒತ್ತಾಯಿಸಿದೆ.
ಆಗಸ್ಟ್ 30, 2025ರಂದು ಅಂಗೀಕರಿಸಲಾದ ನಿರ್ಣಯದಲ್ಲಿ, ಉತ್ತರಾಖಂಡ, ತ್ರಿಪುರ, ಮೇಘಾಲಯ ಮತ್ತು ಮಣಿಪುರದಂತಹ ಹಲವಾರು ಹೈಕೋರ್ಟ್‌ಗಳಲ್ಲಿ ಪ್ರಸ್ತುತ ಮಹಿಳಾ ನ್ಯಾಯಾಧೀಶರೇ ಇಲ್ಲ ಎಂದು ಎಸ್‌ಸಿಬಿಎ ಹೇಳಿದೆ. ದೇಶದಾದ್ಯಂತ, ಸುಮಾರು 1,100 ಅನುಮೋದಿತ ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗಳಲ್ಲಿ, ಸುಮಾರು 670 ಪುರುಷರು ಮತ್ತು ಕೇವಲ 103 ಮಹಿಳೆಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದೆ.
ಇತ್ತೀಚಿನ ನ್ಯಾಯಾಂಗ ನೇಮಕಾತಿಗಳ ಕುರಿತು ಸಂಘವು ತನ್ನ ‘ತೀವ್ರ ನಿರಾಶೆ’ ದಾಖಲಿಸಿದೆ. 2021ರಿಂದ ಸುಪ್ರೀಂ ಕೋರ್ಟ್‌ಗೆ ಯಾವುದೇ ಮಹಿಳಾ ನ್ಯಾಯಾಧೀಶರನ್ನು ನೇಮಿಸಲಾಗಿಲ್ಲ ಎಂದು ಹೇಳಿದೆ. ಪ್ರಸ್ತುತ, ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಸುಪ್ರೀಂ ಕೋರ್ಟ್‌ನ ಏಕೈಕ ಮಹಿಳಾ ನ್ಯಾಯಾಧೀಶರಾಗಿದ್ದಾರೆ.
ಉನ್ನತ ನ್ಯಾಯಾಂಗ ನೇಮಕಾತಿಗಳಲ್ಲಿ ಮಹಿಳೆಯರಿಗೆ ಕನಿಷ್ಠ ಅನುಪಾತದ ಪ್ರಾತಿನಿಧ್ಯಕ್ಕೆ ಒತ್ತಾಯಿಸಿ, ತನ್ನ ಅಧ್ಯಕ್ಷ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಮೇ 24, 2025 ಮತ್ತು ಜುಲೈ 18, 2025ರಂದು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು ಎಂದು ಎಸ್‌ಸಿಬಿಎ ನೆನಪಿಸಿಕೊಂಡಿದೆ.
ನ್ಯಾಯಯುತ ಮತ್ತು ಸಮಾನ ಪ್ರಾತಿನಿಧ್ಯಕ್ಕಾಗಿ ಮಾತ್ರವಲ್ಲದೆ, ನ್ಯಾಯಾಂಗದಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಬಲಪಡಿಸಲು, ನ್ಯಾಯಾಂಗ ದೃಷ್ಟಿಕೋನಗಳನ್ನು ಶ್ರೀಮಂತಗೊಳಿಸಲು ಮತ್ತು ನ್ಯಾಯ ಸಂಸ್ಥೆಯಲ್ಲಿ ಸಮಾಜದ ವೈವಿಧ್ಯತೆಯನ್ನು ಪ್ರತಿಬಿಂಬಿಸಲು ನ್ಯಾಯಪೀಠದಲ್ಲಿ ಹೆಚ್ಚಿನ ಲಿಂಗ ಸಮತೋಲನ ಅತ್ಯಗತ್ಯ ಎಂದು ಎಸ್‌ಸಿಬಿಎ ನಿರ್ಣಯವು ಒತ್ತಿ ಹೇಳಿದೆ.
ಅದರಂತೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳೆರಡಕ್ಕೂ ಮುಂಬರುವ ನ್ಯಾಯಾಂಗ ನೇಮಕಾತಿಗಳಲ್ಲಿ ಹೆಚ್ಚಿನ ಮಹಿಳಾ ನ್ಯಾಯಾಧೀಶರ ಆಯ್ಕೆ ಮತ್ತು ಬಡ್ತಿಗೆ ‘ತುರ್ತು ಹಾಗೂ ಸರಿಯಾದ ಪರಿಗಣನೆ’ ನೀಡುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಕೊಲಿಜಿಯಂಗೆ ವಿನಂತಿಸಲು ಎಸ್‌ಸಿಬಿಎ ನಿರ್ಧರಿಸಿದೆ.
ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರ ನೇಮಕದ ಸುತ್ತ ಚರ್ಚೆಗಳು ಗರಿಗೆದರರಿರುವ ನಡುವೆ, ಎಸ್‌ಸಿಬಿಎ ಮಹಿಳಾ ನ್ಯಾಯಾಧೀಶರ ಕೊರತೆಯ ಬಗ್ಗೆ ನಿರ್ಣಯ ಕೈಗೊಂಡಿದೆ. ಹಿರಿಯರಾದ ಕನಿಷ್ಠ ಮೂವರು ಮಹಿಳಾ ನ್ಯಾಯಾಧೀಶರಿಗಿಂತ ವಿಪುಲ್ ಪಂಚೋಲಿಗೆ ಏಕೆ ಆದ್ಯತೆ ನೀಡಲಾಯಿತು ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಅಂತರ ಧರ್ಮೀಯ ಭೂ ವರ್ಗಾವಣೆಗೆ ಎಸ್‌ಒಪಿ: ಅಸ್ಸಾಂ ಸರ್ಕಾರದ ಕ್ರಮಕ್ಕೆ ವಿರೋಧ