ತಮಿಳುನಾಡಿನ ಸೇಲಂ ಜಿಲ್ಲೆಯ ಆನೈವಾರಿ ಜಲಪಾತದ ಬಳಿ ಸಿಲುಕಿದ್ದ ಮಹಿಳೆ ಮತ್ತು ಮಗುವನ್ನು ತಮಿಳುನಾಡು ಅರಣ್ಯ ಇಲಾಖೆಯ ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ ರಕ್ಷಿಸುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೂಡಾ ಈ ವಿಡಿಯೊ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇಬ್ಬರ ಜೀವ ಉಳಿಸಿದವರನ್ನು ಸರ್ಕಾರದ ವತಿಯಿಂದ ಗೌರವಿಸಲಾಗುವುದು ಎಂದು ಹೇಳಿದ್ದಾರೆ.
ಘಟನೆಯು ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಪ್ರವಾಸಿ ಸ್ಥಳವಾಗಿರುವ ಆನೈವಾರಿ ಜಲಪಾತ ಪ್ರದೇಶವನ್ನು ಕೊರೊನಾ ಲಾಕ್‌ಡೌನ್ ನಂತರ ಎರಡು ತಿಂಗಳ ಹಿಂದೆಯಷ್ಟೇ ಪ್ರವಾಸಿಗರಿಗೆ ತೆರೆಯಲಾಗಿತ್ತು. ಇಲ್ಲಿಗೆ ಪ್ರವಾಸಕ್ಕೆ ತೆರಳಿದ್ದ ಮಹಿಳೆಯು ಆಕಸ್ಮಿಕವಾಗಿ ಅಲ್ಲಿ ಸಿಲುಕಿ ಬಿದ್ದಿದ್ದರು. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿ ಅವರನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಬಸ್ ಹತ್ತಿ ಜನರ ಸಮಸ್ಯೆ ಆಲಿಸಿದ ತಮಿಳುನಾಡು ಸಿಎಂ ಸ್ಟಾಲಿನ್!
ವೀಡಿಯೊದಲ್ಲಿ, ಇನ್ನೊಂದು ಬದಿಯಲ್ಲಿ ಇರುವ ಜನರು, “ಮೇಲೆ ಹತ್ತಬೇಡಿ ಬೀಳಬಹುದು, ಅಲ್ಲೇ ನಿಲ್ಲಿ ಎಂದು” ಕಿರುಚುತ್ತಾರೆ. ಅದಾಗಿಯೂ ಹಗ್ಗವನ್ನು ಬಳಸಿ ಅರಣ್ಯ ಇಲಾಖೆಯ ಸಿಬ್ಬಂದಿ ಮೊದಲಿಗೆ ಮಗುವನ್ನು, ನಂತರ ಮಹಿಳೆಯನ್ನು ಎಚ್ಚರಿಕೆಯಿಂದ ಮೇಲಕ್ಕೆತ್ತುತ್ತಾರೆ. ತಾಯಿ ಮತ್ತು ಮಗು ಅಪಾಯದಿಂದ ಪಾರಾದ ನಂತರ ರಕ್ಷಣಾ ಕಾರ್ಯದಲ್ಲಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿ ಸಮತೋಲನ ಕಳೆದುಕೊಂಡು ನೀರಿಗೆ ಬೀಳುತ್ತಾರೆ.
ತಮಿಳುನಾಡು-ಸೇಲಂ: ಭೋರ್ಗರೆಯುವ ನೀರಿನ ನಡುವೆ ಸಿಲುಕಿದ್ದ ತಾಯಿ-ಮಗುವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಣೆ ಮಾಡುವತ್ತಿರುವ ದೃಶ್ಯ.
ಇಬ್ಬರನ್ನು ರಕ್ಷಿಸಿದ ನಂತರ ಆಯಾತಪ್ಪಿ ನೀರಿಗೆ ಬಿದ್ದವರು ನದಿಯನ್ನು ಈಜಿ ಯಾವುದೆ ಅಪಾಯವಿಲ್ಲದೆ ದಡ ತಲುಪಿದ್ದಾರೆ.#NaanuGauri #TamilNadu #AnaivariMuttal #Anaivari #Selam pic.twitter.com/slpdCCOAA9
— Naanu Gauri (@naanugauri) October 26, 2021
ವೈರಲ್ ವಿಡಿಯೊ ಈ ಹಂತದಲ್ಲಿ ಕೊನೆಗೊಂಡರೂ, ಆಯಾತಪ್ಪಿ ನೀರಿಗೆ ಬಿದ್ದವರು ನದಿಯನ್ನು ಈಜಿ ಯಾವುದೆ ಅಪಾಯವಿಲ್ಲದೆ ದಡ ತಲುಪಿದ್ದಾರೆ ಎಂದು ವರದಿಯಾಗಿದೆ. ಮಹಿಳೆ ಮತ್ತು ಮಗು ಮಾತ್ರವಲ್ಲದೆ ಇನ್ನೂ ಕೆಲವರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮುಂದಿನ ಚುನಾವಣೆಗೆ ಮುನ್ನೆಲೆಗೆ ಬರುವುದೇ ‘ತಮಿಳುನಾಡು ಮಾದರಿ?’
ಘಟನೆಯಲ್ಲಿ ಯಾವುದೇ ಸಾವು ಅಥವಾ ಗಾಯದ ವರದಿಯಾಗಿಲ್ಲ ಎಂದು ಸೇಲಂ ಜಿಲ್ಲಾ ಅರಣ್ಯಾಧಿಕಾರಿ ಕೆ ಗೌತಮ್ ಹೇಳಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಅನೈವಾರಿ ಜಲಪಾತವು ಗುರುತಿಸಲ್ಪಟ್ಟ ಪರಿಸರ ಪ್ರವಾಸೋದ್ಯಮ ತಾಣವಾಗಿದೆ. ಕಲ್ಲವರಾಯನ ಬೆಟ್ಟಗಳಿಂದ ಬರುವ ಮಳೆ ನೀರು ಇಲ್ಲಿ ಜಲಪಾತವಾಗಿ ಪರಿವರ್ತನೆಯಾಗುತ್ತದೆ. ಇದು ಅತ್ತೂರು ಪ್ರದೇಶವಾಗಿದ್ದು; ಈ ಬೆಟ್ಟದ ಇನ್ನೊಂದು ಬದಿಯಲ್ಲಿರುವ ಕರ್ಮಂಡುರೈ ಪ್ರದೇಶದಲ್ಲಿ ಮಳೆಯಾದರೆ, ಅದು ಇಲ್ಲಿನ ಜನರಿಗೆ ತಿಳಿಯುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ಕರ್ಮಂಡುರೈ ಪ್ರದೇಶದಲ್ಲಿ ಮಳೆಯಾಗಿ 20-30 ನಿಮಿಷಗಳಲ್ಲಿ, ಪ್ರವಾಹದ ನೀರು ಈ ಪ್ರದೇಶವನ್ನು ತಲುಪುತ್ತದೆ. ಇದು ಪ್ರತಿ ವರ್ಷ ನಡೆಯುತ್ತದೆ. ಈ ಬಾರಿ ನೀರಿನ ಪ್ರಮಾಣ ಹೆಚ್ಚಿದೆ. ಇದು ತಿಳಿದಿರದ ಜನರು ಆ ಬದಿಯಲ್ಲಿ ಸಿಕ್ಕಿಬಿದ್ದರು. ಇನ್ನೊಂದು ಬದಿಗೆ ಬರಲು ಯಾವುದೇ ದಾರಿ ಇರುವುದಿಲ್ಲ. ಅಲ್ಲಿರುವವರು ಹಗ್ಗವನ್ನು ಬಳಸಿ ಮಾತ್ರ ಇನ್ನೊಂದು ಬದಿಯನ್ನು ತಲುಪಬಹುದು. ನಮ್ಮ ಜನರು ಈಗಾಗಲೇ ಅಂತಹ ಸಂದರ್ಭಗಳ ಬಗ್ಗೆ ತರಬೇತಿ ಪಡೆದಿದ್ದರಿಂದ, ಅವರು ಸಾರ್ವಜನಿಕರನ್ನು ಸುರಕ್ಷಿತವಾಗಿ ರಕ್ಷಿಸಿದರು. ನಾವು ತಕ್ಷಣ ಜನರನ್ನು ಖಾಲಿ ಮಾಡಿದ್ದೇವೆ ಮತ್ತು ಪ್ರದೇಶವನ್ನು ಮುಚ್ಚಲು ಆದೇಶಿಸಿದ್ದೇವೆ” ಎಂದು ಕೆ. ಗೌತಮ್ ಹೇಳಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಆನೈವಾರಿ ಜಲಪಾತಗಳು, ವಳುಕ್ಕುಪರೈ ಮತ್ತು ಯೆರ್ಕಾಡ್‌ನ ಮತ್ತೊಂದು ಪ್ರವಾಸೋದ್ಯಮ ಸ್ಥಳವನ್ನು ಮುಂದಿನ ಸೂಚನೆ ಬರುವವರೆಗೆ ಮುಚ್ಚಲು ಆದೇಶಿಸಲಾಗಿದೆ ಎಂದು ಡಿಎಫ್‌ಒ ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು – ರಾಜ್ಯದ ಸರ್ಕಾರಿ ಉದ್ದಿಮೆಗಳ 2.87 ಲಕ್ಷ ಸಿಬ್ಬಂದಿಗೆ 216.38 ಕೋಟಿ ‘ದೀಪಾವಳಿ ಬೋನಸ್’!
“ಘಟನೆಯ ವರದಿ ಇನ್ನೂ ನನಗೆ ತಲುಪಿಲ್ಲ. ಆ ಬಳಿಕವಷ್ಟೇ ರಕ್ಷಿಸಿದವರ ವಿವರ ತಿಳಿಯಲಿದೆ” ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘಟನೆಯ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ತಾಯಿ ಮತ್ತು ಮಗಳನ್ನು ರಕ್ಷಿಸಿದವರ ಧೈರ್ಯದ ಕಾರ್ಯ ಶ್ಲಾಘನೀಯ; ಅವರನ್ನು ಸರ್ಕಾರದಿಂದ ಗುರುತಿಸಿ ಗೌರವಿಸಲಾಗುವುದು. ತಮ್ಮ ಪ್ರಾಣವನ್ನು ಲೆಕ್ಕಿಸದೆ ಇತರರ ಪ್ರಾಣವನ್ನು ಉಳಿಸುವ ಧೈರ್ಯ ತೋರುವವರಲ್ಲಿ ಮಾನವೀಯತೆ ಬೆಳಗುತ್ತಿದೆ! ದುರಂತದ ಸಂದರ್ಭದಲ್ಲಿ ಸಾರ್ವಜನಿಕರು ಜಾಗೃತರಾಗಿರಬೇಕು. ಸಭ್ಯ ಜಗತ್ತು.” ಎಂದು ಟ್ವೀಟ್ ಮಾಡಿದ್ದಾರೆ.
தாயையும் சேயையும் காப்பாற்றியவர்களின் தீரமிக்க செயல் பாராட்டுக்குரியது; அரசால் சிறப்பிக்கப்படுவார்கள்.
தன்னுயிர் பாராது பிறரது உயிர் காக்க துணிந்த அவர்களது தீரத்தில் மனிதநேயமே ஒளிர்கிறது!
பேரிடர்களின்போது பொதுமக்கள் கவனமுடன் இருக்க வேண்டும்.
பண்புடையார்ப் பட்டுண்டு உலகம்! pic.twitter.com/NRCb8OE8l3
— M.K.Stalin (@mkstalin) October 26, 2021
ಇದನ್ನೂ ಓದಿ: ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆ: ಕೇವಲ ಒಂದು ಮತ ಪಡೆದ ಬಿಜೆಪಿ ಅಭ್ಯರ್ಥಿ!


