ಕಳೆದ 2022-23ನೇ ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ಕರ್ನಾಟಕದಲ್ಲಿ ಶಾಲೆ ತೊರೆದ ಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಶನ್ ಪ್ಲಸ್ (ಯುಡಿಎಸ್ಇ+) ವರದಿ ಹೇಳಿದೆ.
ವರದಿಯ ಪ್ರಕಾರ, 2023-24ರಲ್ಲಿ ರಾಜ್ಯದಲ್ಲಿ ಶೇಖಡ 1.7 ಪ್ರಾಥಮಿಕ, ಶೇ. 2.7 ಹಿರಿಯ ಪ್ರಾಥಮಿಕ ಮತ್ತು ಶೇ. 22.09 ಪ್ರೌಢ ಶಾಲಾ ತರಗತಿಗಳ ಮಕ್ಕಳು ಶಾಲೆ ತೊರೆದಿದ್ದಾರೆ. (ಒಂದು ತರಗತಿಯಿಂದ ಇನ್ನೊಂದಕ್ಕೆ ವಿದ್ಯಾರ್ಥಿಗಳ ನೈಜ ಚಲನೆಯನ್ನು ಆಧರಿಸಿ ವೈಯಕ್ತಿಕ ವಿದ್ಯಾರ್ಥಿಯ ದತ್ತಾಂಶವನ್ನು ಬಳಸಿಕೊಂಡು ಲೆಕ್ಕ ಹಾಕಲಾಗಿದೆ) 2022-23 ರಲ್ಲಿ, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ತರಗತಿಗಳ ಮಕ್ಕಳು ಶಾಲೆ ತೊರೆದ ಪ್ರಮಾಣ ಶೂನ್ಯ ಇತ್ತು. ಪ್ರೌಢ ತರಗತಿಗಳ ಶೇ.14.9 ಮಕ್ಕಳು ಶಾಲೆ ತೊರೆದಿದ್ದರು.
ವರದಿಯ ಪ್ರಕಾರ, ಶಾಲೆ ತೊರೆದ ಮಕ್ಕಳ ಸಂಖ್ಯೆಯು ಒಂದು ನಿರ್ದಿಷ್ಟ ಶೈಕ್ಷಣಿಕ ವರ್ಷದಲ್ಲಿ ನಿರ್ದಿಷ್ಟ ಮಟ್ಟದಲ್ಲಿ ದಾಖಲಾದ ವಿದ್ಯಾರ್ಥಿಗಳ ಅನುಪಾತವಾಗಿದೆ. ಅವರು ಮುಂದಿನ ಶಾಲಾ ವರ್ಷದಲ್ಲಿ ಯಾವುದೇ ತರಗತಿಗೆ ದಾಖಲಾಗಿರುವುದಿಲ್ಲ.
ರಾಜ್ಯದಲ್ಲಿ ಪೂರ್ವ ಪ್ರಾಥಮಿಕದಿಂದ 12 ನೇ ತರಗತಿಗೆ ಒಟ್ಟು ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕೂಡ ಇಳಿಕೆಯಾಗಿದೆ.
2023-24ನೇ ವರ್ಷದಲ್ಲಿ ರಾಜ್ಯದ ಶಾಲೆಗಳಲ್ಲಿ (ಸರ್ಕಾರಿ, ಖಾಸಗಿ , ಅನುದಾನಿತ ಇತ್ಯಾದಿ) ದಾಖಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 1,19,26,303. 2023-23ರಲ್ಲಿ 1,23,98,654 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಸಂಖ್ಯೆ 2021-22ರಲ್ಲಿ 1,20,92,381 ಮತ್ತು 2020-21ರಲ್ಲಿ 1,18,56,736 ಇತ್ತು.
ಸರ್ಕಾರಿ ಶಾಲೆಗಳು 2023-24ರಲ್ಲಿ ಒಟ್ಟು 49,85,661 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿವೆ. 2022-23ಕ್ಕೆ ಹೋಲಿಸಿದರೆ 2023-24ರಲ್ಲಿ 3,41,560 ಮಕ್ಕಳು ಕಡಿಮೆಯಾಗಿದ್ದಾರೆ. 2022-23ರಲ್ಲಿ ಸರ್ಕಾರಿ ಶಾಲೆಗಳು 53,27,221 ಮತ್ತು 2021-22ರಲ್ಲಿ 54,45,989 ವಿದ್ಯಾರ್ಥಿಗಳಿಗೆ ಹೊಸದಾಗಿ ಪ್ರವೇಶ ನೀಡಿತ್ತು.
ಗಮನಾರ್ಹ ವಿಷಯವೆಂದರೆ, ಖಾಸಗಿ ಅನುದಾನ ರಹಿತ ಶಾಲೆಗಳಲ್ಲೂ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ. 2022-23ರಲ್ಲಿ 55,59,281 ವಿದ್ಯಾರ್ಥಿಗಳು ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದರು. 2023-24ರಲ್ಲಿ ಈ ಸಂಖ್ಯೆ 54,80,677ಕ್ಕೆ ಇಳಿಕೆಯಾಗಿದೆ. ಪ್ರವೇಶಕ್ಕೆ ಅರ್ಹರಾಗಿರುವ ಮಕ್ಕಳ ಸಂಖ್ಯೆಯಲ್ಲಿನ ಇಳಿಕೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ತಿಳಿಸಿವೆ.
ವರದಿಯು ಶೂನ್ಯ ದಾಖಲಾತಿ ಶಾಲೆಗಳು ಮತ್ತು ಶೂನ್ಯ ಶಿಕ್ಷಕರ ಶಾಲೆಗಳನ್ನು ಎತ್ತಿ ತೋರಿಸಿದೆ. ರಾಜ್ಯದಲ್ಲಿ ಶಿಕ್ಷಕರಿಲ್ಲದ 1,572 ಶಾಲೆಗಳಿವೆ ಮತ್ತು 7,821 ಏಕ ಶಿಕ್ಷಕರಿದ್ದಾರೆ. ಈ ಏಕ ಶಿಕ್ಷಕರ ಶಾಲೆಗಳಲ್ಲಿ 2,74,814 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಒಟ್ಟು 1,078 ಶಾಲೆಗಳು ಒಬ್ಬ ವಿದ್ಯಾರ್ಥಿಯನ್ನೂ ದಾಖಲಿಸಲು ವಿಫಲವಾಗಿವೆ.
ಆದರೆ, ವರದಿಯಲ್ಲಿ ಬಹಿರಂಗವಾಗಿರುವ ಸಕಾರಾತ್ಮಕ ಅಂಶವೆಂದರೆ, ಶಾಲಾಪೂರ್ವ ಅನುಭವದೊಂದಿಗೆ 1ನೇ ತರಗತಿಗೆ ಪ್ರವೇಶಿ ಪಡೆಯುವ ಮಕ್ಕಳ ಸಂಖ್ಯೆ, ವಿಶೇಷವಾಗಿ ಅಂಗನವಾಡಿ ಕೇಂದ್ರಗಳಿಂದ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. 2023-24ರಲ್ಲಿ 9,45,325 ಮಕ್ಕಳು 1ನೇ ತರಗತಿಗೆ ಸೇರಿದ್ದು, ಅದರಲ್ಲಿ 3,91,940 ಮಕ್ಕಳು ಅಂಗನವಾಡಿಗಳಿಂದ ಬಂದವರು. ಅವರಲ್ಲಿ ಹೆಚ್ಚಿನವರು, ಅಂದರೆ 59,748 ಮಕ್ಕಳು ಖಾಸಗಿ ಅನುದಾನರಹಿತ ಶಾಲೆಗಳಿಗೆ ಸೇರಿದ್ದಾರೆ.
ಇದನ್ನೂ ಓದಿ : ಸಚಿವ ಸಂಪುಟ ಸಭೆ | ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ : ನಿಗಮಗಳು ₹2 ಸಾವಿರ ಕೋಟಿ ಸಾಲ ಪಡೆಯಲು ಒಪ್ಪಿಗೆ


