ಬಾಂಗ್ಲಾದೇಶದ ಪ್ರಜೆಗಳೆಂಬ ಅನುಮಾನದ ಮೇಲೆ ಪಶ್ಚಿಮ ಬಂಗಾಳದಿಂದ ವಲಸೆ ಬಂದ ಮುಸ್ಲಿಂ ಕಾರ್ಮಿಕರನ್ನು ಹಲವು ರಾಜ್ಯಗಳಲ್ಲಿ ಬಂಧಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ(ಆ.14) ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಪಿಐಎಲ್ ವಿಚಾರಣೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಪ್ರತಿವಾದಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ (ಒಡಿಶಾ, ರಾಜಸ್ಥಾನ, ಮಹಾರಾಷ್ಟ್ರ, ದೆಹಲಿ, ಬಿಹಾರ, ಉತ್ತರ ಪ್ರದೇಶದ ಛತ್ತೀಸ್‌ಗಢ, ಹರಿಯಾಣ ಮತ್ತು ಪಶ್ಚಿಮ ಬಂಗಾಳ) ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಈ ಸಮಸ್ಯೆಯ ಪರಿಹಾರಕ್ಕೆ ದೇಶದಾದ್ಯಂತ (ಪ್ಯಾನ್-ಇಂಡಿಯಾ) ಏನು ಮಾಡಬಹುದು ಎಂದು ಪ್ರತಿವಾದಿಗಳ ಅಭಿಪ್ರಾಯ ಕೇಳಿದೆ.
ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ ಸಲ್ಲಿಸಿರುವ ಪಿಐಎಲ್‌ನಲ್ಲಿ, “ಮೇ ತಿಂಗಳಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸುತ್ತೋಲೆ ಕಳಿಸಿದ ಬಳಿಕ, ವಿವಿಧ ರಾಜ್ಯದ ಅಧಿಕಾರಿಗಳು ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರನ್ನು ಬಾಂಗ್ಲಾದೇಶದವರು ಎಂದು ಆರೋಪಿಸಿ ಏಕಾಏಕಿ ಬಂಧಿಸುತ್ತಿದ್ದಾರೆ” ಎಂದು ಆರೋಪಿಸಲಾಗಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, “ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಮರು ಪರಿಶೀಲನೆ ನಡೆಸಿದಾಗ, ಅವರು ಭಾರತೀಯ ಪ್ರಜೆಗಳು ಎಂದು ಕಂಡು ಬಂದಿವೆ. ಕೆಲವು ಪ್ರಕರಣಗಳಲ್ಲಿ ಭಾರತೀಯ ಪ್ರಜೆಗಳನ್ನು ಗಡಿಯಾಚೆಗೆ ತಳ್ಳಿ, ಪರಿಶೀಲನೆಯ ಬಳಿಕ ಅವರನ್ನು ವಾಪಸ್ ಕರೆ ತರಲಾಗಿದೆ. ಅವರ ದಾಖಲೆಗಳು ಬಾಂಗ್ಲಾದೇಶಿ ಭಾಷೆಯಲ್ಲಿದೆ ಎಂದು ದೆಹಲಿ ಪೊಲೀಸರು ಹೇಳುತ್ತಾರೆ. ಬಾಂಗ್ಲಾದೇಶಿ ಭಾಷೆ ಎನ್ನುವುದು ಇಲ್ಲ. ಅದು ಬಂಗಾಳಿ (ಬೆಂಗಾಳಿ) ಭಾಷೆ ಎಂದಿದ್ದಾರೆ.
ವಲಸೆ ಕಾರ್ಮಿಕರನ್ನು ವಿದೇಶಿಗರು ಎಂದು ಶಂಕಿಸಿ ಬಂಧನ ಕೇಂದ್ರಗಳಲ್ಲಿ ಇಡಲಾಗುತ್ತಿದೆ. ಪೌರತ್ವದ ಕೊರತೆಯ ಕೇವಲ ಅನುಮಾನದ ಮೇಲೆ ಯಾರನ್ನಾದರೂ ಬಂಧಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲದಿದ್ದರೂ, ಇದು ದೇಶದಾದ್ಯಂತ ಭೀತಿಯನ್ನು ಸೃಷ್ಟಿಸುತ್ತಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಅಧಿಕಾರಿಗಳು ಪರಿಶೀಲನೆ ನಡೆಸುವವರೆಗೆ ಬಂಧನದ ವಿರುದ್ಧ ಮಧ್ಯಂತರ ಪರಿಹಾರವನ್ನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಅವರು (ಅಧಿಕಾರಿಗಳು) ಪರಿಶೀಲನೆ ನಡೆಸಲಿ, ಸಮಸ್ಯೆಯಿಲ್ಲ. ಆದರೆ, ಅವರು ಬಂಧಿಸುತ್ತಿದ್ದಾರೆ, ಇದು ಸಮಸ್ಯೆ. ಕೆಲವರಿಗೆ ಚಿತ್ರಹಿಂಸೆ ನೀಡಲಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ. ವಿದೇಶಿಯರ ಕಾಯ್ದೆ ವಿದೇಶಿಗರು ಎಂಬ ಶಂಕೆ ಮೇಲೆ ಜನರನ್ನು ಬಂಧಿಸಲು ಅವಕಾಶ ನೀಡುವುದಿಲ್ಲ ಎಂದು ಪ್ರಶಾಂತ್ ಭೂಷಣ್ ವಾದಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕಾಂತ್ ಅವರು,”ವಲಸೆ ಕಾರ್ಮಿಕರ ಮೂಲ ರಾಜ್ಯ ಮತ್ತು ಅವರು ಜೀವನೋಪಾಯ ಅರಸಿಕೊಂಡು ಹೋಗುವ ರಾಜ್ಯಗಳ ನಡುವೆ ಸಮನ್ವಯ ಸಾಧಿಸಲು ನೋಡಲು ಏಜೆನ್ಸಿಯೊಂದರ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದಕ್ಕೆ ಧ್ವನಿಗೂಡಿಸಿದ ನ್ಯಾಯಮೂರ್ತಿ ಬಾಗ್ಚಿ ಅವರು, ವಲಸೆ ಕಾರ್ಮಿಕರು ಕೆಲಸ ಮಾಡುತ್ತಿರುವ ರಾಜ್ಯ ಮತ್ತು ಅವರ ಮೂಲ ರಾಜ್ಯದ ನಡುವೆ ಸಮನ್ವಯ ಸಾಧಿಸಲು ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಯಾವುದಾದರು ಪ್ರಾಧಿಕಾರವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಯಾವುದೇ ಮಧ್ಯಂತರ ಆದೇಶ ನೀಡಿಲ್ಲ. ಬದಲಾಗಿ, ಪ್ರತಿವಾದಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.
“ಯಾರಾದರೂ ಭಾರತಕ್ಕೆ ಅಕ್ರಮವಾಗಿ ಬಂದಿದ್ದಾರೆಂದು ಭಾವಿಸೋಣ, ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು? ಅವರನ್ನು ಬಂಧಿಸದಿದ್ದರೆ, ತಪ್ಪಿಸಿಕೊಳ್ಳಬಹುದು. ಹಾಗಾಗಿ, ನಿಜವಾದ ವಲಸೆ ಕಾರ್ಮಿಕರಿಗೆ ಕೆಲವು ಕಾರ್ಯವಿಧಾನಗಳು ಅಗತ್ಯವಿದೆ. ಉದಾಹರಣೆಗೆ ವಲಸೆ ಕಾರ್ಮಿಕರ ಮೂಲ ರಾಜ್ಯ ಅಥವಾ ಅವರು ಕೆಲಸ ಅರಸಿಕೊಂಡು ಹೋಗುವ ರಾಜ್ಯ ಗುರುತಿನ ಕಾರ್ಡ್ ನೀಡಬಹುದು. ಇವರು ವಲಸೆ ಕಾರ್ಮಿಕರು, ಜೀವನೋಪಾಯಕ್ಕಾಗಿ ಇಲ್ಲಿಗೆ ಬಂದಿದ್ದಾರೆ ಎಂಬುವುದಕ್ಕೆ ಅದು ಪುರಾವೆಯಾಗಿರಬೇಕು. ಸ್ಥಳೀಯ ಪೊಲೀಸರು ಅದನ್ನು ಪರಿಶೀಲಿಸಿ ದೃಢೀಕರಿಸಬೇಕು” ಎಂದು ನ್ಯಾಯಮೂರ್ತಿ ಕಾಂತ್ ಹೇಳಿದ್ದಾರೆ.
ದೆಹಲಿ ಬೀದಿ ನಾಯಿ ಸಮಸ್ಯೆ: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್; ಅಧಿಕಾರಿಗಳಿಗೆ ತರಾಟೆ


