ಕೇಂದ್ರ ಸರ್ಕಾರ ಮತ್ತು ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್ ನಡುವೆ ರಹಸ್ಯವಾದ ಒಪ್ಪಂದವಿದೆ ಎಂದು ಭಾನುವಾರ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಹೇಳಿದ್ದಾರೆ.
ಬೆಟ್ಟಿಂಗ್ ಆ್ಯಪ್‌ನೊಂದಿಗೆ ಬಘೇಲ್ ಅವರು ಡೀಲ್ ಮಾಡಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪ ಮಾಡಿತ್ತು.
ಈ ವಿಚಾರವಾಗಿ ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಭೂಪೇಶ್ ಬಘೇಲ್, ”ಅವರಿಗೆ (ಬಿಜೆಪಿ) ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನನ್ನು ಬ್ಯಾನ್ ಮಾಡಲು ಮತ್ತು ಅದರ ವ್ಯವಸ್ಥಾಪಕರನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ. ಇದರರ್ಥ ಅವರ ನಡುವೆ ವಹಿವಾಟು ನಡೆದಿದೆ. ಆ ಅಪ್ಲಿಕೇಶನ್ ಅನ್ನು ಬ್ಯಾನ್ ಮಾಡಬೇಕಿತ್ತು, ಆದರೆ ಅವರು ಅದನ್ನು ಮಾಡುತ್ತಿಲ್ಲ. ಇದರರ್ಥ ಅವರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಅವರ ನಡುವೆ ರಹಸ್ಯ ಒಪ್ಪಂದವಿದೆ” ಎಂದು ಆರೋಪಿಸಿದರು.
”ಛತ್ತೀಸ್‌ಗಢ ಪೊಲೀಸರು ಈ ಪ್ರಕರಣದಲ್ಲಿ 450 ಜನರನ್ನು ಬಂಧಿಸಿದ್ದಾರೆ. ಬಿಜೆಪಿಯವರಿಗೆ ನನ್ನ ವಿರುದ್ಧ ಮಾತನಾಡಲು ವಿಷಯಗಳೇ ಇಲ್ಲ, ಇದಕ್ಕಾಗಿಯೇ ಅವರು ಈ ತಂತ್ರಗಳನ್ನು ಮಾಡುತ್ತಿದ್ದಾರೆ” ಎಂದರು.
ನವೆಂಬರ್ 2 ರಂದು ಶೋಧ ಕಾರ್ಯಾಚರಣೆ ನಡೆಸಿದ ಇಡಿ, ” ಅಪ್ಲಿಕೇಶನ್ ಪ್ರಚಾರಕರು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಈ ಹಿಂದೆ ನಿಯಮಿತ ಪಾವತಿಗಳನ್ನು ಮಾಡಿರುವುದು ಕಂಡುಬಂದಿದೆ ಮತ್ತು ಇದುವರೆಗೆ ಸುಮಾರು ₹ 508 ಕೋಟಿಯನ್ನು ಮಹಾದೇವ್ ಪಾವತಿಸಿದೆ” ಎಂದು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಹೇಳಿದೆ.
ಇಡಿ ಹೇಳಿಕೆಯನ್ನು ಮುಖ್ಯಮಂತ್ರಿ ಬಘೇಲ್ ತಳ್ಳಿಹಾಕಿದ್ದಾರೆ ಮತ್ತು ಮುಂಬರುವ ಛತ್ತೀಸ್‌ಗಢ ಚುನಾವಣೆಯಲ್ಲಿ ಬಿಜೆಪಿ ತನ್ನ “ಏಜೆನ್ಸಿಗಳ” ಸಹಾಯದಿಂದ ಸ್ಪರ್ಧಿಸಲು ಬಯಸುತ್ತದೆ” ಎಂದು ಹೇಳಿದ್ದಾರೆ.
ಮಹಾದೇವ್ ಬುಕ್ ಆನ್‌ಲೈನ್ ಬೆಟ್ಟಿಂಗ್ ಆಪ್ ಸಿಂಡಿಕೇಟ್ ಮತ್ತು ಈ ಬೆಟ್ಟಿಂಗ್ ಸಿಂಡಿಕೇಟ್‌ನ ಪ್ರವರ್ತಕರ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಮಹಾದೇವ್ ಆ್ಯಪ್ ಬ್ಲಾಕ್ ಮಾಡುವಂತೆ ಕೇಂದ್ರ ಸರಕಾರ ಆದೇಶ


