ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಲೈಂಗಿಕ ಪ್ರಕರಣದ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್‌ನಲ್ಲಿ ವ್ಯಕ್ತಿಯೊಬ್ಬರು ವಿಡಿಯೊದಲ್ಲಿ ಅರೆಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಪೀಠದ ಮುಂದೆ ಮಂಗಳವಾರ ಈ ಘಟನೆ ನಡೆದಿದೆ.
ಲೈಂಗಿಕ ಪ್ರಕರಣದಲ್ಲಿ ಸಂತ್ರಸ್ಥೆ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ನ್ಯಾಯಾಲಯವು ವೀಡಿಯೊದಲ್ಲಿ ಕಾಣಿಸಿಕೊಂಡ ವ್ಯಕ್ತಿಗೆ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
“ವ್ಯಕ್ತಿಯು ಅರೆಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಸ್ನಾನ ಮಾಡುತ್ತಿದ್ದ” ಎಂದು ಜೈಸಿಂಗ್ ಹೇಳಿದ್ದಾರೆ. ವ್ಯಕ್ತಿಯು ಸುಮಾರು 20 ನಿಮಿಷಗಳ ಕಾಲ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದು ಇದು ಉದ್ದೇಶಪೂರ್ವಕವಾಗಿ ಎಸಗಿದ ಕೃತ್ಯವಾಗಿದೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ:ಲಸಿಕೆ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ತೆಗೆಯಿರಿ ಎಂದು ಕೇಳುವುದು ಅಪಾಯಕಾರಿ: ಕೇರಳ ಹೈಕೋರ್ಟ್
ನ್ಯಾಯಾಲಯದ ವಿಚಾರಣೆಯ ಮಧ್ಯದಲ್ಲಿ ಇದು ನಡೆದಿದ್ದು ಅತ್ಯಂತ ಗೊಂದಲಕಾರಿ ಸಂಗತಿಯಾಗಿದೆ ಎಂದು ಇಂದಿರಾ ಜೈಸಿಂಗ್ ಹೇಳಿದ್ದಾರೆ. ನ್ಯಾಯಾಂಗ ನಿಂದನೆ ಮತ್ತು ಲೈಂಗಿಕ ಕಿರುಕುಳದ ಅಡಿಯಲ್ಲಿ ಅಧಿಕೃತವಾಗಿ ದೂರು ನೀಡಲಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
“ನನ್ನ ಆಕ್ಷೇಪಣೆಯ ಹೊರತಾಗಿಯೂ ಪೂರ್ಣ 20 ನಿಮಿಷಗಳ ಕಾಲ ಪರದೆಯ ಮೇಲೆ ವ್ಯಕ್ತಿಯು ಅರೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾನೆ ಎಂದು ನಾನು ಖಚಿತಪಡಿಸುತ್ತೇನೆ. ನ್ಯಾಯಾಂಗ ನಿಂದನೆ ಮತ್ತು ಲೈಂಗಿಕ ಕಿರುಕುಳಕ್ಕಾಗಿ ನಾನು ಅಧಿಕೃತ ದೂರು ನೀಡುತ್ತಿದ್ದೇನೆ. ನ್ಯಾಯಾಲಯದ ವಿಚಾರಣೆಯ ಮಧ್ಯದಲ್ಲಿ ಇದು ಅತ್ಯಂತ ಗೊಂದಲದ ಸಂಗತಿಯಾಗಿದೆ” ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಅರೆ ಬೆತ್ತಲೆಯಾಗಿದ್ದ ವ್ಯಕ್ತಿಯ ಹೆಸರನ್ನು ಶ್ರೀಧರ್ ಭಟ್ ಎಂದು ತೋರಿಸುತ್ತಿತ್ತು ಎಂದು ವಿಚಾರಣೆಯ ಭಾಗವಾಗಿದ್ದ ವಕೀಲರು ನ್ಯೂಸ್ ಮಿನಿಟ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅರೆ ಬೆತ್ತಲೆಯಾಗಿದ್ದ ವ್ಯಕ್ತಿಗೆ ನ್ಯಾಯಾಲಯದ ಅಧಿಕಾರಿಯೊಬ್ಬರು ಅವರಿಗೆ ತಿಳಿಸಿದ ನಂತರ ಅವರು ಲಾಗ್ ಔಟ್ ಮಾಡಿದ್ದಾರೆ ಎಂದು ನ್ಯೂಸ್ ಮಿನಿಟ್ ಹೇಳಿದೆ.
ಇದನ್ನೂ ಓದಿ:ರಾಘವೇಶ್ವರ ಭಾರತೀ ಅತ್ಯಾಚಾರ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಮೂರ್ತಿ


