ಖಾತೆ ಹಂಚಿಕೆ ವಿಚಾರವಾಗಿ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಕ್ಯಾಬಿನೆಟ್ ಸಚಿವ ಸ್ಥಾನ ಸಿಗದ ಕಾರಣ ಶಿವಸೇನೆಯ ಸಚಿವ ಅಬ್ದುಲ್ ಸತ್ತಾರ್ ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಔರಂಗಾಬಾದ್ ಜಿಲ್ಲೆಯ ಸಿಲ್ಲೋಡ್‌ನ ಶಾಸಕರಾದ ಸತ್ತಾರ್ ಅವರು ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಶಿವಸೇನೆ ಸೇರಿದ್ದರು. ಅವರಿಗೆ ಸದ್ಯ ರಾಜ್ಯ ಸಚಿವರನ್ನಾಗಿ ಮಾಡಲಾಗಿತ್ತು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ಕ್ಯಾಬಿನೆಟ್ ಸಚಿವ ಸ್ಥಾನ ನೀಡಲಾಗಿಲ್ಲ ಎಂದು ರಾಜೀನಾಮೆ ಸಲ್ಲಿಸಿದ್ದಾರೆ.
ಆದರೆ ಸಚಿವರ ರಾಜೀನಾಮೆ ಕುರಿತು ಮುಖ್ಯಮಂತ್ರಿಯವರ ಕಚೇರಿಯಿಂದ ಅಥವಾ ರಾಜಭವನದಿಂದ ಯಾವುದೇ ದೃಢೀಕರಣ ಬಂದಿಲ್ಲ. ಅಲ್ಲದೇ ಸತ್ತಾರ್ ಸ್ವತಃ ಏನನ್ನೂ ತಿಳಿಸಿಲ್ಲ.
ಆದರೆ ಹಿರಿಯ ಶಿವಸೇನೆಯ ಮುಖಂಡರು ಸತ್ತಾರ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹಿರಿಯ ಸೇನಾ ಕಾರ್ಯಕರ್ತ ಅನಿಲ್ ದೇಸಾಯಿ ಅವರು ಸತ್ತಾರ್ ರಾಜೀನಾಮೆ ನೀಡಿಲ್ಲ ಎಂದು ಹೇಳಿದರು. ಈ ಮಧ್ಯೆ ಸತಾರ್ ಅವರನ್ನು ಭೇಟಿ ಮಾಡಲು ಮತ್ತು ಚರ್ಚಿಸಲು ಪಕ್ಷದ ಪರವಾಗಿ ಸೇನೆಯ ಅರ್ಜುನ್ ಖೋಟ್ಕರ್ ಅವರನ್ನು ಕಳುಹಿಸಲಾಗಿದೆ. ಔರಂಗಾಬಾದ್‌ನ ಹೋಟೆಲ್‌ವೊಂದರಲ್ಲಿ ಶನಿವಾರ ಬೆಳಿಗ್ಗೆ ಖೋಟ್ಕರ್, ಸತ್ತಾರ್ ಅವರನ್ನು ಭೇಟಿಯಾಗಿದ್ದರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸತ್ತಾರ್ ಅವರ ಮಗ ಸಮೀರ್, “ಅವರು ರಾಜೀನಾಮೆ ನೀಡಿದ್ದಾರೋ ಇಲ್ಲವೋ ನನಗೆ ತಿಳಿದಿಲ್ಲ. ಅವರು ಮಾತ್ರ ಈ ವಿಷಯದ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ. ” ಎಂದು ತಿಳಿಸಿದ್ದಾರೆ.
ಡಿಸೆಂಬರ್ 30 ರಂದು ನಡೆದ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಪಕ್ಷದ ಅನೇಕ ಹಿರಿಯ ನಾಯಕರನ್ನು ಕಡೆಗಣಿಸಿದ ನಂತರ ಸೇನೆಯೊಳಗೆ ಅಸಮಾಧಾನ ಮೂಡಿದೆ. ಹಿಂದಿನ ಕಾಂಗ್ರೆಸ್-ಎನ್‌ಸಿಪಿ ಸರ್ಕಾರಗಳಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿದ್ದ ಸತ್ತಾರ್ ಅವರಿಗೆ ಶಿವಸೇನಾ ಕೋಟಾದಿಂದ ಕ್ಯಾಬಿನೆಟ್ ಸ್ಥಾನ ನೀಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸರ್ಕಾರವನ್ನು ಬೆಂಬಲಿಸುವ ಮೂವರು ಸ್ವತಂತ್ರ ಶಾಸಕರಿಗೆ ಕ್ಯಾಬಿನೆಟ್ ಸ್ಥಾನ ಮತ್ತು ಇಬ್ಬರು ಕಿರಿಯರಿಗೆ ಸಚಿವ ಹುದ್ದೆಗಳನ್ನು ನೀಡಿದ ನಂತರ ಅನೇಕ ಶಿವಸೇನಾ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


