ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಲು ಹಕ್ಕೊತ್ತಾಯ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸಚಿವರಿಗೆ ಕಡಿವಾಣ ಹಾಕುವಂತೆ 15 ಕಾಂಗ್ರೆಸ್ ಶಾಸಕರು ಮತ್ತು ಮಾಜಿ ಸಚಿವರ ಗುಂಪು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ.
ಸಿದ್ದರಾಮಯ್ಯ ಅವರ ಹೆಂಡತಿಗೆ ಭೂ ಮಂಜೂರಾತಿ ಮಾಡಿರುವ ಪ್ರಕರಣದ ಕುರಿತು ತನಿಖೆಯ ಸಾಧ್ಯತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವವು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಸಲಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಹಲವಾರು ಕಾಂಗ್ರೆಸ್ ಸಚಿವರು ತಮ್ಮನ್ನು ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿ ಈ ಪತ್ರ ಬರೆಯಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಭೂ ಮಂಜೂರಾತಿ ವಿವಾದವನ್ನು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸೃಷ್ಟಿಸಿದೆ. ಆದರೆ, ಹಿರಿಯ ಸಚಿವರು ಸೇರಿದಂತೆ ಆರಕ್ಕೂ ಹೆಚ್ಚು ನಾಯಕರು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಸೆಣಸುವ ಬದಲು ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಚಲಾಯಿಸುತ್ತಿದ್ದಾರೆ.” ಎಂದು 15 ನಾಯಕರ ಗುಂಪು ಬರೆದ ಪತ್ರ ರಾಹುಲ್ ಗಾಂಧಿ ಅವರಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದೆ.
“ಕಾಂಗ್ರೆಸ್ ನಾಯಕತ್ವವು ಈ ನಾಯಕರು ನೀಡಿರುವ ಹೇಳಿಕೆಗಳನ್ನು ಗಮನಿಸಬೇಕು ಮತ್ತು ಅವರಿಗೆ ಎಚ್ಚರಿಕೆ ನೀಡಬೇಕು. ಜೊತೆಗೆ ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ರಾಜ್ಯದ ಹಿತದೃಷ್ಟಿಯಿಂದ ಭವಿಷ್ಯದಲ್ಲಿ ಇಂತಹ ಹಾನಿಕಾರಕ ಹೇಳಿಕೆಗಳನ್ನು ನೀಡದಂತೆ ನಿರ್ದೇಶಿಸಬೇಕು” ಎಂದು ಪತ್ರವು ಆಗ್ರಹಿಸಿದೆ.
ಮಾಜಿ ಸಚಿವರಾದ ಬಿ ಎಲ್ ಶಂಕರ್, ಹೆಚ್ ಎಂ ರೇವಣ್ಣ, ಮಾಜಿ ಸಂಸದರಾದ ಎಲ್ ಹನುಮಂತಯ್ಯ, ವಿ ಎಸ್ ಉಗ್ರಪ್ಪ ಸೇರಿದಂತೆ ಸಿದ್ದರಾಮಯ್ಯ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅನೇಕ ನಾಯಕರು ಪತ್ರಕ್ಕೆ ಸಹಿ ಮಾಡಿದ್ದಾರೆ.
ಇದನ್ನೂ ಓದಿ: ವಿವಿಧ ಹಗರಣಗಳ ತನಿಖೆ ಸಮನ್ವಯಕ್ಕೆ ಗೃಹ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ
“ಸಿದ್ದರಾಮಯ್ಯನವರನ್ನು ಬದಲಿಸುವ ಬಗ್ಗೆ ಮಾತನಾಡುತ್ತಿರುವ ಮುಂಚೂಣಿಯಲ್ಲಿರುವ ನಾಯಕರಿಂದಾಗಿ ನಮ್ಮ ಅನೇಕ ನಾಯಕರು ಮತ್ತು ಕಾರ್ಯಕರ್ತರು ಹತಾಶರಾಗಿದ್ದಾರೆ. ಅವರು ಸರ್ಕಾರ ಮತ್ತು ಪಕ್ಷದಲ್ಲಿ ತಮ್ಮ ಭರವಸೆಯನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ನಮ್ಮ ನಾಯಕರ ಒಳಜಗಳ ಮತ್ತು ಅಜಾಗರೂಕ ಹೇಳಿಕೆಗಳಿಂದಾಗಿ ಕರ್ನಾಟಕದ ಜನರು ನಿಧಾನವಾಗಿ ನಮ್ಮ ಪಕ್ಷ ಮತ್ತು ಸರ್ಕಾರದ ಮೇಲಿನ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ಆಡಳಿತಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಅಡಚಣೆಯಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಸ್ಥಳೀಯ ಕಾಂಗ್ರೆಸ್ ನಾಯಕರು ಹೈಕಮಾಂಡ್‌ಗೆ ಬರೆದ ಎರಡನೇ ಪತ್ರ ಇದಾಗಿದೆ. ಈ ಹಿಂದೆ ಎಂಎಲ್ಸಿಗಳಾದ ದಿನೇಶ್ ಗೂಳಿಗೌಡ ಮತ್ತು ಮಂಜುನಾಥ್ ಭಂಡಾರಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಧ್ಯಸ್ಥಿಕೆಗೆ ಪತ್ರ ಬರೆದಿದ್ದರು.
2021 ರಲ್ಲಿ ಮುಖ್ಯಮಂತ್ರಿಯವರ ಪತ್ನಿಗೆ 14 ವಸತಿ ನಿವೇಶನಗಳನ್ನು ಹಂಚಿರುವ ಕುರಿತು ತನಿಖೆ ನಡೆಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಸ್ಟ್ 16 ರಂದು ಅನುಮತಿ ನೀಡಿದ ನಂತರ ಕಾಂಗ್ರೆಸ್‌ನಲ್ಲಿ ಅಶಾಂತಿ ಉಂಟಾಗಿದೆ.
ಇದನ್ನೂಓದಿ: ಅರುಣಾಚಲ ಪ್ರದೇಶ: ಅಂಜಾವ್‌ನಲ್ಲಿ ಭಾರತದ ಭೂಪ್ರದೇಶದೊಳಗೆ ಪ್ರವೇಶಿಸಿದ ಚೀನಾ ಸೈನಿಕರು
ರಾಜ್ಯಪಾಲರ ಮಂಜೂರಾತಿ ಆದೇಶವನ್ನು ಸಿದ್ದರಾಮಯ್ಯ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೆ, ಸಿಎಂ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ತನ್ನ ಬೆಂಬಲವನ್ನು ಸೂಚಿಸಿದ್ದು, ಹಿಂದುಳಿದ ವರ್ಗವನ್ನು ಹೊರಹಾಕಲು ಪ್ರತಿಪಕ್ಷಗಳು ಸಂಘಟಿತ ಪ್ರಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ.
ವಿಡಿಯೊ ನೋಡಿ: ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು


