ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿರುವ ಭಾರತ ಬಂದ್‌ಗೆ ರಾಜ್ಯದ ಸಾಹಿತಿಗಳು, ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.
‘ಇದು ಕೇವಲ ರೈತರ ಬೇಡಿಕೆಯಲ್ಲ. ಬದಲಿಗೆ ದೇಶದ ಎಲ್ಲ ಜನರ ಅನ್ನದ ಬಟ್ಟಲಿಗೆ ಕನ್ನ ಹಾಕುವ ಪ್ರಯತ್ನದ ವಿರುದ್ಧದ ಹೋರಾಟ’ ಎಂದು ಹೇಳಿದ್ದಾರೆ.
‘ಕೃಷಿ ಕಾಯ್ದೆಗಳ ಜತೆಯೇ ಎಪಿಎಂಸಿ, ವಿದ್ಯುತ್, ಕಾರ್ಮಿಕ ಕಾಯ್ದೆಗಳು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಗಳೆಲ್ಲವೂ ಬಂಡವಾಳಶಾಹಿಗಳನ್ನು ಬಲಗೊಳಿಸಿ ಸಾಮಾನ್ಯ ಜನರನ್ನು ದುರ್ಬಲಗೊಳಿಸುವ ಮೋದಿ ಸರ್ಕಾರದ ನೀತಿಯ ಸ್ಪಷ್ಟ ಉದಾಹರಣೆಗಳು. ಇನ್ನೊಂದೆಡೆ, ದಿನದ ದುಡಿಮೆಯನ್ನೇ ನಂಬಿ ಬದುಕುವ ಶ್ರಮಿಕ ಜನರನ್ನು ಸಂಕಷ್ಟಕ್ಕೆ ತಳ್ಳುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಜನ ವಿರೋಧಿ ನಡೆ ಅನುಸರಿಸುತ್ತಿರುವುದರಿಂದಲೇ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ ಬಂದನ್ನು ಬೆಂಬಲಿಸುತ್ತಿರುವುದಾಗಿ ಎಂ.ಎಸ್. ಸತ್ಯು, ಡಾ.ಕೆ.ಮರುಳ ಸಿದ್ದಪ್ಪ, ವಿಜಯಾ, ಡಾ.ಎಸ್.ಜಿ.ಸಿದ್ದರಾಮಯ್ಯ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ರಾಜೇಂದ್ರ ಚೆನ್ನಿ, ಡಾ.ಗಣೇಶ್ ದೇವಿ, ದೇವನೂರ ಮಹಾದೇವ, ಬೊಳುವಾರು ಮಹ್ಮದ್ ಕುಂಞಿ, ಅಗ್ರಹಾರ ಕೃಷ್ಣಮೂರ್ತಿ ಹಾಗೂ ಇತರರು ಬೆಂಬಲ ವ್ಯಕ್ತಪಡಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.27 ಕ್ಕೆ ವಿವಾದಾತ್ಮಕ ಕೃಷಿ ಕಾಯ್ದೆಗಳು ಜಾರಿಯಾಗಿ ಒಂದು ವರ್ಷ ಕಳೆಯಲಿದೆ. ಈ ಹಿನ್ನೆಲೆ ಹೋರಾಟ ನಿರತ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದೆ.
ಇನ್ನೊಂದೆಡೆ ಭಾರತ್ ಬಂದ್‌ಗೆ ಜಗನ್ ಮೋಹನ್ ರೆಡ್ಡಿಯವರ ಆಂಧ್ರಪ್ರದೇಶ ಸರ್ಕಾರ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆಯ ಕಾರ್ಮಿಕರಿಗೆ ಮತ್ತು ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತದೆ ಎಂದು ಸಾರಿಗೆ ಸಚಿವ ಪೆರ್ನಿ ವೆಂಕಟರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್: ರೈತರ ಕರೆಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸಂಪೂರ್ಣ ಬೆಂಬಲ


