ಹಲವಾರು ಹೆಸರಾಂತ ಸೆಲೆಬ್ರಿಟಿಗಳು, ಹಲವು ಮುಖ್ಯಮಂತ್ರಿಗಳು ಸೇರಿದಂತೆ ಭಾರತದ ಅನೇಕ ಪ್ರಭಾವಿ ವ್ಯಕ್ತಿಗಳ ಬ್ಲೂಟಿಕ್ ಅನ್ನು ಟ್ವಿಟರ್‌ನಲ್ಲಿ ತೆಗೆದುಹಾಕಲಾಗಿದೆ.
ಎಲಾನ್ ಮಸ್ಕ್ ಒಡೆತನದ ಟ್ವಿಟರ್‌ನಲ್ಲಿ ಬಳಕೆದಾರರು ಬ್ಲೂಟಿಕ್ ಪಡೆಯಬೇಕಾದರೆ ಚಂದಾದಾರರಾಗಬೇಕೆಂಬ ನಿಯಮ ಜಾರಿಗೆ ತಂದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರ ಖಾತೆಗಳ ಬ್ಲೂಟಿಕ್ ತೆರವು ಮಾಡಲಾಗಿದೆ.
ಟ್ವಿಟರ್‌ನ ಹೊಸ ಚಂದಾದಾರಿಕೆ ಆಧಾರಿತ ಬ್ಲೂಟಿಕ್ ನೀತಿಯಿಂದಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಕೂಡ ವೆರಿಫೈ ಖಾತೆಯ ಸ್ಥಿತಿಯನ್ನು ಕಳೆದುಕೊಂಡಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ), ಆಮ್ ಆದ್ಮಿ ಪಕ್ಷ (ಎಎಪಿ), ಮತ್ತು ಕಾಂಗ್ರೆಸ್‌ನಂತಹ ರಾಜಕೀಯ ಪಕ್ಷಗಳ ಅಧಿಕೃತ ಟ್ವಿಟರ್ ಹ್ಯಾಂಡಲ್‌ಗಳು ತಮ್ಮ ವೆರಿಫೈ ಸ್ಥಿತಿಯನ್ನು ಕಳೆದುಕೊಂಡಿವೆ.
ಎಲಾನ್ ಮಸ್ಕ್ ಅವರು ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ ನಂತರ, ಬ್ಲೂಟಿಕ್ ಬಳಕೆದಾರಿಕೆ ನೀತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಈ ಹಿಂದೆ, ವೆರಿಫೈ ಖಾತೆಗಳನ್ನು ಉನ್ನತ ವ್ಯಕ್ತಿಗಳು, ಪತ್ರಕರ್ತರು, ಅಧಿಕಾರಿಗಳು, ರಾಜಕಾರಣಿಗಳು ಮತ್ತು ವಿಶೇಷ ಸಂಸ್ಥೆಗಳಿಗೆ ನೀಡಲಾಗುತ್ತಿತ್ತು. ವೆರಿಫೈ ಖಾತೆಗಳನ್ನು ಗುರುತಿಸಲು ಇದರಿಂದ ಅನುವು ಮಾಡಲಾಗುತ್ತಿತ್ತು. ಆದರೆ ಬ್ಲೂಟಿಕ್ ಪಡೆಯಬೇಕಾದರೆ ಇಂತಿಷ್ಟು ಹಣವನ್ನು ಈಗ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿರಿ: ಪಂಜಾಬ್: ಹಲವಾರು ಪತ್ರಕರ್ತರು, ಬರಹಗಾರರ ಟ್ವಿಟರ್ ಖಾತೆಗೆ ನಿರ್ಬಂಧ
ಟ್ವಿಟರ್‌ನ ಆದಾಯ ದೃಷ್ಟಿಯಿಂದಾಗಿ ಈ ನೀತಿಯನ್ನು ತರಲಾಗಿದೆ. ಕಳೆದ ತಿಂಗಳು ಮಾಡಿದ ಟ್ವೀಟ್‌ನಲ್ಲಿ ಎಲಾನ್ ಮಸ್ಕ್, “ಅಕ್ಟೋಬರ್ ಮತ್ತು ಮಾರ್ಚ್ ನಡುವೆ ಜಾಹೀರಾತು ಆದಾಯದಲ್ಲಿ 50% ಕುಸಿತವಾಗಿದೆ” ಎಂದಿದ್ದರು. “ಪರ್ಯಾಯ ಆದಾಯದ ಯೋಜನೆಗಳನ್ನು ಟ್ವಿಟರ್ ಹೊಂದಿರುವುದು ಇದರಿಂದ ಸ್ಪಷ್ಟವಾಗುತ್ತದೆ.”
ಹಳೆಯ ವೆರಿಫೈ ಟ್ಯಾಗ್ ತೆಗೆದುಹಾಕುವ ತನ್ನ ಯೋಜನೆಗಳ ಆರಂಭಿಕ ಘೋಷಣೆಯ ನಂತರ, ಟ್ವಿಟರ್ ಸಂಸ್ಥೆ ಪ್ರತಿಕ್ರಿಯಿಸಿದ್ದು, “ಈ ಸೇವೆಗೆ ಹಣ ಪಾವತಿಸಬೇಕೆ ಎಂದು ನಿರ್ಧರಿಸಲು ವೆರಿಫೈ ಖಾತೆಗಳ ಬಳಕೆದಾರರಿಗೆ ನೀಡಿರುವ ಗಡುವನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ” ಎಂದು ತಿಳಿಸಿದೆ.
ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, “ಪ್ರಸ್ತುತ, ಟ್ವಿಟರ್‌ನ ಬಳಕೆದಾರರಲ್ಲಿ ಕೇವಲ ಒಂದು ಸಣ್ಣ ಭಾಗ ಅಂದರೆ ಸರಿಸುಮಾರು 1 ಪ್ರತಿಶತದಷ್ಟು ಜನರು ಮಾತ್ರ ಬ್ಲೂಟಿಕ್ ಚಂದಾದಾರರಾಗಿದ್ದಾರೆ.”


