| ನಾನುಗೌರಿ ಡೆಸ್ಕ್ |
ನೀರಿನ ಮಿತ ಬಳಕೆ ಮತ್ತು ಸಂರಕ್ಷಣೆಯ ವಿಚಾರದಲ್ಲಿ ಕೆಲಸ ಮಾಡಿರುವ ಸರ್ಕಾರೇತರ ಸಂಘಸಂಸ್ಥೆಗಳೊಂದಿಗೆ ತಮಿಳುನಾಡು ಸರ್ಕಾರ ಕೆಲಸ ಮಾಡಬೇಕು ಮತ್ತು ಸದ್ಯ ತಲೆದೋರಿರುವ ನೀರಿನ ಅಭಾವದ ಸಮಸ್ಯೆಗೆ ಪರಿಹಾರ ಕಂಡು ಹಿಡಿಬೇಕೆಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಜೊತೆಗೆ ನೀರಿನ ಅಭಾವದ ವಿರುದ್ಧದ ಪ್ರತಿಭಟನೆಗೆ ಯಾವುದೇ ಕಾರಣಕ್ಕೂ ತಡೆಯೊಡ್ಡಬೇಡಿ ಬದಲಿಗೆ ಬೆಂಬಲಿಸಿ ಎಂದು ತಾಕೀತು ಮಾಡಿದೆ.
ಜೂನ್ 30 ರಂದು ತಮಿಳುನಾಡಿನ ವಲ್ಲುವಾರುಕೊಟ್ಟಂ ಬಳಿ ನೀರಿನ ಸಮಸ್ಯೆಯ ಕುರಿತು ಪ್ರತಿಭಟನೆ ನಡೆಸಲು ಅರಪ್ಪೋರ್ ಐಕ್ಕಾಮ್ ಎಂಬ ಸಂಘಟನೆ ನಿರ್ಧರಿಸಿತ್ತು. ಆದರೆ ಚನ್ನೈ ಪೊಲೀಸ್ ಕಮಿಷನರ್ ಇದಕ್ಕೆ ಅವಕಾಶ ನೀಡಿರಲಿಲ್ಲ. ಇದನ್ನು ಕೋರ್ಟ್‍ನಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ ಜಸ್ಟೀಸ್ ಎನ್.ಆನಂದ್ ವೆಂಕಟೇಶ್‍ರವರು ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯು ಬರ್ನಿಂಗ್ ಇಶ್ಯೂ ಸುತ್ತಾ ನಡೆಯುತ್ತಿದೆ. ಇದರ ಜಾಗೃತಿ ಸಾರ್ವಜನಿಕರಿಗೆ ಇರಲೇಬೇಕು. ಸರ್ಕಾರವು ನಗರದ ಮೂಲೆ ಮೂಲೆಗೆ ಸಮರ್ಪಕವಾಗಿ ನೀರು ತಲುಪುವಂತೆ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಯಾಕೆ ನೀರಿಗಾಗಿ ಈ ಪರಿಸ್ಥಿತಿ ಬಂತು ಎಂಬುದರ ಕುರಿತು ಚಿಂತಸಬೇಕು. ನಮ್ಮ ಪರಿಸರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿರುವುದರಿಂದ ಮತ್ತು ನಿರೀನ ಸಮರ್ಪಕ ನಿರ್ವಹಣೆ ಮಾಡದಿರುವುದರಿಂದಲೇ ಈ ಸಮಸ್ಯೆ ತಲೆದೋರಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಈ ಸಮಸ್ಯೆಯ ಪರಿಹಾರಕ್ಕಾಗಿ ಜನರಲ್ಲಿ ಜಾಗೃತಿ ಬರುವುದು ಅತ್ಯಗತ್ಯವಾಗಿದೆ. ಇಂತಹ ಸಮಯದಲ್ಲಿ ಪ್ರತಿಭಟನೆಗೆ ತಡೆವೊಡ್ಡುವುದು ಬಿಟ್ಟು ಸರ್ಕಾರ ಸಹಕರಿಸಬೇಕಿದೆ. ಆಗ ಮಾತ್ರ ಇಡೀ ರಾಜ್ಯದ ಜನರಿಗೆ ವಾಸ್ತವವನ್ನು ಅರ್ಥ ಮಾಡಿಸಲು ಸಾಧ್ಯ. ಈ ವಿಚಾರದಲ್ಲಿ ಸಂಘ ಸಂಸ್ಥೆಗಳು ಮಹತ್ವದ ಕೆಲಸ ಮಾಡುತ್ತಿವೆ. ಹಾಗಾಗಿ ಸರ್ಕಾರ ಇನ್ನಿತರ ಸಂಘ ಸಂಸ್ಥೆಗಳ ಜೊತೆಸೇರಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನಪಡಬೇಕೆಂದು ಕೋರ್ಟ್ ಹೇಳಿದೆ.
ಜೂನ್ 20ರಂದೇ ಪ್ರತಿಭಟನೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಪೊಲೀಸ್ ಕಮಿಷನರ್ ಅವಕಾಶ ನಿರಾಕರಿಸಿದ್ದರು. ಹಾಗಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಯ್ತು ಎನ್ನುವ ಅರ್ಜಿದಾರರು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ಖಾತ್ರಿಗೊಳಿಸಿದೆ, ಹೋರಾಟ ಮಾಡುವುದು ನಮ್ಮ ಮೂಲಭೂ ಹಕ್ಕು ಎಂದು ಪ್ರತಿಪಾದಿಸಿದ್ದರೆ.


