ಹರಿಯಾಣದ ಜಿಂದ್‌ನ ಸರ್ಕಾರಿ ಶಾಲೆಯೊಂದರಲ್ಲಿ ಓದುತ್ತಿರುವ 142 ಅಪ್ರಾಪ್ತ ಬಾಲಕಿಯರು ಶಾಲೆಯ ಪ್ರಾಂಶುಪಾಲ ಕಳೆದ ಆರು ವರ್ಷಗಳಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
“ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ನೇತೃತ್ವದ ತನಿಖಾ ಸಮಿತಿಯು ಶಾಲೆಯ ಒಟ್ಟು 390 ಬಾಲಕಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ನಾವು ಹುಡುಗಿಯರ ಮೇಲಿನ ಲೈಂಗಿಕ ದೌರ್ಜನ್ಯದ 142 ದೂರುಗಳನ್ನು ಮುಂದಿನ ಕ್ರಮಕ್ಕಾಗಿ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ರವಾನಿಸಿದ್ದೇವೆ” ಎಂದು ಜಿಂದ್ ಜಿಲ್ಲೆಯ ಉಪ ಆಯುಕ್ತ ಮೊಹಮ್ಮದ್ ಇಮ್ರಾನ್ ರಝಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
142 ಹುಡುಗಿಯರಲ್ಲಿ ಹೆಚ್ಚಿನವರು ಪ್ರಾಂಶುಪಾಲರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಉಳಿದವರು ಪ್ರಾಂಶುಪಾಲರ ಭಯಾನಕ ಕೃತ್ಯಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಉಪ ಆಯುಕ್ತ ಮಾಹಿತಿ ನೀಡಿದ್ದಾರೆ. ಆರೋಪಿ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದು, ಸದ್ಯ ಆತ ಜೈಲಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಗಮನಾರ್ಹ ಸಂಗತಿಯೆಂದರೆ, ಪ್ರಾಂಶುಪಾಲರ ದುಷ್ಕೃತ್ಯದ ಕುರಿತು ಸುಮಾರು 15 ಹುಡುಗಿಯರು ಈ ಹಿಂದೆ ಆಗಸ್ಟ್ 31 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದರು.
ಸೆಪ್ಟೆಂಬರ್ 13 ರಂದು, ಹರಿಯಾಣ ಮಹಿಳಾ ಆಯೋಗವು ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕಾಗಿ ಜಿಂದ್ ಪೊಲೀಸರಿಗೆ ರವಾನಿಸಿತ್ತು. ಆದರೆ, ಪೊಲೀಸರು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಯನ್ನು ನವೆಂಬರ್ 4 ರಂದು ಬಂಧಿಸಿದ ಪೊಲೀಸರು ನವೆಂಬರ್ 7 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸರ್ಕಾರಿ ಶಾಲೆಯ 60 ಬಾಲಕಿಯರು ಪ್ರಾಂಶುಪಾಲರ ವಿರುದ್ಧ ಹೇಳಿಕೆ ದಾಖಲಿಸಲು ಮುಂದೆ ಬಂದಿದ್ದರು ಎಂದು ರಾಜ್ಯ ಮಹಿಳಾ ಆಯೋಗ ಈ ಹಿಂದೆ ಹೇಳಿತ್ತು. ಆದರೆ, ಈಗ ಸಂಖ್ಯೆ 142ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪೊಲೀಸರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡಿಲ್ಲ. ವಿಶೇಷವಾಗಿ ಪೋಕ್ಸೋ ಕಾಯ್ದೆಯ ಉಪವಿಭಾಗ 19, 20 ಮತ್ತು 21 ರ ಪ್ರಕಾರ ತಕ್ಷಣ ಎಫ್‌ಐಆರ್ ದಾಖಲು ಮಾಡಿಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಶ್ರೇಣಿಯ ಮೂವರು ಅಧಿಕಾರಿಗಳ ತಂಡ ನಡೆಸಿದ ವಿಚಾರಣೆ ವೇಳೆ ಪ್ರಾಂಶುಪಾಲ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆತನ ವಿರುದ್ದ ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ: ಓವೈಸಿ ವಿರುದ್ಧ ಪ್ರಕರಣ ದಾಖಲು


