ದೇಶದ ವಿರುದ್ಧ ಸಂಚು ಮಾಡಲು ಆತ್ಮಾಹುತಿ ಬಾಂಬರ್‌ಗಳ ಸಂತಾನೋತ್ಪತ್ತಿ ಕೇಂದ್ರವಾಗಿ ಶಹೀನ್ ಬಾಗ್ ಮಾರ್ಪಟ್ಟಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳುವ ಮೂಲಕ ಮತ್ತೆ ವಿವಾದವೆಬ್ಬಿಸಿದ್ದಾರೆ.
“ಶಹೀನ್ ಬಾಗ್ ನಲ್ಲಿ ನಡೆಯುತ್ತಿರುವುದು ಚಳುವಳಿಯಲ್ಲ. ಅಲ್ಲಿ ಆತ್ಮಹತ್ಯಾ ಬಾಂಬರ್‌ಗಳನ್ನು ಬೆಳೆಸಲಾಗುತ್ತಿದೆ. ದೇಶದ ರಾಜಧಾನಿಯಲ್ಲೇ ದೇಶದ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ” ಎಂದು ಸಿಎಎ ವಿರುದ್ಧದ ಪ್ರತಿಭಟನೆಯ ಕೇಂದ್ರ ಭಾಗವಾದ ಶಹೀನ್ ಬಾಗ್ ಕುರಿತು ಗಿರಿರಾಜ್ ಸಿಂಗ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
यह शाहीन बाग़ अब सिर्फ आंदोलन नही रह गया है ..यहाँ सूइसाइड बॉम्बर का जत्था बनाया जा रहा है।
देश की राजधानी में देश के खिलाफ साजिश हो रही है। pic.twitter.com/NoD98Zfwpx— Shandilya Giriraj Singh (@girirajsinghbjp) February 6, 2020
ಗಿರಿರಾಜ್ ಸಿಂಗ್ ಕೇಂದ್ರ ಸರ್ಕಾರದ ಕೇಂದ್ರ ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವರಾಗಿದ್ದು, ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಕುಖ್ಯಾತರಾಗಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಶಹೀನ್ ಬಾಗ್ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡಿದ್ದಾರೆ.
ಸಿಎಎ, ಎನ್‌ಆರ್‌ಸಿ ವಿರುದ್ಧ ಡಿಸೆಂಬರ್ 18 ರಿಂದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ದಕ್ಷಿಣ ದೆಹಲಿಯ ಶಹೀನ್ ಬಾಗ್‌ನಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷ(ಎಎಪಿ) ಶಹೀನ್ ಬಾಗ್ ಪ್ರತಿಭಟನಾಕಾರರಿಗೆ ಸಕ್ರಿಯ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
“ಬಿಜೆಪಿ ತನ್ನ ಚುನಾವಣಾ ಪ್ರಚಾರದಲ್ಲಿ ಶಹೀನ್ ಬಾಗನ್ನೇ ಬಳಸುತ್ತಿದ್ದಾರೆ, ಅಭಿವೃದ್ಧಿಯಂತಹ ವಿಷಯಗಳನ್ನು ಹೇಳುತ್ತಿಲ್ಲ. ಏಕೆಂದರೆ ಅವರಿಗೆ ಗೆಲ್ಲಲು ಬೇರೆ ತಂತ್ರಗಳಿಲ್ಲ” ಎಂದು ಆಪ್ ತಿರುಗೇಟು ನೀಡಿದೆ.


