ಶಾಹೀನ್‌ಬಾಗ್ ತೆರವು ಕಾರ್ಯಾಚರಣೆ ವಿರೋಧಿಸಿ ಸಿಪಿಐ(ಎಂ) ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ರಾಜಕೀಯ ಪಕ್ಷವೊಂದು ಅರ್ಜಿ ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಎಂದಿದೆ.
ನೊಂದ ಜನ ಅಥವಾ ಪಕ್ಷ ಕೋರ್ಟ್‌ಗೆ ಬರಲಿ ಎಂದಿರುವ ಸುಪ್ರೀಂ ಕೋರ್ಟ್, ನೀವೆ ಅರ್ಜಿಯನ್ನು ಹಿಂತೆಗೆದುಕೊಳ್ಳಿ, ಇಲ್ಲದಿದ್ದರೆ ನಾವು ವಜಾಗೊಳಿಸಬೇಕಾಗುತ್ತದೆ ಎಂದಿದೆ.
ತೆರವು ಕಾರ್ಯಾಚರಣೆಗೆ ಕನಿಷ್ಟ ಎರಡು ದಿನಗಳ ತಡೆಯಾಜ್ಞೆ ನೀಡಿ ಎಂದು ಸಿಪಿಐ(ಎಂ) ಪಕ್ಷ ಅರ್ಜಿ ಸಲ್ಲಿಸಿತ್ತು. ‘ನಿಮ್ಮ ಇಚ್ಛೆಯ ಮೇರೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ನೇರವಾಗಿ ರಾಜಕೀಯ ಪಕ್ಷವೊಂದು ಹೀಗೆ ಸುಪ್ರೀಂ ಕದ ತಟ್ಟುವುದು ಸರಿಯಲ್ಲ. ನಾವು ಜನಜೀವನ ರಕ್ಷಿಸುತ್ತೇವೆ. ಆದರೆ ಯಾರದೋ ಮನೆ ಕಡವಿದರೆ ಅದು ಅಕ್ರಮವಾಗಿದ್ದರೆ ಸುಪ್ರೀಂಗೆ ಬರಬಾರದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಉಲ್ಲಂಘನೆಯಾದರೆ ನಾವು ಮಧ್ಯಪ್ರವೇಶಿಸುತ್ತೇವೆ. ಈ ರೀತಿಯ ರಾಜಕೀಯ ಪಕ್ಷಗಳ ನಿರೀಕ್ಷೆಯಲ್ಲಿ ಸಾಧ್ಯವಿಲ್ಲ.. ಈ ರೀತಿಯ ಅರ್ಜಿಗಳನ್ನು ಸಲ್ಲಿಸಬೇಡಿ. ನೀವು ಇಡೀ ದಿನ ಇಲ್ಲಿಯೇ ಕಳೆದಿದ್ದೀರಿ. ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳದಿದ್ದರೆ ನೀವು ಹೈಕೋರ್ಟ್‌ಗೆ ಹೋಗಬಹುದಿತ್ತು,’’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಸಿಎಎ ವಿರೋಧಿ ಹೋರಾಟದ ಕೇಂದ್ರತಾಣವಾಗಿದ್ದ ಶಾಹೀನ್‌ಬಾಗ್‌ನಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಬಿಜೆಪಿ ಆಡಳಿತದ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಮುಂದಾಗಿದೆ. ಇಂದು ಬೆಳಿಗ್ಗೆ ಬುಲ್ಡೋಜರ್‌ಗಳನ್ನು ನುಗ್ಗಿಸಲಾಗಿದ್ದು ಅದನ್ನು ವಿರೋಧಿಸಿ ಪ್ರತಿಭಟನಾಕಾರರು ಜೆಸಿಬಿಗಳ ಎದುರು ಮಲಗಿ ಪ್ರತಿಭಟಿಸಿದ್ದಾರೆ.
ಕಳೆದ ತಿಂಗಳು ದೆಹಲಿಯ ಜಹಾಂಗೀರ್ ಪುರಿಯಲ್ಲಿಯೂ ಇದೇ ರೀತಿ ಬಿಜೆಪಿ ಆಡಳಿತದ ಎಂಸಿಡಿ ಬುಲ್ಡೋಜರ್‌ಗಳನ್ನು ನುಗ್ಗಿಸಿತ್ತು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ತೆರವು ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಈಗ ಮತ್ತೆ ಮುಸ್ಲಿಮರು ಹೆಚ್ಚಾಗಿ ವಾಸಿಸುವ ಶಾಹೀನ್ ಬಾಗ್ ಅನ್ನು ಗುರಿ ಮಾಡಿ ಬುಲ್ಡೋಜರ್‌ಗಳನ್ನು ನುಗ್ಗಿಸಲಾಗುತ್ತಿದೆ.
ತೆರವು ಕಾರ್ಯಾಚರಣೆ ವಿರೋಧಿಸಿ ಸ್ಥಳೀಯ ವ್ಯಾಪಾರಿಗಳು, ಕಾಂಗ್ರೆಸ್ ಮತ್ತು ಆಪ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಒಕ್ಲಾ ಕ್ಷೇತ್ರದ ಆಪ್ ಶಾಸಕ ಅಮಾನತುಲ್ಲಾಖಾನ್ ಪ್ರತಿಭಟನೆಗೆ ಕೈಜೋಡಿಸಿದ್ದಾರೆ. ಇಲ್ಲಿ ಯಾವುದೇ ಅಕ್ರಮ ಕಟ್ಟಡಗಳಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ ನಂತರ ಪೊಲೀಸರು ಮತ್ತು ವರ್ತಕರ ನಡುವೆ ಮಾತುಕತೆ ಆರಂಭವಾಗಿದ್ದು, ಸದ್ಯಕ್ಕೆ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಆದರೂ ದಕ್ಷಿಣ ದೆಹಲಿಯ ಮೇಯರ್ ಮುಖೇಶ್ ಸೂರ್ಯನ್, ನಮ್ಮ ಈ ತೆರವು ಕಾರ್ಯಾಚರಣೆಗೆ ದೆಹಲಿ ಜನರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸಿಎಎ ವಿರೋಧಿ ಹೋರಾಟದ ಕೇಂದ್ರ ಶಾಹೀನ್‌ಬಾಗ್‌ನಲ್ಲಿ ಬುಲ್ಡೋಜರ್‌ಗಳು: ದ್ವೇಷ ರಾಜಕಾರಣಕ್ಕೆ ಮುಂದಾದ ಬಿಜೆಪಿ
ಕಳೆದ ತಿಂಗಳು ದೆಹಲಿಯ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಎಂಸಿಡಿಗೆ ಪತ್ರ ಬರೆದು ಶಾಹೀನ್ ಬಾಗ್‌ನಲ್ಲಿ ತೆರವು ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿದ್ದರು. ಇಲ್ಲಿ ಅಕ್ರಮ ಬಾಂಗ್ಲಾ ನುಸುಳುಕೋರರು, ರೋಹಿಂಗ್ಯಾ ಮುಸ್ಲಿಮರು ಮತ್ತು ಸಮಾಜವಿರೋಧಿ ಶಕ್ತಿಗಳು ನೆಲಿಸಿದ್ದಾರೆ ಎಂದು ದೂರಿದ್ದರು. ಅದರ ಆಧಾರದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ದಕ್ಷಿಣ ದೆಹಲಿಯ ಕಾರ್ಪೊರೇಷನ್ 10 ದಿನಗಳ ತೆರವು ಕಾರ್ಯಾಚರಣೆಯ ಯೋಜನೆ ಸಿದ್ದಪಡಿಸಿಕೊಂಡಿದೆ. ಮೇ 13ರವರೆಗೂ ಅದು ನಡೆಯಲಿದೆ ಎಂದು ಮೇಯರ್ ತಿಳಿಸಿದ್ದಾರೆ. ಇದು ಬಿಜೆಪಿಯ ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.


